ಚಿತ್ರದುರ್ಗ:ವಿದೇಶಗಳಿಂದ ಆಮದು ಮಾಡಿಕೊಳ್ಳುವ ಮುದ್ರಣ ಕಾಗದದ ಮೇಲೆ ಕೇಂದ್ರ ಸರ್ಕಾರ ಶೇ.5 ತೆರಿಗೆ ವಿಧಿಸುತ್ತಿರುವುದಕ್ಕೆ ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟ, ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಿಕಾ ಹಂಚಿಕೆದಾರರ/ವಿತರಕರ ಸಂಘವು ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ರಾಜ್ಯಮಟ್ಟದ 4ನೇ ಸಮ್ಮೇಳನದಲ್ಲಿ ಮಾತನಾಡಿದರು.
ಎಲ್ಲ ಪತ್ರಿಕೆಗಳು ಮುದ್ರಣಕ್ಕೆ ಕಾಗದವನ್ನೇ ಅವಲಂಬಿಸಿವೆ. ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾಗದ ಉತ್ಪಾದನೆಯಾಗುತ್ತದೆ. ಶೇ.70 ಆಮದು ಮಾಡಿಕೊಳ್ಳಲೇಬೇಕಾಗಿದೆ. ಭಾರತದಲ್ಲಿ ಕಾಗದ ಉತ್ಪಾದಿಸಲು ದಿನವೂ ಸಾವಿರಾರು ಎಕರೆ ಅರಣ್ಯ ನಾಶ ಮಾಡಬೇಕಾಗುತ್ತದೆ. ನಮಗೂ ಸ್ವದೇಶಿ ಅಭಿಮಾನ ಇದೆ. ಕರವಸ್ತ್ರವನ್ನೂ ಕೂಡ ನಾನು ದೇಶೀಯವಾಗಿ ತಯಾರಿಸಿದ್ದನ್ನೇ ಬಳಸುತ್ತೇನೆ. ಯಾವುದಕ್ಕೆ ತೆರಿಗೆ ವಿಧಿಸಬೇಕು ಎಂಬ ಕನಿಷ್ಠ ತಿಳಿವಳಿಕೆ ಸರ್ಕಾರಕ್ಕೆ ಇಲ್ಲದಿರುವುದು ದೌರ್ಭಾಗ್ಯ. ಜನರು ಕಟ್ಟುವ ವಿಮಾ ಕಂತಿನ ಮೇಲೂ ಕರ ವಿಧಿಸಲಾಗುತ್ತಿದೆ. ಸರ್ಕಾರ ಪಿಕ್ ಪಾಕೆಟ್ ಮಾಡುವ ರೀತಿ ತೆರಿಗೆ ವಿಧಿಸುವುದು ನೈತಿಕವಾಗಿ ಸರಿಯಲ್ಲ ಎಂದರು.
ಈಗಿನ ದಿನಮಾನಗಳಲ್ಲಿ ಪತ್ರಿಕೆ ನಡೆಸುವುದೇ ಕಷ್ಟವಿದೆ. ದೇಶ ವಿದೇಶಗಳಲ್ಲಿ ಬಹಳಷ್ಟು ಪತ್ರಿಕೆಗಳು ಮುಚ್ಚಿವೆ. ಅನೇಕ ಸಂಸ್ಥಾಪಕರು ಕಣ್ಮರೆಯಾಗಿದ್ದಾರೆ ಈ ಎಲ್ಲ ಅಂಶಗಳು ಸರ್ಕಾರಕ್ಕೂ ತಿಳಿದಿವೆ. ಹಲವು ರಾಜಕೀಯ ವ್ಯಕ್ತಿಗಳು ಪತ್ರಿಕಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಸಂಸದ ಜಗದೀಶ ಶೆಟ್ಟರ್ ‘ಪ್ರಪಂಚ’ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಅಬ್ದುಲ್ ಕಲಾಂ ಪತ್ರಿಕೆ ಹಂಚಿಕೆದಾರರಾಗಿದ್ದರು ಎಂದು ನೆನಪಿಸಿದರು. ಪತ್ರಿಕೆಗಳ ಪುಟಗಳು ಕಡಿಮೆಯಾಗುತ್ತಿವೆ. ಪ್ರಸರಣ ಸಂಖ್ಯೆಯೂ ಕುಸಿಯುತ್ತಿದೆ. ವಿತರಕರು ಹೆಚ್ಚಿನ ಕಮಿಷನ್ ಕೇಳುವುದು ತಪ್ಪಲ್ಲ. ನಮ್ಮ ಸಂಸ್ಥೆ ಶಕ್ತಿ ಮೀರಿ, ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಹೇಳಿದರು. ನಾವು ಪತ್ರಿಕಾ ರಂಗಕ್ಕೆ ಬರುವ ಮೊದಲು ಸಂಪಾದಕರೆಂದರೆ ಹರಿದ ಪೈಜಾಮ, ಧೋತಿ, ಅಂಗಿ, ತಿಂಗಳುಗಟ್ಟಲೆ ದಾಡಿ ಮಾಡಿಕೊಳ್ಳದಿರುವ ಪರಿಸ್ಥಿತಿ ಇತ್ತು. ಪತ್ರಿಕೆ ಹಂಚುವವರಿಗೆ ಕಡಿಮೆ ಕಮಿಷನ್ ಕೊಡಲಾಗುತ್ತಿತ್ತು.
ಈಗ ಪತ್ರಿಕಾ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆ ಗಮನಿಸಿದ್ದೀರಿ.ಅದರಿಂದ ಯಾರಿಗೂ ಕೆಟ್ಟದಾಗಿಲ್ಲ. ಪತ್ರಿಕಾ ಸಂಸ್ಥೆಗಳು ಬೆಳೆದವು, ಅನೇಕರು ಈ ರಂಗಕ್ಕೆ ಬಂದರು. ಪತ್ರಿಕೆಯಲ್ಲಿ ಸಂಪಾದಕರಾಗಲು 75 ವರ್ಷ ಆಗಿರಬೇಕು ಎಂಬ ನಿಯಮ ಹಿಂದಿತ್ತು. 32 ವರ್ಷದ ಯುವಕನನ್ನು ಸಂಪಾದಕನನ್ನಾಗಿ ಮಾಡಿದ ಕೀರ್ತಿ ನಮ್ಮ ಸಂಸ್ಥೆಗೆ ಸಲ್ಲುತ್ತದೆ ಎಂದು ತಿಳಿಸಿದರು. ಸಾರಿಗೆ ಕ್ಷೇತ್ರದಲ್ಲೂ ಹೊಸಬರಿಗೆ ಬೆನ್ನು ತಟ್ಟಿದೇವೆ. ನಂಬಿಕೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ಜನರು ಗುರುತಿಸುತ್ತಾರೆ, ಸಂಸ್ಥೆಯು ಬೆಳೆಯುತ್ತದೆ, ಲಕ್ಷಾಂತರ ಜನರಿಗೆ ಉಪಯೋಗವಾಗುತ್ತದೆ ಎನ್ನುವ ಭಾವನೆಯಿಂದ ಕಾಯಕವೇ ಕೈಲಾಸ ಎಂಬ ಶರಣರ ತತ್ವವನ್ನು ಪಾಲಿಸುತ್ತ ಬಂದಿರುವುದಾಗಿ ಹೇಳಿದರು.
ಪತ್ರಿಕಾ ವಿತರಕರು ತಮ್ಮ ಮನೆಯಲ್ಲಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಫೋಟೋ ಹಾಕಿಕೊಳ್ಳಬೇಕು. ಅವರಿಂದ ಪ್ರೇರಣೆ ಪಡೆಯಬೇಕು ಎಂದು ಸಲಹೆ ನೀಡಿದರು. ಪತ್ರಿಕಾ ರಂಗವು ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಆ ಬಗ್ಗೆ ನಮಗೆ ಹೆಮ್ಮೆ ಇರಬೇಕು. ವಿತರಕರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್, ವಕೀಲರಾಗಿದ್ದಾರೆ. ಅದು ಪತ್ರಿಕಾ ರಂಗ ನಿಮಗೆ ಕೊಟ್ಟಿರುವ ಅವಕಾಶವಾಗಿದೆ. ಭವಿಷ್ಯ ಉಜ್ವಲವಾಗಿದೆ ಎಂದು ತಿಳಿಸಿದರು. ವಿತರಕರು ಮಳೆ, ಬಿಸಿಲೆನ್ನದೆ ಕಷ್ಟಪಟ್ಟು ಮನೆಗೆ ಪತ್ರಿಕೆ ತಲುಪಿಸುತ್ತಾರೆ. ಕೆಲವರು ಹಣ ನೀಡಲು ತಿಂಗಳುಗಟ್ಟಲೆ ಸತಾಯಿಸು ತ್ತಾರೆ. ಈ ಮನೋಭಾವ ಬದಲಾಗಬೇಕು ಎಂದರು.
ಪತ್ರಿಕೆಗಳಿಗೆ ಜಾಹೀರಾತುಗಳೇ ಜೀವಾಳ. ಇದನ್ನು ತಪ್ಪಾಗಿ ಬಿಂಬಿಸಬಾರದು. ಜಾಹೀರಾತಿನಲ್ಲಿ ಸತ್ಯಾಂಶ ಇದೆ-ಇಲ್ಲವೆ ಎಂಬುದನ್ನು ಜಾಹೀರಾತು ನೀಡುವವರು ಯೋಚಿಸಬೇಕು ಎಂದು ವಿಜಯ ಸಂಕೇಶ್ವರ ಅವರು ಹೇಳಿದರು. ಕೆಲವರು ಪ್ರಾಯೋಜಿತ ಸುದ್ದಿಗಳ ಬಗ್ಗೆ ಹೇಳುತ್ತಾರೆ. ಹಾಗಾದರೆ ಕೇಂದ್ರ -ರಾಜ್ಯ ಸರ್ಕಾರಗಳು ನೀಡುವ ಜಾಹೀರಾತನ್ನೂ ನಂಬಬೇಕೋ ಬೇಡವೋ ಎಂದು ಯೋಚಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳು ತಮ್ಮ ಸಾಧನೆ ಕುರಿತು ನೀಡುವ ಜಾಹೀರಾತುಗಳ ಸತ್ಯಾ ಸತ್ಯತೆ ನಮಗೆ ಸಂಬಂಧವಿಲ್ಲ. ಆ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಂಗವಿಕಲ ವಿತರಕನಿಗೆ ಸಹಾಯ ಹಸ್ತಅಂಗವೈಕಲ್ಯಕ್ಕೆ ಒಳಗಾದ ದಾವಣಗೆರೆ ಜಿಲ್ಲೆ ನ್ಯಾಮತಿಯ ಪತ್ರಿಕಾ ವಿತರಕ ಷಣ್ಮುಖ ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚದ ಜತೆಗೆ ಅವರ 12 ವರ್ಷದ ಪುತ್ರಿ ಯ ಶಿಕ್ಷಣ ವೆಚ್ಚವನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ವತಿಯಿಂದ ಭರಿಸುವುದಾಗಿ ಡಾ. ವಿಜಯ ಸಂಕೇಶ್ವರ ಪ್ರಕಟಿಸಿದರು. ವ್ಹೀಲ್ ಚೇರ್​ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಷಣ್ಮುಖ ಅವರನ್ನು ಗಮನಿಸಿದ ಸಂಕೇಶ್ವರ ಅವರು ವ್ಹೀಲ್ ಚೇರ್ ಸಹಿತ ವೇದಿಕೆಗೆ ಬರಮಾಡಿ ಕೊಂಡು ಸನ್ಮಾನಿಸಿ ಅವರ ಅಹವಾಲು ಆಲಿಸಿದರು. ಸ್ಥಳದಲ್ಲೇ ನೆರವು ಪ್ರಕಟಿಸಿ ಮಾನವೀಯತೆ ಮೆರೆದರು. ಅವರ ಈ ನಡೆಗೆ ವಿತರಕರು ದೊಡ್ಡ ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು.
ಸಂಕೇಶ್ವರರ ಕ್ರಾಂತಿಡಾ. ವಿಜಯ ಸಂಕೇಶ್ವರ ಅವರು ಪತ್ರಿಕಾರಂಗದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ಅವರಿಗೆ ಸೋಲಿಲ್ಲ. ಅದಕ್ಕೆ ಅವರಿಗಿರುವ ಕಾಯಕ ಶ್ರದ್ಧೆ ಕಾರಣ ಎಂದು ಸಾಣೇಹಳ್ಳಿ ಶ್ರೀ ಮೆಚ್ಚುಗೆ ವ್ಯಕ್ತ ಪಡಿಸಿದರೆ, ಅವರು ಪತ್ರಿಕೆ ಆರಂಭಿಸದಿದ್ದರೆ ನನ್ನಂಥ ಅನೇಕರು ರಾಜ್ಯಮಟ್ಟದಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಕೆ.ವಿ.ಪ್ರಭಾಕರ್ ಸ್ಮರಿಸಿದರು. ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಉಪಸ್ಥಿತರಿದ್ದರು.
12 ಪುಟಗಳ ಪತ್ರಿಕೆಗೆ 18 ರೂ. ವೆಚ್ಚಹನ್ನೆರಡು ಪುಟಗಳ ಪತ್ರಿಕೆ ಹೊರತರಲು 18 ರೂ. ವೆಚ್ಚವಾಗುತ್ತದೆ, ಅದನ್ನು 5 ರೂ. ಗೆ ಮಾರಾಟ ಮಾಡುತ್ತೇವೆ. ಏಜೆಂಟರಿಗೆ ಕಮಿಷನ್, ಸಾಗಾಣಿಕೆ ವೆಚ್ಚ ಭರಿಸ ಬೇಕಾಗುತ್ತದೆ. ಜಾಹೀರಾತು ತೆಗೆದುಕೊಳ್ಳದೇ ಪತ್ರಿಕೆ ನಡೆಸಬೇಕೆಂದರೆ 30 ರೂ. ದರ ಆಗುತ್ತದೆ ಎಂದು ತಿಳಿಸಿದರು. ಮುಂದುವರಿದ ರಾಷ್ಟ್ರಗಳಲ್ಲಿ ಪತ್ರಿಕೆಗಳ ದರ 200 ರೂ.ಗಿಂತ ಕಡಿಮೆ ಇಲ್ಲ. ಪಾಕಿಸ್ತಾನದಲ್ಲಿ ಕಪ್ಪು- ಬಿಳುಪಿನ 12 ಪುಟಗಳ ಪತ್ರಿಕೆಯನ್ನು 14 ರೂ.ಗೆ ಮಾರಾಟ ಮಾಡುತ್ತಾರೆ. ನಾವು 16 ರಿಂದ 20 ಪುಟಗಳ ವರ್ಣಮಯ ಪತ್ರಿಕೆಯನ್ನು 5 ರೂ.ಗೆ ಮಾರಾಟ ಮಾಡುತ್ತೇವೆ ಎಂದು ವಿವರಿಸಿದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ 10 ಕೋಟಿ ರೂ. ಮೀಸಲಿಡಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವೆ. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ವಿತರಕರಿದ್ದಾರೆ. ಅವರ ಬೇಕು- ಬೇಡಗಳ ಬಗ್ಗೆ ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಲಿದೆ.
| ಡಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ
ವಿತರಕರಿಗೆ ಆರೋಗ್ಯವಿಮೆ, ಶೇ.50ರ ಸಬ್ಸಿಡಿ ದರದಲ್ಲಿ ಬೈಕ್, ಮಕ್ಕಳಿಗೆೆ ವಿದ್ಯಾರ್ಥಿ ವೇತನ, ಪಡಿತರ ಚೀಟಿ ಮತ್ತಿತರ ಸೌಲಭ್ಯ ಕಲ್ಪಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿಗೆ ವರದಿ ನೀಡುವೆ.
| ಕೆ.ವಿ.ಪ್ರಭಾಕರ್ ಸಿಎಂ ಮಾಧ್ಯಮ ಸಲಹೆಗಾರ
ಇಂದಿನ ಮಾಧ್ಯಮ ಭರಾಟೆಯಲ್ಲಿ ಯಾವುದು ಅಸಲಿ-ನಕಲಿ ಎಂಬ ಗೊಂದಲ ಸೃಷ್ಟಿಯಾಗಿದೆ. ಆದಾಗ್ಯೂ ಮುದ್ರಣ ಮಾಧ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.
| ಗೋವಿಂದ ಕಾರಜೋಳ ಸಂಸದ
ದಿನಕ್ಕೆ 8 ಗಂಟೆ ನಿದ್ರಿಸಿ 10 ಲಕ್ಷ ರೂ. ಸಂಪಾದಿಸಿ! ಇಲ್ಲಿದೆ ಭರ್ಜರಿ ಆಫರ್​, ಅರ್ಜಿ ಸಲ್ಲಿಸುವುದು ಹೇಗೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × five =
Remember me
