ಕೀರ್ತಿನಾರಾಯಣ ಸಿ. ಬೆಂಗಳೂರುಅಸ್ತಿತ್ವದಲ್ಲಿಲ್ಲದ ಕಂಪನಿಗಳ ಹೆಸರಲ್ಲಿ ನಕಲಿ ಇನ್​ವಾಯ್್ಸಳನ್ನು ಸೃಷ್ಟಿಸುವ ಮುಖೇನ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಂಚಿಸುವ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲೆನೋವಾಗಿದೆ. ಕರ್ನಾಟಕದಲ್ಲಿ ಬರೀ 3 ತಿಂಗಳಲ್ಲಿ ಬರೋಬ್ಬರಿ 397 ಕೋಟಿ ರೂ. ಜಿಎಸ್​ಟಿ ಮೋಸ ಮಾಡಿರುವುದು ಪತ್ತೆಯಾಗಿದೆ. ಇದೇ ವೇಳೆ ರಾಜ್ಯದಲ್ಲಿ ನೋಂದಣಿಯಾಗಿರುವ 1 ಲಕ್ಷ ಕಂಪನಿಗಳ ಪೈಕಿ ಕನಿಷ್ಠ 22 ಕಂಪನಿಗಳು ಬೋಗಸ್ ಕಂಪನಿಗಳೆಂಬುದು ಗೊತ್ತಾಗಿದೆ.
2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ನಕಲಿ ಕಂಪನಿಗಳ ಪತ್ತೆಗಾಗಿ ಆಯಾ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್್ಸ ಮಂಡಳಿ (ಸಿಬಿಐಸಿ) ದೇಶಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಕರ್ನಾಟಕದಲ್ಲಿ 223 ನಕಲಿ ಕಂಪನಿಗಳು ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಜಿಎಸ್​ಟಿ ವಂಚಿಸಲೆಂದೇ ನಕಲಿ ಕಂಪನಿಗಳನ್ನು ಮೊದಲು ನೋಂದಣಿ ಮಾಡಲಾಗಿದೆ. ನಂತರ ಯಾವುದೇ ರೀತಿಯ ಸರಕುಗಳನ್ನು ಪೂರೈಕೆ ಮಾಡದೆ ನಕಲಿ ಇನ್​ವಾಯ್್ಸಳನ್ನು ಸೃಷ್ಟಿಸಿದ್ದು, ಅವುಗಳನ್ನೇ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಬಳಸಿರುವುದು ಪರಿಶೀಲನೆಯಲ್ಲಿ ದೃಢಪಟ್ಟಿದೆ. ಸಿಬಿಐಸಿ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 3 ತಿಂಗಳಲ್ಲಿ 223 ನಕಲಿ ಕಂಪನಿಗಳು ಪತ್ತೆಯಾಗಿವೆ. 397 ಕೋಟಿ ರೂ. ಜಿಎಸ್​ಟಿ ವಂಚಿಸಿರುವುದು ಗೊತ್ತಾಗಿದೆ. ಈ ಪ್ರಕರಣಗಳಲ್ಲಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ಮೊತ್ತವನ್ನು ಬ್ಲಾಕ್ ಮಾಡಿದ್ದು, 59 ಕೋಟಿ ರೂ. ಮರು ವಸೂಲಿ ಮಾಡಲಾಗಿದೆ.
ಆರಂಭದಲ್ಲೇ ಬೋಗಸ್ ಕಂಪನಿಗಳ ನೋಂದಣಿ ತಡೆಯುವ ಉದ್ದೇಶದಿಂದ ನೋಂದಣಿ ಸಂದರ್ಭದಲ್ಲಿ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಈಗಾಗಲೇ ಆಂಧ್ರಪ್ರದೇಶ, ಗುಜರಾತ್ ಮತ್ತು ಪುದುಚೇರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿ ತರಲಾಗಿದೆ. ಈ ಕಡೆಗಳಲ್ಲಿನ ಸಾಧಕ-ಬಾಧಕಗಳನ್ನು ನೋಡಿಕೊಂಡು ಎಲ್ಲ ರಾಜ್ಯಗಳಿಗೂ ವಿಸ್ತರಿಸಲು ಆಲೋಚಿಸಿದೆ.
2023ರ ಮೇ ತಿಂಗಳಿಂದ 2024ರ ಜನವರಿವರೆಗೆ ದೇಶದಲ್ಲಿ 44,015 ಕೋಟಿ ರೂ. ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚಿಸಿರುವುದು ಗೊತ್ತಾಗಿದೆ. ಇದರಲ್ಲಿ 29,273 ಬೋಗಸ್ ಕಂಪನಿಗಳು ಭಾಗಿಯಾಗಿರುವುದು ದೃಢಪಟ್ಟಿದೆ. 44,015 ಕೋಟಿ ವಂಚನೆಯಲ್ಲಿ 15,240 ಕೋಟಿ ರಾಜ್ಯ ಜಿಎಸ್​ಟಿ ಹಾಗೂ 28,775 ಕೋಟಿ ರೂ. ಕೇಂದ್ರ ಜಿಎಸ್​ಟಿ ಸೇರಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ವಂಚನೆಯಲ್ಲಿ ದೆಹಲಿಯೇ ನಂ.1:ವಿಶೇಷ ಕಾರ್ಯಾಚರಣೆ ವೇಳೆ ಪತ್ತೆಯಾಗಿರುವ ಜಿಎಸ್​ಟಿ ವಂಚನೆ ಪಟ್ಟಿಯಲ್ಲಿ ದೇಶದ ರಾಜಧಾನಿ ನವದೆಹಲಿ ನಂ.1 ಸ್ಥಾನದಲ್ಲಿದೆ. 2023ರ ಅಕ್ಟೋಬರ್​ನಿಂದ ಡಿಸೆಂಬರ್ ಅವಧಿಯಲ್ಲಿ ಬರೋಬ್ಬರಿ 3,028 ಕೋಟಿ ರೂ. ವಂಚಿಸಿರುವುದು ದೃಢಪಟ್ಟಿದೆ. 483 ನಕಲಿ ಸಂಸ್ಥೆಗಳು ಸಿಕ್ಕಿಬಿದ್ದಿದ್ದು, 11 ಜನರನ್ನು ಬಂಧಿಸಲಾಗಿದೆ. 2ನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, 2201 ಕೋಟಿ ರೂ. ಮೋಸ ಮಾಡಲಾಗಿದೆ. 926 ಬೋಗಸ್ ಕಂಪನಿಗಳು ಪತ್ತೆಯಾಗಿದ್ದು, 102 ಕೋಟಿ ರೂ. ತೆರಿಗೆ ಮರು ವಸೂಲಿ ಮಾಡಲಾಗಿದೆ. ಉತ್ತರಪ್ರದೇಶ 3ನೇ ಸ್ಥಾನದಲ್ಲಿದ್ದು, 1,645 ಕೋಟಿ ರೂ. ವಂಚಿಸಲಾಗಿದೆ. 443 ನಕಲಿ ಕಂಪನಿಗಳು ಕಂಡುಬಂದಿದ್ದು, 44 ಕೋಟಿ ರೂ. ಮರು ವಸೂಲಿ ಮಾಡಲಾಗಿದೆ ಎಂದು ಸಿಬಿಐಸಿ ಮಾಹಿತಿ ನೀಡಿದೆ.
₹12,000 ಕೋಟಿ ಐಟಿಸಿ ಅಕ್ರಮ!:ಇದೇ 3 ತಿಂಗಳ ಅವಧಿಯಲ್ಲಿ ದೇಶಾದ್ಯಂತ ಅಂದಾಜು 12,036 ಕೋಟಿ ರೂ.ಗಳ ಐಟಿಸಿ ವಂಚನೆ ಪತ್ತೆಯಾಗಿದೆ. 4,153 ನಕಲಿ ಸಂಸ್ಥೆಗಳು ಸಿಕ್ಕಿಬಿದ್ದಿವೆ. ಈ ಪೈಕಿ 2,358 ನಕಲಿ ಸಂಸ್ಥೆಗಳನ್ನು ಕೇಂದ್ರ ಜಿಎಸ್​ಟಿ ಅಧಿಕಾರಿಗಳೇ ಪತ್ತೆ ಮಾಡಿದ್ದಾರೆ. ಉಳಿದ ಬೋಗಸ್ ಕಂಪನಿಗಳನ್ನು ಆಯಾ ರಾಜ್ಯ ಸರ್ಕಾರಗಳು ಪತ್ತೆಹಚ್ಚಿವೆ. 1,317 ಕೋಟಿ ರೂ. ಮರು ವಸೂಲಿಯಾಗಿದೆ. ಒಟ್ಟಾರೆ 41 ಆರೋಪಿಗಳು ಬಂಧಿತರಾಗಿದ್ದು, ಈ ಪೈಕಿ 31 ಮಂದಿಯನ್ನು ಕೇಂದ್ರ ಜಿಎಸ್​ಟಿ ಅಧಿಕಾರಿಗಳು ಬಂಧಿಸಿದ್ದರೆ ಉಳಿದವರು ಆಯಾ ರಾಜ್ಯ ಜಿಎಸ್​ಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 7 =
Remember me
