ಬೆಂಗಳೂರು:ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆರಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಪ್ರಥಮ ಸುತ್ತಿನ ಸಭೆ ನಡೆಸಿದ್ದು, ತಿಂಗಳಾಂತ್ಯಕ್ಕಾದರೂ ಸಂಭಾವ್ಯ ಪಟ್ಟಿಯನ್ನು ಅಂತಿಮಗೊಳಿಸಿ ದೆಹಲಿ ಕಳಿಸಲು ನಿರ್ಧರಿಸಿದೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಮ್ಮುಖದಲ್ಲಿ 57 ಪ್ರಮುಖರನ್ನೊಳಗೊಂಡ ಚುನಾವಣಾ ಸಮಿತಿ ಸಭೆಯಲ್ಲಿ 28 ಲೋಕಸಭಾ ಕ್ಷೇತ್ರದ ವೀಕ್ಷಕರು (28 ಸಚಿವರು) ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿ ಪ್ರಮುಖರಿಗೆ ಸಲ್ಲಿಸಿದರು. ಪ್ರತಿ ಕ್ಷೇತ್ರದಿಂದ ಮೂರು ಹೆಸರನ್ನು ಶಿಫಾರಸು ಮಾಡಲು ವೀಕ್ಷಕರಿಗೆ ಸೂಚನೆ ನೀಡಲಾಗಿತ್ತು. ಆ ಪ್ರಕಾರ ಅವರೆಲ್ಲ ಕ್ಷೇತ್ರದ ಪ್ರಮುಖರ ಜತೆ ಸಮಾಲೋಚನೆ ನಡೆಸಿ ಕೆಲವು ಹೆಸರಿನೊಂದಿಗೆ ಸಭೆಗೆ ಆಗಮಿಸಿದ್ದರು. ಒಂದು ಕ್ಷೇತ್ರಕ್ಕೆ ಒಂಬತ್ತು ಹೆಸರು ಪ್ರಸ್ತಾಪವಾಗಿದ್ದರೆ, ಮತ್ತೆ ಕೆಲವು ಕ್ಷೇತ್ರಗಳಿಗೆ ಸಲ್ಲಿಸಿದ ಹೆಸರುಗಳು ಪಕ್ಷದ ಸೂಚನೆ ಪಾಲನೆಗೆ ಸೀಮಿತವಾದಂತಿತ್ತು.
ಸಭೆಯಲ್ಲಿ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವನ್ನೂ ನೀಡಲಾಗಿತ್ತು. ಈ ನಡುವೆಯೇ, ಹಿರಿಯ ಮುಖಂಡರು ಅಸಮಾಧಾನವನ್ನೂ ಹೊರಹಾಕಿದ್ದಾರೆಂದು ಮೂಲಗಳು ತಿಳಿಸಿವೆ. ಸಚಿವರು ತಮ್ಮ ಆಪ್ತರು, ಹಿಂಬಾಲಕರ ಹೆಸರನ್ನು ಇಲ್ಲಿ ತಂದುಕೊಟ್ಟು ನಮ್ಮ ಅಭಿಪ್ರಾಯ ಕೇಳಿದರೆ ಏನು ಹೇಳುವುದು ಎಂದು ಅಸಮಾಧಾನವನ್ನೂ ಹೊರಹಾಕಿದೆಂದು ಗೊತ್ತಾಗಿದೆ. ಈ ಅಭಿಪ್ರಾಯದಿಂದ ಕೆಲವು ಸಚಿವರಿಗೆ ಇರಿಸುಮುರಿಸು ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಉಪಸ್ಥಿತರಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ರಣದೀಪ್ ಸುರ್ಜೆವಾಲ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಚುನಾವಣೆ ಸಮಿತಿ ಸಭೆ ನಡೆಯಿತು. ಕೇಂದ್ರ ಚುನಾವಣೆ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿ ಆಯ್ಕೆಗಾಗಿ ನೇಮಕ ಮಾಡಿದ್ದ ವೀಕ್ಷಕರು 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಹೆಸರು ಕೊಟ್ಟರು. ಶನಿವಾರ ಸಂಜೆಯೊಳಗೆ ಅಭ್ಯರ್ಥಿಗಳ ಕುರಿತು ವಿವರಣೆ ಕೊಡಲು ಸೂಚಿಸಲಾಗಿದೆ ಎಂದರು.
ಸಂಭಾವ್ಯ ಅಭ್ಯರ್ಥಿಗಳ ಕುರಿತು ಕ್ಷೇತ್ರವಾರು ಇನ್ನೊಮ್ಮೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬ್ಲಾಕ್, ಜಿಲ್ಲಾ ಘಟಕಗಳು ಹಾಗೂ ಶಾಸಕರು, ಪ್ರಮುಖರ ಅಭಿಪ್ರಾಯ ಕೇಳಿ ವರದಿ ಪಡೆದುಕೊಳ್ಳಲಾಗುತ್ತದೆ. ಸ್ಕ್ರೀನಿಂಗ್ ಕಮಿಟಿ ಮುಂದಿನ ಪ್ರಕ್ರಿಯೆ ನಡೆಸಲಿದೆ. ಸರ್ವೆ ತಂಡ ಜನಾಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಲಿದೆ. ತಿಂಗಳಾಂತ್ಯಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ದೆಹಲಿಗೆ ಪಟ್ಟಿ ಕಳಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಸಚಿವರ ಭವಿಷ್ಯ ಸ್ಕ್ರೀನಿಂಗ್ ಕಮಿಟಿ ಮುಂದೆ:ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಜವಾಬ್ದಾರಿಯನ್ನೂ ಸಚಿವರಿಗೆ ನೀಡಲಾಗಿದೆ. ಅವರೇ ಸೂಕ್ತ ಗೆಲ್ಲುವ ಅಭ್ಯರ್ಥಿಯನ್ನು ಶಿಫಾರಸು ಮಾಡಬೇಕು ಹಾಗೂ ಬಳಿಕ ಚುನಾವಣೆಗೆ ಇಡೀ ತಂಡವನ್ನು ಸಜ್ಜುಗೊಳಿಸಿ, ತಂತ್ರಗಾರಿಕೆ ರೂಪಿಸಿ, ಮನಪೂರ್ವಕವಾಗಿ ಕೆಲಸ ಮಾಡಬೇಕು ಎಂದು ಪಕ್ಷದ ಹೈಕಮಾಂಡ್ ಗುರಿ ನೀಡಿದೆ.
ಈ ನಡುವೆ ಪ್ರಸ್ತುತ ಸಂದರ್ಭದಲ್ಲಿ ಹಲವು ಕ್ಷೇತ್ರಗಳಲ್ಲಿ ಸಂಭಾವ್ಯ ಮೂರು ಅಭ್ಯರ್ಥಿಗಳಲ್ಲಿ ಗೆಲ್ಲಬಹುದಾದಂತಹ ಸಮರ್ಥ ಅಭ್ಯರ್ಥಿ ಕಾಣಸಿಕ್ಕಿಲ್ಲ. ಕೆಲವು ಕಡೆಗಳಲ್ಲಿ ಆಕಾಂಕ್ಷಿಗಳೇ ಮುಂದೆ ಬಂದಿಲ್ಲ. ಅಂತಹ ಕಡೆ ಪ್ರಸಿದ್ಧ ವ್ಯಕ್ತಿಗಳನ್ನು ಕಣಕ್ಕಿಳಿಸಲು ಪ್ರಯತ್ನಿಸಬೇಕು ಎಂದು ಗುರಿಯನ್ನೂ ಸಚಿವರಿಗೆ ನೀಡಲಾಗಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಸಂಭಾವ್ಯರು ಸೂಕ್ತವಲ್ಲ, ಸಚಿವರೇ ಕಣಕ್ಕಿಳಿದರೆ ಪೈಪೋಟಿ ಸಾಧ್ಯ ಎಂದು ವರದಿ ನೀಡಿದರೆ ಸಚಿವರನ್ನೇ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದು ದೆಹಲಿಯಲ್ಲಿ ನಡೆಯುವ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ.
ಮೋದಿಗೆ ಶಾಕ್ ನೀಡಲು ತಂತ್ರ:ಧರ್ಮ ನಿರಪೇಕ್ಷವಾಗಿರಬೇಕು ಎಂದು ಸಂವಿಧಾನ ಪೀಠಿಕೆಯಲ್ಲಿದೆ, ಆದರೂ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ವಿಚಾರ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಕಟ್ಟಿಹಾಕಲು ಕಾನೂನಿನಲ್ಲಿ ಅವಕಾಶವಿದೆ ಎಂಬ ಬಗ್ಗೆ ಚುನಾವಣೆ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ. ಮಹಾರಾಷ್ಟ್ರದಲ್ಲಿ ಇಂಹತದ್ದೇ ಪ್ರಕರಣದಲ್ಲಿ ಜನಪ್ರತಿನಿಧಿಯ ಸದಸ್ಯತ್ವ ಅನರ್ಹಗೊಂಡಿದೆ. ಈಗಲೂ ಅಂತಹದ್ದೇ ಅವಕಾಶ ಸಿಕ್ಕಿದೆ. ಅಲ್ಲದೇ ಚುನಾವಣೆಗೆ ಮುನ್ನ ಆರು ತಿಂಗಳ ಅವಧಿಯ ಬೆಳವಣಿಗೆ ಚುನಾವಣೆ ಆಯೋಗದ ಪರಿಧಿಗೆ ಬರಲಿದೆ. ಹೀಗಾಗಿ ಆಯೋಗಕ್ಕೆ ದೂರುಕೊಟ್ಟು ಕಾನೂನು ಹೋರಾಟ ಮಾಡುವ ಬಗ್ಗೆ ವಿಚಾರ ವಿನಿಮಯ ನಡೆದಿದೆ. ಈ ಬಗ್ಗೆ ವಿಸõತ ವಿವರಣೆ ನೀಡಿ, ದೆಹಲಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆಂದ ಸುರ್ಜೆವಾಲ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ದುಂಬಾಲು ಬಿದ್ದ ಆಕಾಂಕ್ಷಿಗಳು:ಲೋಕಸಭೆ ಸ್ಪರ್ಧಾಕಾಂಕ್ಷಿಗಳ ದಂಡು ಚುನಾವಣೆ ಸಮಿತಿ ಸಭೆ ನಡೆಯುತ್ತಿದ್ದ ಕೆಪಿಸಿಸಿ ಕಚೇರಿಯ ನೂತನ ಸಭಾಂಗಣದ ಮುಂಭಾಗ ಜಮಾಯಿಸಿತ್ತು. ತಮ್ಮ ಹೆಸರು ಚರ್ಚೆಗೆ ಬಂದಿತ್ತೇ? ದೆಹಲಿಯಿಂದ ಬಂದ ನಾಯಕರು ಏನು ಅಭಿಪ್ರಾಯ ವ್ಯಕ್ತಪಡಿಸಿದರು ಎಂಬ ಮಾಹಿತಿಗೆ ಆಕಾಂಕ್ಷಿಗಳು ತಡಕಾಡುತ್ತಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 14 =
Remember me
