|ರಾಮಚಂದ್ರ ಹೆಗಡೆಕೊಂಡದಕುಳಿ
ಹುಡುಕಿದರೆ ಶ್ರೀರಾಮನಂತಹ ವ್ಯಕ್ತಿಯಾದರೂ ಸಿಗಬಹುದು; ಆಂಜನೇಯನಂತಹ ವ್ಯಕ್ತಿ ಮಾತ್ರ ಸಿಗಲಿಕ್ಕೆ ಸಾಧ್ಯವಿಲ್ಲ. ಹನುಮಂತನ ವ್ಯಕ್ತಿತ್ವದ ಆಳ-ಅಳತೆ ಅಳೆಯಲು ಕಷ್ಟ. ಹೇಗೆಂದರೆ, ಸಮುದ್ರ ಉಲ್ಲಂಘನೆ ಮಾಡುವಾಗ ಬೆಳೆದ ಅಳತೆ, ಶ್ರೀರಾಮನ ಎದುರು ಆಗುವ ಕುಬ್ಜತೆಯಂತೆ. ಎತ್ತರಕ್ಕೂ ಏರಬಲ್ಲ, ಆಳಕ್ಕೂ ಇಳಿಯಬಲ್ಲವ ಆಂಜನೇಯ. ಅಶಕ್ತನಾದವ ಸಾಧುವಾದರೆ, ರೋಗಗ್ರಸ್ತನಾದವ ದೈವಭಕ್ತನಾದರೆ, ಉಡುವುದಕ್ಕೆ ಬಟ್ಟೆಯಿಲ್ಲದವ ಬ್ರಹ್ಮಚಾರಿ ಯಾದರೆ ವಿಶೇಷ ಅಲ್ಲ. ಆದರೆ, ಹನುಮಂತ ಅಪ್ರತಿಮ ಬಲವಂತ, ಅಷ್ಟೇ ಸಾಧು. ಅವನಂತಹ ಪಂಡಿತರೇ ಮತ್ತೊಬ್ಬರಿಲ್ಲ, ಅಷ್ಟೇ ವಿನಯ. ಅವನಂತಹ ವಾಗ್ಮಿಗಳು ಮತ್ತೊಬ್ಬರಿಲ್ಲ; ಆದರೆ, ಅತ್ಯಂತ ಮಿತಭಾಷಿ. ದೈಹಿಕವಾಗಿ ಬಲಾಢ್ಯನಾಗಿದ್ದು, ಪ್ರಭುತ್ವವನ್ನು ಸಾಧಿಸುವ ಬಲವಿದ್ದರೂ ದಾಸಾನುದಾಸನಾದ ವಾಯುಪುತ್ರ.
ಎಲ್ಲರನ್ನೂ ಮೀರಬಲ್ಲ ಯೋಗ್ಯತೆ ಇದ್ದರೂ ‘ತಾನೊಬ್ಬ ದಾಸ’ ಎನ್ನುವ ವ್ಯಕ್ತಿತ್ವ ಪ್ರಪಂಚದಲ್ಲಿ ಯಾರಿಗಿದೆ? ಇದ್ದರೆ ಅದು ಅಖಂಡ ಭೂಮಂಡಲಕ್ಕೊಬ್ಬನೇ ಆದ ಮಾರುತಿಗೆ ಮಾತ್ರ. ಹನುಮಂತನಿಗೆ ಹನುಮಂತನೊಬ್ಬನೇ ಸಾಟಿ. ಇರುವ ಯಾವ ಪ್ರತಿಭೆಯನ್ನೂ ಪ್ರದರ್ಶನ ಮಾಡಲಿಲ್ಲ. ಸಮಯ, ಅನಿವಾರ್ಯತೆ ಎದುರಾದಾಗ ಪ್ರತಿಭೆ, ಬಲವನ್ನು ಬಚ್ಚಿಟ್ಟುಕೊಳ್ಳಲಿಲ್ಲ. ಈ ಸ್ವಭಾವ ಸಾಮಾನ್ಯರಿಗೆ ಬರಲು ಸಾಧ್ಯವಿಲ್ಲ. ‘ನರ’ನಲ್ಲಿ ಇದನ್ನು ಶೋಧಿಸಲಿಕ್ಕೂ ಆಗುವುದಿಲ್ಲ. ಮಾರುತಿ ‘ವಾನರ’ ಆಗಿದ್ದಕ್ಕೆ ಇದು ಬಂದಿರಲಿಕ್ಕೂ ಸಾಕು! ಇನ್ನು, ಹನುಮಂತ ಚೇಷ್ಟೆ ಮಾಡಿದ ಸಂದರ್ಭವಿಲ್ಲವೇ? ಇದೆ, ರಾವಣನ ಆಸ್ಥಾನಕ್ಕೆ ಹೋಗಬೇಕಾದ ವೇಳೆ ಬೇಕೆಂತಲೇ ಹುಡುಗಾಟಿಕೆ ಮಾಡಿದ್ದಾನೆ. ಹಣ್ಣು-ಹಂಪಲು ಕಿತ್ತು ಬಿಸಾಡುವುದು, ಮರ ಕೀಳುವುದು, ಹೊಡೆಯಲು ಬಂದವರಿಗೆ ಬಡಿಯುವುದು ಮಾಡಿದ್ದಾನೆ. ಈ ವೇಳೆಯಲ್ಲಿ ಲಂಕೆಯ ಲಕ್ಷೋಪಲಕ್ಷ ರಾಕ್ಷಸರನ್ನು ಸಂಹಾರ ಮಾಡಿದ್ದಾನೆ.
ಭಾವುಕನಾಗುವ ಆಂಜನೇಯನನ್ನು ಇಂದ್ರಜಿತು ಕಾಳಗದಲ್ಲಿ ಕಾಣಬಹುದು. ಇಂದ್ರಜಿತು ಮಾಯಾ ಸೀತೆಯನ್ನು ಕೊಲ್ಲುವ ಸಂದರ್ಭದಲ್ಲಿ ಜ್ಞಾನಿಯಾದ ಮಾರುತಿ, ‘ಮತಿವಂತ ಖಳನೇ ಕೇಳು, ಹೆಂಗೊಲೆಯಿದು ಹಿತವಲ್ಲ ಇದು ತಿಳಿದು ನೋಡು’, ‘ಓದಿ ನೋಡಿದೆ ಶಾಸ್ತ್ರವ… ಬ್ರಹ್ಮನ ವೇದ ಪುರಾಣ ಸ್ತೋತ್ರವ’ ಎಂಬುದಾಗಿ ಇಂದ್ರಜಿತುವಿಗೆ ಬುದ್ಧಿವಾದ ಹೇಳಿ, ಧರ್ಮಸೂಕ್ಷ್ಮವನ್ನು ತಿಳಿಸಿದ. ಅಲ್ಲಿ ಆಂಜನೇಯನ ಪಾಂಡಿತ್ಯದ ಅರಿವಾಗುತ್ತದೆ. ರಾಮಾಂಜನೇಯ ಪ್ರಸಂಗದಲ್ಲಿ ಭಕ್ತಿ, ಲಂಕಾದಹನದಲ್ಲಿ ಚೇಷ್ಟೆ, ಸಾಹಸ, ಶೌರ್ಯ, ಶರಸೇತು ಬಂಧನದಲ್ಲಿ ‘ರಾಮಾಯಣ ಕಾಲದಲ್ಲಿ ಕಟ್ಟಿದ ಸೇತುವೆಯ ಬಗೆಗಿನ ಹೆಮ್ಮೆ’ಯ ವಿಚಾರಗಳಿವೆ. ಸೌಗಂಧಿಕಾ ಪುಷ್ಪ ಹರಣ, ವೀರಮಣಿ ಕಾಳಗ, ಮಾರುತಿ ಪ್ರತಾಪ, ಶನಿ ಆಂಜನೇಯ, ಈ ಪ್ರಸಂಗಳಲ್ಲೂ ಸಾಹಸ, ಭಕ್ತಿ, ರಾಮದಾಸ ಎನ್ನುವ ಭಾವವೇ ಪ್ರಧಾನವಾಗಿ ಬರುತ್ತದೆ.
ರಾಮಾಯಣದಲ್ಲಿ ರಾಮನ ಮಾತು ಎಂದರೆ ಹೇಗೆ ಇದಂ ಇತ್ಥಂ; ಅಂತೆಯೇ ಹನುಮಂತನ ಮಾತಿಗೂ ಅಷ್ಟೇ ಪ್ರಾಮುಖ್ಯ, ಮೌಲ್ಯವಿದೆ. ಒಟ್ಟಾರೆಯ ಮಾತನ್ನು ಹನುಮಂತ ಆಡಲಿಲ್ಲ. ಹಾಗಾಗಿ ಕಲಾವಿದ ಆ ಪಾತ್ರ ಮಾಡುವಾಗ ಅಧ್ಯಯನ ಅಗತ್ಯ. ಹಾರಿಕೆ, ಜಾರಿಕೆಯ ಉತ್ತರ ಬರಬಾರದು; ನಿರ್ಣಯಾತ್ಮಕ ಉತ್ತರ ಮಾರುತಿಯಾದವನಿಂದ ಬರಬೇಕಾಗುತ್ತದೆ. ಹನುಮಂತನ ಪಾತ್ರ ಮಾಡಬೇಕಿದ್ದರೆ ಹನುಮನ ಜ್ಞಾನದ ಅನಿವಾರ್ಯತೆ ಇರುತ್ತದೆ. ಅವನ ಸೌಜನ್ಯ, ಪಾಂಡಿತ್ಯ, ವಾಕ್ಪಟುತ್ವವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾರೇ ಆಗಲಿ ಹನುಮಂತನ ಪಾತ್ರವನ್ನು ಮಾಡಬೇಕಿದ್ದರೆ, ಹನುಮಂತನ ಪೂರ್ಣ ವ್ಯಕ್ತಿತ್ವವನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು. ಒಂದೊಮ್ಮೆ ಆ ಪಾತ್ರ ನಿರ್ವಹಣೆ ಮಾಡುವವನಿಗೆ ‘ಆಂಜನೇಯ ಜ್ಞಾನದ ಸೆಲೆ’ಯ ಮಾತು ಆಡಲು ಬಾರದಿದ್ದರೆ, ಅಪಚಾರ ಮಾಡುವಂತಹ ಭಾಷೆ, ಜಾಳಾದ ಮಾತನ್ನು ಆಡಬಾರದು. ಅಲ್ಲದೆ, ಅಭಿನಯ ಮಾಡುವಾಗಲೂ ಅವನೊಬ್ಬ ‘ಕಪಿ’, ‘ಮಂಗ’ ಎನ್ನುವ ಭಾವದಲ್ಲಿ ಮಾಡಿದರೆ ಕಲಾವಿದನೂ ಸೋಲುತ್ತಾನೆ. ಹನುಮಂತನ ವ್ಯಕ್ತಿತ್ವ ಸಾಯುತ್ತದೆ.
ಹನುಮನ ದಾಸತ್ವ, ಗಾಂಭೀರ್ಯ, ಆದರ್ಶ, ಭಕ್ತಿ ಸಕಲ ರಲ್ಲೂ ಬರಲಿ. ಹನುಮ ಜಯಂತಿಯ ಈ ಶುಭವಸರದಲ್ಲಿ ಅಂಜನಾ ಪುತ್ರನ ನಾಮಸ್ಮರಣೆ ಎಲ್ಲೆಡೆ ನಡೆಯಲಿ ಎಂದು ಆಶಿಸುತ್ತೇನೆ.
(ಲೇಖಕರು ಯಕ್ಷಗಾನದ ಹಿರಿಯ ಕಲಾವಿದ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
