ಬೆಂಗಳೂರು:ಸಮಾನ ವೇತನ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸೆ. 24ರಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇನ್ನೊಂದೆಡೆ
ನರ್ಸ್​ಗಳೂ ಸರ್ಕಾರದಿಂದ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಹಿಂದೆ ಗುತ್ತಿಗೆ ಆರೋಗ್ಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ, ಬೇಡಿಕೆಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸರ್ಕಾರ ಪ್ರತ್ಯೇಕ ಸಮಿತಿ ರಚಿಸಿತ್ತು. ಆದರೆ, ಸಮಿತಿ ಈವರೆಗೂ ವರದಿ ನೀಡದ ಕಾರಣ ಈಗ ಮತ್ತೆ ಪ್ರತಿಭಟನೆಗೆ ಮುಂದಾ ಗಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಹೆಚ್ಚುವರಿ ಭತ್ಯೆ ನೀಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಈ ಭತ್ಯೆ ಎಲ್ಲ ಸಿಬ್ಬಂದಿಗೂ ಸಿಗುವುದಿಲ್ಲ. ನಮ್ಮ ಸೇವೆ ಕಾಯಂಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
30 ಸಾವಿರಕ್ಕೂ ಅಧಿಕ ನೌಕರರಿಗೆ ಅನ್ಯಾಯವಾಗಿದೆ. ಆದ್ದರಿಂದ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಯಮೋಜಿ ತಿಳಿಸಿದ್ದಾರೆ.
ನರ್ಸ್​ಗಳ ಹೋರಾಟ:ವೇತನ ಪರಿಷ್ಕರಣೆ ಸಂಬಂಧ ವೈದ್ಯರ ಜತೆ ಸಂಧಾನ ಸಭೆ ನಡೆಸಿ ಅವರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಶುಶ್ರೂಷ ಅಧಿಕಾರಿಗಳ (ನರ್ಸ್) ಬೇಡಿಕೆ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ ನರ್ಸ್​ಗಳು ಹೋರಾಟಕ್ಕೆ ಅಣಿಯಾಗಿದ್ದಾರೆ.
ಇತ್ತೀಚೆಗೆ ಆರೋಗ್ಯ ಇಲಾಖೆ ಶುಶ್ರೂಷ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ ರಾಜ್ಯದ ಕೆಲ ಸ್ವಾಯತ್ತ ಸಂಸ್ಥೆಗಳು (ಸರ್ಕಾರಿ ವೈದ್ಯ ಕಾಲೇಜುಗಳು) ಪದೋನ್ನತಿ ಪಡೆದ ಶುಶ್ರೂಷ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳಲು ಬಿಡುತ್ತಿಲ್ಲ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದ ನಾವು ಪರದಾಡುವಂತಾಗಿದೆ. ಇದನ್ನು ಸರಿಪಡಿಸಬೇಕು ಎಂಬುದು ಶುಶ್ರೂಷ ಅಧಿಕಾರಿಗಳ ಸಂಘದ ಪ್ರಮುಖ ಬೇಡಿಕೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ 7ನೇ ವೇತನ ಆಯೋಗದ ಆರ್ಥಿಕ ಸೌಲಭ್ಯ ನೀಡಬೇಕು. ವಾರ್ಷಿಕ 48-52 ಪತ್ರಾಂಕಿತ ರಜೆಗಳಲ್ಲಿ ಕಾರ್ಯನಿರ್ವಹಿಸಿದಕ್ಕೆ ಪ್ರಸ್ತುತ ಪಡೆಯುತ್ತಿರುವ 15 ದಿನದ ವಾರ್ಷಿಕ ವೇತನ ಬದಲಾಗಿ 30 ದಿನದ ವಾರ್ಷಿಕ ವೇತನ ಕೊಡಬೇಕು. ಪೊಲೀಸ್ ಸಿಬ್ಬಂದಿಗೆ ನೀಡುತ್ತಿರುವಂತೆ ಸೌಲಭ್ಯ ಕಲ್ಪಿಸಬೇಕು. ಕರೊನಾ ವಾರಿಯರ್ಸ್​ಗಳಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವುದಕ್ಕೆ ಮಾಸಿಕ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕೆಂಬುದು ಅವರ ಬೇಡಿಕೆಯಾಗಿದೆ.
ಸರ್ಕಾರ ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ರಾಜ್ಯವ್ಯಾಪಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಾಗುವುದು. ನಂತರ ಉಗ್ರ ಹೋರಾಟದ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸರ್ಕಾರಿ ಶುಶ್ರೂಷಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
