ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯ ಮೂಲತತ್ವ ಮತ್ತು ಆತ್ಮಾಭಿಮಾನದ ಗುರುತಿಸುವಿಕೆಗಾಗಿ ಆಚರಿಸಲಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಅವಳ ಹಕ್ಕುಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಅವಳಿಗೆ ಪ್ರೇರೇಪಿಸಿ, ಜಗತ್ತಿನಲ್ಲಿ ಸ್ವಾಭಿಮಾನ ಮತ್ತು ಘನತೆಯಿಂದ ಸ್ವತಂತ್ರವಾಗಿ ಬದುಕಲು ಮತ್ತು ಅವಳ ಧ್ವನಿ ಮತ್ತು ಅಭಿಪ್ರಾಯಕ್ಕೆ ಬೆಲೆ ಇದೆ ಎಂದು ಖಚಿತಪಡಿಸಿಕೊಳ್ಳಲು ಇದು ಒಂದು ಉತ್ತಮ ಸಂದರ್ಭವಾಗಿದೆ. ಅಂತೆಯೇ ಮಹಿಳೆಯರ ಒಟ್ಟಾರೆ ಸ್ಥಿತಿಗತಿಗಳನ್ನು ಅವಲೋಕನ ಮಾಡುವ ಸಂದರ್ಭವೂ ಇದಾಗಿದೆ. ಈ ಲೇಖನದ ಮೂಲಕ ಕರ್ನಾಟಕದ ಅಂಕಿ-ಅಂಶಗಳೊಂದಿಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ.
ಹಲವು ರಂಗಗಳಲ್ಲಿ ಅಸಮಾನತೆ:ಹೆಣ್ಣುಮಕ್ಕಳ ಶಿಕ್ಷಣದ ಸ್ಥಿತಿಗತಿ ನೋಡುವುದಾದರೆ, ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಶೇಕಡಾ 100ರಷ್ಟು ಹಾಜರಾತಿ ಹೊಂದಿದ್ದರೂ ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಹಾಜರಾತಿ ಶೇ. 32ಕ್ಕೆ ಸೀಮಿತವಾಗಿದೆ. ಇಂಜಿನಿಯರಿಂಗ್​ನಲ್ಲಿ ಶೇ. 32, ತಾಂತ್ರಿಕ ಶಿಕ್ಷಣದಲ್ಲಿ ಶೇ. 47 ಹಾಜರಾತಿಯು ಶಿಕ್ಷಣದಲ್ಲಿ ಲಿಂಗತ್ವದ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ. ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದ್ದರೂ, ಸಾಮಾಜಿಕವಾಗಿ ಕುಟುಂಬಗಳಲ್ಲಿ ಈಗಲೂ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡದಿರುವುದು ದುರಂತವೇ ಸರಿ.
ಕಾರ್ವಿುಕ ಚಿತ್ರಣ ನೋಡುವುದಾದರೆ, ಭಾರತದಲ್ಲಿ ಶೇಕಡಾ 58ರಷ್ಟು ಪುರುಷರ ಕಾರ್ವಿುಕ ಭಾಗವಹಿಸುವಿಕೆಯಿದ್ದರೆ, ಮಹಿಳೆಯರದ್ದು ಕೇವಲ ಶೇ. 25.1ರಷ್ಟಿದೆ. ಕರ್ನಾಟಕದಲ್ಲಿ ಶೇಕಡಾ 81 ಉದ್ಯಮಗಳು ಪುರುಷರ ಪ್ರಾಬಲ್ಯದಲ್ಲಿವೆ. ಅಂದರೆ, ಕೇವಲ ಶೇಕಡಾ 19ರಷ್ಟು ಮಹಿಳಾ ಉದ್ಯಮಿಗಳಿದ್ದಾರೆ.
ಆಸ್ತಿಯ ಒಡೆತನಕ್ಕೆ ಬಂದರೆ, ಕರ್ನಾಟಕದಲ್ಲಿ ಕೇವಲ ಶೇಕಡಾ 20ರಷ್ಟು ಹೆಣ್ಣುಮಕ್ಕಳು ಆಸ್ತಿಯ ಒಡೆಯರಾಗಿದ್ದಾರೆ. ಹೀಗಿರುವಾಗ, ಅವರಿಗೆ ಸಾಲ ಸೌಲಭ್ಯಗಳು ಸಿಗುವುದಾದರೂ ಹೇಗೆ? ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವುದಾದರೂ ಹೇಗೆ? ಇದೆಲ್ಲ ಸಾಧ್ಯವಾಗಬೇಕಾದರೆ, ಹದಿಹರೆಯದ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಪ್ರೇರೇಪಿಸಿ ಅವರನ್ನು ದೇಶದ ಆರ್ಥಿಕ ಪ್ರಗತಿಗೆ ಪಾಲುದಾರರನ್ನಾಗಿ ಮಾಡುವುದು ನಮ್ಮ ಮುಂದಿರುವ ಜವಾಬ್ದಾರಿಯಾಗಿದೆ.
ಹದಿಹರೆಯದವರಿಗೆ ಆರೋಗ್ಯ:ಈ ಸಂದರ್ಭದಲ್ಲಿ ತುರ್ತಾಗಿ ಮಾಡಬೇಕಾದ ಒಂದು ಮಹತ್ತರ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ನಾವು ಈ ಹೆಜ್ಜೆಯಲ್ಲಿ ಯಶಸ್ವಿಯಾದರೆ, ಮಹಿಳೆಯ ಹಲವು ಯಶಸ್ಸುಗಳಿಗೆ ಕೊಡುಗೆ ನೀಡುತ್ತೇವೆ ಎಂಬುದರಲ್ಲಿ ಸಂಶಯವಿಲ್ಲ.
ಮುಂದಿನ ಸಮಾಜವನ್ನು ನಿರ್ಮಾಣ ಮಾಡುವ 15-19 ವಯಸ್ಸಿನ ಶೇಕಡಾ 49ರಷ್ಟು ಹೆಣ್ಣುಮಕ್ಕಳು ಕರ್ನಾಟಕದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವುದು ಸಮಾಜದ ಅಪಾಯದ ಸ್ಥಿತಿಯನ್ನು ನೆನಪಿಸುತ್ತದೆ. 15-49 ವಯಸ್ಸಿನ ಶೇ. 19.6ರಷ್ಟು ರಕ್ತಹೀನತೆ ಹೊಂದಿರುವ ಪುರುಷರಿಗೆ ಹೋಲಿಸಿದರೆ, ಶೇ. 47.8ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿರುವುದು ಅವರಿಗಷ್ಟೇ ಅಪಾಯವನ್ನು ತಂದೊಡ್ಡುವುದು ಮಾತ್ರವಲ್ಲ, ಅವರಿಗೆ ಹುಟ್ಟುವ ಮಕ್ಕಳು ಕೂಡ ಕುಂಠಿತ ಬೆಳವಣಿಗೆ, ಕಡಿಮೆ ತೂಕ ಮತ್ತು ಕುಪೋಷಿತವಾಗಿ ಬೆಳೆಯುತ್ತಾರೆ. ಈಗಾಗಲೇ ನಮ್ಮಲ್ಲಿ ಶೇಕಡಾ 35.4ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯನ್ನು ಹೊಂದಿರುವುದು ಇದರ ಪರಿಣಾಮಗಳಿಗೆ ಒಂದು ಉದಾಹರಣೆಯಾಗಿದೆ! ಇದೊಂದು ವಿಷವರ್ತಲ ಇದ್ದ ಹಾಗೆ. ಹದಿಹರೆಯದಿಂದಲೇ ಹೆಣ್ಣುಮಗಳ ಪೌಷ್ಟಿಕತೆಯನ್ನು ಖಾತ್ರಿಗೊಳಿಸುವ ಮೂಲಕ ಈ ವಿಷವರ್ತಲದಿಂದ ಹೊರಬರಲು ಸಾಧ್ಯವಿದೆ. ಆರೋಗ್ಯಕರ ದೇಶದ ಭವಿಷ್ಯ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ಅವಲಂಬಿಸಿದೆ ಎಂಬ ಸತ್ಯವನ್ನು ನಾವು ಎಷ್ಟು ಬೇಗ ಅರಿತುಕೊಳ್ಳುತ್ತೇವೋ ಅಷ್ಟು ಬೇಗ ನಾವು ಜಾಗೃತರಾಗುತ್ತೇವೆ.
ಇರಲಿ ಎಚ್ಚರ:ಹಿಮೋಗ್ಲೋಬಿನ್ ರಕ್ತದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಾದರೆ, ರಕ್ತಹೀನತೆಗೆ ಒಳಗಾಗುತ್ತಾರೆ. ರಕ್ತಹೀನತೆಯನ್ನು ಗುರುತಿಸಬೇಕಾದರೆ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿಸಲೇಬೇಕು. ಇದಕ್ಕೆ ಯಾವ ಹಣ ನೀಡಬೇಕಾಗಿಲ್ಲ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇಲ್ಲವೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಕೊಳ್ಳಬಹುದು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಇದರ ಕಿಟ್ ಲಭ್ಯವಿದೆ. ಆದರೆ, ಇದರ ಬಗ್ಗೆ ಬಹಳ ಮಂದಿಗೆ ಅರಿವಿಲ್ಲದೆ ಇರುವುದು ಅಥವಾ ಅರಿವಿದ್ದರೂ ಈ ಕುರಿತು ಅಲಕ್ಷ್ಯ ಮಾಡುತ್ತಾರೆ. ಪುರುಷರಿಗಿಂತ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಿಗೆ ಇರುವುದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಮುಟ್ಟಿನಿಂದ ಪ್ರತಿ ತಿಂಗಳು ಸ್ವಲ್ಪ ರಕ್ತ ನಷ್ಟವಾಗುತ್ತದೆ. ಗರ್ಭಾವಸ್ಥೆಯಲ್ಲಿ ಬಹಳಷ್ಟು ಕಬ್ಬಿಣಾಂಶ ಬಳಕೆಯಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಹಿಳೆಯರು ಮನೆಯಲ್ಲಿ ಕೊನೆಯದಾಗಿ ಆಹಾರ ಸೇವಿಸುತ್ತಾರೆ. ಇಂದಿಗೂ ಮನೆಯ ಎಲ್ಲ ಪುರುಷರು ಊಟ ಮಾಡಿದ ಬಳಿಕ ಮಹಿಳೆಯರು ಊಟ ಮಾಡುವುದು ರೂಢಿಯಲ್ಲಿದೆ. ಹಾಗಾಗಿ ಇರುವ ಪೌಷ್ಟಿಕ ಆಹಾರ ಮೊದಲು ಪುರುಷರ ಪಾಲಾಗುತ್ತದೆ. ಅಳಿದುಳಿದ ಕೊನೆಯ ಆಹಾರದಲ್ಲಿ ಪೌಷ್ಟಿಕ ಅಂಶಗಳು ಉಳಿದಿರುವುದಿಲ್ಲ. ಇದು ಸಹ ಮಹಿಳೆಯರ ರಕ್ತಹೀನತೆಗೆ ಕಾರಣವಾಗುತ್ತದೆ.
ಪ್ರಮುಖವಾಗಿ ಹದಿಹರೆಯದವರಲ್ಲಿ ಅವರ ಬೆಳವಣಿಗೆ, ಸೋಂಕುಗಳಿಗೆ ಪ್ರತಿರೋಧ, ಅರಿವಿನ ಬೆಳವಣಿಗೆ ಮತ್ತು ಕೆಲಸದ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಗರ್ಭಿಣಿಯರಲ್ಲಿ ರಕ್ತಹೀನತೆಯು ಹೆರಿಗೆಯ ಸಮಯದಲ್ಲಿ ಮತ್ತು ನಂತರ ರಕ್ತಸ್ರಾವದಿಂದ ಬದುಕುಳಿಯುವ ಮಹಿಳೆಯರ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಭಾರತದಲ್ಲಿ ಶೇ. 20ರಷ್ಟು ತಾಯಿಯ ಮರಣಗಳು ರಕ್ತಹೀನತೆಯ ಕಾರಣದಿಂದಾಗಿರುತ್ತವೆ. ಕರ್ನಾಟಕದಲ್ಲಿ ಒಂದು ಲಕ್ಷಕ್ಕೆ 69 ತಾಯಂದಿರ ಮರಣವಾಗುತ್ತದೆ ಎಂದರೆ, ಅದಕ್ಕೆ ರಕ್ತಹೀನತೆಯೂ ಒಂದು ಕಾರಣ. ಹಾಗಾಗಿ ಹೆಣ್ಣುಮಕ್ಕಳ ಹಿಮೊಗ್ಲೋಬಿನನ್ನು ಹೆಚ್ಚು ಮಾಡುವುದು ಅತ್ಯಗತ್ಯ.
ಹೆಣ್ಣುಮಗಳತ್ತ ಇರಲಿ ಗಮನ:10 ರಿಂದ 19ರ ವಯಸ್ಸಿನ ಹದಿಹರೆಯವು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಜೀವನದ ಹಂತವಾಗಿದೆ. ಹದಿಹರೆಯದವರಿಗೆ ಬೇಗನೆ ದೈಹಿಕ ಮತ್ತು ಮಾನಸಿಕ ಅರಿವಿನ ಬೆಳವಣಿಗೆಯಾಗುತ್ತದೆ. ಇದು ಅವರು ಹೇಗೆ ಭಾವಿಸುತ್ತಾರೆ? ಯೋಚಿಸುತ್ತಾರೆ? ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ? ಮತ್ತು ಅವರ ಸುತ್ತಲಿರುವ ಪ್ರಪಂಚದೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹದಿಹರೆಯದ ಆರೋಗ್ಯವು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಹೆಣ್ಣುಮಕ್ಕಳಿಗೆ ಎಲ್ಲ ಹಂತದಲ್ಲಿ ಅದರಲ್ಲೂ ಮುಖ್ಯವಾಗಿ ಹದಿಹರೆಯ ಮತ್ತು ಗರ್ಭಾವಸ್ಥೆಯಲ್ಲಿ ಹೆಚ್ಚು ಪೌಷ್ಟಿಕ ಆಹಾರ ನೀಡುವುದು ಅತ್ಯವಶ್ಯಕ. ಹಸಿರು ಸೊಪ್ಪು, ಪ್ರೋಟಿನ್​ಯುುಕ್ತ ಆಹಾರ, ಧಾನ್ಯಗಳನ್ನು ನೀಡಬೇಕು. ಸ್ಥಳೀಯವಾಗಿ ಬೆಳೆಯುವ ಹಣ್ಣು ತರಕಾರಿಗಳನ್ನು ಯಥೇಚ್ಛವಾಗಿ ಬಳಸುವುದರಿಂದ ರಕ್ತಹೀನತೆ ಕಡಿಮೆ ಮಾಡಬಹುದು. ನುಗ್ಗೆ, ನುಗ್ಗೆ ಸೊಪ್ಪು, ನಿಂಬೆ ಇವು ಎಲ್ಲ ಕಾಲದಲ್ಲಿ, ಎಲ್ಲ ಕಡೆಗಳಲ್ಲೂ ಧಾರಾಳವಾಗಿ ದೊರೆಯುತ್ತವೆ. ಕಬ್ಬಿಣಾಂಶ, ಕಾಲ್ಸಿಯಂ ಹೊಂದಿರುವ ಕಬ್ಬಿನ ರಸವನ್ನು ಕುಡಿಯಲು ಹೆಚ್ಚು ಹಣ ವ್ಯಯಿಸಬೇಕಾಗಿಲ್ಲ. ಹದಿಹರೆಯದ ಹೆಣ್ಣುಮಕ್ಕಳನ್ನು ಪೌಷ್ಟಿಕರನ್ನಾಗಿ ಮಾಡುವ ಮೂಲಕ ಸದೃಢ ಸಮಾಜ ನಿರ್ವಣಕ್ಕೆ ಎಲ್ಲರೂ ಕೈಜೋಡಿಸಬೇಕು.
ರಕ್ತಹೀನತೆಯ ಗಂಭೀರತೆಯನ್ನು ಮನವರಿಕೆ ಮಾಡಿ ಒಂದು ಆಂದೋಲನದಂತೆ ಮಾಡಬೇಕಾಗಿದೆ. ಒಬ್ಬರು ಹತ್ತು ಮಂದಿಗೆ, ಹತ್ತು ಮಂದಿ ನೂರು ಮಂದಿ, ನೂರು ಮಂದಿ ಸಾವಿರವಾಗಿ, ಸಾವಿರ ಲಕ್ಷಗಳಾಗಿ, ಲಕ್ಷಗಳು ಕೋಟಿಗಳಾಗಿ ಒಂದು ಮಾನವ ಸರಪಳಿಯಾಗಿ ಕೈಜೋಡಿಸಿದಲ್ಲಿ, ಮುಂಬರುವ ಮಹಿಳಾ ದಿನಾಚರಣೆಗೆ ಎಲ್ಲ ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಮುಕ್ತಗೊಳ್ಳಲು ಸಾಧ್ಯವಿದೆ. ಆಗಲೇ ದಿನಾಚರಣೆಗೆ ನಿಜವಾದ ಅರ್ಥಬರುತ್ತದೆ. ಎಲ್ಲ ಮಹಿಳೆಯರು, ಹದಿಹರೆಯದ ಹೆಣ್ಣು ಮಕ್ಕಳು ಪೌಷ್ಟಿಕ ಆಹಾರವನ್ನು ಸೇವಿಸಲು ಪಣ ತೊಡೋಣ; ಹಿಮೋಗ್ಲೋಬಿನ್ ಪರೀಕ್ಷೆಯನ್ನು ನಿಯಮಿತವಾಗಿ ಮಾಡೋಣ; ಆರೋಗ್ಯವಂತರಾಗೋಣ; ಮಹಿಳಾ ದಿನವನ್ನು ಪ್ರತಿದಿನ ಆಚರಿಸೋಣ.
ಬೇಕು ಡಿಜಿಟಲ್ ಸೇರ್ಪಡೆ: ಡಿಜಿಟಲೀಕರಣವು ಸ್ತ್ರೀ ಸಬಲೀಕರಣಕ್ಕೆ ವಿವಿಧ ಅವಕಾಶಗಳನ್ನು ನೀಡುತ್ತದೆ. ಕೇವಲ ಶೇಕಡಾ 33.3ರಷ್ಟು ಮಹಿಳೆಯರು ಇಂಟರ್​ನೆಟ್ ಬಳಸುತ್ತಿದ್ದಾರೆ. ನಗರದಲ್ಲಿ ಶೇ. 51.8ರಷ್ಟು ಹೆಣ್ಣುಮಕ್ಕಳು ಮತ್ತು ಶೇ.24.6ರಷ್ಟು ಗ್ರಾಮೀಣ ಹೆಣ್ಣುಮಕ್ಕಳು ಇಂಟರ್​ನೆಟ್ ಬಳಸುತ್ತಿದ್ದಾರೆ. ಇಂಟರ್​ನೆಟ್ ಬಳಕೆಗೆ ಬೇಕಾಗುವ ಸ್ಮಾರ್ಟ್​ಫೋನ್​ಗಳನ್ನು ಕೊಂಡುಕೊಳ್ಳುವ ಸಶಕ್ತತೆ ಇಲ್ಲದಿರುವಾಗ ಆಕೆ ಬಳಕೆ ಮಾಡುವುದಾದರೂ ಹೇಗೆ? ಹಾಗಾಗಿ ಶಾಲಾ-ಕಾಲೇಜುಗಳಲ್ಲಿ ಡಿಜಿಟಲ್ ಶಿಕ್ಷಣ ಹಾಗೂ ಕೌಶಲವನ್ನು ಪ್ರೇರೇಪಿಸುವುದು ಅತ್ಯಗತ್ಯ.
(ಲೇಖಕರು ಹಿರಿಯ ಐಎಎಸ್ ಅಧಿಕಾರಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
