ಮೋದೂರು ಮಹೇಶಾರಾಧ್ಯಹನ್ನೆರಡನೆಯ ಶತಮಾನದ ವಚನ ಚಳವಳಿ ಚರಿತ್ರಾರ್ಹವಾದುದು. ಕನ್ನಡ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ವಿುಕ ಪರಿವರ್ತನೆಗೆ ಕಾರಣವಾದ ಈ ಚಳವಳಿಯು ಸಮಾಜದ ಶೋಷಿತ ವರ್ಗದ ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿತು. ಆವರೆಗೆ ಸಾಹಿತ್ಯ ಕೇವಲ ಉನ್ನತ ವರ್ಗಕ್ಕೆ ಮೀಸಲಾಗಿದ್ದು ವ್ಯವಸ್ಥೆಯ ಬಹುಸಂಖ್ಯಾತರು ಉಪೇಕ್ಷೆಗೆ ಒಳಗಾಗಿದ್ದರು. ಇಂತಹ ಜನರ ಬದುಕಲ್ಲಿ ಹೊಸ ಗಾಳಿ ಬೀಸಿದಂತೆ ವಚನ ಚಳವಳಿ ಪ್ರವಹಿಸಿ ಜಗತ್ತಿನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು. ಈ ಚಳವಳಿಯ ನೇತಾರನಾಗಿ ಬಸವಣ್ಣ ರೂಪುಗೊಂಡರೆ, ಇವರೊಂದಿಗೆ ಆತ್ಮಜ್ಞಾನಿ ಅಲ್ಲಮ, ಚನ್ನಬಸವ, ಅಕ್ಕಮಹಾದೇವಿ ಮೊದಲಾದ ನೂರಾರು ಶರಣರು ಬದಲಾವಣೆಯ ಮಹಾಆಂದೋಲನದಲ್ಲಿ ಪಾಲುದಾರರಾಗಿ ಅದನ್ನು ಚಿರಸ್ಥಾಯಿಗೊಳಿಸಿದರು. ಇಂತಹ ಶರಣರ ಪೈಕಿ ಹಡಪದ ಅಪ್ಪಣ್ಣನವರೂ ಒಬ್ಬರಾಗಿದ್ದರು.
ಇತಿಹಾಸದಲ್ಲಿ ಹಡಪದ ಅಪ್ಪಣ್ಣನವರ ಬಗೆಗಿನ ವಿವರಗಳು ಅತ್ಯಲ್ಪ. ಅವರ ಹೆಸರಿಗೆ ಹಡಪದ ಎಂಬ ವೃತ್ತಿ ನಾಮ ಸೇರಿಕೊಂಡಿದೆ. ಹಡಪ ಅಥವಾ ಅಡಪ ಎಂಬುದು ಕ್ಷೌರಿಕರ ಸಾಮಾನುಗಳ ಪೆಟ್ಟಿಗೆ ಅಥವಾ ತಾಂಬೂಲದ ಕೈಚೀಲ ಎಂಬ ಎರಡು ಅರ್ಥಗಳನ್ನು ಸೂಚಿಸುತ್ತದೆ. ಆದರೆ, ಕ್ಷೌರಿಕ ಕಾಯಕದವರು ತಮ್ಮನ್ನು ಹಡಪದ ಅಪ್ಪಣ್ಣನವರ ವಂಶದವರೆಂದು ಹೇಳಿಕೊಳ್ಳುವುದರಿಂದ ಅವರ ವಾದವನ್ನೇ ಪುರಸ್ಕರಿಸಿ ಕವಿ ಚರಿತ್ರಕಾರರು ಅಪ್ಪಣ್ಣನವರನ್ನು ಕ್ಷೌರಿಕ ಜಾತಿಯವರೆಂದೇ ಗುರುತಿಸಿದ್ದಾರೆ. ಅಪ್ಪಣ್ಣನವರು ತಮ್ಮ ಜೀವನವಿಡೀ ಬಸವಣ್ಣನ ನಂಬಿಕಸ್ಥ ಸಹಾಯಕರಾಗಿದ್ದರು. ಶರಣರೆಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿಗೆ ಯಾವ ಲೋಪವೂ ಬಾರದಂತೆ ನಡೆದುಕೊಳ್ಳುತ್ತಿದ್ದುದರಿಂದ ಶರಣ ಸಮೂಹ ಅವರನ್ನು ‘ನಿಜಸುಖಿ ಅಪ್ಪಣ್ಣ’ ಎಂದು ಕರೆಯಿತು.
ಅಪ್ಪಣ್ಣ 1160ರಲ್ಲಿ ಜನಿಸಿದರೆಂದು ನಂಬಲಾಗಿದೆ. ಅವರ ಜನ್ಮಸ್ಥಳ ಬಸವನಬಾಗೇವಾಡಿ ಸಮೀಪದ ಮಸಬಿನಾಳ ಎಂಬ ಗ್ರಾಮ. ತಂದೆ ಚೆನ್ನವೀರಪ್ಪ, ತಾಯಿ ದೇವಕಮ್ಮ. ಧರ್ಮಪತ್ನಿ ಲಿಂಗಮ್ಮ.ಅಪ್ಪಣ್ಣನವರು ಕ್ಷೌರಿಕ ವೃತ್ತಿಯೊಂದಿಗೆ ಬಸವಣ್ಣನವರಿಗೆ ತಾಂಬೂಲವನ್ನು ತಯಾರು ಮಾಡಿಕೊಡುವ ಕಾಯಕವನ್ನೂ ನಿರ್ವಹಿಸುತ್ತಿದ್ದರೆಂದು ನಂಬಲಾಗಿದೆ. ಅವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಅಂದಾಜು 250 ವಚನಗಳನ್ನು ಬರೆದಿದ್ದಾರೆ.
ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿಯಾಗಿ ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾಯಕ ನಿರ್ವಹಿಸಿದರು. ಅವರ ಬಹುತೇಕ ವಚನಗಳು ಬೆಡಗಿನ ವಚನಗಳಾಗಿವೆ. ಇವರು ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ- ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ. ಅಪ್ಪಣ್ಣನವರು ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ-
ವೇಷವ ಹೊತ್ತು, ಆಶೆ ರೋಷವ ಬಿಡದೆ ದೇಶವ/ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ/ಕಾವಿ ಕಾಷಾಯಾಂಬರವ ಧರಿಸಿ ಫಲವೇನು?/ಕಾಯ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು/ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ/ಬೆಂದುಹೋಗದು, ಇವೆಲ್ಲ ಸಹಿತ ಜಂಗಮ ಭಕ್ತರೆಂದು/ಸುಳಿವವರ ಕಂಡು ನಾಚಿತ್ತು ಎನ್ನ ಮನ.
ಅಂತರಂಗದ ಅರಿಷಡ್ವರ್ಗಗಳನ್ನು ನಿಗ್ರಹಿಸದ ಕೆಲ ಮಠಾಧಿಪತಿಗಳನ್ನು ಕಂಡಾಗ ಅಪ್ಪಣ್ಣನವರ ವಚನಗಳ ಮಹತ್ವ ಅರಿವಾಗುತ್ತದೆ.
ಹಸಿವಿನಾಶೆಗೆ ಅಶವನ ಕೊಂಬರು, ವಿಷಯದಾಸೆಗೆ/ಹುಸಿಯ ನುಡಿವರು, ಹಸನಾಗಿ ವ್ಯಸನವ ಹೊತ್ತು/ಭಸಿತವ ಹೂಸಿ ವಿಶ್ವವ ತಿರುಗುವರು/ಈ ಹುಸಿಯ ಬಿಟ್ಟು, ಮಾಯೆಯ ಮಸಕವ/ಮಾಣ್ದಲ್ಲದೆ ನಮ್ಮ ಬಸವಪ್ರಿಯ ಕೂಡಲ ಚನ್ನಬಸವಣ್ಣನ ಕೂಡಾ ಈ ವಚನದಲ್ಲಿಯೂ ವೇಷಧಾರಿ ಭಕ್ತರನ್ನು ಹಂಗಿಸುತ್ತಾ ಮಾನವ ಜನ್ಮದ ಘನತೆಯನ್ನರಿಯದೆ, ಪಾರಮಾರ್ಥಿಕ ಬದುಕಿನಿಂದ ದೂರ ನಿಂತು ಲೌಕಿಕದ ವಿಷಯಾಸಕ್ತಿಗೆ ಮನಸೋತು ಇಡೀ ಬದುಕನ್ನು ನಾಶ ಮಾಡಿಕೊಳ್ಳುವ ಜನರ ಬಗ್ಗೆ ಅಪ್ಪಣ್ಣನವರು ನಿರ್ದಾಕ್ಷಿಣ್ಯವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸ್ಥಾವರ ದೇವರುಗಳಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಈ ವಿಚಾರದಲ್ಲಿ ಅವರು ಅಲ್ಲಮನ ಅನುಯಾಯಿ. ‘ಕಲ್ಲು ದೇವರ ನಂಬಿದವರೆಲ್ಲ ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು’ ಎಂದು ಮೂರ್ತಿಪೂಜಕರನ್ನು ಹಂಗಿಸಿದ್ದಾರೆ. ದೇವಾಲಯದ ಕಡುವಿರೋಧಿಯಾಗಿದ್ದರು ಅಪ್ಪಣ್ಣ.
ಹಲವಂದ ಚಂದದಲ್ಲಿ ಹಾಡಿದರೇನಯ್ಯ/ಲಿಂಗದ ನೆಲೆಯನ್ನರಿಯದನ್ನಕ್ಕ/ಕಲಿಯಾಗಿ ವೈರಾಗ್ಯ ತಲೆಗೇರಿ/ಹರಿದಾಡಿದರೇನಯ್ಯ
ಹೀಗೆ ವಿಡಂಬಿಸಿ ವಾಸ್ತವತೆಯನ್ನು ಮೆರೆದಿದ್ದಾರೆ. ಬದುಕಿನ ಕೊನೆಯ ಕ್ಷಣಗಳಲ್ಲೂ ಅವರು ಬಸವಣ್ಣನವರ ನಿಷ್ಠಾವಂತ ಸಖನಾಗಿಯೇ ಉಳಿದಿದ್ದರು. ಕಲ್ಯಾಣ ಕ್ರಾಂತಿಯ ನಂತರ ಅಲ್ಲಿನ ಅಹಿತಕರ ಘಟನೆಗಳಿಂದ ನೊಂದ ಬಸವಣ್ಣ ಕಲ್ಯಾಣವನ್ನು ತ್ಯಜಿಸಿ ಕಪ್ಪಡಿ ಸಂಗಮಕ್ಕೆ ತೆರಳುತ್ತಾರೆ. ತನ್ನನ್ನು ಹಿಂಬಾಲಿಸಿದ ಅಪ್ಪಣ್ಣನಿಗೆ ಬಸವಣ್ಣ ತನ್ನ ಪತ್ನಿ ನೀಲಾಂಬಿಕೆಯನ್ನು ಕರೆತರುವಂತೆ ಹೇಳುತ್ತಾರೆ. ಅಪ್ಪಣ್ಣ ಬರುವ ವೇಳೆಗಾಗಲೇ ಕಲ್ಯಾಣ ರಕ್ತಸಿಕ್ತವಾಗಿರುತ್ತದೆ. ಬಸವಣ್ಣನವರ ಪ್ರೀತ್ಯಾದರಗಳಿಗೆ ಮನಸೋತ ನೀಲಾಂಬಿಕೆ ಅಪ್ಪಣ್ಣನೊಂದಿಗೆ ಕಪ್ಪಡಿಗೆ ಹೊರಡುತ್ತಾಳೆ. ಅವರಿಬ್ಬರೂ ತಂಗಡಿಗೆ ಬರುವ ವೇಳೆಗಾಗಲೇ ಬಸವಣ್ಣ ಮೃತ್ಯುವಶರಾದ ವಿಷಯ ಅವರಿಗೆ ತಿಳಿಯುತ್ತದೆ. ನೀಲಾಂಬಿಕೆ ತೀವ್ರ ದುಃಖದಿಂದ ಅಸುನೀಗುತ್ತಾಳೆ. ಬಸವಣ್ಣನವರ ವಿಯೋಗವನ್ನು ಸಹಿಸದ ಅಪ್ಪಣ್ಣನವರೂ ಇಹಲೋಕ ತ್ಯಜಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಈಗಲೂ ಕೃಷ್ಣ ನದಿ ತೀರದ ತಂಗಡಗಿಯಲ್ಲಿ ನೀಲಾಂಬಿಕೆ ಮತ್ತು ಅಪ್ಪಣ್ಣನವರ ಸಮಾಧಿಗಳಿವೆ.
ಹನ್ನೆರಡನೇ ಶತಮಾನದ ಅಸಮ ಸಮಾಜದ ಶೋಷಣೆಯನ್ನು ವಿರೋಧಿಸಿ ಹೊಸ ಸಮಾಜದ ಸ್ಥಾಪನೆಗೆ ಹೋರಾಡಿದ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಮಾಚಿದೇವ ಮುಂತಾದ ಶರಣರಂತೆಯೇ ಅಪ್ಪಣ್ಣನವರೂ ಪೂಜ್ಯನೀಯರಾಗಿದ್ದಾರೆ. ಬಸವಕೇಂದ್ರಿತ ವಿರಾಟ್ ಸಾಮಾಜಿಕ ಆಂದೋಲನವು ಸರಿದಾರಿಯಲ್ಲಿ ಸಾಗಲು ಅಪ್ಪಣ್ಣನವರ ಕೊಡುಗೆಯೂ ಅಪಾರ. ಅವರ ಕಾಯಕನಿಷ್ಠೆ, ಭಕ್ತಿ, ವೈರಾಗ್ಯ ಮತ್ತು ದಾಸೋಹಗಳು ದಾರಿದೀಪಗಳಾಗಿವೆ.
(ಲೇಖಕರು ವಿಶ್ರಾಂತ ಪ್ರಾಚಾರ್ಯರು)
ಬಾಲ್ಯದಲ್ಲೇ ಖುಷಿಗಾಗಿ ಓದಿದ ಮಕ್ಕಳ ಹದಿಹರೆಯ ಸುಂದರ!; ಸಾವಿರಾರು ಮಕ್ಕಳನ್ನು ಒಳಗೊಂಡ ಅಧ್ಯಯನದಲ್ಲಿ ಬಹಿರಂಗ
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three × 2 =
Remember me
