ಬೆಂಗಳೂರು:ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಮುನ್ನಾದಿನ ಗೃಹಲಕ್ಷ್ಮಿ ಫಲಾನುಭವಿಗಳ ಹಿಂಬಾಕಿ ಚುಕ್ತಾ ಆಗಿದೆ. ಎರಡು ದಿನಗಳ ಅಂತರದಲ್ಲಿ ಎರಡು ಕಂತುಗಳ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿರುವುದಾಗಿ ಫಲಾನುಭವಿ ಮಹಿಳೆಯರ ವಲಯ ದಲ್ಲಿ ಚರ್ಚೆ ಆಗುತ್ತಿದೆ. ಇದು ಲೋಕಸಭೆ ಚುನಾವಣೆ ಕಣದಲ್ಲಿ ಮತದಾರರಿಗೆ ಹಾಕಿದ ಗಾಳ ಎಂಬ ಆರೋಪವೂ ಕೇಳಿಬರುತ್ತಿದೆ. ಇನ್ನು ಮತ್ತೊಂದು ಗ್ಯಾರಂಟಿ ಯುವನಿಧಿಯ ಎಡವಟ್ಟು ಬಯಲಾಗಿದೆ. ಹೆಸರು ನೋಂದಾಯಿಸಿಕೊಂಡಿದ್ದ ರಾಜ್ಯದ ಯುವನಿಧಿ ಫಲಾನುಭವಿಗಳ ಪೈಕಿ ಶೇ.43 ಯುವಕರು ಇನ್ನೂ ಯೋಜನೆಗೇ ಅರ್ಹರಾಗಿಲ್ಲ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಲೋಕಸಭೆ ಚುನಾವಣೆ ಮತದಾನದ ವೇಳೆಗೆ ಸರಿಯಾಗಿ ರಾಜ್ಯದ ಗ್ಯಾರಂಟಿ ಫಲಾನುಭವಿಗಳಿಗೆ ಹಿಂಬಾಕಿ ಚುಕ್ತಾ ಆಗಲಿದೆ ಎಂಬ ಚರ್ಚೆ ನಿಜವಾಗಿದೆ. ರಾಜಕೀಯ ವಲಯದಲ್ಲಿ ಕೇಳಿಬಂದಿದ್ದ ಮಾತಿನಂತೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎರಡು ದಿನಗಳ ಅಂತರದಲ್ಲಿ ಎರಡು ಕಂತುಗಳ ಹಣ ಜಮಾಗೊಂಡಿದೆ. ನಿರ್ದಿಷ್ಟವಾಗಿ ಎಷ್ಟು ಫಲಾನುಭವಿಗಳಿಗೆ ಬಾಕಿ ಜಮೆ ಮಾಡಲಾಗಿದೆ ಎಂಬ ಮಾಹಿತಿ ದೃಢಪಡದಿದ್ದರೂ ಮತದಾನಕ್ಕೆ 24 ಗಂಟೆಗಳಿರುವಾಗ ಎರಡು ಸಾವಿರ ರೂ. ಎರಡು ಕಂತುಗಳಲ್ಲಿ ಬಂದಿರುವ ಬಗ್ಗೆ ಮಹಿಳಾ ವಲಯದಲ್ಲಿ ಚರ್ಚೆಯಾಗುತ್ತಿದೆ.
ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಗೆ ಮಹಿಳಾ ವರ್ಗದ ಮೆಚ್ಚುಗೆ ಸಿಕ್ಕಿದೆ. ಆದರೆ ಲೋಕಸಭೆ ಚುನಾವಣೆ ಘೋಷಣೆ ಬಳಿಕ ಅನೇಕ ಮಹಿಳೆಯರು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದರು. ರಾಜ್ಯ ಸಕಾರ ಮತದಾನ ಹತ್ತಿರ ಇರುವಾಗ ಬಾಕಿ ಹಣ ಜಮೆ ಮಾಡಲಿದೆ ಎಂಬ ಮಾತು ಕೇಳಿಬಂದಿತ್ತು. ಮತದಾನ ಸಮೀಪದಲ್ಲಿರುವಾಗ ಬಿಡುಗಡೆ ಮಾಡುವ ಸಲುವಾಗಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ನಿರಾಕರಿಸಿದ್ದರು. ಆದರೆ, ಶುಕ್ರವಾರ ಮತದಾನಕ್ಕೆ ಮುನ್ನ ಬುಧವಾರ, ಗುರುವಾರ ಹಣ ಜಮೆ ಆಗುತ್ತಿರುವುದು ಚರ್ಚೆಗೆ ಮರುಜೀವ ನೀಡಿದೆ.
ಒಟ್ಟಾರೆ 1,21,47,651 ಮಂದಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಬೆಳಗಾವಿಯಲ್ಲಿ 11 ಲಕ್ಷ, ಬೆಂಗಳೂರು ನಗರದಲ್ಲಿ 8.68 ಲಕ್ಷ, ಮೈಸೂರಲ್ಲಿ 6.71 ಲಕ್ಷ, ತುಮಕೂರಲ್ಲಿ 6,17 ಲಕ್ಷ ಫಲಾನುಭವಿಗಳಿದ್ದಾರೆ. ವಿಜಯಪುರದಲ್ಲಿ 4.81 ಲಕ್ಷ, ಕಲಬುರಗಿಯಲ್ಲಿ ರಾಯಚೂರು 4.17 ಲಕ್ಷ, ಮಂಡ್ಯ 4.51 ಲಕ್ಷ, ಹಾಸನ 4.33 ಲಕ್ಷ, ಬಾಗಲಕೋಟೆ 4.01 ಲಕ್ಷ, ಶಿವಮೊಗ್ಗದಲ್ಲಿ 3.85 ಲಕ್ಷ, ಉತ್ತರ ಕನ್ನಡ 3.17 ಲಕ್ಷ, ಹಾವೇರಿ 3.77 ಲಕ್ಷ, ಧಾರವಾಡ 3.64 ಲಕ್ಷ, ದಾವಣಗೆರೆ 3.57 ಲಕ್ಷ, ದಕ್ಷಿಣ ಕನ್ನಡ 3.55 ಲಕ್ಷ, ಚಿತ್ರದುರ್ಗ 3.84, ಬೀದರ್ 3.20 ಲಕ್ಷ ಫಲಾನುಭವಿಗಳಿದ್ದರೆ ಒಂಬತ್ತು ಜಿಲ್ಲೆಗಳಲ್ಲಿ ಮೂರು ಲಕ್ಷಕ್ಕಿಂತ ಕಡಿಮೆ ಫಲಾನುಭವಿಗಳಿದ್ದಾರೆ.
ಶೇ.43 ಯುವಕರಿಗೆ ಸಿಕ್ಕಿಲ್ಲ ಯುವನಿಧಿ!:ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಯುವ ನಿಧಿ ಯೋಜನೆಗೆ 5,23,492 ಯುವಕರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 4.77 ಲಕ್ಷ ಮಂದಿಯನ್ನು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಮೀಕ್ಷೆಗೊಳಪಡಿಸಿದ್ದರು. ಆದರೆ ಹೆಸರು ನೋಂದಾಯಿಸಿದವರ ಪೈಕಿ ಶೇ.43.34 ಮಂದಿ ಯೋಜನೆಗೆ ಅರ್ಹರಾಗಿಲ್ಲದಿರುವುದು ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಸರ್ಕಾರದ ದಾಖಲೆಯ ಪ್ರಕಾರ 36,226 ಮಂದಿ ಮಾತ್ರ 16 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ. ಚಾಮರಾಜ ನಗರದಲ್ಲಿ 351, ಗದಗದಲ್ಲಿ 353, ಕೊಡಗಿನಲ್ಲಿ 195, ಉಡುಪಿಯಲ್ಲಿ 367, ಉತ್ತರ ಕನ್ನಡದಲ್ಲಿ 426 ಮಂದಿ ಮಾತ್ರ ಫಲಾನುಭವಿಗಳಿದ್ದಾರೆ ಎಂಬ ಅಂಶವೂ ಗಮನಾರ್ಹ ಸಂಗತಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + two =
Remember me
