| ವಿಲಾಸ ಮೇಲಗಿರಿ ಬೆಂಗಳೂರು
ಜೆಡಿಎಸ್ ‘ಅಪ್ಪ-ಮಕ್ಕಳ ಪಕ್ಷ’ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಇನ್ನುಮುಂದೆ ತೆರೆ ಬೀಳಲಿದೆ. ಪಕ್ಷದ ನೀತಿ, ನಿರ್ಧಾರಗಳು, ಆಗು-ಹೋಗುಗಳ ಹೊಣೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಗಲಿಗೆ ಬಿದ್ದಿದ್ದು, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪಕ್ಷದ ಜವಾಬ್ದಾರಿಗಳಿಂದ ಕೊಂಚ ಹಿಂದೆ ಸರಿದಿದ್ದಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಪಕ್ಷಕ್ಕೆ ಸಾರ್ವಜನಿಕವಾಗಿ ದೊಡ್ಡ ಮುಜುಗರ ಉಂಟು ಮಾಡಿದ್ದವು. ಈ ಹಿನ್ನೆಲೆಯಲ್ಲಿ ದೇವೇಗೌಡರು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಪಕ್ಷದಲ್ಲಿ ಇವರ ಪಾತ್ರ ನಗಣ್ಯವೇನಲ್ಲ. ಏನೇ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಮುನ್ನ ಮಾರ್ಗದರ್ಶನ ನೀಡಲಿದ್ದಾರೆ. ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವುದು, ಬಿಡುವುದು ಕುಮಾರಸ್ವಾಮಿ ಹಾಗೂ ಪಕ್ಷದ ನಾಯಕರಿಗೆ ಸೇರಿರುತ್ತದೆ ಎನ್ನಲಾಗಿದೆ.
ಏಕೆ ಹೀಗೆ?:ಭೂ ಸುಧಾರಣಾ ಕಾಯ್ದೆ, ಮೇಲ್ಮನೆ ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ವಿಚಾರವಾಗಿ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಕುಮಾರಸ್ವಾಮಿ ಒಂದು ನಿರ್ಧಾರ ತೆಗೆದುಕೊಂಡರೆ, ದೇವೇಗೌಡರ ನಿಲುವು ಇನ್ನೊಂದಾಗಿತ್ತು. ಹಾಗಾಗಿ ಶಾಸಕರು ಹಾಗೂ ಪಕ್ಷದ ನಾಯಕರಲ್ಲಿ ದ್ವಂದ್ವ ಉಂಟಾಗಿತ್ತು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಜೆಡಿಎಸ್​ನ ಕೆಲವು ಶಾಸಕರು ಬೆಳಗ್ಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ, ಸಂಜೆ ವಿಧಾನಪರಿಷತ್ತಿನಲ್ಲಿ ವಿಧೇಯಕಕ್ಕೆ ಕೈ ಎತ್ತಿದ್ದು ಪಕ್ಷಕ್ಕೆ ಮುಳುವಾಗಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಅನ್ನು ಜಗ್ಗಾಡಿಸಿತ್ತು.
ಮೇಲ್ಮನೆ ಸಭಾಪತಿ ವಿರುದ್ಧದ ಅವಿಶ್ವಾಸ ವಿಚಾರದಲ್ಲೂ ಜೆಡಿಎಸ್ ದ್ವಂದ್ವ ನಿಲುವು ತಳೆದಿತ್ತು. ಬಿಜೆಪಿಯ ಅವಿಶ್ವಾಸ ಪ್ರಸ್ತಾವನೆ, ಕಲಾಪದಲ್ಲಿ ರಾದ್ಧಾಂತ ಸೃಷ್ಟಿಸಿದ ಮೇಲೆ ಜೆಡಿಎಸ್ ಸಭಾಪತಿ ವಿರುದ್ಧ ವಿಶ್ವಾಸ ಪ್ರಸ್ತಾವನೆ ಸಲ್ಲಿಸಿದ್ದು ಕೂಡ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾರಿ ಹೇಳಿತ್ತು.
ತಿಪ್ಪೆ ಸಾರಿಸುವ ಪರಿಸ್ಥಿತಿ ನಿರ್ವಣ:ಒಂದೆಡೆ ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿದ್ದು, ಇನ್ನೊಂದೆಡೆ ಬಿಜೆಪಿ ತಂದ ಬಿಲ್​ಗಳಿಗೆ ಹೌದಪ್ಪ ಎಂದು ತಲೆದೂಗಿದ್ದು ಪಕ್ಷದ ಶಾಸಕರನ್ನೇ ತಬ್ಬಿಬ್ಬುಗೊಳಿಸಿತ್ತು. ಕೊನೆಗೆ ಬಿಜೆಪಿಗೆ ವಿಷಯಾಧಾರಿತ ಬೆಂಬಲ ಎಂದು ತಿಪ್ಪೆ ಸಾರಿಸಿ ಸಮಾಧಾನಪಡಿಸುವ ಪರಿಸ್ಥಿತಿ ಬಂದೊದಗಿತು. ಇನ್ನೂ ಒಂದು ಹಂತ ಮುಂದೆ ಹೋದ ಜೆಡಿಎಸ್ ಸದನದ ಒಳಗಿನ ವಿಚಾರವೇ ಬೇರೆ, ಹೊರಗಿನ ವಿಚಾರವೇ ಬೇರೆ ಎಂದು ಸಮರ್ಥಿಸಿಕೊಳ್ಳುವ ಕೆಲಸ ನಡೆಯಿತು. ಜೆಡಿಎಸ್​ನ ಹಿರಿಯ ನಾಯಕ ಬಸವರಾಜ ಹೊರಟ್ಟಿ, ಮಾಜಿ ಪ್ರಧಾನಿ ದೇವೇಗೌಡರು ಒಪ್ಪಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾವು ಅವಿಶ್ವಾಸ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಅಂತೂ ಇಂತೂ ಈ ಎರಡೂ ಬೆಳವಣಿಗೆಗಳನ್ನು ಸಮರ್ಥಿಸಿಕೊಳ್ಳಲು ಜೆಡಿಎಸ್ ವರಿಷ್ಠರು ತಿಣುಕಾಡಬೇಕಾಯಿತು.
ಗೌಡರ ಕಾಲದ ರಾಜಕೀಯ ಈಗಿಲ್ಲ:ದೇವೇಗೌಡರ ಕಾಲದ ರಾಜಕೀಯ ಈಗ ನಡೆಯುವುದಿಲ್ಲ. ಅವರು ಇನ್ನು ಮುಂದೆ ನೀತಿ, ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಬಲವಂತ ಮಾಡುವುದಿಲ್ಲ ಎಂದು ಬಸವರಾಜ ಹೊರಟ್ಟಿ ಹೇಳಿರುವುದು ಪಕ್ಷದಲ್ಲಿ ಇನ್ನುಮುಂದೆ ದೇವೇಗೌಡರ ಪರ್ವ ಪೂರ್ಣಗೊಂಡು ಕುಮಾರಸ್ವಾಮಿ ಸಾರಥ್ಯ ವಹಿಸಲಿದ್ದಾರೆ ಎಂಬುದರ ಮುನ್ಸೂಚನೆಯೂ ಆಗಿತ್ತು.
ಗೌಡರಿಗೂ ಸಹ್ಯವಾಗದ ನಿಲುವು:ಬಿಜೆಪಿ ವಿಚಾರದಲ್ಲಿ ಕುಮಾರಸ್ವಾಮಿ ಮೃಧುಧೋರಣೆ ತಳೆದಿರುವುದು, ಬಿಜೆಪಿ ಮಂಡಿಸಿದ ವಿದೇಯಕಗಳಿಗೆ ಜೈಕಾರ ಹಾಕಿರುವುದು ಒಂದು ಹಂತದಲ್ಲಿ ದೇವೇಗೌಡರಿಗೂ ಸಹ್ಯವಾಗಿಲ್ಲ. ಹಾಗಾಗಿ ಭವಿಷ್ಯದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾದರೂ ಯಾವುದೇ ತೀರ್ವನ, ನೀತಿ-ನಿರ್ಧಾರಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ವಿಚಾರವಾಗಿ ಖುದ್ದು ಗೌಡರು ಕುಮಾರಸ್ವಾಮಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಎಚ್​ಡಿಕೆ ಸರ್ವ ಸ್ವತಂತ್ರ
ಪಕ್ಷದ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಪ್ರತಿ ಹೆಜ್ಜೆ ಹೆಜ್ಜೆಗೂ ದೇವೇಗೌಡರ ಕಡೆಗೆ ನೋಡಬೇಕಿದ್ದ ಕುಮಾರಸ್ವಾಮಿ, ಈಗ ಮುಕ್ತರಾಗಿದ್ದಾರೆ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ಮೈತ್ರಿ, ಪಕ್ಷ ಸಂಘಟನೆ, ಚುನಾವಣೆ ಟಿಕೆಟ್ ಹಂಚಿಕೆ ಸೇರಿ ಎಲ್ಲ ತೀರ್ವನಗಳೂ ಕುಮಾರಸ್ವಾಮಿ ಹೆಗಲೇರಿವೆ.
ನೊಂದುಕೊಂಡ ಎಚ್​ಡಿಡಿ
ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ತಾವು ದೇವೇಗೌಡರ ಮಾತು ಕೇಳಬಾರದಿತ್ತು. ತಂದೆಯ ಮನ ನೋಯಿಸಬಾರದು ಎಂದು ಒಪ್ಪಿಕೊಂಡೆ ಎಂದು ಎಚ್​ಡಿಕೆ ಅಸಮಾಧಾನ ಹೊರಹಾಕಿದ್ದರು. ಇದು ಕೂಡ ದೇವೇಗೌಡರ ಮನ ನೋಯಿಸಿದೆ. ಹಾಗಾಗಿ, ಪಕ್ಷದ ಮಹತ್ವದ ತೀರ್ವನಗಳ ವಿಚಾರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
