| ಗುರುದೇವ ಶ್ರೀ ಶ್ರೀ ರವಿಶಂಕರರು, ಆರ್ಟ್ ಆಫ್ ಲಿವಿಂಗ್
ಗುರುತತ್ವವೇ ಪ್ರಧಾನ, ಅದುವೇ ಜ್ಞಾನ. ಗುರು ಎಂಬುದು ಒಂದು ತತ್ವ, ನಿಮ್ಮೊಳಗಿನ ಗುಣ. ಗುರು ಎಂಬುದು ದೇಹ ಅಥವಾ ರೂಪಕ್ಕೆ ಸೀಮಿತವಲ್ಲ. ಹೀಗೊಂದು ಕಥೆ ಇದೆ. ಅಂದಾಜು 5000 ವರ್ಷಗಳ ಹಿಂದೆ, ಶ್ರೀಕೃಷ್ಣನು, ಜ್ಞಾನಿಯಾದ ತನ್ನ ಆತ್ಮೀಯ ಸ್ನೇಹಿತ ಉದ್ಧವನನ್ನು ಪ್ರೇಮ ಮತ್ತು ಭಕ್ತಿಯಿಂದ ತುಂಬಿರುವ ಗೋಪಿಯರ ಬಳಿಗೆ ಕಳುಹಿಸಿದಾಗ ಸಂಭವಿಸಿದ ಘಟನೆಯಿದು. ಉದ್ಧವ ಅವರಿಗೆ ಜ್ಞಾನವನ್ನು ನೀಡಲು, ಮುಕ್ತಿಯ ಬಗ್ಗೆ ಹೇಳಲು ಪ್ರಯತ್ನಿಸಿದರೆ, ಅವರಲ್ಲಿ ಯಾರೂ ಅದನ್ನು ಕೇಳಲು ಆಸಕ್ತಿ ತೋರಲಿಲ್ಲ. ‘ನಮಗೆ ಶ್ರೀಕೃಷ್ಣನ ಬಗ್ಗೆ ಹೇಳಿ, ದ್ವಾರಕೆಯಲ್ಲಿ ಏನಾಗುತ್ತಿದೆ ಎಂದು ತಿಳಿಸಿ, ಅವರ ಕಥೆಯನ್ನು ಹೇಳಿ. ಜ್ಞಾನದ ಮಾತುಗಳು ನಮಗೆ ಬೇಡ, ನಮಗೆ ಅದರಿಂದ ಏನೂ ಆಗಬೇಕಿಲ್ಲ. ನಮ್ಮ ಪ್ರೇಮದಲ್ಲಿ, ಶ್ರೀಕೃಷ್ಣನ ಕುರಿತಾದ ಕಾಯುವಿಕೆಯಲ್ಲಿಯೇ ನಾವು ಸಂತೋಷವಾಗಿದ್ದೇವೆ. ಬನ್ನಿ ನಾವೆಲ್ಲ ಸೇರಿ ಹಾಡಿ ನೃತ್ಯಮಾಡಿ ನಲಿಯೋಣ’ ಎಂದು ಹೇಳುತ್ತಾರೆ. ಅವರಿಗೆ ಬೇಕಾಗಿದ್ದದ್ದು ಇಷ್ಟೇ. ಪ್ರೇಮವು ಈ ರೀತಿಯಾದ ಪರಿಪೂರ್ಣತೆಯನ್ನು ನೀಡುತ್ತದೆ. ಅದರಿಂದ ನಿಮ್ಮೊಳಗಿನ ಅಡೆತಡೆಗಳನ್ನು ಮೀರಿ ಸುತ್ತಮುತ್ತಲಿನ ಎಲ್ಲರೊಂದಿಗೆ ಮತ್ತು ಇಡೀ ವಿಶ್ವದೊಂದಿಗೆ ನೀವು ಸಮನ್ವಯವನ್ನು ಅನುಭವಿಸಬಹುದು. ಇದೇ ‘ಗುರುತತ್ವ’.
ಪ್ರೇಮ ಮತ್ತು ಭಕ್ತಿಯು ನಿಮ್ಮ ಸ್ವಭಾವವೇ ಆಗಿದೆ. ನೀವು ನಿಮ್ಮ ಸ್ವಭಾವದಲ್ಲಿದ್ದಾಗ ಯಾವುದೇ ಸಂಘರ್ಷವಿರುವುದಿಲ್ಲ. ಆದರೆ, ನಿಮ್ಮಲ್ಲಿರುವ ಯಾವುದೇ ನಕಾರಾತ್ಮಕ ಗುಣ ಅಥವಾ ನೀವು ಮಾಡಿದ ಯಾವುದೋ ಒಂದು ಕೆಲಸದ ಬಗ್ಗೆ ಅಸಮಾಧಾನ ಉಂಟಾದಾಗ ನೀವು ಸಂಘರ್ಷಕ್ಕೆ ಒಳಪಡುತ್ತೀರಿ. ನಿಮ್ಮಿಂದ ಹೊರಲಾಗದ ಈ ಹೊರೆಯನ್ನು ನಿಮ್ಮಿಂದ ಇಳಿಸುವುದೇ ಗುರುತತ್ವ. ಇದು ನಿಮ್ಮಲ್ಲಿ ಭಕ್ತಿ ಮತ್ತು ಪ್ರೀತಿಯನ್ನು ಹುಟ್ಟುಹಾಕುತ್ತದೆ. ನಿಮ್ಮ ಕೋಪ, ಹತಾಶೆ ಹಾಗೂ ಎಲ್ಲಾ ಕೆಟ್ಟ ಭಾವನೆಗಳು ಹಾಗೂ ಒಳ್ಳೆಯ ಭಾವನೆಗಳನ್ನೂ ಗುರುವಿಗೆ ಸಮರ್ಪಿಸಿ. ನಿಮ್ಮಲ್ಲಿನ ನಕಾರಾತ್ಮಕತೆಯು ನಿಮ್ಮನ್ನು ಕೆಳಕ್ಕೆ ಎಳೆಯುತ್ತದೆ. ಸಕಾರಾತ್ಮಕ ಗುಣಗಳು ನಿಮ್ಮಲ್ಲಿ ಹೆಮ್ಮೆ ಮತ್ತು ಅಹಂಕಾರವನ್ನು ಹೆಚ್ಚಿಸುತ್ತದೆ. ಇದರಿಂದ ಜೀವನದಲ್ಲಿ ನಿಮ್ಮ ಹೊರೆಯು ಹೆಚ್ಚಾಗುತ್ತದೆ. ನೀವು ಇದೆಲ್ಲವನ್ನು ಗುರುವಿಗೆ ಸಮರ್ಪಿಸಿದಾಗ, ಇದರಿಂದ ಮುಕ್ತರಾಗುತ್ತೀರಿ, ಹೂವಿನಂತೆ ಹಗುರವಾಗುತ್ತೀರಿ. ತತ್​ಕ್ಷಣದಲ್ಲಿಯೇ ನೀವು ಮತ್ತೆ ನಗು ಮತ್ತು ಆನಂದವನ್ನು ಅನುಭವಿಸಬಹುದು. ಆಗ ನಿಮ್ಮಲ್ಲಿ ಉಳಿಯುವುದು ಶುದ್ಧವಾದ ಪ್ರೇಮ ಮಾತ್ರ.
ಯುಗ ಯುಗಗಳಿಂದಲೂ, ಜ್ಞಾನವು ಗುರು ಪರಂಪರಾಗತವಾಗಿ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬರುತ್ತಿದೆ. ಗುರು ಪೂರ್ಣಿಮೆಯಂದು, ಈ ಗುರು ಪರಂಪರೆಗೆ ನಾವು ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ಜ್ಞಾನ ಮತ್ತು ಪ್ರೇಮವನ್ನು ಜತೆಯಾಗಿ ಸಂಭ್ರಮದಿಂದ ಆಚರಿಸುವ ದಿನ ಇದು. ನಮ್ಮ ಮನಸ್ಸು ಮತ್ತು ಚಂದ್ರ ಇವೆರಡರ ನಡುವೆ ಪರಸ್ಪರ ಸಂಬಂಧವಿದೆ. ಹುಣ್ಣಿಮೆಯು ಪೂರ್ಣತೆಯ ಮತ್ತು ಸಂಭ್ರಮದ ಪರಾಕಾಷ್ಠೆಯ ಸಂಕೇತವಾಗಿದೆ. ಈ ದಿನ ನೀವು ನಿಮಗೆ ಬೇಕಾದುದನ್ನು ಕೇಳಬಹುದು ಮತ್ತು ಅದನ್ನು ನಿಮಗೆ ದಯಪಾಲಿಸಲಾಗುತ್ತದೆ. ಜ್ಞಾನ ಮತ್ತು ಮುಕ್ತಿಯ ಬಯಕೆಯು ಅತ್ಯುನ್ನತವಾದದ್ದು. ಸಂತೋಷವನ್ನು ಹಣದಿಂದ ಖರೀದಿಸಲಾಗುವುದಿಲ್ಲ. ನಿಮ್ಮ ಜೀವನವು ಫಲಪ್ರದವಾಗಿತ್ತೇ ಎಂದು ತಿಳಿಯುವಲ್ಲಿ ಜೀವನದ ಕೊನೆಯಲ್ಲಿ ಕೇಳಬೇಕಾದ ಎರಡು ಪ್ರಶ್ನೆಗಳಿವೆ – ನೀವು ಎಷ್ಟು ಪ್ರೀತಿಯನ್ನು ನೀಡಿದ್ದೀರಿ? ಮತ್ತು, ನೀವು ಎಷ್ಟು ಜ್ಞಾನ ಪಡೆದುಕೊಂಡಿದ್ದೀರಿ? ಎಂದು. ನೀವು ಪಡೆದುಕೊಂಡ ಜ್ಞಾನವು ನಿಮ್ಮ ಪ್ರಜ್ಞೆಯಲ್ಲಿ ಅಚ್ಚಾಗುವುದು ಮತ್ತು ಅದನ್ನು ಮಾತ್ರವೇ ನಿಮ್ಮೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯ. ಜ್ಞಾನವೆಂದರೆ ಪುಸ್ತಕದಲ್ಲಿ ಓದುವುದು ಅಲ್ಲ, ಅದು ಅರಿವನ್ನು ಜಾಗೃತಗೊಳಿಸುವಂತಹುದು. ನೀವು ಎಷ್ಟು ಅರಿವನ್ನು ಹೆಚ್ಚಿಸಿಕೊಂಡಿದ್ದೀರಿ? ಅದರಿಂದ ನಿಮ್ಮ ಮನಸ್ಸು ಎಷ್ಟು ತೆರೆದುಕೊಂಡಿದೆ? ಇದರ ಬಗ್ಗೆ ಗಮನ ಹರಿಸಬೇಕಾಗಿದೆ.
ಉನ್ನತ ಜ್ಞಾನವನ್ನು ಬಯಸುವವರು ಅದರ ಆಳಕ್ಕೆ ಹೋಗಲು ಬಯಸುತ್ತಾರೆ. ಜ್ಞಾನವು ಸಾಗರದಂತೆ. ಕೆಲವರು ಕಡಲತೀರದ ಉದ್ದಕ್ಕೂ ನಡೆಯುತ್ತಾರೆ, ಅವರಿಗೆ ತಾಜಾ ಗಾಳಿ ದೊರೆಯುತ್ತದೆ ಮತ್ತು ಅವರು ಅದರಲ್ಲೇ ಸಂತೋಷಪಡುತ್ತಾರೆ. ಮತ್ತೆ ಕೆಲವರು ತಮ್ಮ ಪಾದಗಳನ್ನು ನೀರಿನಲ್ಲಿ ಇಟ್ಟು ಸಾಗರದ ಆ ಸ್ಮರಣೀಯ ಸಂವೇದನೆಯನ್ನು ಅನುಭವಿಸುತ್ತಾರೆ. ಇನ್ನು ಕೆಲವರು ಸಾಗರದ ಆಳಕ್ಕೆ ಹೋಗಿ ಅಲ್ಲಿ ಮುತ್ತುಗಳನ್ನು ಹುಡುಕುತ್ತಾರೆ. ನೀವು ಕಡಲತೀರದಲ್ಲಿ ನಡೆಯುತ್ತೀರೋ ಅಥವಾ ಈಜಲು ಹೋಗುತ್ತಿರೋ ಇಲ್ಲವೇ ಆಳಕ್ಕೆ ಹೋಗಲು ಬಯಸುತ್ತಿರೋ, ಅದು ನಿಮಗೆ ಬಿಟ್ಟಿದ್ದು.
ಈ ಪ್ರಪಂಚದಲ್ಲಿ ಆಧ್ಯಾತ್ಮಿಕ ಸಾಧಕನಲ್ಲದ ಒಬ್ಬ ವ್ಯಕ್ತಿಯೂ ಇರಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಶಾಂತಿ, ಪ್ರೀತಿ ಮತ್ತು ಸಂತೋಷವನ್ನು ಹುಡುಕುತ್ತಾರೆ. ಇದುವೇ ಚೈತನ್ಯ. ಗುರು ಪೂರ್ಣಿಮೆಯ ದಿನವು, ಶಿಷ್ಯನು ತನ್ನ ಪೂರ್ಣತೆಯಲ್ಲಿ ಜಾಗೃತಗೊಳ್ಳುವ ದಿನವಾಗಿದೆ. ಕೃತಜ್ಞತೆ ಹೆಚ್ಚಿದಂತೆಲ್ಲಾ, ಅನುಗ್ರಹವು ಹೆಚ್ಚುತ್ತದೆ. ಅನುಗ್ರಹವು ಹೆಚ್ಚು ಸಂತೋಷ ಮತ್ತು ಜ್ಞಾನವನ್ನು ತರುತ್ತದೆ. ಈ ಮಹತ್ವದ ದಿನದಂದು ನಿಮ್ಮ ಆತ್ಮವೈಶಾಲ್ಯತೆಯ ಮೇಲೆ ವಿರಮಿಸಿ, ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯನ್ನು ಪರಿಶೀಲಿಸಿ ಮತ್ತು ಗುರಿಯತ್ತ ಗಮನವನ್ನು ನವೀಕರಿಸಿ. ಮುಂಬರುವ ವರ್ಷದಲ್ಲಿ ಏನು ಮಾಡಬೇಕೆಂದು ಸಂಕಲ್ಪ ಮಾಡಿ.
ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ, ಬದುಕಿಗೆ ಬೆಳಕಾಗಬಲ್ಲ ಕೆಲವು ಆಧ್ಯಾತ್ಮಿಕ ಗುರುಗಳ ನುಡಿಮುತ್ತುಗಳನ್ನು ಇಲ್ಲಿ ನೀಡಲಾಗಿದೆ. ಈ ಮಾತುಗಳು ವ್ಯಕ್ತಿಯ ಆಂತರ್ಯದಲ್ಲಿ ಚಿಂತನೆ ಮತ್ತು ಪ್ರೇರಣೆಯ ಕಿಡಿಯನ್ನು ಹೊತ್ತಿಸಬಲ್ಲಷ್ಟು ಪ್ರಭಾವಶಾಲಿಯಾಗಿವೆ.
ಕುಲುಮೆಯಲ್ಲಿ ಶುದ್ಧೀಕರಿಸಿದ ಚಿನ್ನ ಹೇಗೆ ಕಲ್ಮಷಗಳನ್ನು ಕಳೆದುಕೊಂಡು ತನ್ನ ಸ್ವರೂಪವನ್ನು ಪಡೆದುಕೊಳ್ಳುತ್ತದೋ, ಹಾಗೆಯೇ ಮನಸ್ಸು ಧ್ಯಾನದ ಮೂಲಕ ಭ್ರಮೆ, ಮೋಹಗಳ ಕಲ್ಮಷಗಳನ್ನು ಕಳೆದುಕೊಂಡು ಸತ್ಯವನ್ನು ಪಡೆದುಕೊಳ್ಳುತ್ತದೆ.
| ಆದಿ ಶಂಕರಾಚಾರ್ಯ
ಬದಲಾವಣೆ ಎಂದೂ ಯಾತನಾಮಯವಲ್ಲ, ಯಾತನಾಮ ಯವಾದುದು ಬದಲಾವಣೆಗೆ ತೋರುವ ಪ್ರತಿರೋಧವಷ್ಟೆ.
| ಬುದ್ಧ
ಯಾವಾಗಲೂ ಪ್ರಶ್ನೆಗಳನ್ನು ಹೊಂದಿರುವುದೇ ಬುದ್ಧಿಶಕ್ತಿಯ ಕುರುಹು. ಮೂರ್ಖರು ತಾವು ಮಾಡುವ ಎಲ್ಲದರ ಬಗ್ಗೆಯೂ ಖಡಾಖಂಡಿತರಾಗಿರುತ್ತಾರೆ.
| ಸದ್ಗುರು
ಅಧ್ಯಾತ್ಮವು ಸಹಜವಾಗಿಯೇ ವಿನಮ್ರತೆಯನ್ನು ತರುತ್ತದೆ. ಹೂವು ಹಣ್ಣಾದಾಗ, ಅದರ ಎಸಳುಗಳು ತಾವಾಗೇ ಬಿದ್ದುಹೋಗುತ್ತವೆ. ಅಂತೆಯೇ ಒಬ್ಬರು ಆಧ್ಯಾತ್ಮಿಕರಾದಾಗ, ಅಹಂ ಎಂಬುದು ತಾನಾಗೇ ಕಣ್ಮರೆಯಾಗುತ್ತದೆ. ಹಣ್ಣುಗಳಿಂದ ತುಂಬಿದ ಮರವು ಯಾವಾಗಲೂ ಬಾಗಿರುತ್ತದೆ. ವಿನಮ್ರತೆಯು ಮಹಾನ್ ವ್ಯಕ್ತಿಯ ಸಂಕೇತ.
| ರಾಮಕೃಷ್ಣ ಪರಮಹಂಸ
ಒಂದು ವಿಚಾರವನ್ನು ತೆಗೆದುಕೊಳ್ಳಿ. ಆ ವಿಚಾರವನ್ನು ನಿಮ್ಮ ಜೀವನವಾಗಿಸಿ ಅದರ ಬಗ್ಗೆ ಯೋಚಿಸಿ, ಅದರ ಕನಸು ಕಾಣಿ, ಅದನ್ನೇ ಜೀವಿಸಿ. ನಿಮ್ಮ ಮಿದುಳು, ಮಾಂಸಖಂಡಗಳು, ನರಗಳು, ಮತ್ತು ದೇಹದ ಎಲ್ಲ ಭಾಗಗಳು ಆ ವಿಚಾರದಿಂದ ತುಂಬಿತುಳುಕಲಿ. ಬೇರೆಲ್ಲಾ ವಿಚಾರಗಳನ್ನು ಅವುಗಳ ಪಾಡಿಗೆ ಬಿಡಿ. ಇದೇ ಯಶಸ್ಸಿನ ಮಾರ್ಗ.
| ಸ್ವಾಮಿ ವಿವೇಕಾನಂದ
ಒಬ್ಬನು ಕಾಡ್ಗಿಚ್ಚಿನ ಮಧ್ಯೆ ಮರದ ಮೇಲೆ ಕುಳಿತಿದ್ದಾನೆ. ಎಲ್ಲ ಜೀವಿಗಳೂ ಉರಿದು ಬೂದಿಯಾಗುತ್ತಿರುವುದನ್ನು ನೋಡುತ್ತಿದ್ದರೂ, ತನಗೂ ಸದ್ಯದಲ್ಲೇ ಅದೇ ಗತಿಯಾಗಲಿದೆ ಎಂದು ಅವನಿಗೆ ಹೊಳೆಯುವುದೇ ಇಲ್ಲ. ಈ ಮನುಷ್ಯನು ಮಹಾಮೂರ್ಖನು.
| ಮಹಾವೀರ
ಯಾರೂ ತಮ್ಮ ತಲೆಯನ್ನು ಬೋಳಿಸುವ, ಖಾವಿಯನ್ನು ತೊಡುವ, ಹತ್ತಿರದವರಿಂದ ಓಡಿಹೋಗುವ ಅಗತ್ಯವಿಲ್ಲ. ಜಗತ್ತಿನಲ್ಲಿ ಬಾಳುತ್ತಾ, ನಿಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ, ಜೀವಿಕೆಯನ್ನು ಸಂಪಾದಿಸುತ್ತಾ, ನಿಮ್ಮ ಸಹಾಯದ ಅಗತ್ಯವಿರುವವರನ್ನು ನೋಡಿಕೊಳ್ಳುತ್ತಾ, ಪ್ರೀತಿ ಮತ್ತು ಸೇವೆಯ ಕಂಪನ್ನು ಹರಡುತ್ತಾ ಇದ್ದು, ಜೊತೆಯಲ್ಲಿಯೇ ಪ್ರತಿದಿನ ಧ್ಯಾನ ಮಾಡುತ್ತಾ, ಆ ಪರಮ ಚೈತನ್ಯದ ಕಿಡಿಯಾದ, ಆ ಮಹಾಸಮುದ್ರದ ಬಿಂದುವಾದ ನಿಮ್ಮ ಸ್ವರೂಪವನ್ನು ನೆನಪಿಸಿಕೊಳ್ಳುತ್ತಿರಬಹುದು. ಆಗ ನಿಮ್ಮ ಹೃದಯದ ಶುಭ್ರ ಕನ್ನಡಿಯಲ್ಲಿ ದೈವೀಕತೆಯ ಪ್ರತಿಬಿಂಬವು ಹೊಳೆಯುತ್ತದೆ. ಮತ್ತು ನಿಮ್ಮ ಹೃದಯದಿಂದ ಚೈತನ್ಯದ ನಿರ್ಮಲ ಕಿರಣಗಳು ಹೊರಹೊಮ್ಮಿ ಇತರ ಹೃದಯಗಳನ್ನೂ ಆನಂದದಿಂದ ತುಂಬುತ್ತದೆ.
| ಶ್ರೀ ಎಂ
ನಿಮ್ಮನ್ನು ನಿಮ್ಮ ದೋಷಗಳಿಂದ ಮುಕ್ತಗೊಳಿಸಲು ಸಾವನ್ನು ನಂಬಿ ಕೂರಬೇಡಿ. ಸಾವಿಗೆ ಮುನ್ನ ನೀವು ಹೇಗಿದ್ದೀರೋ, ನಂತರವೂ ಹಾಗೆಯೇ ಇರುತ್ತೀರಿ. ನೀವು ನಿಮ್ಮ ದೇಹವನ್ನು ಕಳೆದುಕೊಳ್ಳುತ್ತೀರಿ ಅಷ್ಟೆ. ಸಾವಿಗೆ ಮುನ್ನ ನೀವು ಕಳ್ಳರು ಅಥವಾ ಸುಳ್ಳುಗಾರರು ಅಥವಾ ಮೋಸ ಗಾರರಾಗಿದ್ದರೆ, ಕೇವಲ ಸಾಯುವ ಮೂಲಕ ನೀವೇನೂ ದೇವತೆ ಯಾಗಿಬಿಡುವುದಿಲ್ಲ. ಅಂತಹದ್ದು ಸಾಧ್ಯವಿದ್ದರೆ, ಎಲ್ಲರೂ ಈಗಲೇ ಹೋಗಿ ಸಮುದ್ರಕ್ಕೆ ಹಾರಿ ದೇವತೆಗಳಾಗಿಬಿಡೋಣ! ನೀವು ನಿಮ್ಮನ್ನು ಇಲ್ಲಿಯವರೆಗೆ ಏನು ಮಾಡಿಕೊಂಡಿದ್ದೀರೋ ನಂತರವೂ ಹಾಗೆಯೇ ಇರುತ್ತೀರಿ. ಪುನರ್ಜನ್ಮ ಪಡೆದಾಗ ಅದೇ ಗುಣಗಳನ್ನು ಹೊತ್ತು ಬರುತ್ತೀರಿ. ಬದಲಾಗಲು ಪ್ರಯತ್ನ ಹಾಕಬೇಕು. ಅದನ್ನು ಮಾಡಬೇಕಿರುವುದು ಈ ಜಗತ್ತಿನಲ್ಲೇ.
| ಪರಮಹಂಸ ಯೋಗಾನಂದ
ನಾನು ಯಾರು ಎಂಬ ಪ್ರಶ್ನೆ ಇರುವುದು ಉತ್ತರವನ್ನು ಪಡೆಯುವು ದಕ್ಕಲ್ಲ, ಈ ಪ್ರಶ್ನೆ ಇರುವುದು ಕೇಳುಗನನ್ನೇ ವಿಲೀನಗೊಳಿಸಲು.
| ರಮಣ ಮಹರ್ಷಿ
ಸಮಸ್ತ ಜಗತ್ತು ಮುಕ್ತಿಗಾಗಿ ಹಂಬಲಿಸುತ್ತದೆ, ಆದರೆ ಪ್ರತಿ ಜೀವಿಯೂ ತನ್ನನ್ನು ಬಂಧಿಸಿರುವ ಸರಪಳಿಗಳನ್ನು ಪ್ರೀತಿಸುತ್ತದೆ. ಇದೇ ಮೊಟ್ಟ ಮೊದಲ ವಿರೋಧಾಭಾಸ. ಇದೇ ನಮ್ಮ ಜೀವನದ ಜಟಿಲವಾದ ಕಗ್ಗಂಟು.
| ಶ್ರೀ ಅರವಿಂದರು
ಸದ್ಗುರು ಸತ್ಸಂಗ ಲೈವ್:ಜುಲೈ 3 ರಂದು, ಗುರು ಪೌರ್ಣಿಮೆಯಂದು, ಸದ್ಗುರುಗಳು ಸತ್ಸಂಗವನ್ನು ನಡೆಸಿಕೊಡಲಿದ್ದು, ಯುಟ್ಯೂಬ್ ಚಾನೆಲ್​ನಲ್ಲಿ ನೇರ ಪ್ರಸಾರವಾಗಲಿದೆ. Live Satsang Link: https://sadhguru.co/gurupurnima-kan
ಬಾಲ್ಯದಲ್ಲೇ ಖುಷಿಗಾಗಿ ಓದಿದ ಮಕ್ಕಳ ಹದಿಹರೆಯ ಸುಂದರ!; ಸಾವಿರಾರು ಮಕ್ಕಳನ್ನು ಒಳಗೊಂಡ ಅಧ್ಯಯನದಲ್ಲಿ ಬಹಿರಂಗ

‘ಲವ್ ಮಾಡು’ ಎಂದು ಟೀಚರ್ ಮಗನ ಕಾಟ, ಆತನಿಗೆ ಅಮ್ಮನ ಬೆಂಬಲ?: ಸಾವಿಗೆ ಶರಣಾದ್ಲು ಹತ್ತನೇ ತರಗತಿ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
