| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಜಮೀನು, ನಿವೇಶನ, ಮನೆ ಖರೀದಿಸುವ ಉದ್ದೇಶವಿದ್ದರೆ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ, ಏಕೆಂದರೆ ಸದ್ಯದಲ್ಲಿಯೇ ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಳವಾಗಲಿದೆ. ಮಾರ್ಗಸೂಚಿ ಬೆಲೆ ಹೆಚ್ಚಳಕ್ಕೆ ಅನುಮತಿ ಕೋರಿ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಜ್ಜಾಗಿದೆ. ನಿಯಮಗಳ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ಬೆಲೆ ಹೆಚ್ಚಳವಾಗಬೇಕು. ಆದರೆ, ರಾಜ್ಯದಲ್ಲಿ 2019 ರ ನಂತರ ಈ ಬೆಲೆ ಹೆಚ್ಚಳ ಮಾಡಿಲ್ಲ. ಎರಡು ವರ್ಷ ಕರೊನಾ ಕಾಡಿದ್ದರಿಂದ ನೋಂದಣಿ ಕುಸಿದು ಹೋಗಿತ್ತು. ಹಿಂದಿನ ಸರ್ಕಾರ ಕಳೆದ ಎರಡು ವರ್ಷಗಳ ಕಾಲ ಕಡಿಮೆ ಮಾಡಿದ್ದರಿಂದ ನೋಂದಣಿ ಮತ್ತು ಮುದ್ರಾಂಕ ತೆರಿಗೆ ಸಂಗ್ರಹ ಹೆಚ್ಚಳ ಕಂಡಿತ್ತು. ನಿರೀಕ್ಷೆಗಿಂತ ಪ್ರತಿವರ್ಷ ಒಂದು ಸಾವಿರ ಕೋಟಿ ರೂ. ಹೆಚ್ಚು ಆದಾಯ ಗಳಿಸಿತ್ತು. ರಾಜ್ಯದಲ್ಲಿ 255 ಉಪ ನೋಂದಣಿ ಕಚೇರಿಗಳಿವೆ. ಅವುಗಳ ಪೈಕಿ ಶೇ.10 ರಷ್ಟು ಕಚೇರಿಗಳ ವ್ಯಾಪ್ತಿಯಲ್ಲಿ ಮಾತ್ರ ಮಾರ್ಗಸೂಚಿ ಬೆಲೆ ಅತ್ಯಂತ ಕಡಿಮೆ ಇದೆ. ಮುಂದೆ ಎಲ್ಲ ಕಡೆ ಹೆಚ್ಚಳವಾಗಲಿದೆ. ಮಾರ್ಗಸೂಚಿ ಬೆಲೆ ಹೆಚ್ಚಾದರೆ ಸಹಜವಾಗಿಯೇ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು ಏರಿಕೆ ಕಾಣಲಿವೆ.
ತೆರಿಗೆ ಸಂಗ್ರಹಣೆ ಗುರಿ:ನೋಂದಣಿ ಮತ್ತು ಮುದ್ರಾಂಕ ತೆರಿಗೆ ಸಂಗ್ರಹಕ್ಕೆ ಕಳೆದ ವರ್ಷ -ಠಿ;15 ಸಾವಿರ ಕೋಟಿ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಮಾರ್ಗಸೂಚಿ ಬೆಲೆಯ ಮೇಲಿನ ರಿಯಾಯ್ತಿ, ಕರೊನಾದಿಂದ ಕುಂಠಿತವಾಗಿದ್ದ ಆರ್ಥಿಕತೆಯ ಚೇತರಿಕೆ ಮೊದಲಾದ ಕಾರಣಗಳಿಂದ 17 ಸಾವಿರ ಕೋಟಿ ರೂ.ಗಳ ತೆರಿಗೆ ಸಂಗ್ರಹಣೆಯಾಗಿ ಗುರಿ ಮೀರಿದ ಸಾಧನೆ ಮಾಡಲಾಗಿತ್ತು. ಆದ್ದರಿಂದಲೇ ಈ ವರ್ಷ 19 ಸಾವಿರ ಕೋಟಿ ರೂ.ಗಳ ಗುರಿ ನೀಡಲಾಗಿದೆ. ಆದರೆ ಹೊಸ ಸರ್ಕಾರ ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ನಾನಾ ಮಾರ್ಗಗಳನ್ನು ಹುಡುಕುತ್ತಿದ್ದು ಅದರಲ್ಲಿ ನೋಂದಣಿ ತೆರಿಗೆ ಹೆಚ್ಚಳವೂ ಒಂದಾಗಿದೆ. ಜುಲೈನಲ್ಲಿ ಮಂಡನೆಯಾಗಲಿರುವ ಬಜೆಟ್​ನಲ್ಲಿ ಕನಿಷ್ಠ ಶೇ.10 ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಅಂದರೆ, ಗುರಿಗೆ ಇನ್ನೂ 2 ಸಾವಿರ ಕೋಟಿ ರೂ.ಗಳಷ್ಟು ಮೊತ್ತ ಹೆಚ್ಚಳವಾಗಿ ಸೇರ್ಪಡೆಯಾಗಬಹುದು. ಆದ್ದರಿಂದಲೇ ಮಾರ್ಗಸೂಚಿ ಬೆಲೆ ಪರಿಷ್ಕರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸರ್ಕಾರಕ್ಕೆ ಆದಾಯ ತರುವ ಮೂರನೇ ದೊಡ್ಡ ಇಲಾಖೆ ಇದಾಗಿದೆ.
ನಿಯಮ ಹೇಳುವುದೇನು?:ನೋಂದಣಿ ಮತ್ತು ಮುದ್ರಾಂಕ ನಿಯಮಗಳ ಪ್ರಕಾರ ಪ್ರತಿವರ್ಷ ಮಾರ್ಗಸೂಚಿ ಬೆಲೆ ಶೇ.15 ಹೆಚ್ಚಳವಾಗಬೇಕು. ಆದರೆ, ಕೆಲವು ಸಂದರ್ಭದಲ್ಲಿ ಸರ್ಕಾರದ ವಿವೇಚನೆಯಂತೆ ಹೆಚ್ಚು ಅಥವಾ ಕಡಿಮೆ ಮಾಡುವ ಇಲ್ಲವೇ ಮಾಡದಿರುವ ಬಗ್ಗೆ ನಿರ್ಧಾರವಾಗುತ್ತದೆ. ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳಗಳಲ್ಲಿ ಪ್ರತಿವರ್ಷ ಮಾರ್ಗಸೂಚಿ ಬೆಲೆ ಹೆಚ್ಚಳ ಮಾಡಲಾಗುತ್ತದೆ ಎಂಬ ಮಾಹಿತಿ ಸರ್ಕಾರದಲ್ಲಿದೆ.
ಮಾರ್ಗಸೂಚಿ ಬೆಲೆ 2019 ರಿಂದ ಜಾಸ್ತಿಯಾಗಿಲ್ಲ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಂತಿಮ ತೀರ್ಮಾನ ಸರ್ಕಾರದ್ದಾಗಿರುತ್ತದೆ.
| ಡಾ.ಬಿ.ಆರ್. ಮಮತಾ ಮುದ್ರಾಂಕ ಆಯುಕ್ತರು, ನೋಂದಣಿ ಮಹಾ ನಿರ್ದೇಶಕರು
ಬೆಲೆ ನಿಗದಿ ಏಕೆ?:ಮಾರ್ಗಸೂಚಿ ಬೆಲೆಯನ್ನು ನಿಗದಿ ಮಾಡುವ ಪದ್ಧತಿ 1990 ರಿಂದ ಜಾರಿಗೆ ಬಂತು. ಯಾವುದೇ ನೋಂದಣಿಯಾಗಬೇಕಾದರೆ ಮಾರ್ಗಸೂಚಿ ಬೆಲೆ ಶೇ.5.65ರಷ್ಟು ಮುದ್ರಾಂಕ ಹಾಗೂ ಶೇ.1ರಷ್ಟು ನೋಂದಣಿ ವೆಚ್ಚಕ್ಕೆ ಆಗಬೇಕು. ಅದಕ್ಕಿಂತ ಕಡಿಮೆ ಮಾಡುವಂತಿಲ್ಲ ಎಂಬ ಕಾರಣಕ್ಕೆ ಪ್ರದೇಶಗಳ ವಿವಿಧ ಅಭಿವೃದ್ಧಿ ಆಯಾಮಗಳನ್ನು ಆಧರಿಸಿ ಮಾರ್ಗಸೂಚಿ ಬೆಲೆ ನಿಗದಿ ಮಾಡಲಾಗುತ್ತದೆ. ಪ್ರತಿ ವರ್ಷ ಶೇ.5 ರಿಂದ 10 ರಷ್ಟು ಹೆಚ್ಚಳ ಮಾಡುತ್ತ ಬರುತ್ತಿರುವುದರಿಂದ ಬೆಲೆ ಜಾಸ್ತಿಯೇ ಆಗಿದೆ. ಕೆಲವೆಡೆ ಮಾರುಕಟ್ಟೆ ಬೆಲೆಯ ಶೇ.15 ರಿಂದ 20ರಷ್ಟು ಕಡಿಮೆ ಮಾರ್ಗಸೂಚಿ ಬೆಲೆ ಇದ್ದರೆ, ಇನ್ನೂ ಕೆಲವೆಡೆ ಶೇ. 20 ರಿಂದ 25ರಷ್ಟು ಹೆಚ್ಚಿದೆ. ಇಂಥ ಲೋಪವನ್ನು ಸರಿಪಡಿಸುವ ಕಡೆಗೂ ಸರ್ಕಾರ ಗಮನ ಹರಿಸಿದೆ ಎಂದು ಮೂಲಗಳು ಹೇಳಿವೆ.
ಎಷ್ಟು ಹೆಚ್ಚಳ ಸಾಧ್ಯತೆ?:ಮಾರ್ಗಸೂಚಿ ಬೆಲೆ ಹೆಚ್ಚಳಕ್ಕೂ ನಿಯಮವಿದೆ. ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಭೂ ಮೌಲ್ಯಮಾಪನ ಸಮಿತಿ ರಚನೆ ಮಾಡಲಾಗುತ್ತದೆ. ಆ ಸಮಿತಿ ವಿವಿಧ ಮಾನದಂಡಗಳನ್ನು ಅನುಸರಿಸಿ ಮಾರ್ಗಸೂಚಿ ಬೆಲೆ ನಿಗದಿ ಮಾಡಿ ವರದಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಕಳುಹಿಸುತ್ತದೆ. ಅಲ್ಲಿ ಅಂತಿಮವಾಗಿ ಮಾರ್ಗಸೂಚಿ ಬೆಲೆ ನಿಗದಿಯಾಗುತ್ತದೆ. ಲಭ್ಯ ಮಾಹಿತಿಯ ಪ್ರಕಾರ ಶೇ.20 ರಿಂದ 40 ರಷ್ಟು ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಗಳಿವೆ. ಇಲಾಖೆ ನೀಡುವ ಪ್ರಸ್ತಾವನೆಯನ್ನು ಸರ್ಕಾರದ ಮಟ್ಟದಲ್ಲಿ ಅಧ್ಯಯನ ಮಾಡಿ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗುತ್ತದೆ. ಎಷ್ಟು ಹೆಚ್ಚಳವಾಗಬೇಕು ಎಂಬು ದನ್ನು ಸಚಿವ ಸಂಪುಟ ಅಂತಿಮಗೊಳಿಸುತ್ತದೆ. ಯಾವಾಗಲೂ ಮಾರ್ಗಸೂಚಿ ಬೆಲೆ 2 ರೀತಿಯಲ್ಲಿ ಪರಿಷ್ಕರಣೆ ಯಾಗುತ್ತದೆ. ಒಂದು ಭೂಮಿಯ ದರವಾದರೆ, ಇನ್ನೊಂದು ಭೂಮಿ, ಅದರಲ್ಲಿನ ಕಟ್ಟಡ ಪರಿಗಣಿಸಲಾಗುತ್ತದೆ.
ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
