ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಏಕತೆಯಿರಬೇಕು. ಯೋಚಿಸಿದ್ದನ್ನೇ ಹೇಳಬೇಕು ಮತ್ತು ಹೇಳಿದ್ದನ್ನೇ ಮಾಡಬೇಕು. ಇದನ್ನೇ ತ್ರಿಕರಣ ಶುದ್ಧಿಯೆಂದು ಹೇಳುತ್ತಾರೆ. ಇಂತಹ ಶುದ್ಧಿಯಿದ್ದಾಗ ಮಾತ್ರ, ದಿವ್ಯತೆ ನಮ್ಮ ವ್ಯಕ್ತಿತ್ವದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ವ್ಯಕ್ತವಾಗುತ್ತದೆ. ಆದ್ದರಿಂದ ನಾವು ತ್ರಿಕರಣಶುದ್ಧಿಯನ್ನು ಸಾಧಿಸಲು ಪ್ರಯತ್ನಿಸಬೇಕು.
ಆರೋಗ್ಯ ಎಂಬ ಪದಕ್ಕೆ ‘ಸ್ವಾಸ್ಥ್ಯ’ವು ಸಮಾನಾರ್ಥಕ ಪದ. ‘ಸ್ವ’ ಎಂದರೆ ‘ಆತ್ಮ’ ಅಥವಾ ‘ತಾನು’ ಮತ್ತು ‘ಸ್ಥ’ ಎಂದರೆ ‘ನೆಲೆಸಿರುವುದು’ ಎಂದರ್ಥ. ಆದ್ದರಿಂದ ಆರೋಗ್ಯವಾಗಿರುವುದೆಂದರೆ ತನ್ನಲ್ಲಿ (ಅಥವಾ ಆತ್ಮನಲ್ಲಿ) ತಾನು ನೆಲೆಸಿರುವುದು. ಇದರ ಅರ್ಥವೇನೆಂಬುದನ್ನು ಈ ಲೇಖನದಲ್ಲಿ ಅರಿಯೋಣ.
ಸನಾತನ ಧರ್ಮದ ಪ್ರಕಾರ, ಮಾನವನು ದೇಹ, ಮನಸ್ಸು ಮತ್ತು ಚೈತನ್ಯಗಳ ಸಂಕೀರ್ಣ. ಸ್ಥೂಲ ದೇಹವು ಹಲವು ಅಂಗಾಂಗಗಳಿಂದ ಕೂಡಿದ್ದು, ಮನಸ್ಸು ಭಾವನೆ, ಯೋಚನೆ, ಸ್ಮರಣೆ ಮತ್ತು ವೈಯಕ್ತಿಕ ಅಸ್ಮಿತೆಗಳಿಂದ ಕೂಡಿದೆ. ಮನುಷ್ಯನ ಅತಿಸೂಕ್ಷ್ಮವಾದ ಮೂರನೆಯ ಭಾಗವೇ ಚೈತನ್ಯ ಅಥವಾ ಆತ್ಮ. ದೇಹ ಮತ್ತು ಮನಸ್ಸಿನ ಮೂಲಕ ಎಲ್ಲ ಅನುಭವಗಳನ್ನು ಅನುಭವಿಸುವ ಪ್ರಜ್ಞೆಯೇ ಆ ಚೈತನ್ಯವಾಗಿದೆ. ಕಂಪ್ಯೂಟರ್ ಭಾಷೆಯಲ್ಲಿ ಹೇಳಬೇಕೆಂದರೆ, ದೇಹವೆಂಬ ಯಂತ್ರಾಂಶವನ್ನು (Hardware), ಮನಸ್ಸೆಂಬ ತಂತ್ರಾಶವು (Software) ನಡೆಸುತ್ತದೆ. ಅದೆರಡೂ ಕಾರ್ಯನಿರ್ವಹಿಸಲು ಅಗತ್ಯವಾದ ವಿದ್ಯುತ್ ಶಕ್ತಿಯೇ ಆ ಚೈತನ್ಯವಾಗಿದೆ.
ಯಂತ್ರಾಂಶ, ತಂತ್ರಾಶ ಅಥವಾ ವಿದ್ಯುತ್ ಶಕ್ತಿಗಳ ಪೈಕಿ ಯಾವುದಾದರೊಂದರಲ್ಲಿ ಲೋಪವಿದ್ದರೂ ಗಣಕಯಂತ್ರ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅದೇ ರೀತಿ ನಮ್ಮ ಆರೋಗ್ಯ ಕೂಡ. ದೇಹ, ಮನಸ್ಸು ಅಥವಾ ಚೈತನ್ಯಗಳ ಪೈಕಿ ಯಾವುದಾದರೂ ಒಂದು, ಸಮತೋಲನದಲ್ಲಿಲ್ಲದಿದ್ದರೂ ನಾವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗೆ ನಾವು ದೇಹ, ಮನಸ್ಸು ಹಾಗೂ ಚೈತನ್ಯಗಳ ಸಮತೋಲನವನ್ನು ಕಳೆದುಕೊಂಡಾಗ, ನಮ್ಮಲ್ಲಿ ಅನಾರೋಗ್ಯ ಅಥವಾ ಅಸ್ವಸ್ಥತೆಯುಂಟಾಗುತ್ತದೆ. ಅಸ್ವಸ್ಥರಾಗುವುದೆಂದರೆ, ನಾವು ಸುಖವಾಗಿ ಇಲ್ಲದೆ ಇರುವುದು.
ನಾವು ಅಸ್ವಸ್ಥರಾಗಲು ಕಾರಣವೇನೆಂಬುದನ್ನು ವಿಚಾರ ಮಾಡೋಣ: ದೇಹದ ‘ತ್ರಿದೋಷ’ಗಳು: ದೇಹವು ಪಂಚಭೂತಗಳಿಂದ (ಆಕಾಶ, ವಾಯು, ಅಗ್ನಿ ಅಥವಾ ಉಷ್ಣಾಂಶ, ಜಲ ಮತ್ತು ಪೃಥ್ವಿ) ಆಗಿದೆ. ತಮ್ಮ ನಡುವೆ ಹಲವಾರು ಪರಿವರ್ತನೆ ಹಾಗೂ ಸಂಯೋಜನೆಗಳನ್ನು ಹೊಂದಿ ಕಾರ್ಯನಿರ್ವಹಿಸುವ ಪಂಚಭೂತಗಳು, ನಮ್ಮ ದೇಹದಲ್ಲಿ ಮೂರು ದೋಷಗಳಾಗಿ ವ್ಯಕ್ತಗೊಳ್ಳುತ್ತವೆ ವಾತ (ವಾಯುವಿನ ಅಂಶ), ಪಿತ್ತ (ಅಗ್ನಿಯ ಅಂಶ), ಮತ್ತು ಕಫ (ನೀರಿನ ಅಂಶ). ಈ ಮೂರು ಅಂಶಗಳ ಅಸಮತೋಲನವೇ ಅನಾರೋಗ್ಯಕ್ಕೆ ಕಾರಣವೆಂದು ಭಾರತೀಯ ಪ್ರಾಚೀನ ಆರೋಗ್ಯ ವಿಜ್ಞಾನವಾದ ಆಯುರ್ವೆದವು ತಿಳಿಸುತ್ತದೆ. ಪಂಚಭೂತಗಳ ಪೈಕಿ ಇನ್ನೆರಡು ಅಂಶಗಳಾದ ಆಕಾಶ ಮತ್ತು ಪೃಥ್ವಿಗಳು, ನಮ್ಮ ದೇಹದ ಎಲ್ಲ ಭಾಗಗಳಲ್ಲಿ ಅಂತರ್ಗತವಾಗಿವೆ. ಸೂಕ್ತ ಆಹಾರ(diet) ಹಾಗೂ ಪಥ್ಯಗಳ (medicine) ಮೂಲಕ ಮೇಲಿನ ಮೂರು ದೋಷಗಳನ್ನು ಸಮತೋಲನದಲ್ಲಿಟ್ಟುಕೊಳ್ಳುವ ವಿಧಾನವನ್ನು ಆಯುರ್ವೆದ ವಿಜ್ಞಾನವು ನಮಗೆ ತಿಳಿಸುತ್ತದೆ.
ಅಲ್ಲದೆ, ನಮ್ಮ ದೇಹವು ಸಪ್ತ ಧಾತುಗಳಾದ ರಸ (plasma), ರಕ್ತ (blood), ಮಾಂಸ (muscle), ಮೇಧ (fat), ಅಸ್ಥಿ (bone), ಮಜ್ಜ(bone marrow) ಮತ್ತು ಶುಕ್ಲಗಳಿಂದ (semen) ಕೂಡಿದೆ. ನಮ್ಮ ದೇಹವು ಆರೋಗ್ಯವಾಗಿರಬೇಕಾದರೆ, ಈ ಸಪ್ತಧಾತುಗಳು ಸರಿಯಾದ ಸ್ಥಿತಿಯಲ್ಲಿರಬೇಕು. ಜೊತೆಗೆ, ದೇಹದ ಕಲ್ಮಷಗಳು ಮಲ-ಮೂತ್ರಗಳ ರೂಪದಲ್ಲಿ ಸರಿಯಾಗಿ ವಿಸರ್ಜನೆಯಾಗಬೇಕು. ಇದನ್ನು ಸಾಧಿಸುವ ವಿಧಾನವನ್ನು ಭಗವಾನ್ ಶ್ರೀಕೃಷ್ಣನು ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು |ಯುಕ್ತ ಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ || (6. 17)
‘ಯುಕ್ತ ಅಥವಾ ಹಿತ-ಮಿತವಾದ ಆಹಾರ-ವಿಹಾರ, ಸಮತೋಲಿತ ಕರ್ಮ ಹಾಗೂ ನಿದ್ರೆಗಳ ಅಭ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರಿಗೆ ಯೋಗವು ದುಃಖವನ್ನು ಪರಿಹರಿಸುತ್ತದೆ’. ಎಂದರೆ, ಯಾವುದೂ ಅತಿಯಾಗದೆ, ಹಿತ-ಮಿತವಾಗಿರುವ, ಮಧ್ಯಮಾರ್ಗದ ಜೀವನಶೈಲಿ ನಮ್ಮದಾಗಬೇಕು.
ಇಂದು ನಾವು ಸುತ್ತಮುತ್ತ ಗಮನಿಸಿದಾಗ, ಸಾಮಾನ್ಯವಾಗಿ ಕಾಣಸಿಗುವ ರೋಗಗಳೆಂದರೆ, ವಿಪರೀತ ಅಥವಾ ಅತಿರೇಕ ಜೀವನಶೈಲಿಗೆ ಸಂಬಂಧಿಸಿದ ಅಸಾಂಕ್ರಾಮಿಕ ಕಾಯಿಲೆಗಳಾದ ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಇತ್ಯಾದಿ. ಅತಿರೇಕ ಜೀವನಶೈಲಿ ಮತ್ತು ಅಸಮತೋಲಿತ ಆಹಾರಗಳು ಅನಾರೋಗ್ಯಕ್ಕೆ ಆಹ್ವಾನವಿದ್ದಂತೆ! ಆದ್ದರಿಂದ, ಹಿತ-ಮಿತವಾದ ಆಹಾರ ಹಾಗೂ ಉತ್ತಮ ಜೀವನಶೈಲಿಗಳೇ ಆರೋಗ್ಯಕರ ಜೀವನದ ರಹಸ್ಯವಾಗಿವೆ.
ಮನಸ್ಸು ಮತ್ತು ‘ತ್ರಿಗುಣ’ಗಳು: ನಮ್ಮ ಭೂತ ಹಾಗೂ ವರ್ತಮಾನ ಕಾಲಗಳ ಆಲೋಚನೆಗಳ ಒಟ್ಟು ಸಂಗ್ರಹವೇ ಮನಸ್ಸು. ನಮ್ಮ ಆಲೋಚನೆಗಳನ್ನು (ಅಥವಾ ವೃತ್ತಿಗಳನ್ನು) ಕಾರ್ಯರೂಪಕ್ಕೆ ತಂದಾಗ, ಅವು ನಮ್ಮ ಸಂಸ್ಕಾರಗಳಾಗುತ್ತವೆ. ಸಂಸ್ಕಾರಗಳ ಸತತ ಅಭ್ಯಾಸವೇ ಕಾಲಕ್ರಮೇಣ ನಮ್ಮ ಸ್ವಭಾವವಾಗುತ್ತದೆ. ಈ ಸ್ವಭಾವ ಅಥವಾ ಗುಣಗಳನ್ನು, ಭಗವದ್ಗೀತೆ ಮೂರು ವಿಭಾಗಗಳಾಗಿ ವಿಂಗಡಿಸಿದೆ (ಗುಣತ್ರಯ ವಿಭಾಗ ಯೋಗ) -ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ. ಶುದ್ಧ ಹಾಗೂ ಉದಾತ್ತ ಗುಣಗಳಾದ ಸಂತೋಷ, ಕರುಣೆ, ನಿಸ್ವಾರ್ಥ ಪ್ರೇಮ ಹಾಗೂ ದಾನ ಇತ್ಯಾದಿಗಳು ಸಾತ್ವಿಕ ಗುಣಗಳಾದರೆ, ದುರಾಸೆ, ಕ್ರೋಧ, ಲೋಭ, ಸ್ವಾರ್ಥಗಳಂತಹ ಗುಣಗಳು ರಾಜಸಿಕ ಹಾಗೂ ಆಲಸ್ಯ, ಕ್ರೌರ್ಯ ಮತ್ತು ವಿಳಂಬ ಪ್ರಕೃತಿ ಇತ್ಯಾದಿಗಳು ತಾಮಸಿಕ ಗುಣಗಳಾಗಿವೆ. ನಾವು ಪ್ರಪಂಚದಲ್ಲಿ ಕ್ರಿಯಾಶೀಲರಾಗಿರಲು ಈ ಮೂರೂ ಗುಣಗಳನ್ನು ಹೊಂದಿರಬೇಕಾಗುತ್ತದೆ. ಉದಾಹರಣೆಗೆ, ದುಡಿಮೆಯಿಂದ ಬಳಲಿದ ದೇಹವನ್ನು ಪುನಶ್ಚೇತನಗೊಳಿಸಲು ವಿಶ್ರಾಂತಿ-ನಿದ್ರೆಗಳ (ತಮಸ್ಸಿನ) ಅಗತ್ಯವಿದೆ. ಅಂತೆಯೇ ನಮ್ಮ ದೈನಂದಿನ ಕರ್ತವ್ಯಗಳನ್ನು ಮತ್ತು ವಹಿಸಿದ ಕಾರ್ಯಗಳನ್ನು ನಿರ್ವಹಿಸಲು ರಜೋಗುಣದ ಅಗತ್ಯವಿದೆ. ಅಲ್ಲದೆ ನಾವು ಮಾಡುವ ಪ್ರತಿ ಕಾರ್ಯದ ಹಿನ್ನೆಲೆಯಲ್ಲಿ ಪರಿಶುದ್ಧ ಹಾಗೂ ಉದಾತ್ತ ಸಾತ್ವಿಕ ಭಾವನೆಗಳನ್ನು ಹೊಂದಿರುವುದು ಅತ್ಯಗತ್ಯವಾಗಿದೆ.
ಆದ್ದರಿಂದ ಈ ಮೂರೂ ಗುಣಗಳ ಸಮತೋಲನವೇ ಆರೋಗ್ಯಪೂರ್ಣ ಮನಸ್ಸನ್ನು ರೂಪಿಸುತ್ತದೆ. ಆರೋಗ್ಯಕರ ದೇಹವು ಪೂರ್ಣ ಆರೋಗ್ಯದ ಮೊದಲ ಅಂಶವಾದರೆ, ಆರೋಗ್ಯಕರ ಮನಸ್ಸು ಅದರ ಎರಡನೆಯ ಅಂಶವಾಗಿದೆ. ಅಸಮತೋಲಿತ ಅಥವಾ ಅನಾರೋಗ್ಯಕರ ಮನಸ್ಸಿನಿಂದ ಉದ್ಭವವಾಗುವ ರೋಗಗಳಿಗೆ ಪರಿಹಾರವನ್ನು, ಪತಂಜಲಿ ಮಹಾಮುನಿಯು, ತನ್ನ ಯೋಗಸೂತ್ರದಲ್ಲಿರುವ ಅಷ್ಟಾಂಗ ಯೋಗದಲ್ಲಿ ನೀಡಿದ್ದಾನೆ. ‘ಯೋಗಃ ಚಿತ್ತವೃತ್ತಿ ನಿರೋಧಃ (1. 2)- ಮನಸ್ಸಿನ ಏರಿಳಿತಗಳ ನಿಯಂತ್ರಣವೇ ಯೋಗ’. ಮನಸ್ಸಿನ ಯೋಚನೆ ಮತ್ತು ಭಾವನೆಗಳನ್ನು ನಿಯಂತ್ರಿಸಲು ಯೋಗವೇ ಸಾಧನ.
ಸಂಶೋಧನೆಯ ಪ್ರಕಾರ, ಇಂದು ಪ್ರಪಂಚದ ಏಳು ಜನರ ಪೈಕಿ ಒಬ್ಬರು, ಒಂದಲ್ಲ ಒಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಂತೂ, ಮಾನಸಿಕ ದೌರ್ಬಲ್ಯದಿಂದಾಗಿ, ಯುವಕರಲ್ಲಿ ಆತ್ಮಹತ್ಯೆ ಹಾಗೂ ಸ್ವಯಂ-ಹಾನಿಗಳ ಪ್ರವೃತ್ತಿ ಬೆಳೆಯುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅವರ ಅನಿಯಂತ್ರಿತ ಹಾಗೂ ಕೀಳುಮಟ್ಟದ ಆಲೋಚನೆಗಳು ಹಾಗೂ ಭಾವನೆಗಳು. ಅಷ್ಟಾಂಗ ಯೋಗದ ಒಂದು ಅಂಗವಾದ ‘ಧ್ಯಾನ’ದ ಅಭ್ಯಾಸವು, ಅವರಲ್ಲಿ ಬೇರೂರಿದ ಅನಗತ್ಯ ಆಲೋಚನೆ ಹಾಗೂ ಪ್ರವೃತ್ತಿಗಳನ್ನು ನಿಯಂತ್ರಿಸಿ, ಕಾಲಕ್ರಮೇಣ ತೊಡೆದು ಹಾಕಲು ಸಹಾಯ ಮಾಡುತ್ತದೆ.
ಆತ್ಮಚೈತನ್ಯ ಮತ್ತು ಮೂರು ಉಪಕರಣಗಳು- ‘ತ್ರಿಕರಣ’: ಆತ್ಮಚೈತನ್ಯವು ನಮ್ಮಲ್ಲಿರುವ ದಿವ್ಯತೆಯ ಅಂಶ. ತ್ರಿಕರಣಗಳೆಂದರೆ, ಮನಸ್ಸು (ಆಲೋಚನೆ), ವಾಕ್ಕು (ಮಾತು) ಹಾಗೂ ಕರ್ಮ (ಕ್ರಿಯೆ). ಆತ್ಮಚೈತನ್ಯವು ನಮ್ಮ ವ್ಯಕ್ತಿತ್ವದಲ್ಲಿ ಪೂರ್ಣರೂಪದಲ್ಲಿ ವ್ಯಕ್ತವಾಗಬೇಕಾದರೆ, ತ್ರಿಕರಣಗಳಲ್ಲಿ ಸಮರಸವಿರಬೇಕು. ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಏಕತೆಯಿರಬೇಕು. ಯೋಚಿಸಿದ್ದನ್ನೇ ಹೇಳಬೇಕು ಮತ್ತು ಹೇಳಿದ್ದನ್ನೇ ಮಾಡಬೇಕು. ಇದನ್ನೇ ತ್ರಿಕರಣ ಶುದ್ಧಿಯೆಂದು ಹೇಳುತ್ತಾರೆ. ಇಂತಹ ಶುದ್ಧಿಯಿದ್ದಾಗ ಮಾತ್ರ, ದಿವ್ಯತೆ ನಮ್ಮ ವ್ಯಕ್ತಿತ್ವದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ವ್ಯಕ್ತವಾಗುತ್ತದೆ. ಆದ್ದರಿಂದ ನಾವು ತ್ರಿಕರಣಶುದ್ಧಿಯನ್ನು ಸಾಧಿಸಲು ಪ್ರಯತ್ನಿಸಬೇಕು.
ನಮ್ಮಲ್ಲಿ ತ್ರಿಕರಣ ಶುದ್ಧಿಯಿದ್ದಾಗ, ನಾವು ಆತ್ಮನಲ್ಲಿ ನೆಲೆಗೊಂಡು ಸ್ವಸ್ಥರಾಗಬಹುದು. ಈ ಸ್ಥಿತಿಯನ್ನೇ ‘ಯೋಗ’ದ ಸ್ಥಿತಿಯೆಂದು ಹೇಳುತ್ತಾರೆ. ‘ಯೋಗ’ ಪದವು ‘ಯುಜ್’ ಅಥವಾ ‘ಜೋಡಿಸು’ ಎಂಬ ಮೂಲಧಾತುವಿನಿಂದ ಬಂದಿದೆ. ಇಂತಹ ಸ್ಥಿತಿಯನ್ನು ಪಡೆದಾಗಲೇ ನಾವು ‘ಸ್ವಾಸ್ಥ್ಯ’ ಎಂದರೆ ಪರಿಪೂರ್ಣ ಆರೋಗ್ಯವನ್ನು ಪಡೆಯಬಹುದು. ಇಂತಹ ಸ್ವಸ್ಥ ಸ್ಥಿತಿಯನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಯೋಗಸ್ಥ’ ಸ್ಥಿತಿಯೆಂದು ಕರೆಯುತ್ತಾನೆ:
ಯೋಗಸ್ಥಃ ಕುರು ಕರ್ವಣಿ ಸಂಗಂ ತ್ಯಕ್ತಾ ್ವ ಧನಂಜಯ |ಸಿದ್ಧ್ಯಸಿದ್ಧೊ್ಯೕಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ || (2. 48)
‘ಧನಂಜಯ, ವ್ಯಾಮೋಹವನ್ನು ತ್ಯಜಿಸಿ ಯೋಗಸ್ಥನಾಗಿ ಕರ್ಮಗಳನ್ನು ಆಚರಿಸು. ಜಯಾಪಜಯಗಳಲ್ಲಿ ಸಮತ್ವವನ್ನು ವಹಿಸು. ಸಮತ್ವವೇ ಯೋಗ’.ಸಂಪೂರ್ಣ ಆರೋಗ್ಯವನ್ನು ನಾವು ದೇಹ, ಮನಸ್ಸು ಮತ್ತು ಆತ್ಮಚೈತನ್ಯಗಳ ಪರಿಪೂರ್ಣ ಸಮರಸದಿಂದ ಮಾತ್ರ ಸಾಧಿಸಬಹುದು. ಇದಕ್ಕೆ ಯೋಗವೇ ಸಾಧನ. ಆದ್ದರಿಂದ ಯೋಗವು ಸಂಪೂರ್ಣ ಆರೋಗ್ಯವನ್ನು ಪ್ರಸಾದಿಸುವ ಸಂಜೀವಿನಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು, ‘ಆರೋಗ್ಯವೆಂದರೆ ರೋಗ ಮತ್ತು ದೌರ್ಬಲ್ಯಗಳಿಂದ ಮುಕ್ತರಾಗಿರುವುದು ಮಾತ್ರವಲ್ಲ; ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸೌಖ್ಯದಿಂದ ಕೂಡಿರುವ ಸುಸ್ಥಿತಿಯೇ ಆರೋಗ್ಯ’ವೆಂದು ನಿರೂಪಿಸಿದೆ. ಇಂತಹ ಪರಿಪೂರ್ಣ ಆರೋಗ್ಯದ ಸ್ಥಿತಿಯನ್ನು ಪಡೆಯಲು, ಆಧ್ಯಾತ್ಮಿಕತೆಯೇ ಜೀವನದ ಆಧಾರವಾಗಬೇಕೆಂದು ಸನಾತನ ಧರ್ಮವು ಸಾರಿದೆ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)
ಕೆಂಪಾಂಬುದಿ ಕೆರೆ ಒತ್ತುವರಿ ಶೀಘ್ರ ತೆರವು: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
