| ಹರೀಶ್ ಬೇಲೂರು ಬೆಂಗಳೂರು
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರ ಮಾರ್ಗಸೂಚಿ ದರ ಹೆಚ್ಚಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹೊಸದಾಗಿ ರಾಜಸ್ವ ಸಂಗ್ರಹ ಗುರಿ ನಿಗದಿಪಡಿಸಲು ಚಿಂತನೆ ನಡೆಸಿದೆ. ಇದರಿಂದಾಗಿ ಕಬ್ಬಿಣದ ಅದಿರು, ಜಲ್ಲಿಕಲ್ಲು, ಗ್ರಾನೈಟ್, ಮರಳು, ಎಂ ಸ್ಯಾಂಡ್ ಇನ್ನಿತರ ವಸ್ತುಗಳ ಬೆಲೆ ದುಬಾರಿಯಾಗುವ ಲಕ್ಷಣ ಗೋಚರಿಸಿದೆ.
ವಾರದ ಹಿಂದೆ ಮದ್ಯದ ದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು. ಈಗ ಕಬ್ಬಿಣದ ಅದಿರು, ಜಲ್ಲಿಕಲ್ಲು, ಸೈಜ್​ಗಲ್ಲು, ಗ್ರಾನೈಟ್ಸ್, ಮರಳು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು, ಕರಿಕಲ್ಲು, ಬಿಳಿಕಲ್ಲು, ಮಲ್ಟಿಕಲರ್ ಗ್ರಾನೈಟ್, ಡೋಲೋಮೈಟ್, ಸಿಲಿಕಾ, ಅಲಂಕಾರಿಕ ಶಿಲೆ ಇತ್ಯಾದಿ ಉಪ ಖನಿಜಗಳ ಮೇಲೆ ರಾಯಲ್ಟಿ ಹೆಚ್ಚಿಸುವ ಮೂಲಕ ಇಲಾಖೆಗೆ ಹೊಸ ರಾಜಸ್ವ ಗುರಿ ನಿಗದಿಗೆ ಸರ್ಕಾರ ಮುಂದಾಗಿದೆ.
ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್​ನಲ್ಲಿ 2022-23ನೇ ಸಾಲಿನಲ್ಲಿ ಇಲಾಖೆಗೆ ನಿಗದಿಪಡಿಸಿದ್ದ 6,500 ಕೋಟಿ ರೂ.ಆದಾಯ ಸಂಗ್ರಹಣೆ ಗುರಿಯನ್ನು 2023-24ನೇ ಸಾಲಿಗೆ 7,500 ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಹಾಗೂ ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಯೋಜನೆಗಳ ಅನುಷ್ಠಾನಕ್ಕೆ ಪ್ರತಿ ವರ್ಷ ಅಂದಾಜು 59 ಸಾವಿರ ಕೋಟಿ ರೂ.ಬೇಕಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ, ಜು.7ರಂದು ಮಂಡಿಸುವ ಬಜೆಟ್​ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 7,500 ಕೋಟಿ ರೂ.ನಿಂದ 12 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಲು ಆಲೋಚಿಸುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳು ಈಗಾಗಲೇ ಶುರುವಾಗಿದೆ.
ಸರ್ಕಾರವು ಇಲಾಖೆಯ ಉನ್ನತ ಅಧಿಕಾರಿಗಳ ಜತೆ 2-3 ಬಾರಿ ಬಗ್ಗೆ ರ್ಚಚಿಸಿ ರಾಜಸ್ವ ಹೆಚ್ಚಿಸಲಿದೆ. ಜತೆಗೆ, ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಸ್ವ ಸಂಗ್ರಹದ ತುಲನಾತ್ಮಕ ವಿಶ್ಲೇಷಣೆ, ಖನಿಜಗಳ ಮೇಲಿರುವ ರಾಯಲ್ಟಿ ವಿವರ ಸೇರಿ ಇತರ ಮಾಹಿತಿಗಳನ್ನು ತರಿಸಿಕೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ 2,802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. 70 ರೂ. ರಾಜಧನ, 21 ರೂ. ಜಿಲ್ಲಾ ನಿರ್ವಹಣೆ ನಿಧಿ ಸೇರಿ ಪ್ರತಿ ಟನ್ ಕಲ್ಲಿಗೆ ಒಟ್ಟು 91 ರೂ. ಶುಲ್ಕ ಕಟ್ಟಲಾಗುತ್ತಿದೆ. ಇದರಿಂದ ಪ್ರತಿ ವರ್ಷ ಸರ್ಕಾರಕ್ಕೆ 1,500 ಕೋಟಿ ರೂ. ರಾಜಸ್ವ ಬರುತ್ತಿದೆ. ಸದ್ಯ ರಾಜ್ಯದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿನ ಅಧಿಕೃತ ಕಲ್ಲು ಗಣಿಗಾರಿಕೆಗಳಿಂದ ಪ್ರತಿ ನಿತ್ಯ ಅಂದಾಜು 12 ಲಕ್ಷ ಟನ್ ಜಲ್ಲಿ ಕಲ್ಲು, ಎಂಸಾ್ಯಂಡ್ ಉತ್ಪಾದನೆಯಾಗುತ್ತಿದೆ. 2019-20ರಲ್ಲಿ ಬಳ್ಳಾರಿ ಸೇರಿ ರಾಜ್ಯದ 88 ಕಡೆಗಳಲ್ಲಿ 7,045 ಹೆಕ್ಟೇರ್ ಪ್ರದೇಶಗಳಲ್ಲಿ ಅದಿರು ಗಣಿಗಾರಿಕೆಯಿಂದ 1,116 ಕೋಟಿ ರೂ. ಆದಾಯ ಬಂದರೆ, 2020-21ರಲ್ಲಿ 89 ಕಡೆ 7,091 ಹೆಕ್ಟೇರ್ ಪ್ರದೇಶಗಳಲ್ಲಿ 1,293 ಕೋಟಿ ರೂ.ಆದಾಯ ಬಂದಿದೆ. 2021-22ರಲ್ಲಿ ಒಟ್ಟು 87 ಕಡೆಗಳಲ್ಲಿ 6,962 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ 2,177 ಕೋಟಿ ರೂ, 2022ರ ಏಪ್ರಿಲ್​ನಿಂದ ನವೆಂಬರ್​ವರೆಗೆ 87 ಕಡೆಗಳಲ್ಲಿ 7,486 ಹೆಕ್ಟೇರ್ ಪ್ರದೇಶಗಳಲ್ಲಿ ಅದಿರು ಗಣಿಗಾರಿಕೆಯಿಂದ 1,372 ಕೋಟಿ ರೂ. ಆದಾಯ ಬಂದಿದೆ. ಅಲ್ಲದೆ, ಪ್ರಸ್ತುತ ರಾಜ್ಯದಲ್ಲಿ 670 ಮರಳು ಕೇಂದ್ರ ಸ್ಥಾಪಿಸಲಾಗಿದೆ. 2019-20ರಲ್ಲಿ 43,02,231, 2020-21ರಲ್ಲಿ 42,40,160 ಹಾಗೂ 2021-22ರಲ್ಲಿ 31,54,424 ಮೆಟ್ರಿಕ್ ಟನ್ ಮರಳು ಸಾಗಣೆಯಿಂದ ನೂರಾರು ಕೋಟಿ ರೂ. ಆದಾಯ ಬಂದಿದೆ. ಈಗ ಖನಿಜಗಳ ಮೇಲೆ ರಾಯಲ್ಟಿ ಹೆಚ್ಚಿಸಿದರೆ ಸರ್ಕಾರಕ್ಕೆ ಇನ್ನಷ್ಟು ಆದಾಯ ಹರಿದು ಬರಲಿದೆ.
ರಾಜ್ಯದಲ್ಲಿ ಕಾನೂನುಬದ್ಧ ಗಣಿಗಾರಿಕೆ ನಡೆಸುವುದಕ್ಕೆ ಸಮರ್ಪಕವಾಗಿ ನಿಯಮ ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಬೇಕಿದ್ದ ಅಂದಾಜು 8 ಸಾವಿರ ರೂ.ನಿಂದ 10 ಸಾವಿರ ಕೋಟಿ ರೂ.ಆದಾಯ ಖೋತಾ ಆಗುತ್ತಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರತಿ ನಿತ್ಯ 2 ಲಕ್ಷ ಟನ್ ಜಲ್ಲಿ ಕಲ್ಲು ಮತ್ತು ಎಂ ಸ್ಯಾಂಡ್ ಅಕ್ರಮವಾಗಿ ಸರಬರಾಜು ಆಗುತ್ತಿದೆ. ಇದರಿಂದ ಸರ್ಕಾರಕ್ಕೆ ಬರಬೇಕಿದ್ದ ಸಾವಿರಾರು ಕೋಟಿ ರೂ. ಜಿಲ್ಲಾ ಖನಿಜ ನಿಧಿ (ಡಿಎಂಎಫ್), ರಾಜಧನ, ಜಿಎಸ್​ಟಿ ಆದಾಯ ನಷ್ಟವಾಗುತ್ತಿದೆ. ಹೀಗಿರುವಾಗ, ರಾಜಸ್ವ ಗುರಿ ಸಂಗ್ರಹ ಹೆಚ್ಚಿಸಿದರೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಆದಾಯ ತರಲು ಕಷ್ಟಪಡಬೇಕಾಗುತ್ತದೆ.
ರಾಜ್ಯ ಸರ್ಕಾರ ರಾಯಲ್ಟಿ ಹೆಚ್ಚಿಸಿದರೆ ಜಲ್ಲಿಕಲ್ಲು, ಸೈಜ್​ಗಲ್ಲು, ಗ್ರಾನೈಟ್ಸ್, ಮರಳು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು ಸೇರಿ ಇನ್ನಿತರ ನಿರ್ಮಾಣ ಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಲಿದೆ. ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಖಾಸಗಿ, ಸರ್ಕಾರಿ ಕಾಮಗಾರಿಗಳು, ಮನೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಪರಿ ಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 + 8 =
Remember me
