|ಆರ್. ತುಳಸಿಕುಮಾರ್ಬೆಂಗಳೂರು
ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆಗೆ ಸಾರ್ವಜನಿಕರಿಂದ ಹಣ ವಸೂಲಿ, ಕಳ್ಳಮಾರ್ಗದಲ್ಲಿ ಪಡಿತರ ಮಾರಾಟ, ತೂಕದಲ್ಲಿ ಮೋಸದ ಆರೋಪ ಎದುರಿಸುತ್ತಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದಲೇ ಆಹಾರ ಇಲಾಖೆ ಅಧಿಕಾರಿಗಳು ಹಫ್ತಾ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಆದರೆ, ಇದನ್ನು ಬಹಿರಂಗಪಡಿಸದಂತೆ ಅಂಗಡಿ ಮಾಲೀಕರ ಮೇಲೆ ಒತ್ತಡ ಹೇರುತ್ತಿರುವುದು ಸಾಕ್ಷ್ಯಸಮೇತ ಸಾಬೀತಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ಅಳತೆ-ತೂಕದಲ್ಲಿ ಮೋಸ, ರೇಷನ್ ನೀಡದಿರುವುದು ಇತ್ಯಾದಿ ವಿಚಾರದಲ್ಲಿ ದಾಖಲಾಗುವ ದೂರುಗಳ ವಿರುದ್ಧ ಕ್ರಮ ಕೈಗೊಳ್ಳದಿರಲು ಇಂತಹ ವಾಮಮಾರ್ಗದ ಮೂಲಕ ಹಣ ಮಾಡುವ ಕಾರ್ಯ ಅವ್ಯಾಹತವಾಗಿ ನಡೆದಿದೆ. ಹಣ ನೀಡದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸುಳ್ಳು ದೂರು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಬಿಬಿಎಂಪಿ ಸೇರಿ ಪಾಲಿಕೆ ವ್ಯಾಪ್ತಿಗಳಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ತಲಾ 4 ರಿಂದ 5 ಸಾವಿರ ರೂ. ನಿಗದಿ ಮಾಡಲಾಗಿದೆ.
ಎರಡನೇ ಹಂತದ ನಗರ/ಪಟ್ಟಣ ಪ್ರದೇಶಗಳ ನ್ಯಾಯಬೆಲೆ ಅಂಗಡಿಗಳಿಗೆ ತಲಾ 2 ರಿಂದ 3 ಸಾವಿರ ರೂ. ಹಾಗೂ ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಿಗೆ 500 ರೂ. ನಿಗದಿಯಾಗಿದೆ. ಈ ಮೊತ್ತ ಮಾಸಿಕ 5 ರಿಂದ 6 ಕೋಟಿ ರೂ. ಆಗುತ್ತದೆ! ಅಧಿಕಾರಿಗಳ ಮಟ್ಟದಲ್ಲೇ ವಸೂಲಿ ದಂಧೆ ನಡೆಯುತ್ತಿರುವುದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ವಸೂಲಿ ದಂಧೆ ಕುರಿತು ಕೆಲ ಆರ್​ಟಿಐ ಕಾರ್ಯಕರ್ತರು ಹಾಗೂ ಸಂಘಟನೆಗಳು ಆಹಾರ ಇಲಾಖೆಗೆ ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದರು. ಇದನ್ನಾಧರಿಸಿ ಕೆಲ ಉಪ ನಿರ್ದೇಶಕರು ತಮ್ಮ ವಿರುದ್ಧದ ಆರೋಪಕ್ಕೆ ಸಾಕ್ಷ್ಯ ನೀಡದಂತೆ ಆಯಾ ನ್ಯಾಯಬೆಲೆ ಅಂಗಡಿ ಮಾಲೀಕರ ಮೇಲೆ ಒತ್ತಡ ಹೇರಿದ್ದಾರೆ. ಜತೆಗೆ ಮೂರನೇ ವ್ಯಕ್ತಿಯಿಂದ ಲಿಖಿತ ಪತ್ರಗಳನ್ನು ವಿತರಿಸಿ ಅದಕ್ಕೆ ಮಾಲೀಕರಿಂದ ಸಹಿ ಪಡೆದು ದಂಧೆ ನಡೆಯುತ್ತಿಲ್ಲ ಎಂಬ ಮಾಹಿತಿ ಕಲೆ ಹಾಕಲು ನಿರತರಾಗಿದ್ದಾರೆ. ಈ ರೀತಿ ಉಪ ನಿರ್ದೇಶಕರೊಬ್ಬರು ಬರೆದಿರುವ ಪತ್ರ ‘ವಿಜಯವಾಣಿ’ಗೆ ಲಭ್ಯವಾಗಿದೆ.
‘ಪ್ರಸಾದ’ ಪಡೆಯಲು ಪೈಪೋಟಿ:ಸರ್ಕಾರದ ವಿವಿಧ ಇಲಾಖೆಗಳ ಪೈಕಿ ಆಹಾರ ಇಲಾಖೆಯಲ್ಲಿ ಲಂಚದ ಪ್ರಮಾಣ ಕಡಿಮೆ ಎನ್ನಲಾಗುತ್ತದೆ. ಆದರೂ, ಸಾರ್ವಜನಿಕರಲ್ಲದವರ ಕೆಲಸಕ್ಕೆ ಒಂದಿಷ್ಟು ‘ಪ್ರಸಾದ’ ನೀಡಬೇಕಿದೆ. ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ವಿತರಣೆ, ನವೀಕರಣ, ಮಾಸಿಕ ಪಡಿತರ ಎತ್ತುವಳಿ ಸಹಿತ ಕೆಲ ಬಾಬ್ತುಗಳಲ್ಲಿ ಕಡಿಮೆ ಪ್ರಮಾಣದ ಹಣ ಕೈ ಬದಲಾಗುತ್ತದೆ. ಜತೆಗೆ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ರೇಷನ್ ಕಾರ್ಡ್​ಗಳ ವಿತರಣೆ ವೇಳೆಯೂ ಹಣ ನೀಡಬೇಕಾಗಿದೆ. ಮುಖ್ಯವಾಗಿ ಈ ಇಲಾಖೆಯಲ್ಲಿ ವರ್ಗಾವಣೆ ಕಡಿಮೆ. ನಿಯೋಜನೆ ಮೇಲೆ ಅನ್ಯ ಇಲಾಖೆಯವರು ಇತ್ತ ತಲೆ ಹಾಕುವುದಿಲ್ಲ. ಹೀಗಾಗಿ ನೇಮಕಗೊಂಡ ಸ್ಥಳಗಳಲ್ಲಿಯೇ ನಿವೃತ್ತಿಯಾಗುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಆಯಕಟ್ಟಿನ ಹುದ್ದೆಗಳಲ್ಲಿರುವವರು ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಯಾವಾಗಿಂದ ದಂಧೆ?:ಕೋವಿಡ್ ಸಾಂಕ್ರಾಮಿಕದ ಬಳಿಕ ದೇಶದ ಬಡ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸಲು ಕೇಂದ್ರ ಸರ್ಕಾರ ಪ್ರಧಾನಮಂತಿ ಗರೀಬ್ ಅನ್ನ ಯೋಜನಾ (ಪಿಎಂಜಿಎವೈ) ಕಾರ್ಯಕ್ರಮ ರೂಪಿಸಿದೆ. ಎರಡು ವರ್ಷದಿಂದೀಚಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ, ಪ್ರಸ್ತುತ ರಾಜ್ಯ ಸರ್ಕಾರ ಕುಟುಂಬದ ಒಬ್ಬ ಸದಸ್ಯನಿಗೆ ಐದು ಕೆ.ಜಿ. ಜತೆಗೆ, ಇಷ್ಟೇ ಪ್ರಮಾಣದ ಆಹಾರ ಧಾನ್ಯವನ್ನು ಕೇಂದ್ರದಿಂದಲೂ ನೀಡಲಾಗುತ್ತಿದೆ. ದುಪ್ಪಟ್ಟು ರೇಷನ್ ಸಿಗುತ್ತಿರುವ ಕಾರಣ ಕಾರ್ಡ್​ದಾರರಿಗೆ ಒಂದಿಷ್ಟು ಧಾನ್ಯ ಕಡಿಮೆ ನೀಡಿದರೂ, ಯಾರೂ ಚಕಾರ ಎತ್ತುತ್ತಿಲ್ಲ. ಹೀಗಾಗಿ ಜಿಲ್ಲಾ ಉಪ ನಿರ್ದೇಶಕರು, ಶಿರಸ್ತೇದಾರ್, ಆಹಾರ ನಿರೀಕ್ಷಕರ ಹಂತದಲ್ಲಿ ಲಂಚದ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಆಹಾರ ಅಧಿಕಾರಿಗಳಿಗೆ ಸರ್ಕಾರವೇ ದೊಡ್ಡ ಮೊತ್ತದ ವೇತನ, ಭತ್ಯೆ ನಿಡುತ್ತಿರುವಾಗ ನ್ಯಾಯಬೆಲೆ ಅಂಗಡಿ ಮಾಲೀಕರ ಬಳಿ ಹಣ ಕೇಳುವಂತಿಲ್ಲ. ಈ ರೀತಿ ಹಣ ನೀಡದಂತೆ ಸಂಘದ ಸದಸ್ಯರಿಗೆ ಸೂಚಿಸಲಾಗಿದೆ. ತಪು್ಪ ಮಾಡದಿರುವಾಗ ಹಣ ನೀಡುವ ಪ್ರಶ್ನೆಯೇ ಇಲ್ಲ. ಈ ಕುರಿತು ಸರ್ಕಾರದ ಜತೆ ಚರ್ಚಿಸಲಾಗುವುದು.
|ಟಿ.ಕೃಷ್ಣಪ್ಪರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ
ವಲಸಿಗರ ಧಾನ್ಯವೇ ಗುರಿ:ಕಳೆದೊಂದು ವರ್ಷದಿಂದ ‘ಒಂದು ದೇಶ ಒಂದು ಕಾರ್ಡ್’ ಯೋಜನೆಯಡಿಯಲ್ಲಿ ಕಾರ್ಡ್​ದಾರ ತಾನು ವಾಸಿಸುವ ಯಾವುದೇ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾಗಿದೆ. ಇಂತಹ ಪ್ರತಿ ಕಾರ್ಡ್​ಗಳಿಂದ ನಾಲ್ಕೈದು ಕೆ.ಜಿ. ಧಾನ್ಯ ಕಡಿತ ಮಾಡಲಾಗುತ್ತಿದೆ. ಈ ಕಾರ್ಡ್​ದಾರರನ್ನು ಗುರುತಿಸಿ ಉಳಿಸಿಕೊಂಡ ಧಾನ್ಯವನ್ನು ನ್ಯಾಯಬೆಲೆ ಅಂಗಡಿಯವರು ಮಾರಾಟ ಮಾಡಿ ಹಫ್ತಾ ಹಣವಾಗಿ ಅಧಿಕಾರಿಗಳಿಗೆ ತಲುಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
