ಬೆಂಗಳೂರು:ಮುಡಾ ನಿವೇಶನ ಹಂಚಿಕೆ ಹಗರಣದ ಕಾಮೋಡದಿಂದ ಹೊರಬರಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್​ಗೀಗ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿವೇಶನ ಹಂಚಿಕೆ ಪ್ರಕರಣ ಮತ್ತೊಂದು ಮಗ್ಗಲಮುಳ್ಳಾಗಿ ಕಾಡಲಾರಂಭಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್​ನಲ್ಲಿ ಸಿಎ ನಿವೇಶನ ಪಡೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸೈಟ್ ಹಂಚಿಕೆಯಲ್ಲಿ ಸ್ವಜನಪಕ್ಷಪಾತ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ರಾಜಭವನದ ಕದ ತಟ್ಟಿ ತನಿಖೆಗೆ ಆಗ್ರಹಿಸಿರುವುದು ಕೈಪಡೆಯನ್ನು ಕಂಗಾಲಾಗಿಸಿದೆ.
ಮುಡಾ ಹಗರಣದ ಚರ್ಚೆ ದೆಹಲಿಯಲ್ಲೂ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಸರಣಿ ಸವಾಲು ಎದುರಿಸಿ ಮುಜುಗರಕ್ಕೀಡಾಗಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ. ವ್ಯತಿರಿಕ್ತ ಬೆಳವಣಿಗೆ ಉಂಟಾದರೆ ಪಕ್ಷಕ್ಕೆ ಎದುರಾಗುವ ಮುಜುಗರ ತಪ್ಪಿಸಲು ಎಐಸಿಸಿ ಡ್ಯಾಮೇಜ್ ಕಂಟ್ರೋಲ್​ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇಂತಹ ಸಂದರ್ಭದಲ್ಲೇ ಸ್ವತಃ ಪಕ್ಷದ ಅಧ್ಯಕ್ಷರ ಕುಟುಂಬಕ್ಕೆ ಸೇರಿದ ಟ್ರಸ್ಟ್ ಭೂಮಿ ಖರೀದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಸಮರ್ಥನೆ:ಖರ್ಗೆ ಕುಟುಂಬಕ್ಕೆ ಕೊಟ್ಟಿರುವ ರೀತಿಯಲ್ಲೇ ಬೇರೆ ಸಂಸ್ಥೆಗಳಿಗೂ ನೀಡಿರುವ ಎಲ್ಲಾ ಜಮೀನುಗಳ ತನಿಖೆ ಮಾಡಿಸಬೇಕು ಎಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಇತ್ತ ಬಿಜೆಪಿ ನಡೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಪಾಳಯ, ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಸಿಎ ನಿವೇಶನ ಆಗಿರಲಿಲ್ಲವೇ? ಎಂಬುದು ಕಾಂಗ್ರೆಸ್​ನ ಪ್ರದಾನ ವಾದ. ಈ ವಿಚಾರದಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಸಂಗ್ರಾಮ:ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೋರಾಟ ನಡೆಸುವ ಮೂಲಕ ರಾಷ್ಟ್ರೀಯ ಚರ್ಚಾ ವಿಷಯ ಮಾಡಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಪ್ರತಿತಂತ್ರ ರೂಪಿಸಲು ಆರಂಭಿಸಿದೆ. ಕಾಂಗ್ರೆಸ್ ಸಂವಿಧಾನ ವಿರೋಧಿ ಹಾಗೂ ದಲಿತರ ವಿರೋಧಿ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮುಖ್ಯವಾಗಿ ಪರಿಶಿಷ್ಟರ ಉಪಯೋಜನೆ ಹಣ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದು, ಮುಡಾ ನಿವೇಶನ ಅಕ್ರಮ, ವಾಲ್ಮೀಕಿ ನಿಗದಲ್ಲಿನ ಅವ್ಯವಹಾರ ವಿಚಾರವನ್ನು ದೊಡ್ಡದು ಮಾಡಲು ಉದ್ದೇಶಿಸಿದೆ.
ಏನಿದು ವಿವಾದ?:ಕೆಐಎಡಿಬಿ ವಿಚಾರಕ್ಕೆ ಬಂದರೆ ಸಿಎ ನಿವೇಶನಕ್ಕೆ ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ದವು. ಈ ಪೈಕಿ 43 ಸಂಸ್ಥೆ ಆಯ್ಕೆ ಆಗಿದ್ದವು. ಅದರಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ಕೆಐಎಡಿಬಿಯಿಂದ ಐದು ಎಕರೆ ಭೂಮಿ ಹಂಚಿಕೆಯಾಗಿದೆ. ಈ ರೀತಿ ಭೂಮಿ ಹಂಚಿಕೆ ಆಗಿರುವುದರ ಹಿಂದೆ ಪ್ರಭಾವ ಕೆಲಸ ಮಾಡಿದೆ, ಇದೇ ಕಾರಣಕ್ಕೆ ತನಿಖೆಯಾಗಬೇಕು ಎಂಬುದು ಬಿಜೆಪಿಯ ಒತ್ತಾಯ.
ಟ್ರಸ್ಟ್​ಗೆ ನಿವೇಶನ ಹಂಚಿಕೆ ಸರಿಯಾಗಿದೆ. ಕಾನೂನು ಪ್ರಕಾರ ಮಂಜೂರಾಗಿದೆ. ಬಿಜೆಪಿಯವರು ಚಾಣಕ್ಯ ವಿವಿಗೇ ಹೇಗೆ ಭೂಮಿ ಮಂಜೂರು ಮಾಡಿದರು?
| ಸಿದ್ದರಾಮಯ್ಯ ಮುಖ್ಯಮಂತ್ರಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್​ಗೆ 5 ಎಕರೆ ಭೂಮಿ ನೀಡಿರುವ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಲೇಬೇಕು. ಇದನ್ನು ಗೌಪ್ಯವಾಗಿಟ್ಟಿರುವುದೇಕೆ? .
| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಟ್ರಸ್ಟ್​ಗೆ ನಿವೇಶನ ಕೊಟ್ಟಿದ್ದರಲ್ಲಿ ತಪ್ಪಿಲ್ಲ, ಬಿಜೆಪಿ ಸರ್ಕಾರದ ಕಾಲದಲ್ಲಿ ಎಷ್ಟು ಕೊಟ್ಟಿಲ್ಲ? ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ.
• ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಮುಡಾ ವಿಚಾರ ಬಂತು, ಈಗ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಬರುತ್ತಿದೆ. ಸಿಎ ನಿವೇಶನ ಖರೀದಿ ಮಾಡಿದ್ದಕ್ಕೆ ಇಷ್ಟೊಂದು ಹೊಟ್ಟೆಕಿಚ್ಚೇಕೆ…? ಅಕ್ರಮ ನಡೆದಿಲ್ಲ.
• ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಕುಟುಂಬಸ್ಥರ ಟ್ರಸ್ಟ್​ಗೆ ನಿವೇಶನ ಕೊಟ್ಟಿದ್ದನ್ನು ಪ್ರಶ್ನಿಸಿದರೆ, ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಖರ್ಗೆ ಕುಟುಂಬ ಏರೋಸ್ಪೇಸ್ ಉದ್ಯಮಗಳಾಗಿದ್ದು ಯಾವಾಗ?
• ಲೆಹರ್ ಸಿಂಗ್, ರಾಜ್ಯಸಭಾ ಸದಸ್ಯ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + 13 =
Remember me
