ಬೆಂಗಳೂರು:ರಾಜ್ಯಕ್ಕೆ ಆರ್ಥಿಕ ಹೊರೆ ಉಂಟು ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳ ಮಾತು ಒಂದೆಡೆಯಾದರೆ ಖುದ್ದು ಕಾಂಗ್ರೆಸ್ ವಲಯದಲ್ಲೇ ವಿಭಿನ್ನ ರಾಗ ಶುರುವಾಗಿದೆ.
ಉಳ್ಳವರೂ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆ ಬೀಳುತ್ತದೆ. ಬಡತನದ ರೇಖೆಗಿಂತ ಕೆಳಗಿನ ಕಡುಬಡವರಿಗಷ್ಟೇ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಬೇಕು. ಬಿಪಿಎಲ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಪರಿಷ್ಕರಿಸಬೇಕು ಎಂಬುದು ಈ ಎಲ್ಲ ಚರ್ಚೆಯ ಸಾರ.
ಕೆಲವು ಸಚಿವರು ಗ್ಯಾರಂಟಿ ಯೋಜನೆ ಪರಿಷ್ಕರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಹೊರೆ ತಗ್ಗಿಸುವ ಕೆಲಸ ಮಾಡಬೇಕು ಎಂದಿದ್ದಾರೆ. ಇನ್ನು ಕೆಲವರು ಈಗಾಗಲೇ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಿರುವುದರಿಂದ ಗ್ಯಾರಂಟಿಗಳು ಯಥಾವತ್ತಾಗಿ ಜಾರಿಯಾಗಲಿವೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿಗಳಿಂದ ಆಗುತ್ತಿರುವ ಹೊರೆ, ಅಭಿವೃದ್ಧಿಗೆ ಅನುದಾನದ ಕೊರತೆ, ಮಿಸ್ ಯೂಸ್ ಆಗುತ್ತಿರುವ ಕುರಿತು ದೆಹಲಿ ನಾಯಕರ ಬಳಿಯೂ ಕೆಲವು ಸಚಿವರು ಚರ್ಚಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ನೂರು ಜನ್ಮ ಎತ್ತಿಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಇಂತಹ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದಾದರೂ ಒಂದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ನೀಡಿದ್ದಾರಾ? ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ್ ಶೆಟ್ಟರ್, ಬೊಮ್ಮಾಯಿ, ಆರ್.ಅಶೋಕ್ ಅವರು ಕೊಟ್ಟಿದ್ದಾರಾ? ಜೆಡಿಎಸ್ ಅವಧಿಯಲ್ಲಿ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು ಎಂಬುದು ಬಹಳ ಜನರ ಅಭಿಪ್ರಾಯವಾಗಿದೆ. ಈಗಾಗಲೇ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ರೂ. 56 ಸಾವಿರ ಕೋಟಿ ಮೀಸಲಿಡಲಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವುದು ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಚರ್ಚೆಗಳಾಗುತ್ತಿರುವುದು ನಿಜ. ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದು. ಪಕ್ಷದ ವೇದಿಕೆಯಲ್ಲಿ, ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.13ರಷ್ಟು ಮತ ಹೆಚ್ಚಾಗಿವೆ. ಗ್ಯಾರಂಟಿ ಯೋಜನೆಗಳಿಂದ ಮತ ಹೆಚ್ಚಾಗಿದೆ ಎಂದು ಯಾಕೆ ವಿಶ್ಲೇಷಣೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಹೋದರೆ ಗೊಂದಲ ಉಂಟಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ನಾನು ಗ್ಯಾರಂಟಿ ಕಟ್ ಮಾಡಲು ಹೇಳಿಲ್ಲ. ಫಿಲ್ಟರ್ ಮಾಡುವುದಕ್ಕೆ ಸಲಹೆ ನೀಡಿದ್ದೇನೆ. ನಂದು ಕ್ಲಿಯರ್ ಕಟ್. ಜನ ಏನು ಮಾತನಾಡ್ತಾರೆ ಅದನ್ನು ಹೇಳಿದ್ದೇನೆ ಅಷ್ಟೆ. ಪರಿಷ್ಕರಣೆ ಮಾಡಿ ಎಂದು ಮಾತ್ರ ಹೇಳಿದ್ದೇನೆಯೇ ಹೊರತು ಪ್ರತಿಪಕ್ಷಗಳಂತೆ ಗ್ಯಾರಂಟಿ ನಿಲ್ಲಿಸಿ ಎಂದು ಹೇಳಿಲ್ಲ. ಗ್ಯಾರಂಟಿ ಪರಿಷ್ಕರಣೆ ಮಾಡಿದರೆ 10 ಸಾವಿರ ಕೋಟಿ ಉಳಿಸಬಹುದು ಎಂದು ಹೇಳಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರ ಪರಿಣಾಮವಾಗಿ 1 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ಹಣದ ಹರಿವು ನಿರಂತರವಾಗಿದ್ದು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಇದು ರಾಜ್ಯದ ಪ್ರಗತಿಗೂ ಪರೋಕ್ಷವಾಗಿ ಪ್ರಯೋಜವಾಗುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆ ಯಾವುದೇ ಬದಲಾವಣೆ ಇಲ್ಲದೆ. ಪ್ರಸಕ್ತ ಸ್ವರೂಪದಲ್ಲಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಏನೂ ಹೇಳಲ್ಲ, ಆದರೆ ಮಿಸ್‌ಯೂಸ್ ತಪ್ಪಿಸಬೇಕು.ಕೆಲವು ಅನರ್ಹರು ಲಾಭ ಪಡೆಯುತ್ತಿದ್ದಾರೆ. ಆ ರೀತಿ ದುರ್ಬಳಕೆ ಆಗುವುದು ತಪ್ಪಿಸಬೇಕು.ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಬಾರದು. ಗ್ಯಾರಂಟಿಗಳನ್ನ ಮುಂದೆಯೂ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಆದಾಯ ಹೆಚ್ಚಾಗಿರುವವರು, ತೆರಿಗೆ ಪಾವತಿದಾರರು ಕೂಡ ಗ್ಯಾರಂಟಿ ಯೋಜನೆ ಪಡೆಯುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ. ಅಂತಹ ಪ್ರಕರಣಗಳ ಪರಿಶೀಲನೆ ಮಾಡಲಾಗುವುದು. ಬಜೆಟ್‌ನಲ್ಲಿ ಈ ಯೋಜನೆಗಳಿಗೆ 56 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ನೀಡುವ ಅನುದಾನ ಕೊರತೆ ಆಗಿದೆ ಎಂಬುದು ಸುಳ್ಳು. ನಮ್ಮ ಸರ್ಕಾರ ಇಂತಹ ದೊಡ್ಡ ಯೋಜನೆ ಜಾರಿ ಮಾಡಿದ್ದಾರೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಅಸೂಯೆಗೊಂಡಿದ್ದಾರೆ.-ಡಿ.ಕೆ.ಶಿವಕುಮಾರ್, ಡಿಸಿಎಂ.
ಅರ್ಹರಿಗೆ ಮಾತ್ರ ಗ್ಯಾರಂಟಿ ಸೌಲಭ್ಯ ದೊರೆಯಬೇಕು ಎಂದು ಪರಿಷ್ಕರಣೆ ಮಾಡುತ್ತಿದ್ದೇವೆ. ಐದು ಗ್ಯಾರಂಟಿಗಳನ್ನು ನಾವು ಜಾರಿಮಾಡಿದ್ದು ಸುಮಾರು 4.5 ಕೋಟಿ ಜನರಿಗೆ ಸಹಕಾರಿಯಾಗುತ್ತಿದೆ. ಯಾವುದೇ ಗ್ಯಾರಂಟಿಗಳನ್ನು ನಾವು ನಿಲ್ಲಿಸುವುದಿಲ್ಲ. ಗ್ಯಾರಂಟಿಗಳಿಗಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಗ್ಯಾರಂಟಿ ಯೋಜನೆ ಮುಂದುವೆಸುವುದರ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತೇವೆ.-ಕೆ.ಎಚ್.ಮುನಿಯಪ್ಪ, ಆಹಾರ ಸಚಿವ.
ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ ಯೋಜನೆಗಳಾಗಿವೆ. ನಮ್ಮ ಗ್ಯಾರಂಟಿ ಯೋಜನೆಗಳ ಅನ್ವಯ ಹಲವಾರು ರಾಜ್ಯಗಳು ಇದೇ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿವೆ. ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಪರಿಣಾಮಗಳ ಬಗ್ಗೆ ಚರ್ಚೆ ಆಗಿದೆಯೇ ಹೊರತು, ಅವುಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಯಾವುದೇ ಚರ್ಚೆಗಳು ಆಗಿಲ್ಲ. ಈ ಯೋಜನೆಗಳೂ ಯಥಾಸ್ಥಿತಿಯಲ್ಲಿಯೇ ಮುಂದುವರೆಯಲಿವೆ.-ಎನ್.ಎಸ್.ಭೋಸರಾಜು, ಸಣ್ಣ ನೀರಾವರಿ ಇಲಾಖೆ ಸಚಿವ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
