ಬೆಂಗಳೂರು:ಕರೊನಾ ನಿರ್ವಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದಲ್ಲಿ, ಮಹಾಮಾರಿ ಕೊನೆಯ ಘಟ್ಟದಲ್ಲಿ ಸಮುದಾಯ ಹಂತಕ್ಕೆ ವ್ಯಾಪಿಸಿರುವ ಅನುಮಾನ ವ್ಯಕ್ತವಾಗಿದೆ. ಆರಂಭದಲ್ಲಿ ಕನಿಷ್ಠ ಪ್ರಮಾಣದಲ್ಲಿದ್ದ ಸೋಂಕಿತರ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಕಳೆದ ಐದು ದಿನಗಳಿಂದ ದುಪ್ಪಟ್ಟಾಗುತ್ತಿರುವುದು ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿರುವ ಲಕ್ಷಣವೆಂದೇ ಆರೋಗ್ಯ ತಜ್ಞರು ವ್ಯಾಖ್ಯಾನಿಸಿದ್ದಾರೆ. ತಬ್ಲಿಘಿ ನಂಟು, ಅನ್ಯರಾಜ್ಯ, ವಿದೇಶಗಳಿಂದ ಬಂದವರ ನಂಟಿನ ಕಂಟಕದ ಘಟ್ಟಗಳನ್ನು ದಾಟಿದ್ದರೂ ಸೋಂಕಿತರೊಂದಿಗೆ ಸಂಪರ್ಕವೇ ಇಲ್ಲದ ವ್ಯಕ್ತಿಗಳಿಗೂ ಪಾಸಿಟಿವ್ ದೃಢಪಡುತ್ತಿರುವುದು ರಾಜಧಾನಿ ಬೆಂಗಳೂರನ್ನು ನಡುಗಿಸಿದೆ. ಈ ಮಹಾ ಸವಾಲಿನ ಅಗ್ನಿಪರೀಕ್ಷೆ ಎದುರಿಸುವುದಕ್ಕಾಗಿ ಸರ್ಕಾರ ಬೆಂಗಳೂರಿನ 4 ಪ್ರದೇಶಗಳನ್ನು ಸೀಲ್​ಡೌನ್ ಮಾಡುವ ಜತೆಗೆ ಮತ್ತಷ್ಟು ಕಠಿಣ ಕ್ರಮಕೈಗೊಂಡಿದೆ. ಮತ್ತೊಂದೆಡೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಂದೆಗೂ ಕರೊನಾ ದೃಢಪಟ್ಟಿರುವುದು ಪರಿಸ್ಥಿತಿಯ ಗಂಭೀರತೆ ಸಾರಿದೆ.
ಕಳೆದ ಕೆಲ ದಿನಗಳ ಬೆಳವಣಿಗೆ ಗಮನಿಸಿದರೆ ಸಮುದಾಯದ ಸೋಂಕು ದೃಢಪಡುತ್ತಿದೆ ಎಂದಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್-19ರ ಪಡೆಯ ಸದಸ್ಯ ಡಾ.ಸಿ.ಎನ್. ಮಂಜುನಾಥ್, ಸರ್ಕಾರ ಹಾಗೂ ಸಮಾಜ ಮುಂಜಾಗ್ರತೆ ವಹಿಸುವುದೊಂದೇ ಇದಕ್ಕೆ ಪರಿಹಾರ ಎಂದಿದ್ದಾರೆ. ಈವರೆಗೆ 5 ಲಕ್ಷ ಜನರಿಗೆ ಯಾದೃಚ್ಛಿಕ(ರ್ಯಾಂಡಂ) ಪರೀಕ್ಷೆ ಮಾಡಲಾಗಿದೆ.
ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿಯ ಒಟ್ಟು 75 ಪ್ರಯೋಗಾಲಯಗಳಿವೆ. ಪರಿಕರಗಳ ಕೊರತೆ ಇಲ್ಲ. ಒಡನಾಟ ಇಲ್ಲದೆ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರ್ಯಾಂಡಂ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ.
ಇನ್ನೂ 2 ತಿಂಗಳು:ಕರೊನಾ ಮೊದಲ ಪ್ರಕರಣ ಕಾಣಿಸಿಕೊಂಡ ದಿನದಿಂದ ಪೂರ್ಣ ತಹಬಂಧಿಗೆ ಬರಲು ಕನಿಷ್ಠ ಆರು ತಿಂಗಳು ಬೇಕೆನ್ನುವುದೊಂದು ಅಂದಾಜು. ದೇಶದಲ್ಲಿ ಕರೊನಾ ಕಾಣಿಸಿಕೊಂಡು 4 ತಿಂಗಳಾಗಿದೆ. ಮುಂದಿನ 2 ತಿಂಗಳು ವೈರಸ್ ಅರ್ಭಟ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ, ಮುಂದಿನ ದಿನಗಳು ನಿರ್ಣಾಯಕವಾಗಿವೆ. ಸೋಂಕಿನ ಲಕ್ಷಣವಿಲ್ಲದವರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯಕ್ಕೆ ನಾವೀಗ ವೈರಸ್​ನ 5ನೇ ಹಂತದಲ್ಲಿದ್ದೇವೆ. ಹೀಗಾಗಿ, ಜನರು ಬಹಳ ಎಚ್ಚರಿಕೆಯಿಂದಿರಬೇಕು. ನಿರ್ಲಕ್ಷ್ಯವಹಿಸಿದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ.
ಶೇ. 90 ಸರಳ ಚಿಕಿತ್ಸೆಯಿಂದಲೇ ವಾಸಿ:ಲಸಿಕೆ ಬರುವುದಕ್ಕೆ ಇನ್ನೂ 6 ತಿಂಗಳು ಬೇಕಾಗಬಹುದು. ಆದರೆ, ಕೆಲ ಔಷಧಗಳಿಂದ ಶೇ.90 ಗುಣಪಡಿಸಬಹುದು. ಈ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ. 90 ನ್ಯುಮೋನಿಯಾ ಹಾಗೂ ಶೇ.10 ಜನ ಹೃದಯ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಶೇ 5-6 ಸೋಂಕಿತರಿಗೆ ಐಸಿಯು ಹಾಗೂ ಶೇ. 2 ಸೋಂಕಿತರಿಗೆ ವೆಂಟಿಲೇಟರ್ ಬೇಕಾಗುತ್ತದೆ. ಕರೊನಾ ಪೀಡಿತರು ಹಾಗೂ ಶಂಕಿತರಲ್ಲಿ ಮಾನಸಿಕ ವೇದನೆ ಮತ್ತು ಖಿನ್ನತೆ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಜನರಿಗೆ ಕರೊನಾಕ್ಕಿಂತ ಭಯ ಹೆಚ್ಚಾಗುತ್ತಿದೆ. ಹೀಗಾಗಿ ಗುಣಮುಖರಾಗುತ್ತಿರುವ ಕರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಬೇಕು. ಈ ಕ್ರಮದಿಂದ ಕಾಯಿಲೆ ಬಗ್ಗೆ ಜನರಿಗೆ ಇರುವ ಆತಂಕ ದೂರವಾಗುತ್ತದೆ. ಈ ಕಾಯಿಲೆ ಬರುತ್ತದೆ ಎಂದು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚು ಭಯ ಪಡುವುದರಿಂದ ಹೃದಯ ಹಾಗೂ ಮಿದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಕರೊನಾಕ್ಕಿಂತ ಬೇರೆ ಕಾರಣಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಆತ್ಮವಿಶ್ವಾಸ ಹಾಗೂ ಮಾನಸಿಕ ಧೈರ್ಯ ತುಂಬುವ ಕೆಲಸವಾಗಬೇಕಿದೆ ಎಂದು ಮಂಜುನಾಥ್ ಸಲಹೆ ನೀಡಿದರು.
ಬಿಎಂಟಿಸಿಯಲ್ಲೂ ಕಂಪನ: ಬೆಂಗಳೂರಿನಲ್ಲಿ ನಿತ್ಯ 10 ಲಕ್ಷ ಜನರಿಗೆ ಸಾರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿಯಲ್ಲೂ ಕರೊನಾ ಕಂಪನ ಶುರುವಾಗಿದೆ. ಈಗಾಗಲೇ 12 ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ 2 ಸಾವಿರ ನೌಕರರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೆರಡು ದಿನದಲ್ಲಿ ವರದಿ ಬರಲಿದೆ.
ಸ್ವಯಂಪ್ರೇರಿತ ಲಾಕ್​ಡೌನ್:ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಜನರೇ ಸ್ಥಳೀಯ ಮಟ್ಟದಲ್ಲಿ ಸ್ವಯಂಪ್ರೇರಿತ ಲಾಕ್​ಡೌನ್ ಘೋಷಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ, ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಸ್ವಯಂ ಪ್ರೇರಿತವಾಗಿ ಜನರೇ ಲಾಕ್​ಡೌನ್ ವಿಧಿಸಿಕೊಂಡಿದ್ದಾರೆ. ಇದು ಪ್ರಶಂಸೆಗೂ ಪಾತ್ರವಾಗಿದೆ.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಗರಿಷ್ಠ ಮಟ್ಟಕ್ಕೆ ಮುಟ್ಟುವ ಸಾಧ್ಯತೆ ಇದೆ. ಮಾಸಾಂತ್ಯ ವೇಳೆಗೆ ರಾಜ್ಯದಲ್ಲಿ ಅಂದಾಜು 13 ಸಾವಿರ ಪ್ರಕರಣಗಳು ದಾಖಲಾಗಲಿವೆ.
| ಡಾ.ಸಿ.ಎನ್.ಮಂಜುನಾಥ್ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ
ಲಾಕ್​ಡೌನ್ ಸಡಿಲಿಕೆಯನ್ನು ಜನರು ದುರ್ಬಳಕೆ ಮಾಡಿಕೊಂಡರು. ಹೊರ ರಾಜ್ಯಗಳಿಂದ ಬಂದವರಿಂದ ಸೋಂಕು ಪ್ರಕರಣಗಳು ಹೆಚ್ಚಳವಾಗಿರುವುದು ಬೇಸರದ ಸಂಗತಿಯಾಗಿದೆ.
| ಬಿ.ಎಸ್.ಯಡಿಯೂರಪ್ಪ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
