ಬೆಂಗಳೂರು:ಬಿಜೆಪಿ ವರಿಷ್ಠರ ಎರಡು ಮಹತ್ವದ ನಿರ್ಧಾರಗಳು ರಾಜ್ಯದ ಕೇಸರಿ ಪಡೆಯಲ್ಲಿ ಸಂಭ್ರಮ ಹೆಚ್ಚಿಸಿದ್ದು, ಕಳಾಹೀನವಾಗಿದ್ದ ಪಕ್ಷವು ಡಿಸೆಂಬರ್​ನ ಚಳಿಗಾಲದ ಅಧಿವೇಶನಕ್ಕೆ ಮುನ್ನ ಮೈಚಳಿ ಬಿಟ್ಟು ಎದ್ದುಕುಳಿತಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಶನಿವಾರ ಪಕ್ಷದ ಕಚೇರಿಯವರೆಗೆ ತೆರೆದ ವಾಹನದಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಗಜಗಾತ್ರದ ಕಿತ್ತಳೆ ಹಣ್ಣಿನ ಹಾರ ಹಾಕಿ, ಹೂಮಳೆಗೆರೆದು, ಪಟಾಕಿ ಸಿಡಿಸಿದ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸಿ ಸಂತಸದ ಹೊಳೆಯಲ್ಲಿ ಮಿಂದೆದ್ದರು.
ವಿಧಾನಸಭೆ ಚುನಾವಣೆಯಲ್ಲಿ ಸೋತು 6 ತಿಂಗಳ ಬಳಿಕ ಪಕ್ಷದ ರಾಜ್ಯ ಸಮಿತಿಗೆ ಹೊಸ ಸಾರಥಿಯಾಗಿ ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ಹಿರಿಯ ಶಾಸಕ ಆರ್.ಅಶೋಕ್ ಆಯ್ಕೆಯಾಗಿದೆ. ಎರಡೂ ಪ್ರಮುಖ ಹುದ್ದೆಗಳ ಭರ್ತಿ ಯಿಂದಾಗಿ ಕಾರ್ಯಕರ್ತರು ಖುಷಿ ಹೆಚ್ಚಿಸಿದೆ ಎಂದು ಪಕ್ಷದ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ನಂತರ ಆರ್.ಅಶೋಕ್​ಗೆ ಪಕ್ಷದ ಕಾರ್ಯ ಕರ್ತೆಯರು ಆರತಿ ಎತ್ತಿ, ಹೂಗುಚ್ಛ ನೀಡಿ ಕಚೇರಿ ಒಳಗೆ ಬರಮಾಡಿಕೊಂಡರು. ಭಾರತ ಮಾತೆ ಭಾವ ಚಿತ್ರಕ್ಕೆ ಪುಷ್ಪಾರ್ಚನೆ, ಜಗನ್ನಾಥರಾವ್ ಜೋಶಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಸಂಭ್ರಮೋತ್ಸವದಲ್ಲಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಬಿ.ವೈ.ವಿಜಯೇಂದ್ರ ಮಾತನಾಡಿ, ಇನ್ಮುಂದೆ ರಾಜ್ಯದಲ್ಲಿ ಜೋಡೆತ್ತಿನ ಹವಾ. ನಾನು, ಆರ್.ಅಶೋಕ್ ಜೋಡೆತ್ತಿನ ರೀತಿ ರಾಜ್ಯವನ್ನು ಸುತ್ತಲು ವರಿಷ್ಠರು ಅಪ್ಪಣೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಹುರುಪು ತುಂಬಿದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗಿಲ್ಲ. ಪ್ರತಿಪಕ್ಷ ನಾಯಕನ ಆಯ್ಕೆಯಾಗಿಲ್ಲ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್​ನವರು ಈಗ ಕಂಗೆಟ್ಟಿದ್ದಾರೆ. ಪದೇಪದೆ ಟೀಕಿಸುವ ಬದಲು ಇನ್ನಷ್ಟು ದಿನ ಸುಮ್ಮನಿದ್ದರೆ ಚೆನ್ನಾಗಿತ್ತು ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎಂದರು.
ಜೋಡೆತ್ತು ಇಡೀ ರಾಜ್ಯವನ್ನು ಸುತ್ತಲಿದ್ದು, ಜನರಿಗೆ ನೆರವಾಗಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಹ್ಯಾಟ್ರಿಕ್ ಪ್ರಧಾನಿಯಾಗುವುದು ನಿಶ್ಚಿತ. ಈ ಚುನಾವಣೆ ದೇಶ, ರಾಜ್ಯ ರಾಜಕಾರಣದ ದಿಕ್ಸೂಚಿಯಾಗಲಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದರು.
ವಿಶ್ವಾಸದ ನುಡಿ:ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವಾರದೊಳಗೆ ಅಸಮಾಧಾನ ಶಮನಗೊಳಿಸಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದರು. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾದ ಬಳಿಕ ಕಾಂಗ್ರೆಸ್​ನವರಿಗೆ ನಡುಕ ಶುರುವಾಗಿದೆ. ಸಂಘಟನಾ ಚತುರತೆ, ಚಾಕಚಕ್ಯತೆ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಜಯೇಂದ್ರ ಮುನ್ನಡೆಯುತ್ತಾರೆ ಎಂದು ಶ್ಲಾಘಿಸಿದರು.
ಬಿಜೆಪಿ ಸಭೆಗೆ ಕಾಮತ್ ಹಾಜರಿ:ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆಗಾಗಿ ಪಕ್ಷದ ಕೇಂದ್ರ ವೀಕ್ಷಕರಿಬ್ಬರ ಸಮಕ್ಷಮ ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಶಾಸಕ ವೇದವ್ಯಾಸ ಕಾಮತ್ ಹಾಜರಾಗಿದ್ದರು.
ಅಶೋಕ್​ಗೆ ಪ್ರತಿಪಕ್ಷ ನಾಯಕನ ಮಾನ್ಯತೆಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆರ್.ಅಶೋಕ್ ಆಯ್ಕೆಯಾದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕನ ಮಾನ್ಯತೆ ದೊರೆತಿದೆ. ಆರ್.ಅಶೋಕ್ ಅವರನ್ನು ನ.17ರಿಂದ ಜಾರಿಗೆ ಬರುವಂತೆ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಸಭಾಧ್ಯಕ್ಷರು ಮಾನ್ಯತೆ ನೀಡಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನವಿಡೀ ಬಿರುಸಿನ ಸುತ್ತಾಟಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಆರ್.ಅಶೋಕ್ ಶನಿವಾರ ಬಿರುಸಿನ ಸುತ್ತಾಟ ನಡೆಸಿದರು. ಆರ್​ಟಿ ನಗರದ ನಿವಾಸದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮುಂದಿನ ನಡೆಯ ಕುರಿತು ಔಪಚಾರಿಕವಾಗಿ ರ್ಚಚಿಸಿದರು. ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ನಂತರ ಪಕ್ಷದ ಕಚೇರಿಗೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷರ ಕೊಠಡಿಯಲ್ಲಿ ಬಿ.ವೈ.ವಿಜಯೇಂದ್ರರನ್ನು ಭೇಟಿಯಾದರು. ಮಧ್ಯಾಹ್ನ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿದ ಅಶೋಕ್​ಗೆ ಶಾಲು ಹೊದಿಸಿ ಸನ್ಮಾನಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಶೀರ್ವದಿಸಿದರು. ಅಶೋಕ್ ಮಾತನಾಡಿ, ನೀವು, ಕುಮಾರಸ್ವಾಮಿ ಒಟ್ಟಾಗಿ ಮೋದಿಯವರಿಗೆ ಗೌರವ ಬರುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ದೇವೇಗೌಡರು ಸಲಹೆ ನೀಡಿ, ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ ಎಂದರು.
ವರಿಷ್ಠರ ಅಪೇಕ್ಷೆಯಂತೆ ನಾನು, ಆರ್.ಅಶೋಕ್ ಜೋಡೆತ್ತುಗಳಾಗಿ ರಾಜ್ಯ ಸುತ್ತುತ್ತೇವೆ. ಒಟ್ಟಾಗಿ ಪಕ್ಷದ ಸಂಘಟನೆ ಕಟ್ಟುತ್ತೇವೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಡುತ್ತೇವೆ. ಲೋಕಸಭೆ ಚುನಾವಣೆಗೆ ದುಡಿಯುತ್ತೇವೆ.
| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಎಷ್ಟು ಹಣಕೊಟ್ಟು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದರು. ಎಷ್ಟು ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಲಿ. ಕಾಂಗ್ರೆಸ್​ನಲ್ಲಿರುವ ಪೇಮೆಂಟ್ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ.
| ಆರ್.ಅಶೋಕ್ ಪ್ರತಿಪಕ್ಷ ನಾಯಕ
ಬೊಮ್ಮಾಯಿ ಜತೆ ಚರ್ಚೆಹಿಂದಿನ ಸರ್ಕಾರದಲ್ಲಿ ಜೋಡೆತ್ತುಗಳೆಂದೇ ಕರೆಯಲ್ಪಡುತ್ತಿದ್ದ ಬಸವರಾಜ ಬೊಮ್ಮಾಯಿ ಹಾಗೂ ಆರ್. ಅಶೋಕ್ ಶನಿವಾರ ಭೇಟಿಯಾಗಿ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು. ಬೊಮ್ಮಾಯಿ ನಿವಾಸದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರು ನಾಯಕರು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೇಗೆ ಹೋರಾಟ ನಡೆಸಬೇಕೆಂದು ಚರ್ಚೆ ನಡೆಸಿದರು.
60 ಪರ್ಸೆಂಟ್ ಕಮಿಷನ್ ಸರ್ಕಾರಬೆಂಗಳೂರು: ವರ್ಗಾವಣೆ ದಂಧೆ ಈಗಲೂ ಎಗ್ಗಿಲ್ಲದೆ ನಡೆಯುತ್ತಿದೆ. ಕಾಂಗ್ರೆಸ್ 60 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ನಮ್ಮ ಸರ್ಕಾರದ ವಿರುದ್ಧ ಯಾವುದೇ ಪುರಾವೆ, ದಾಖಲೆಗಳಿಲ್ಲದೆ 40 ಪರ್ಸೆಂಟ್ ಕಮಿಷನ್ ಸರ್ಕಾರವೆಂದು ಆರೋಪಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆ ದಾಖಲೆಗಳು ಬಹಿರಂಗವಾಗಿವೆ. ಇದು, 60 ಪರ್ಸೆಂಟ್ ಸರ್ಕಾರವೆಂಬುದು ಬಯಲಾಗಿದೆ ಎಂದು ಪುನರುಚ್ಚರಿಸಿದರು.
ಒಂದು ರಾಜಕೀಯ ಪಕ್ಷವೆಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸ ಇದ್ದೇ ಇರುತ್ತವೆ. ಒಬ್ಬರಿಗೆ ಒಂದು ಸ್ಥಾನ ಸಿಕ್ಕಾಗ ಕೈತಪ್ಪಿದವರು ಅಸಮಾಧಾನಗೊಳ್ಳುವುದು ಸಹಜ. ಆದರೆ ವರಿಷ್ಠರ ತೀರ್ವನಕ್ಕೆ ಎಲ್ಲರೂ ಬದ್ಧರಾಗಿ ಇರಲಿದ್ದಾರೆ ಎಂದರು. ಪಕ್ಷದೊಳಗೆ ಏನೇ ಅಸಮಾಧಾನ ಇದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ವಿರೋಧ ಪಕ್ಷವಾಗಿ ಹೊರ ಹೊಮ್ಮಲಿದ್ದೇವೆ. ಅಸಮಾಧಾನ, ಬೇಸರಗೊಂಡವರ ಜತೆಗೆ ಖುದ್ದು ಮಾತನಾಡುವೆ. ಪಕ್ಷದ ತೀರ್ವನವನ್ನು ಯಾರೂ ವಿರೋಧಿಸಬಾರದು, ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತ ಮುಖ್ಯವೆಂದು ಆರ್.ಅಶೋಕ್ ಸಲಹೆ ನೀಡಿದರು.
ರಚನಾತ್ಮಕವಾಗಿ ಕೆಲಸ: ಸದನದೊಳಗೆ ಬಿಜೆಪಿ ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಜನರ ಹಿತ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡುತ್ತೇವೆ. ಸದಾ ವಿರೋಧಿಸುವುದೇ ಪ್ರತಿಪಕ್ಷದ ಕೆಲಸವಲ್ಲ. ಆದರೆ ತಪು್ಪ ಕಂಡು ಬಂದಾಗ ಮುಲಾಜಿಲ್ಲದೆ ಎತ್ತಿ ತೋರಿಸುತ್ತೇವೆ ಎಂದು ಹೇಳಿದರು.
ಮೊದಲ ಬಾರಿಗೆ ಅವಕಾಶ: ಮಧ್ಯ ಕರ್ನಾಟಕದ ಬಿ.ಎಸ್.ಯಡಿಯೂರಪ್ಪ, ಉತ್ತರಕರ್ನಾಟಕದವರೇ ಆದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕರಾವಳಿಯ ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದರು. ಬಿಜೆಪಿಯಲ್ಲಿ ಇದೇ ಮೊದಲ ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರೆತಿದೆ ಎಂದು ಆರ್.ಅಶೋಕ್ ಸಮರ್ಥಿಸಿಕೊಂಡರು.
ಜಮೀರ್ ಹೇಳಿಕೆ, ಹೋರಾಟದ ಎಚ್ಚರಿಕೆಸಂವಿಧಾನಿಕ ಹುದ್ದೆ, ಸ್ಪೀಕರ್ ಪೀಠಕ್ಕೂ ಮತೀಯತೆ ಅಂಟಿಸುವ ಸಚಿವ ಜಮೀರ್ ಅಹಮದ್, ಆ ಸ್ಥಾನದ ಗೌರವಕ್ಕೆ ಚ್ಯುತಿ ತರುವ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಗೌರವ ಕೊಡುತ್ತೇವೆ, ಈ ರೀತಿಯ ಮತೀಯ ವಿಚಾರಗಳ ವಿರುದ್ಧ ಹೋರಾಡುತ್ತೇವೆ ಎಂದು ಎಚ್ಚರಿಸಿದರು. ಸುವರ್ಣಸೌಧದಲ್ಲಿರುವ ವೀರಸಾವರ್ಕರ್ ಭಾವಚಿತ್ರ ತೆಗೆದು, ನೆಹರೂ ಭಾವಚಿತ್ರ ಹಾಕುವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ವಂಶಪಾರಂಪರ್ಯ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್​ಗೆ ಬೇರೆಯವರ ಬಗ್ಗೆ ಸೈರಣೆಯಿಲ್ಲ, ತಾತ, ಮಗ, ಮೊಮ್ಮಗ ಹೀಗೆ ನಾಲ್ಕು ತಲೆಮಾರುಗಳ ಫೋಟೊ ಕರ್ನಾಟಕದಲ್ಲಿ ಇರಬೇಕು ಎಂದು ಬಯಸುತ್ತದೆ ಎಂದು ಆರ್.ಅಶೋಕ್ ಟೀಕಿಸಿದರು.
ಉದ್ಯಮಿಗೆ 5 ಕೋಟಿ ರೂ.ವಂಚನೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ ಚೈತ್ರಾ ಕುಂದಾಪುರ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 + six =
Remember me
