|ಹರೀಶ್ ಬೇಲೂರುಬೆಂಗಳೂರು
ಸುಡು ಬಿಸಿಲಿನ ತಾಪಕ್ಕೆ ರಾಜ್ಯದ ಜನತೆ ಹೈರಾಣಾಗಿರುವ ನಡುವೆಯೇ ಬಿಸಿಗಾಳಿ ಸಾಧ್ಯತೆ ಆತಂಕ ಹೆಚ್ಚಿಸಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುವ ಬಿಸಿಗಾಳಿ ಬಗ್ಗೆ ಕಾಳಜಿ ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಲಹೆ ಕೊಟ್ಟಿದೆ. ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಬೇಸಿಗೆ ಕಾಲ ಅಂದರೆ ಮಾರ್ಚ್​ನಿಂದ ಮೇ ತಿಂಗಳೊಳಗೆ ಬಿಸಿಗಾಳಿ ಬೀಸಲಿದೆ. ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದು ಹಾಗೂ ವಾತಾವರಣದಲ್ಲಿ ತೇವಾಂಶ ಇಲ್ಲದಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ನಿಧಾನವಾಗಿ ಉಷ್ಣಾಂಶ ಏರಿಕೆಯಾಗುತ್ತಿದೆ.
ವಾತಾವರಣದಲ್ಲಿ ತೇವಾಂಶ ಕಡಿಮೆಯಾದ ಕಾರಣಕ್ಕೆ ಬಿಸಿಲಿನ ಝುಳದ ಜತೆಗೆ ಸೆಖೆಯೂ ಹೆಚ್ಚಿದೆ. ತಾಪಮಾನ ಹೆಚ್ಚಾದಂತೆ ಜನರಿಗೆ ಕೈ-ಕಾಲು ಊತ, ತಲೆನೋವು, ವಾಕರಿಕೆ, ನಿರ್ಜಲೀಕರಣ, ಸುಸ್ತು, ವಾಂತಿ ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಜತೆಗೆ, ಜ್ವರ (102 ಡಿಗ್ರಿ) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ (104 ಡಿಗ್ರಿ) ಬಂದರೆ ಪ್ರಜ್ಞೆ ತಪ್ಪುವ ಅಪಾಯದ ಜತೆಗೆ ಕೋಮಾಕ್ಕೂ ಹೋಗಬಹುದು. ಆದ್ದರಿಂದ, ಬಿಸಿಲಿನಲ್ಲಿ ಹೆಚ್ಚು ಓಡಾಡಬಾರದೆಂದು ಭಾರತೀಯ ಹವಾಮಾನ ಇಲಾಖೆ ಸಲಹೆ ಕೊಟ್ಟಿದೆ.
ಶಾಖ ತರಂಗ ಸ್ಥಿತಿ ಆತಂಕ:ಗರಿಷ್ಠ ತಾಪಮಾನದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ತರಂಗ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಈಗ ರಾಜ್ಯದಲ್ಲಿ ಇದೇ ಸ್ಥಿತಿ ಉಂಟಾಗುವ ಆತಂಕವಿದೆ. ಶುಕ್ರವಾರ ಕಲಬುರಗಿಯಲ್ಲಿ 41.9, ಹಂಪಿ 40, ರಾಯಚೂರು 41.2, ಬಳ್ಳಾರಿ ಮತ್ತು ಬೀದರ್​ನಲ್ಲಿ ತಲಾ 40.0, ವಿಜಯಪುರದಲ್ಲಿ 38.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ 2 ದಿನಕ್ಕೆ ಹೋಲಿಸಿದರೆ ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸರಾಸರಿ 2 ಡಿಗ್ರಿ ಹೆಚ್ಚಾಗಿದೆ. ಹಾಸನ, ಮೈಸೂರು ಮತ್ತು ಮಂಡ್ಯದಲ್ಲಿಯೂ ತಾಪಮಾನ ಹೆಚ್ಚಿದೆ. ಬೆಂಗಳೂರಲ್ಲಿ 36.7 ಡಿಗ್ರಿ ದಾಖಲಾಗಿದೆ.
ಯಾರಿಗೆಲ್ಲ ಎಚ್ಚರಿಕೆ?:ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರಲ್ಲಿ ಪೌಷ್ಟಿಕಾಂಶದ ಕೊರತೆ ಕಾರಣಕ್ಕೆ ಬಿಸಿಲಿನ ಹೊಡೆತಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಅದರ ಜತೆಗೆ ಆಟೋ ಚಾಲಕರು, ಸಂಚಾರ ಪೊಲೀಸರು, ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ವಿುಕರು ದಿನಪೂರ್ತಿ ಕೆಲಸ ಮಾಡುವುದರಿಂದ ಆರೋಗ್ಯದ ಬಗ್ಗೆ ಕಾಳಹಿ ವಹಿಸುವುದು ಸೂಕ್ತ. ಕಟ್ಟಡ ಮತ್ತು ನಿರ್ಮಾಣ ಕಾಮಗಾರಿ ಕಾರ್ವಿುಕರ ಕೆಲಸದ ಅವಧಿಯನ್ನು ಕಡಿಮೆ ಮಾಡುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಿಸಿಲಿನ ಪ್ರಖರತೆ ಹೆಚ್ಚಿರುತ್ತದೆ. ಬಿಸಿಲು ಲೆಕ್ಕಿಸದೆ ದಿನವಿಡೀ ಕೆಲಸ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜತೆಗೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.
ಕಾಡ್ಗಿಚ್ಚು ಪ್ರಕರಣ ಹೆಚ್ಚುವ ಆತಂಕ:ಪ್ರತಿ ವರ್ಷ ಜನವರಿಯಿಂದ ಮೇವರೆಗೆ ಹೆಚ್ಚು ಕಾಡ್ಗಿಚ್ಚು ಪ್ರಕರಣ ದಾಖಲಾಗಿವೆ. 2017-18ರಲ್ಲಿ 5,161, 2018-19ರಲ್ಲಿ 4,882, 2019-20ರಲ್ಲಿ 4,958, 202-21ರಲ್ಲಿ 4,789 ಹಾಗೂ 2021ರ ಫೆಬ್ರವರಿವರೆಗೆ 1,213 ಬೆಂಕಿ ಪ್ರಕರಣಗಳು ದಾಖಲಾಗಿದ್ದು, 12,287 ಹೆಕ್ಟೇರ್​ಗಿಂತಲೂ ಅಧಿಕ ವಿಸ್ತೀರ್ಣದ ಅರಣ್ಯ ಪ್ರದೇಶ ಹಾನಿಗೀಡಾಗಿದೆ. ಬೇಸಿಗೆಯಲ್ಲಿ ಆಕಸ್ಮಿಕ ಬೆಂಕಿ, ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಉಷ್ಣಾಂಶ ಏರಿಕೆಯಾದರೆ ಹೆಚ್ಚಳವಾದರೆ ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚಳವಾಗಲಿದೆ.
ಆಂಧ್ರದಲ್ಲೇ 2500 ಸಾವು:2014-2019ರವರೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಅಧಿಕ ತಾಪಮಾನದಿಂದ 2,500 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ವಯಸ್ಸಾದವರು ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ.
* ಹೆಚ್ಚು ನೀರು (ಕುದಿಸಿ ಆರಿಸಿದ ನೀರು) ಕುಡಿಯಬೇಕು
* ಗಂಜಿ, ಮಜ್ಜಿಗೆ, ಎಳನೀರು, ನಿಂಬೆ ರಸದಂತಹ ತಂಪು ಪಾನೀಯ ಸೇವನೆ ಉತ್ತಮ
* ತಾಜಾ ಹಣ್ಣು ಮತ್ತು ತರಕಾರಿ (ಸೌತೆಕಾಯಿ, ಕ್ಯಾರೆಟ್, ಕಲ್ಲಂಗಡಿ, ಕಿತ್ತಳೆ ಇತ್ಯಾದಿ) ಬಳಸಿ
* ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ, ಒಳ್ಳೆಯದು
* ಮಾಂಸ, ಮಸಾಲೆ ಪದಾರ್ಥಗಳ ಮಿತ ಬಳಕೆ ಉತ್ತಮ
* ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರವಿರಬೇಕು
* ಮದ್ಯಪಾನ, ಧೂಮಪಾನ ಒಳ್ಳೆಯದಲ್ಲ.
* ಸುಡು ಬಿಸಿಲಿನಲ್ಲಿ ಹೊರಗೆ ಓಡಾಟ ನಿಯಂತ್ರಿಸಬೇಕು
* ಹೊರಗೆ ಹೋದಾಗ ಛತ್ರಿ, ಕೂಲಿಂಗ್ ಗ್ಲಾಸ್, ಹ್ಯಾಟ್​ಗಳನ್ನು ಬಳಸಬೇಕು
* ಚರ್ಮದ ರಕ್ಷಣೆಗೆ ಹತ್ತಿ ಉಡುಪು ಧರಿಸಿ, ಸನ್ ಸ್ಕ್ರೀನ್ ಲೋಷನ್ ಬಳಸಿ
* ಧೂಳು ಹಾಗೂ ಬಿಸಿಲಿನಿಂದ ಕಣ್ಣಿನ ಆರೋಗ್ಯ ರಕ್ಷಣೆಗಾಗಿ ಕೂಲಿಂಗ್ ಗ್ಲಾಸ್ ಧರಿಸುವುದು
* ಬೆಚ್ಚಗಿನ ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕು
ಉತ್ತರ ಕರ್ನಾಟಕ ಹೆಚ್ಚು:ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗಿಂತ ಪ್ರತಿ ವರ್ಷವೂ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಧಾರವಾಡ, ಕೊಪ್ಪಳ, ಗದಗ, ಬಳ್ಳಾರಿ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಹಲವು ವರ್ಷಗಳಿಂದಲೂ ಉತ್ತರ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚು ತಾಪಮಾನ ಉಂಟಾಗುತ್ತಿದೆ. ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ ಮತ್ತು ಅರೆ ಶುಷ್ಕ ಸ್ಥಿತಿಯಲ್ಲಿರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬಿಸಿಲು ದಾಖಲಾಗುತ್ತಿದೆ.
ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ, ಸ್ಥಳದಲ್ಲೇ ನಾಲ್ವರ ಸಾವು..

ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fourteen =
Remember me
