ದೇಶದ ಆಂತರಿಕ ಹಾಗೂ ಬಾಹ್ಯಸುರಕ್ಷೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಸದೃಢವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಅಗಾಧವಾಗಿ ವೃದ್ಧಿಸಿದೆ. ಒಂದುಕಾಲದಲ್ಲಿ ಯಾವಾಗಲೂ ಪಾಕಿಸ್ತಾನದ ಪರ ನಿಲ್ಲುತ್ತಿದ್ದ ಸೌದಿ ಅರೇಬಿಯಾ ಮತ್ತು ಯುಎಇ ಇಂದು ಭಾರತದ ಪರವಾಗಿವೆ.  ಆರ್ಥಿಕತೆಯಲ್ಲಿ ಭಾರತದ ಶಕ್ತಿ ಅಗಾಧವಾಗಿ ಬೆಳೆದಿದೆ.
ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ, ಹದಿನೆಂಟನೆಯ ಲೋಕಸಭೆ ಆಯ್ಕೆಗೊಂಡಿದೆ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ನ್ಯಾಷನಲ್ ಡೆಮೋಕ್ರಾಟಿಕ್ ಅಲಯನ್ಸ್ (ಎನ್​ಡಿಎ) ನಿಚ್ಚಳ ಬಹುಮತ ಪಡೆದಿದೆ, ಅದರ ನಾಯಕ ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬೆಳವಣಿಗೆಗಳ ಪರಿಣಾಮ ದೇಶದ ಆಂತರಿಕ ರಾಜಕಾರಣ ಹಾಗೂ ಅರ್ಥವ್ಯವಸ್ಥೆ, ರಕ್ಷಣಾ ಹಾಗೂ ವಿದೇಶ ನೀತಿಗಳ ಮೇಲೆ ಏನಾಗಬಹುದು ಎನ್ನುವುದರ ಸ್ಥೂಲ ಗ್ರಹಿಕೆಗಳನ್ನು ಪಡೆದುಕೊಳ್ಳುವುದು ಅಗತ್ಯ. ಅದಕ್ಕಾಗಿನ ಒಂದು ಪುಟ್ಟ ಪ್ರಯತ್ನವನ್ನು ಕಳೆದ ಇಪ್ಪತ್ತು ವರ್ಷಗಳ ಚುನಾವಣಾ ರಾಜಕಾರಣ ಮತ್ತು ಕೇಂದ್ರದಲ್ಲಿ ಸ್ಥಾಪನೆಯಾದ ಸರ್ಕಾರಗಳ ನಿಲುವು, ನೀತಿ, ನಡೆಗಳ ಮೇಲೊಂದು ಪಕ್ಷಿನೋಟದಿಂದಲೇ ಆರಂಭಿಸೋಣ.
2004ರ ಚುನಾವಣೆಗಳಲ್ಲಿ ಮೊದಲ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ ಇತರ ಸಹಚಿಂತಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಬಲ್ಲ ಸಂಖ್ಯೆಯನ್ನು ಲೋಕಸಭೆಯಲ್ಲಿ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಪ್ರಧಾನಮಂತ್ರಿಯಾಗಬಯಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪ್ರಯತ್ನ ಸಾಂವಿಧಾನಿಕ ಕಾರಣಗಳಿಂದಾಗಿ ವಿಫಲಗೊಂಡು, ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಮೈತ್ರಿಕೂಟದ ಅಧ್ಯಕ್ಷಸ್ಥಾನಕ್ಕಷ್ಟೇ ಅವರು ತೃಪ್ತರಾಗಬೇಕಾಯಿತು. ಆದಾಗ್ಯೂ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ಕೂರಿಸುವುದರಲ್ಲಿ ಯಶಸ್ವಿಯಾದ ಸೋನಿಯಾ ತಮ್ಮ ನೇತೃತ್ವದಲ್ಲಿ ನ್ಯಾಷನಲ್ ಅಡ್ವೆ ೖಸರಿ ಕೌನ್ಸಿಲ್ ಎಂಬ ಸಂಸ್ಥೆಯನ್ನು ರಚಿಸಿಕೊಂಡರು. ಈ ಅಸಾಂವಿಧಾನಿಕ ಸಂಸ್ಥೆಯ ಮೇಲೆ ಸಂವಿಧಾನಬದ್ಧವಾದ ಪ್ರಧಾನಿ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ವ್ಯವಹಾರಗಳನ್ನು ನಿರ್ದೇಶಿಸುವ ಪ್ರಯತ್ನ ಮಾಡಿದ ಆಪಾದನೆಗಳಿವೆ. ಆ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸಂವಿಧಾನವಿರೋಧಿ ನಡೆಯಲ್ಲಿ ತೊಡಗಿದ್ದರು ಎನ್ನಲಾಗುತ್ತದೆ. ಇದು ನಿಜವೇಅ ಆಗಿದ್ದರೆ ದೇಶ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ ಇದು. ಯಾಕೆಂದರೆ ಸೋನಿಯಾ ಗಾಂಧಿ ಸೃಷ್ಟಿಸಿಕೊಂಡ ಆ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಅರಾಜಕತಾವಾದಿ ಜಾರ್ಜ್ ಸೊಓಸ್​ನ ಸಹಚರರು, ನಕ್ಸಲರು, ಕಾಂಗೆಸ್ ಪರವಾದ ಹಾಗೂ ಬಿಜೆಪಿ ವಿರೋಧಿಗಳಾದ ಪತ್ರಕರ್ತರು ಇದ್ದ ಕಾರಣ ಅದರ ನಿರ್ಣಯಗಳು ದೇಶ ಹಾಗೂ ಸಮಾಜದ ಹಿತಗಳ ಪರವಾಗಿರುವ ಸಾಧ್ಯತೆ ತೀರಾ ಕಡಿಮೆ. ಅಂದರೆ ಮನಮೋಹನ್ ಸಿಂಗ್ ಸರ್ಕಾರ ದುಷ್ಟಪ್ರಭಾವಕ್ಕೆ ಸಿಲುಕಿಹೋಗಿತ್ತು ಎನ್ನಲು ಅವಕಾಶವಿದೆ.
2004-14ರ ನಡುವಿನ ಆ ಹತ್ತು ವರ್ಷಗಳಲ್ಲಿ ದೇಶ ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿತು. ಅರ್ಥಶಾಸ್ತ್ರಜ್ಞ ಪ್ರಧಾನಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂದುಕೊಟ್ಟ ಹೆಸರು ‘ಜಗತ್ತಿನ ಐದು ಬಲಹೀನ ಅರ್ಥವ್ಯವಸ್ಥೆಗಳಲ್ಲಿ ಒಂದು’ ಎನ್ನುವುದಾಗಿತ್ತು! ಆಂತರಿಕ ಸ್ಥಿತಿಯ ಬಗ್ಗೆ ಹೇಳುವುದಾದರೆ ಬಡವಬಲ್ಲಿದರೆನ್ನದೆ ಎಲ್ಲರೂ ಬಳಸುವ ಬೇಳೆಕಾಳಿನ ಬೆಲೆ ಕಿಲೋಗ್ರಾಂಗೆ ಇನ್ನೂರು ರೂಪಾಯಿಗೇರಿದ್ದು ಬೆಲೆಯೇರಿಕೆ ಮಟ್ಟ ಹೇಗಿತ್ತು ಎನ್ನವುದರ ಒಂದು ನಿದರ್ಶನ. ಜತೆಗೆ, ಅಗಾಧ ಪ್ರಮಾಣದ ಭ್ರಷ್ಟಾಚಾರಗಳು ಮತ್ತೆ ಮತ್ತೆ ನಡೆದವು ಮತ್ತು ಅವುಗಳಲ್ಲಿ ಭಾಗಿಯಾದ ಆಪಾದನೆಗಳು ಯುಪಿಎ ಮಂತ್ರಿಗಳ ಮೇಲೇ ಇವೆ, ಕೆಲವರಿಗೆ ಶಿಕ್ಷೆಯೂ ಆಗಿದೆ.
ಯುಪಿಎ ಆವಧಿಯಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಮಾಲೆಗಾಂವ್, ಜೈಪುರ, ಅಹ್ಮದಾಬಾದ, ಶ್ರೀನಗರ ಸೇರಿದಂತೆ ಹಲವೆಡೆ ಭಯೋತ್ಪಾದಕ ದಾಳಿಗಳು ನಡೆದಿದ್ದವು. ಇವುಗಳ ನಿಗ್ರಹಕ್ಕೆ ಯುಪಿಎ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಂತೆ ಕಾಣುವುದಿಲ್ಲ. ಬದಲಾಗಿ ಯುಪಿಎ ನೇತಾರರು ಭಯೋತ್ಪಾದನೆಗೆ ಸಹಾಯವಾಗುವಂತೇ ನಡೆದುಕೊಂಡದ್ದಕ್ಕೆ ಉದಾಹರಣೆಗಳಿವೆ. ‘ನಾವು ಗಂಭೀರವಾಗಿ ಪರಿಣಿಸಬೇಕಾಗಿರುವುದು ಹಿಂದೂ ಭಯೋತ್ಪಾದನೆಯನ್ನು, ಲಷ್ಕರ್-ಎ-ತೋಯ್ಬಾವನ್ನಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2008ರ ಜುಲೈನಲ್ಲಿ ನವದೆಹಲಿಯಲ್ಲಿನ ಅಮೆರಿಕದ ರಾಯಭಾರಿಯವರಿಗೆ ಹೇಳಿದರೆ, ಅದಾದ ಮರುತಿಂಗಳು ದೆಹಲಿ ಸ್ಪೋಟಗಳಿಗೆ ಕಾರಣರೆನ್ನಲಾದ ಭಯೋತ್ಪಾದಕರನ್ನು ದೆಹಲಿ ಪೊಲೀಸರು ಜಾಮಿಯಾ ನಗರ್​ನಲ್ಲಿ ಕೊಂದಾಗ ಅವರಿಗಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಣ್ಣೀರು ಹಾಕಿದರು ಎಂದು ಅವರಿಗೆ ಹತ್ತಿರದ ಕಾಂಗ್ರೆಸ್ ನಾಯಕರೊಬ್ಬರೇ ಹೇಳಿದ್ದಾರೆ. ಮತ್ತೆರಡು ತಿಂಗಳು ಕಳೆದ ನಂತರ ಮುಂಬೈ ನಗರ ಪಾಕಿಸ್ತಾನಿ ಭಯೋತ್ಪಾದಕರಿಂದ ಅತಿ ದೊಡ್ಡ ಭಯೋತ್ಪಾದಕ ದಾಳಿಗೊಳಗಾದಾಗ ಅದನ್ನು ಹಿಂದೂಗಳ, ಆರ್​ಎಸ್​ಎಸ್​ನ ತಲೆಗೆ ಕಟ್ಟುವ ಕೆಲಸವನ್ನು ಕೆಲ ಕಾಂಗ್ರೆಸ್ ನಾಯಕರು ಮಾಡಿದರೆ, ‘ಪಾಕಿಸ್ತಾನದ ಮೇಲೆ ನಾವು ಪ್ರತೀಕಾರ ದಾಳಿ ನಡೆಸಿದರೆ ಇಲ್ಲಿನ ಮುಸ್ಲಿಮರು ಬೇಸರಗೊಳ್ಳುತ್ತಾರೆ’ ಎಂಬ ಅಭಿಪ್ರಾಯವನ್ನು ಪ್ರಧಾನಿ ಮನಮೋಹನ್ ಸಿಂಗ್ ತಳೆದರು. ನಿಜವಾದ ಪಾಕ್ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರನ್ನು ನಿರ್ಲಕ್ಷಿಸಿ, ‘ಕೇಸರಿ ಭಯೋತ್ಪಾದನೆ’ ಎಂಬ ಇಲ್ಲದ ಭಯೋತ್ಪಾದನೆಯನ್ನು ಸೃಷ್ಟಿಸಿ, ಭಯೋತ್ಪಾದಕ ದಾಳಿಗನ್ನು ಅಮಾಯಕ ಹಿಂದೂಗಳ ತಲೆಗೆ ಕಟ್ಟಿ ಶಿಕ್ಷಿಸುವ ಕೃತ್ಯಗಳನ್ನು ಪಿ. ಚಿದಂಬರಂ ಮತ್ತು ಸುಶೀಲ್ ಕುಮಾರ್ ಶಿಂಧೆ ನೇತೃತ್ವದ ಕೇಂದ್ರ ಗೃಹ ಇಲಾಖೆಗಳೇ ಮಾಡಿದ್ದೂ ನಡೆಯಿತು.
ಇನ್ನು ಬಾಹ್ಯ ಸುರಕ್ಷೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಯುಪಿಎ ಸರ್ಕಾರದ ನಿಷ್ಠೆಯೂ ಪ್ರಶ್ನಾರ್ಹ. ಯುಪಿಎ ಸರ್ಕಾರದಲ್ಲಿ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರುಗಳಿಗಿಂತಲೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತವರ ಮಕ್ಕಳೇ ಮುಖ್ಯರಾದವರು ಎಂದು ತೀರ್ವನಿಸಿದ ಚೀನಾ ಅವರನ್ನಷ್ಟೇ ವಿಶೇಷ ಅತಿಥಿಗಳಾಗಿ 2008ರ ಜುಲೈನಲ್ಲಿನ ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿ ಸತ್ಕರಿಸಿತು. ಮರುತಿಂಗಳು ರಾಹುಲ್ ಗಾಂಧಿ ಬೀಜಿಂಗ್​ನಲ್ಲಿ ತಮ್ಮ ಪಕ್ಷದ ಪರವಾಗಿ ಚೀನೀ ಕಮ್ಯೂನಿಸ್ಟ್ ಪಕ್ಷದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಆ ದಿನಗಳಲ್ಲಿ ಸೋನಿಯಾ ಗಾಂಧಿ ನೇತೃತ್ವದ ಎನ್​ಜಿಒ ರಾಜೀವ್ ಗಾಂಧಿ ಫೌಂಡೇಷನ್​ಗೆ ಚೀನೀ ಕಮ್ಯೂನಿಸ್ಟ್ ಪಕ್ಷ, ಚೀನೀ ಸರ್ಕಾರ ಹಾಗೂ ನವದೆಹಲಿಯಲ್ಲಿನ ಚೀನೀ ರಾಯಭಾರ ಕಚೇರಿಗಳಿಂದ ಹಣ ಹರಿದುಬಂತು. ಅದೇ ದಿನಗಳಲ್ಲಿ ಚೀನೀ ಸೇನೆ ನಮ್ಮ ಸುಮಾರು ಒಂದು ಸಾವಿರ ಚ.ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಂಡಿತು ಎಂದು ಅಂದು ನಮ್ಮ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಶ್ಯಾಮ್ ಸರನ್ ಹೇಳಿದ್ದಾರೆ.
ಇದು ಯುಪಿಎ ಆಡಳಿತಾವಧಿಯಲ್ಲಿ ದೇಶವಿದ್ದ ಸ್ಥಿತಿಯ ಒಂದು ಪುಟ್ಟ ಚಿತ್ರಣ. 2014ರ ನಂತರ ಇದು ಬದಲಾದದ್ದು ಕಾಣುತ್ತದೆ. 2014ರಲ್ಲಿ 1.7 ಟ್ರಿಲಿಯನ್ ಡಾಲರ್ ಮೊತ್ತದ ವಾರ್ಷಿಕ ಜಿಪಿಪಿಯೊಂದಿಗೆ ಜಾಗತಿಕವಾಗಿ ಹನ್ನೊಂದನೆಯ ಸ್ಥಾನದಲ್ಲಿದ್ದ ಭಾರತ ಇಂದು 3.8 ಟ್ರಿಲಿಯನ್ ಡಾಲರ್ ವಾರ್ಷಿಕ ಜಿಡಿಪಿಯೊಂದಿಗೆ ಜಗತ್ತಿನ ಐದನೆಯ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದುನಿಂತಿದೆ. ಇಂದು ಅಮೆರಿಕ, ಜಪಾನ್, ಯುಕೆ, ಚೀನಾ ಮುಂತಾದ ಆರ್ಥಿಕ ದಿಗ್ಗಜಗಳ ವಾರ್ಷಿಕ ಜಿಡಿಪಿ ವೇಗವಾಗಿ ಕುಸಿಯುತ್ತ ಸಾಗಿದ್ದರೆ ಭಾರತ ಮಾತ್ರ 7.8% ವಾರ್ಷಿಕ ಜಿಡಿಪಿಯೊಂದಿಗೆ ಅಗ್ರಸ್ಥಾನದಲ್ಲಿದೆ. ಹಣದುಬ್ಬರ ದಾಖಲೆಯ ಪ್ರಮಾಣದಲ್ಲಿ ಕುಸಿದು 5%ಗಿಂತ ಕೆಳಗಿದೆ. ಜತೆಗೆ, ದೇಶವು ಕೇಂದ್ರ ಸರ್ಕಾರದ ಸ್ತರದಲ್ಲಿ ಭ್ರಷ್ಟಾಚಾರದಿಂದ ಮುಕ್ತವಾಗಿದೆ. ಯುಪಿಎ ಆಡಳಿತಾವಧಿಯಲ್ಲಿ ಅಡಿಗಡಿಗೆ ಭಯೋತ್ಪಾದನಾ ದಾಳಿಗಳಿಗೆ ತುತ್ತಾಗುತ್ತಿದ್ದ ಭಾರತ ಬಿಜೆಪಿ ನೇತೃತ್ವದ ಎನ್​ಡಿಎ ಆಡಳಿತಾವಧಿಯಲ್ಲಿ ಆ ಕೆಡುಕಿನಿಂದ ಮುಕ್ತವಾಗಿದೆ. ದಶಕದ ಹಿಂದೆ ಕರ್ನಾಟಕದಿಂದ ಪಶ್ಚಿಮ ಬಂಗಾಳದವರೆಗೆ ಸುಮಾರು 135 ಜಿಲ್ಲೆಗಳಿಗೆ ವಿಸ್ತರಿಸಿದ್ದ ನಕ್ಸಲ್ ಪ್ರಭಾವಿತ ರೆಡ್ ಕಾರಿಡಾರ್ ಇಂದು ಅಗಾಧವಾಗಿ ಸಂಕುಚಿತಗೊಂಡು ಕೇವಲ ಛತ್ತೀಸ್​ಗಢನ ಕೆಲವು ಜಿಲ್ಲೆಗಳಿಗಷ್ಟೇ ಸೀಮಿತಗೊಂಡಿದೆ. ಕಾಶ್ಮೀರದಲ್ಲಿ ಪ್ರಾಯೋಜಿಸಿದ ಭಯೋತ್ಪಾದನಾ ಕೃತ್ಯಗಳಿಗಾಗಿ ಪಾಕಿಸ್ತಾನ ಶಿಕ್ಷೆಗೊಳಗಾಗಿದೆ.
ಚೀನಾ ಸಹ ದೊಕ್ಲಾಂ ಮತ್ತು ಗಲ್ವಾನ್​ನಲ್ಲಿ ಮುಖಭಂಗ ಅನುಭವಿಸಿದೆ. ಒಟ್ಟಾರೆಯಾಗಿ ದೇಶದ ಆಂತರಿಕ ಹಾಗೂ ಬಾಹ್ಯಸುರಕ್ಷೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಸದೃಢವಾಗಿದೆ. ಇವೆಲ್ಲವೂ ನೀಡುವ ಸ್ಪಷ್ಟ ಚಿತ್ರಣವೆಂದರೆ ದೇಶಕ್ಕೆ ಇಂದು ಐನ್​ಡಿಐಎ ಒಕ್ಕೂಟವೆಂಬ ಹೊಸ ಅವತಾರವೆತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎಗಿಂತಲೂ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಉಪಯುಕ್ತ ಎಂದು. ಜತೆಗೆ ಯುಪಿಎ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ಎಸಗಿದ ಅನಾಹುತಗಳನ್ನು ಸರಿಪಡಿಸಲು ಎನ್​ಡಿಎ ಸರ್ಕಾರಕ್ಕೆ ಇನ್ನೂ ಕನಿಷ್ಠ ಒಂದು ಆವಧಿಯ ಅಗತ್ಯವಿದೆ ಎನ್ನುವುದೂ ನಮಗೆ ಮನವರಿಕೆಯಾಗುತ್ತದೆ. ಅದರಂತೆ ಈ ಚುನಾವಣೆಗಳಲ್ಲಿ ಎನ್​ಡಿಎಗೆ ಮೂರನೆಯ ಆವಧಿ ದೊರೆತಿದೆ. ಆದರೆ ಎನ್​ಡಿಎ ಬಯಸಿದ್ದ ‘ಚಾರ್ ಸೌ ಪಾರ್’ ಗುರಿ ಮುಟ್ಟಲಾಗಿಲ್ಲ ಎನ್ನವುದು ಇಂದಿನ ವಾಸ್ತವ.
ಹಾಗೆ ನೋಡಿದರೆ ಚಾರ್ ಸೌ ಪಾರ್ ಕಡ್ಡಾಯ ಅಗತ್ಯವೇನೂ ಆಗಿರಲಿಲ್ಲ. ಆದರೆ ‘ತೀನ್ ಸೌ ಕೆ ನೀಚೇ’ ಸಹ ಆಗಬೇಕಾಗಿರಲಿಲ್ಲ. ಹಾಗಾಗಿದ್ದು ಯಾಕೆ? ಈ ಪ್ರಶ್ನೆಗೆ ನೇರ ಉತ್ತರವೆಂದರೆ, ಈ ದೇಶಕ್ಕೆ ತಾನು ಅಗತ್ಯ ಎನ್ನವುದನ್ನು ಬಿಜೆಪಿ ಅರಿಯಲಿಲ್ಲ. ಅರಿತಿದ್ದರೆ ಜೂನ್ 4ರಂದು ದೇಶ ಬೇರೆಯೇ ಆಗಿ ಜಗತ್ತಿನ ಮುಂದೆ ನಿಲ್ಲುತ್ತಿತ್ತು. ಹಾಗಾಗಲಿಲ್ಲವೇಕೆ ಎನ್ನುವುದನ್ನು ಕೆಲವೇ ಪದಗಳಲ್ಲಿ ಹೀಗೆ ಭಟ್ಟಿಯಿಳಿಸಬಹುದು- ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಅಥವಾ ಸಂಸ್ಥೆ ತನ್ನ ಎತ್ತರದ ಸ್ಥಾನವನ್ನು ಉಳಿಸಿಯೇಕೊಂಡಿರಲು ಹೂಡಬೇಕಾದ ತಂತ್ರವೆಂದರೆ, ವಿರೋಧಿಗಳೆಲ್ಲರೂ ಒಟ್ಟುಗೂಡದಂತೆ ಶತಾಯಗತಾಯ ತಡೆಯುವುದು. ಈ ಸುವರ್ಣಸೂತ್ರವನ್ನು ನರೇಂದ್ರ ಮೋದಿ ಮತ್ತು ಬಿಜೆಪಿ ನಿರ್ಲಕ್ಷಿಸಿದವು. ನಂತರ ಚುನಾವಣೆಗಳನ್ನು ಐಎನ್​ಡಿಐಎ ಒಕ್ಕೂಟ ತೆಗೆದುಕೊಂಡಷ್ಟು ಗಂಭೀರವಾಗಿ ಬಿಜೆಪಿ ತೆಗೆದುಕೊಳ್ಳಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲೇಬೇಕೆಂದು ನಿರ್ಧರಿಸಿದ ಕಾಂಗ್ರೆಸ್ ಅದಕ್ಕಾಗಿ ಎಲ್ಲ ತಂತ್ರಗಳನ್ನೂ ಪ್ರಯೋಗಿಸಿತು. ಸುಳ್ಳು ಆರೋಪಗಳ ಮೂಲಕ ಇದಿರಿನವರನ್ನು ಜನರಿಗೆ ಅಪ್ರಿಯವಾಗಿಸುವುದು, ಸುಳ್ಳು ಆಶ್ವಾಸನೆಗಳ ಮೂಲಕ ಜನರನ್ನು ಸೆಳೆಯುವುದು ಐನ್​ಡಿಐಎ ಒಕ್ಕೂಟ, ಮುಖ್ಯವಾಗಿ ಕಾಂಗ್ರೆಸ್ ವ್ಯಾಪಕವಾಗಿ ಬಳಸಿದ ತಂತ್ರಗಳು. ಈ ದೇಶದಲ್ಲಿ ಸುಳ್ಳು ಆರೋಪಗಳಿಗೆ ಶಿಕ್ಷೆಯಿಲ್ಲ, ಸುಳ್ಳು ಆಶ್ವಾಸನೆಗಳಿಗೆ ತಡೆ ಒಡ್ಡುವವರಿಲ್ಲ ಎಂಬ ಕಟುವಾಸ್ತವಗಳನ್ನು ಕಾಂಗ್ರೆಸ್ ಅರಿತಷ್ಟು ಇನ್ನಾರೂ ಅರಿತಿಲ್ಲ. ಬಿಜೆಪಿ ಅರಿಯುವುದಿರಲಿ, ಕಾಂಗ್ರೆಸ್ ಹೆಣೆದ ಬಲೆಯೊಳಗೇ ತಾನಾಗಿಯೇ ಕಾಲನ್ನೂ ಇಟ್ಟುಬಿಟ್ಟಿತು.
‘ಬಿಜೆಪಿ ಈಗ ಆರ್​ಎಸ್​ಎಸ್ ಮೇಲೆ ಅವಲಂಬಿತವಾಗಿಲ್ಲ’ ಎನ್ನುವ ಮಾತು ಪಕ್ಷದ ಉಚ್ಚ ನಾಯಕರಿಂದಲೇ ಬಂದದ್ದಕ್ಕೆ ಕಾರಣವೇನು? ‘ದೇಶದ ಎಲ್ಲ ಸಂಸ್ಥೆಗಳ ಮೇಲೆ ಆರ್​ಎಸ್​ಎಸ್ ಹಿಡಿತ ಸ್ಥಾಪಿಸಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಂಬಬೇಡಿ’ ಎಂದು ಮತದಾರರನ್ನು, ಮುಖ್ಯವಾಗಿ ಮುಸ್ಲಿಮರನ್ನು ನಂಬಿಸುವುದೇ? ಹಾಗೇ ಕಾಣುತ್ತದೆ. ಆದರೆ ಈ ಲೆಕ್ಕಾಚಾರ ಮುಖ್ಯವಾಗಿ ಎರಡು ಬಗೆಯಲ್ಲಿ ದೋಷಪೂರ್ಣ.
ಆರ್​ಎಸ್​ಎಸ್ ಆತ್ಮಗೌರವವಿಲ್ಲದ ಸಂಸ್ಥೆ ತಾವು ಏನು ಹೇಳಿದರೂ ಅದು ಸಹಿಸಿಕೊಳ್ಳುತ್ತದೆ, ಅದೆಂದೂ ನಮ್ಮನ್ನು ಕೈಬಿಡದು ಎನ್ನವುದು ಕೆಲವು ಬಿಜೆಪಿ ನಾಯಕರ ಲೆಕ್ಕಾಚಾರವಿದ್ದಿರಬಹುದು. ಭಾರತೀಯತೆ ಎಂಬ ಆತ್ಮಗೌರವವೇ ಸಂಘ ಪರಿವಾರದ ಮೂಲಮಂತ್ರ, ಅದರ ಮುಂದೆ ಬೇರೆಲ್ಲವೂ ನಗಣ್ಯ ಎನ್ನುವುದನ್ನು ಯಾರೂ ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಜತೆಗೆ, ಈ ದೇಶದ ಕೆಲವು ಸಮುದಾಯಗಳ ಕಿವಿ ನೆಟ್ಟಗಾಗುವುದು ‘ಸಬ್ ಕಾ ವಿಕಾಸ್’ ಎಂಬ ಮಾತು ಕೇಳಿದಾಗಷ್ಟೇ, ‘ಸಬ್ ಕಾ ಸಾಥ್’ ಎನ್ನವುದು ಅವುಗಳಿಗೆ ಅಗತ್ಯವೆನಿಸುವುದಿಲ್ಲ. ಇನ್ನು ‘ಸಬ್ ಕಾ ವಿಶ್ವಾಸ್’ ಎನ್ನವುದಂತೂ ಅವುಗಳಿಗೆ ಅರ್ಥವಾಗುವ ಸಾಧ್ಯತೆ ತೀರಾ ಕಡಿಮೆ. ದೇಶದ ವಾಸ್ತವ ಹೀಗಿರುವಾಗ ಆರ್​ಎಸ್​ಎಸ್ ಬಗ್ಗೆ ತೆಗಳಿಕೆಯ ಮಾತಾಡಿದರೆ ಒಂದು ವರ್ಗದ ಮತದ ಮಳೆಯೇ ತಮ್ಮ ಮೇಲೆ ಸುರಿಯುತ್ತದೆ ಎಂದು ಕೆಲವರು ನಂಬಿದಂತಿದೆ. ಬಿಜೆಪಿ ಇನ್ನಾದರೂ ವಾಸ್ತವವನ್ನು ಅರಿಯುವ ಪ್ರಯತ್ನದಲ್ಲಿ ತೊಡಗುವುದು ಒಳಿತು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಭಾರತದ 41ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ: ಬಿಗಿ ಭದ್ರತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eleven =
Remember me
