ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿ ಒತ್ತುವರಿ ತೆರವುಗೊಳಿಸಲು ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಜಿಲ್ಲಾಡಳಿತಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಒತ್ತುವರಿ ಆಸ್ತಿ ಮತ್ತು ತೆರವುಗೊಳಿಸಲು ಕೈಗೊಂಡ ಕ್ರಮಗಳ ಮಾಹಿತಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಮೂರು ಬಾರಿ ಸೂಚನೆ ಕೊಟ್ಟಿದ್ದು, ಜಿಲ್ಲಾಡಳಿತ ಪ್ರತಿ ಬಾರಿಯೂ ಒಂದೊಂದು ಅಂಕಿ-ಸಂಖ್ಯೆ ನೀಡಿ ಸರ್ಕಾರವನ್ನೇ ತಬ್ಬಿಬ್ಬಾಗಿಸಿವೆ.
ಭೂಮಿ ಬೆಲೆ ಏರಿಕೆಯಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ನಗರ ಪ್ರದೇಶಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಪಂಚಾಯಿತಿ ಜಾಗ ಒತ್ತುವರಿ ಪ್ರಕರಣ ಹೆಚ್ಚಾದವು. ಸದಸ್ಯರು, ಸಿಬ್ಬಂದಿಯೇ ಶಾಮೀಲಾಗಿ ಸರ್ಕಾರಿ ಜಾಗ ಲಪಟಾಯಿಸಿದ್ದ ಬಗ್ಗೆ ದೂರು ಬಂದಿದ್ದವು. ಪ್ರತಿ ಗ್ರಾಪಂ ತನ್ನ ಆಸ್ತಿ ರಿಜಿಸ್ಟರನ್ನು ನಿರ್ವಹಿಸಿ ಅದನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸುವುದು ಹಾಗೂ ಆಸ್ತಿ ವಿವರಗಳನ್ನು ಪಂಚಾಯಿತಿ ಕಚೇರಿ ಗೋಡೆಗಳ ಮೇಲೆ ಬರೆಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಒತ್ತುವರಿ ತೆರವುಗೊಳಿಸಲು ಮಾರ್ಗಸೂಚಿ ನೀಡಿದ್ದರೂ ನಿರೀಕ್ಷಿತ ಪ್ರಯತ್ನ ನಡೆದಿರಲಿಲ್ಲ.
ಆರು ತಿಂಗಳಿಂದೀಚೆಗೆ ಮತ್ತೆ ಪ್ರಯತ್ನ ಆರಂಭವಾಗಿದ್ದು, ಜಿಲ್ಲಾಡಳಿತಗಳ ಜಾಣ ಮರೆವಿನ ಸ್ಪಂದನೆಗೆ ಸರ್ಕಾರವೇ ಬೇಸರ ವ್ಯಕ್ತಪಡಿಸಿದೆ. 2019ರ ಡಿಸೆಂಬರ್ ಅಂತ್ಯದಲ್ಲಿ ಸಂಗ್ರಹಿಸಿದ್ದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 26,654 ಆಸ್ತಿಗಳು ಒತ್ತುವರಿ ತೆರವುಗೊಳಿಸಲು ಬಾಕಿ ಇತ್ತು. ಒಟ್ಟಾರೆ 27,743 ಆಸ್ತಿ ಒತ್ತುವರಿಯಾಗಿತ್ತು. 4 ಜಿಲ್ಲೆಗಳಲ್ಲಿ ದಂಡ ಸಂಗ್ರಹಿಸಲಾಗಿತ್ತು. ಈ ಅಂಕಿ-ಸಂಖ್ಯೆ ಇಟ್ಟುಕೊಂಡು ಸರ್ಕಾರ ಪರಾಮರ್ಶೆಗೆ ಕುಳಿತಾಗ ಜಿಲ್ಲಾಡಳಿತಗಳು ತಬ್ಬಿಬ್ಬಾದವು. ಒಂದೇ ತಿಂಗಳಲ್ಲಿ ಈಗ ಬೇರೆ ಲೆಕ್ಕ ನೀಡಿವೆ. 2020ರ ಜ.18ರ ಪ್ರಕಾರ, ಒಟ್ಟು 1563 ಆಸ್ತಿಗಳು ಮಾತ್ರ ಒತ್ತುವರಿಯಾಗಿವೆ, 489 ಆಸ್ತಿ ಇತ್ತೀಚೆಗೆ ತೆರವುಗೊಳಿಸಲಾಗಿದ್ದು, 984 ತೆರವು ಬಾಕಿ ಇದೆ ಎಂದು ಜಿಲ್ಲಾಡಳಿತಗಳು ಹೇಳಿಕೊಂಡಿವೆ. ಡಿಸೆಂಬರ್​ನಲ್ಲಿ ತೆರವುಗೊಳಿಸಬೇಕಾದ ಆಸ್ತಿಗಳ ಸಂಖ್ಯೆ 26654 ಇದ್ದದ್ದು, ಏಕಾಏಕಿ 984 ಸಂಖ್ಯೆಗೆ ಇಳಿದಿರುವುದಕ್ಕೆ ಸರ್ಕಾರವೇ ತಬ್ಬಿಬ್ಬಾಗಿದೆ. ಈ ಮುನ್ನ, 5 ಸಾವಿರದಷ್ಟು ಆಸ್ತಿಗಳು ಒತ್ತುವರಿಯಾಗಿದೆ ಎಂದು ಜಿಲ್ಲಾಡಳಿತಗಳು ಪರಿಷ್ಕೃತ ವರದಿ ನೀಡಿದ್ದವು.
ಸರ್ಕಾರಕ್ಕೆ ಉಭಯ ಸಂಕಟ
ಒಟ್ಟಾರೆ ಆಸ್ತಿ ಒತ್ತುವರಿ ಬಗ್ಗೆ ಜಿಲ್ಲಾಡಳಿತಗಳು ಮೈಮರೆತಿರುವುದು ಸರ್ಕಾರಕ್ಕೆ ಉಭಯ ಸಂಕಟವೆನಿಸಿದೆ. ಒಂದು ಕಡೆ ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿ ಸಭೆ ಒತ್ತುವರಿಗಳನ್ನು ತೆರವುಗೊಳಿಸಲು ಇದುವರೆಗೆ ಕ್ರಮಕೈಗೊಳ್ಳದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಕೂಡಲೇ ಗಮನ ಕೊಟ್ಟು ನಿಖರ ಮಾಹಿತಿ ಕೊಡಬೇಕು ಮತ್ತು ಒತ್ತುವರಿ ತೆರವಿಗೂ ಆದ್ಯತೆ ಕೊಡಬೇಕು ಎಂದು ಸೂಚನೆ ಕೊಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಯಾವ ಆಸ್ತಿಗಳು?
ಗ್ರಾಪಂ ಆಸ್ತಿಗಳಾದ ಗ್ರಾಮಠಾಣಾ, ಸಾರ್ವಜನಿಕ ರಸ್ತೆ, ಕಾಲುವೆಗಳು, ಕೆರೆಗಳು, ಆಟದ ಮೈದಾನ, ಉದ್ಯಾನವನ, ಸಾರ್ವಜನಿಕ ಉಪಯೋಗಕ್ಕೆ ಇರಿಸಿರುವ ಪ್ರದೇಶ, ರುದ್ರಭೂಮಿ, ಚರಂಡಿ, ಘಟಾರ, ಗ್ರಾಮಸಾರ ಚರಂಡಿ ಪೈಕಿ ಒತ್ತುವರಿಯಾದ ಆಸ್ತಿಗಳ ಸಂಖ್ಯೆ, ಒತ್ತುವರಿ ತೆರವುಗೊಳಿಸಿದ ಸಂಖ್ಯೆ, ತೆರವುಗೊಳಿಸಲು ಬಾಕಿ ಇರುವ ಆಸ್ತಿಗಳ ಸಂಖ್ಯೆ, ಒತ್ತುವರಿದಾರರಿಂದ ದಂಡ ರೂಪದಲ್ಲಿ ಸಂಗ್ರಹಿಸಿದ ಒಟ್ಟು ಮೊತ್ತದ ವಿವರವನ್ನು ಸರ್ಕಾರ ಬಯಸಿತ್ತು.
ಶ್ರೀಕಾಂತ್ ಶೇಷಾದ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
