ಕರೊನಾ ನಡುವೆಯೂ ರಾಜ್ಯದ 5728 ಗ್ರಾಪಂಗಳಿಗೆ ನಡೆದ ಚುನಾವಣೆಗೆ ತೆರೆಬಿದ್ದಿದೆ. ಯಾವ ಎಂಎಲ್​ಎ, ಎಂಪಿ ಚುನಾವಣೆಗೂ ಕಡಿಮೆಯಿಲ್ಲದಂತೆ ನಡೆದಿದ್ದ ಚುನಾವಣೆಯಲ್ಲಿ ಅಭ್ಯರ್ಥಿಗಳು ಲಕ್ಷಗಳ ಲೆಕ್ಕದಲ್ಲಿ ಖರ್ಚು ಮಾಡಿ ಜಯಗಳಿಸಲು ತವಕಿಸಿದ್ದರಾದರೂ ಅದೃಷ್ಟ ಲಕ್ಷ್ಮೀ ಕೆಲವರನ್ನು ಮಾತ್ರ ಕೈಹಿಡಿದಿದ್ದಾಳೆ. ಬುಧವಾರ ನಡೆದ ಮತ ಎಣಿಕೆ ವೇಳೆ ಹಲವು ಸ್ವಾರಸ್ಯಕರ ಪ್ರಸಂಗಗಳು ಗಮನ ಸೆಳೆದವು. ಕೇವಲ ಒಂದು ಮತದಿಂದ ಜಯಗಳಿಸಿದವರು. ಲಾಟರಿ ಮೂಲಕ ಅದೃಷ್ಟ ಪಡೆದವರು ಒಂದು ಕಡೆಯಾದರೆ. ಸಂಬಂಧಿಕರ ವಿರುದ್ಧವೇ ಸ್ಪರ್ಧಿಸಿ ಗೆಲುವಿನ ನಗೆ ಬೀರಿದವರು ಮತ್ತೊಂದು ಕಡೆ. ಅಖಾಡದಲ್ಲಿ ಕಂಡ ಕೆಲ ವಿಶಿಷ್ಠ ಸನ್ನಿವೇಶದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಬೆಂಗಳೂರುರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಹಲವು ಸಣ್ಣ-ಪುಟ್ಟ ಸಮಸ್ಯೆ, ಅವಘಡಗಳ ನಡುವೆಯೂ ಕೌತುಕಗಳ ಆಗರವಾಗಿತ್ತು. ಸಂಭ್ರಮ, ಸಡಗರದಿಂದ ಕೂಡಿತ್ತು. ಡಿ.22 ಮತ್ತು 27ರಂದು ಎರಡು ಹಂತದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯಿತು. ರಾಜ್ಯದ 5728 ಗ್ರಾಪಂಗಳ ಒಟ್ಟು 91,339 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮತದಾನಕ್ಕೂ ಮುನ್ನ ಎರಡೂ ಹಂತಗಳಲ್ಲಿ 8074 ಮಂದಿ ಅವಿರೋಧ ಆಯ್ಕೆಯಾಗಿದ್ದರು. ಒಟ್ಟು 2,22,814 ಮಂದಿ ಕಣದಲ್ಲಿದ್ದರು. ಬ್ಯಾಲೆಟ್ ಮೂಲಕ ಮತದಾನವಾಗಿರುವುದರಿಂದ ಅನೇಕ ಕಡೆಗಳಲ್ಲಿ ತಡ ರಾತ್ರಿಯಾದರೂ ಫಲಿತಾಂಶ ಪ್ರಕಟವಾಗುವುದು ನಡೆದಿತ್ತು.
ಅನೇಕ ಕಡೆ ಮತ ಎಣಿಕೆ ಕೇಂದ್ರದ ಎದುರು ಕರೊನಾ ಮಾರ್ಗಸೂಚಿ ಉಲ್ಲಂಘಿಸಿ ಜನಸ್ತೋಮವೇ ನೆರೆದಿತ್ತು. ಮಾಸ್ಕ್ , ಸಾಮಾಜಿಕ ಅಂತರ ಮರೆತು ಜಮಾಯಿಸಿದ್ದರು. ಪೊಲೀಸ್ ಬಿಗಿ ಬಂದೋಬಸ್ತ್ ಲೆಕ್ಕಿಸದೆ ಜನರು ಗುಂಪು ಗುಂಪಾಗಿ ನೆರೆದಿದ್ದರು. ಮತ್ತೆ ಕೆಲವೆಡೆ ಜನರು ಕಂಠಪೂರ್ತಿ ಕುಡಿದು ಬಂದು ಗಲಾಟೆ ಮಾಡಿದ್ದಾರೆ. ಕೆಲವು ಮತ ಎಣಿಕೆ ಕೇಂದ್ರದ ಎದುರೇ ಹೂಹಾರಗಳ ಮಾರಾಟವೂ ಇತ್ತು. ಶಿರಸಿ ತಾಲೂಕು ವಾನಳ್ಳಿ ಗ್ರಾಪಂನ ಗೋಣಸರ ವಾರ್ಡ್​ನಲ್ಲಿ ವೀಣಾ ಗೌಡ ತಿರಸ್ಕೃತ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ!
ಮತ ಯಾಚಿಸದೆ ಗೆಲುವು: ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಪಂ ವ್ಯಾಪ್ತಿಯ ಅಕ್ಕೂರು ಗ್ರಾಮದಲ್ಲಿ ನೇತ್ರಾವತಿ ಮರಿಗೌಡ ಒಂದು ದಿನವೂ ಮತದಾರರ ಮನೆ ಬಾಗಿಲಿಗೆ ಬಂದು ಪ್ರಚಾರ ನಡೆಸದೆ ಗೆದ್ದಿದ್ದಾರೆ. ನೇತ್ರಾವತಿ ಡಿ.6ರಂದು ಗಂಡು ಮಗುವಿಗೆ ಜನ್ಮ ನೀಡಿದ ಹಿನ್ನೆಲೆ ಪ್ರಚಾರ ಕೈಗೊಂಡಿರಲಿಲ್ಲ.ಅನೇಕ ಕಡೆಗಳಲ್ಲಿ ತಡ ರಾತ್ರಿಯವರೆಗೂ ಮತ ಎಣಿಕೆ ಮುಂದುವರಿದಿದ್ದು, ಗುರುವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.
ಮೃತ ಅಭ್ಯರ್ಥಿಗಳೂ ಗೆದ್ದರು
ಚುನಾವಣೆ ನಡೆದ ದಿನ ರಾತ್ರಿಯೇ ಹೃದಯಾಘಾತದಿಂದ ಮೃತಪಟ್ಟಿದ್ದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಪಂ ಸುಂಕದಕಟ್ಟೆ ವಾರ್ಡ್​ನ ಡಿ.ಬಸಪ್ಪ ಗೆಲುವು ಸಾಧಿಸಿದ್ದಾರೆ. ಇದು ಅವರ ಸತತ 6ನೇ ಗೆಲುವಾಗಿದೆ. ಕೊಪ್ಪಳ ತಾಲೂಕಿನ ಮೆಣದಾಳದಲ್ಲಿ ಮತದಾನಕ್ಕೂ ಮೊದಲೇ ಸಾವನ್ನಪ್ಪಿದ ವೀರಭದ್ರಪ್ಪ ಬಡಿಗೇರ 217 ಮತ ಪಡೆದು ಸೋತಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಪಂ ವಾರ್ಡ್ ನಂ 2ರಲ್ಲಿ ಸ್ಪರ್ಧಿಸಿ, ಹೃದಯಾಘಾತದಿಂದ ಮೃತಪಟ್ಟಿದ್ದ ಅಭ್ಯರ್ಥಿ ಸಿ.ಬಿ.ಅಂಬೋಜಿ 414 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ವಿಜಯವಾಣಿ ವಿತರಕರಿಗೆ ದಿಗ್ವಿಜಯ
ಸವಣೂರ: ‘ವಿಜಯವಾಣಿ’ ಪತ್ರಿಕೆ ವಿತರಣೆ ಮೂಲಕ ಗ್ರಾಮಸ್ಥರ ಮನಗೆದ್ದ ಅನಿಲಕುಮಾರ ಹೊಂಬಳದ ಕುರುಬರಮಲ್ಲೂರ ಗ್ರಾಮ ಪಂಚಾಯಿತಿ ಯಿಂದ ಭಾರಿ ಅಂತರದಲ್ಲಿ ಗೆದ್ದಿದ್ದಾರೆ. ಇನ್ನೊಂದೆಡೆ ಕಲಬುರಗಿ ಜಿಲ್ಲೆ ಅಫಜಲ ಪುರ ತಾಲೂಕಿನ ಕರಜಗಿ ಗ್ರಾಪಂನಲ್ಲಿ ಸ್ಪರ್ಧಿಸಿದ್ದ ವಿಜಯವಾಣಿ ವಿತರಕ ಬಶೀರ್ ಅಹ್ಮದ್ ಗೆಲುವು
ಅಂಚೆ ಮತ ತಂದ ಅದೃಷ್ಟ
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹೊಳೆಸಿರಿಗೆರೆ ಗ್ರಾಪಂನ 4ನೇ ವಾರ್ಡ್ ಎಣಿಕೆ ಮುಗಿದಾಗ ವಿನಾಯಕ ಮಾಳಗಿಮನಿ ಹಾಗೂ ಪ್ರತಿಸ್ಪರ್ಧಿ ಕೆ.ಜಿ.ಸದಾಶಿವಪ್ಪ ತಲಾ 413 ಮತ ಪಡೆದಿದ್ದರು. ಆ ಹಂತದಲ್ಲಿ ಒಂದು ಅಂಚೆ ಮತ ವಿನಾಯಕ ಮಾಳಗಿಮನಿ (414) ಅವರನ್ನು ಗೆಲುವಿನ ದಡ ಸೇರಿಸಿತು.
ಮಂಗಳಮುಖಿಗೆ ವಿಜಯಮಾಲೆ
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮಂಗಳಮುಖಿ ಸುಧಾ ಜಯಿಸಿದ್ದಾರೆ. ಕಳೆದ 26 ವರ್ಷಗಳಿಂದ ಅವಿರೋಧ ಆಯ್ಕೆ ನಡೆಯುತ್ತಿದ್ದ ಈ ಗ್ರಾಪಂಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿತ್ತು. ಕೊಪ್ಪಳ ಜಿಲ್ಲೆ ಬೆನ್ನೂರಿನಲ್ಲಿ ಸ್ಪರ್ಧಿಸಿದ್ದ ಮಂಗಳಮುಖಿ ಜಮುನಾ ಸೋತಿದ್ದಾರೆ.
ರೇಣುಕಾಚಾರ್ಯ ಸೊಸೆ ಗೆಲುವು
ಗ್ರಾ.ಪಂ. ಚುನಾವಣೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸೊಸೆ ವಿ. ಮಂಜುಳಾ ಹೊನ್ನಾಳಿ ತಾಲೂಕು ಕುಂದೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರು 338 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಶೀಲಾ ಶಂಕರಮೂರ್ತಿ (333) ಅವರನ್ನು 5 ಮತಗಳ ಅಂತರದಿಂದ ಸೋಲಿಸಿದರು.
ಆತ್ಮಹತ್ಯೆ ಮಾಡಿಕೊಂಡವಗೆ ಜಯ
ಹಗರಿಬೊಮ್ಮನಹಳ್ಳಿ(ಬಳ್ಳಾರಿ): ಕೌಟುಂಬಿಕ ಕಾರಣಗಳಿಂದಾಗ ಮತದಾನಕ್ಕೂ ಮುನ್ನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಉಮೇದುವಾರ ವಡ್ಡರ ಮಲಿಯಪ್ಪಗೆ ತಾಲೂಕಿನ ದಶಮಾಪುರ ಗ್ರಾಪಂ ವ್ಯಾಪ್ತಿಯ ನಾಣ್ಯಾಪುರದ ಜನ ಮತ ನೀಡಿ, ಗೆಲ್ಲಿಸಿದ್ದಾರೆ. ಮದ್ಯವ್ಯಸನಿಯಾಗಿದ್ದ ಮಲಿಯಪ್ಪ ಹೆಂಡತಿ ಜತೆ ಜಗಳಮಾಡಿಕೊಂಡು ಡಿ.24 ರಂದು ನೇಣಿಗೆ ಶರಣಾಗಿದ್ದರು. ಚುನಾವಣೆಯಲ್ಲಿ ಮತದಾರ ಮಲಿಯಪ್ಪನಿಗೇ ವೋಟ್ ಹಾಕಿ ಗೆಲ್ಲಿಸಿದ್ದಾರೆ. ಮೃತ ಮಲಿಯಪ್ಪ ಎದುರಾಳಿ ಮರಿಯಪ್ಪ ವಿರುದ್ಧ 286 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಸಂಬಂಧದ ಸೋಲು-ಗೆಲುವು
ಮದ್ದೂರು ತಾಲೂಕಿನ ಕೂಳಗೆರೆಯಲ್ಲಿ ಚಿಕ್ಕಪ್ಪ ಮತ್ತು ಮಗನ ಹಣಾಹಣಿಯಲ್ಲಿ ಚಿಕ್ಕಪ್ಪ ಜಯಶೀಲರಾಗಿದ್ದಾರೆ. ಕೃಷ್ಣರಾಜಸಾಗರ 3ನೇ ವಾರ್ಡ್​ನಿಂದ ಕಣಕ್ಕಿಳಿದಿದ್ದ ಕೆ.ರಾಜು ತನ್ನ ಅಕ್ಕನ ಗಂಡ ಜವರಯ್ಯ ವಿರುದ್ಧ ಗೆಲುವು ಸಾಧಿಸಿದ್ದಾರೆ. ನಂಜನಗೂಡು ತಾಲೂಕು ಬದನವಾಳುನಲ್ಲಿ ಪ್ರತ್ಯೇಕ ವಾರ್ಡ್​ಗಳಲ್ಲಿ ಸ್ಪರ್ಧಿಸಿದ್ದ ಸಹೋದರರಾದ ಮಂಜುನಾಥ್ ಹಾಗೂ ಮಹದೇವಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಮಂಡ್ಯ ಜಿಲ್ಲೆ ಹರಳಹಳ್ಳಿ ಮತ್ತು ವಿಶ್ವೇಶ್ವರಯ್ಯನಗರ ಕೇತ್ರದಿಂದ ಸ್ಪರ್ಧಿಸಿದ್ದ ಪತಿ, ಪತ್ನಿ ಹಾಗೂ ಪುತ್ರನಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಕೊಡಗಿನ ಮೇಕೇರಿಯಲ್ಲಿ ಬಿ.ಎನ್.ಪುಷ್ಪಾ ಅವರು ಪತಿಯ ಸಹೋದರನ ಪತ್ನಿ ಸುಮಾವತಿ ಅವರನ್ನು 197 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಟಾಸ್ ಮೂಲಕ ಫಲಿತಾಂಶ ಘೊಷಣೆ
ಬಂಟ್ವಾಳ: ಸಜಿಪನಡು ಗ್ರಾಪಂ ಚುನಾವಣೆ ಫಲಿತಾಂಶ ಕೊನೇ ಕ್ಷಣದವರೆಗೆ ಕುತೂಹಲ ಕೆರಳಿಸಿತು. ಒಟ್ಟು 15 ಅಭ್ಯರ್ಥಿಗಳ ಪೈಕಿ 7 ಎಸ್​ಡಿಪಿಐ, 4 ಕಾಂಗ್ರೆಸ್, 3 ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದರು. ಒಂದು ಅಭ್ಯರ್ಥಿಯ ಮತ ಎಣಿಕೆ ಬಾಕಿ ಆಗಿತ್ತು. 7 ಸ್ಥಾನಗಳಲ್ಲಿ ಗೆದ್ದ ಎಸ್​ಡಿಪಿಐಗೆ ಅಧಿಕಾರ ಹಿಡಿಯಲು 1 ಸ್ಥಾನದ ಅಗತ್ಯ ಇತ್ತು. 4ನೇ ವಾರ್ಡ್​ನ ಎಸ್​ಡಿಪಿಐ ಬೆಂಬಲಿತ ಅಭ್ಯರ್ಥಿ ಸುಲೈಮಾನ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಮನಾಥ ತಲಾ 462 ಮತ ಪಡೆದಿದ್ದರು. ಟಾಸ್ ಮೂಲಕ ಎಸ್​ಡಿಪಿಐ ಅಭ್ಯರ್ಥಿ ಸುಲೈಮಾನ್ ವಿಜಯಿಯಾದರು. ಚಿಂಚೋಳಿ ತಾಲೂಕಿನ ದೇಗಲಮಡಿಯಲ್ಲಿ ಟಾಸ್​ನಲ್ಲಿ ಈರಮ್ಮ ಗೆದ್ದಿದ್ದಾರೆ.
5ನೇ ಬಾರಿ ಗೆದ್ದ 74 ವರ್ಷದ ಹಿರಿಯ
ಚಿಕ್ಕಮಗಳೂರಿನ ಕರ್ತಿಕೆರೆಯಲ್ಲಿ 74 ವರ್ಷದ ವೃದ್ಧ ಕೆ.ಎಂ.ಚಂದ್ರಶೇಖರ್, ಪ್ರತಿಸ್ಪರ್ಧಿ ಮಾಜಿ ಗ್ರಾಪಂ ಅಧ್ಯಕ್ಷ ಆನಂದ್​ರನ್ನು 253 ಮತಗಳಿಂದ ಸೋಲುಣಿಸಿದರು. 1987ರಲ್ಲಿ ಮಂಡಲ ಪಂಚಾಯಿತಿ ಉಪ ಪ್ರಧಾನರಾಗಿದ್ದ ಚಂದ್ರಶೇಖರ್​ಗೆ ಇದು 5ನೇ ಗೆಲುವು.
ವೃದ್ಧೆಗೆ ಗೆಲುವು:ನರಗುಂದ ತಾಲೂಕಿನ ಕೊಣ್ಣೂರ ಗ್ರಾಪಂನಲ್ಲಿ 81 ವರ್ಷದ ಮಾಬೂಬಿ ಹುಸೇನಸಾಬ್ ಮುದಕವಿ ಗೆಲುವು ಸಾಧಿಸಿದರು.
20 ವರ್ಷದಬಳಿಕ ಗೆಲುವು
20 ವರ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದ ಬೆಳಗಾವಿ ತಾಲೂಕಿನ ಮುತಗಾ ಗ್ರಾಪಂ ವಾರ್ಡ್ 4ರ ಅಭ್ಯರ್ಥಿ ಶ್ಯಾಮ್ ಮುತಗೇಕರ್ 36 ಮತಗಳ ಅಂತರದಿಂದ ಜಯ ಸಾಧಿಸಿ ದ್ದಾರೆ. ಗೆಲುವಿನ ಸುದ್ದಿ ಕೇಳಿ ಅಭ್ಯರ್ಥಿ, ಪತ್ನಿ, ಮಕ್ಕಳು ಎಣಿಕೆ ಕೇಂದ್ರದಲ್ಲಿಯೇ ಕಣ್ಣೀರು ಹಾಕಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
