ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2022-23ನೇ ಸಾಲಿನ ಬಜೆಟ್ ಮೇಲೆ ವಿಧಾನ ಪರಿಷತ್​ನಲ್ಲಿ ಮಂಗಳವಾರ ಮುಂದುವರಿದ ಚರ್ಚೆಯು ಪ್ರತಿಪಕ್ಷ, ಆಡಳಿತ ಪಕ್ಷಗಳ ಮುಸುಕಿನ ಗುದ್ದಾಟಕ್ಕೆ ವೇದಿಕೆಯಾಯಿತು. ಚರ್ಚೆ ಮುಂದುವರಿಸಿದ ಕಾಂಗ್ರೆಸ್​ನ ಮಂಜುನಾಥ್ ಭಂಡಾರಿ ‘ಅಶ್ವತ್ಥಾಮೋ ಹತಃ ಕುಂಜರಃ’ ಎಂಬ ಮಹಾಭಾರತದ ದೃಷ್ಟಾಂತವೊಂದಕ್ಕೆ ಬಜೆಟ್​ನ ಘೋಷಣೆಗಳು ಹಾಗೂ ಅನುಷ್ಠಾನವನ್ನು ಹೋಲಿಸುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದರು. ಆದಾಯಕ್ಕಿಂತ ಖರ್ಚು ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ. ಅವ್ಯವಹಾರ, ಅಕ್ರಮಕ್ಕೆ ಕಡಿವಾಣ ಹಾಕಿದರೆ ಬೆಂಗಳೂರು ಅಭಿವೃದ್ಧಿಗೆ ನಿರೀಕ್ಷಿಸಿದಷ್ಟು ಅನುದಾನ ಸಿಗುತ್ತದೆ. ಯೋಜನೆಗಳು ಕಾಲಮಿತಿಯೊಳಗೆ ಮುಗಿದರೆ ಹೆಚ್ಚುವರಿ ಆರ್ಥಿಕ ಹೊರೆ ತಪ್ಪಲಿದೆ ಎಂದರು. ಗ್ರಾ.ಪಂ. ಪ್ರತಿನಿಧಿಗಳ ಗೌರವಧನ ಹೆಚ್ಚಳ ಪ್ರಸ್ತಾಪವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ ಎಂದು ಹೇಳುತ್ತಿದ್ದು, ಆರ್ಥಿಕ ಇಲಾಖೆಯೇ ಎಲ್ಲ ನಡೆಸುವುದಾದರೆ ಜನಪ್ರತಿನಿಧಿಗಳು, ಸರ್ಕಾರದ ಏಕೆ ಬೇಕು ಎಂದು ಕಿಡಿಕಾರಿದರು.
ಬಡಿದೆಬ್ಬಿಸಿದ ಚಾಟಿ:ಶಾಲೆ-ಕಾಲೇಜು ರಜೆ ಘೋಷಿಸಿ ಕರ್ಫ್ಯೂ ವಿಧಿಸಲಾಗುತ್ತದೆ. ವಿದ್ಯೆ ಬದಲು ಬಟ್ಟೆ, ಊಟದ ಬಗ್ಗೆ ಮಾತುಗಳು (ಪರೋಕ್ಷವಾಗಿ ಹಿಜಾಬ್, ಮೊಟ್ಟೆ ವಿವಾದದ ಉಲ್ಲೇಖ) ಕೇಳಿಬರುತ್ತವೆ. ಶಿಕ್ಷಣ ವ್ಯವಸ್ಥೆ ಯಾವ ಸ್ಥಿತಿಗೆ ಬಂದಿದೆ ಎನ್ನುವುದಕ್ಕೆ ಕೈಗನ್ನಡಿ. ಅಭಿವೃದ್ಧಿ ಬದಲಿಗೆ ಭಾವನಾತ್ಮಕ ವಿಚಾರ ಪ್ರಾಮುಖ್ಯತೆ ಪಡೆದಿದೆ ಎಂಬ ಭಂಡಾರಿ ಚಾಟಿ ಏಟು ಆಡಳಿತ ಪಕ್ಷವನ್ನು ಬಡಿದೆಬ್ಬಿಸಿತು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಹಿಜಾಬ್ ವಿಚಾರವನ್ನು ಭಂಡಾರಿ ಹೇಳುತ್ತಿರುವಂತಿದೆ. ಈ ಪ್ರಕರಣದ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ್ದು, ಗೌರವಿಸಬೇಕಾದದ್ದು ನಮ್ಮ ಜವಾಬ್ದಾರಿ ಎಂದರು. ಮಧ್ಯೆ ಪ್ರವೇಶವನ್ನು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಲು ಬಿಡಿ ಎಂದಾಗ ಭಾಷಣವಲ್ಲ, ಚರ್ಚೆಯಿದು. ಮಧ್ಯೆ ಎದ್ದು ವಿವರಣೆ ನೀಡಲು ಅವಕಾಶವಿದೆ ಎಂದು ಪೂಜಾರಿ ಸಮರ್ಥಿಸಿಕೊಂಡರು. ಈ ನಡುವೆ ಆಡಳಿತ ಮತ್ತು ಪ್ರತಿಪಕ್ಷಗಳು ವಾಗ್ವಾದಕ್ಕೆ ಇಳಿದಾಗ ಸಭಾಪತಿ ಪೀಠದಲ್ಲಿದ್ದ ಭಾರತಿ ಶೆಟ್ಟಿ ಬಜೆಟ್ ಮೇಲೆ ಚೆನ್ನಾಗಿ ಮಾತನಾಡುತ್ತಿದ್ದೀರಿ, ಅದನ್ನೇ ಮುಂದುವರಿಸಿ ಎಂದು ಭಂಡಾರಿ ಅವರಿಗೆ ಸಲಹೆ ನೀಡಿ ಕಲಾಪ ಸುಗಮಗೊಳಿಸಿದರು.
ವಿಶೇಷ ಅಧಿವೇಶನಕ್ಕೆ ಸಲಹೆ:ನಂತರ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಎಚ್.ವಿಶ್ವನಾಥ್, ಬೊಮ್ಮಾಯಿ ಮಂಡಿಸಿದ ಬಜೆಟ್ ಸ್ವಾಗತಾರ್ಹವಾಗಿದೆ. ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರ ಅಗತ್ಯವಿದ್ದು, ಆಡಳಿತದ ಬಲದಿಂದ ಅಭಿವೃದ್ಧಿ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ಹಣಕಾಸು ನಿರ್ವಹಣೆ ಕುರಿತು ಚರ್ಚೆಗಾಗಿ ಒಂದು ವಾರದ ಅವಧಿಯ ವಿಶೇಷ ಅಧಿವೇಶನ ಕರೆದು, ಪಕ್ಷಾತೀತ ಚರ್ಚೆಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ತಿವಿದ ಧಾಟಿ:ಗುಜರಾತ್​ಗೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಎರಡನೇ ಬಾರಿ ದೇಶದ ಪ್ರಧಾನಿಯಾಗಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಸಣ್ಣ ಸಮುದಾಯಕ್ಕೆ ಸೇರಿದವರು ಉನ್ನತ ಹುದ್ದೆ ಅಲಂಕರಿಸಿರುವುದೇ ಪ್ರಜಾಪ್ರಭುತ್ವದ ತಾಕತ್ತಿಗೆ ನಿದರ್ಶನ. ಒಮ್ಮೆ ಮುಖ್ಯಮಂತ್ರಿಯಾಗಿ ನಂತರ 35,000 ಮತಗಳ ಮಕಾಡೆ ಮಲಗಿದವರೊಬ್ಬರು ‘ಏಯ್ ಮೋದಿ’ ಎಂದು ಕರೆಯುತ್ತಾರೆ. ನನ್ನನ್ನು ಇನ್ನೊಂದ್ಸಲ ಸಿಎಂ ಮಾಡಿದರೆ 10 ಕೆಜಿ ಅಕ್ಕಿ ಕೊಡ್ತೆನೆ ಅಂತಾರೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ನಾಯಕನ ಚಿಂತನೆಯ ರೀತಿಯಿದು ಎಂದು ತಮ್ಮದೇ ಧಾಟಿಯಲ್ಲಿ ತಿವಿದರು. ಮೋದಿಯವರು ಎಂದಿಗೂ ಹಿಂದುತ್ವದ ಮಾತನಾಡಿಲ್ಲ. ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಎಂಬ ನಿಲುವು ಪ್ರತಿಪಾದಿಸಿದ್ದು, ಎರಡು ಕೋಟಿ ಮುಸ್ಲಿಂ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ನೀಡಿದ್ದಾರೆ ಎಂದು ಹೊಗಳಿದರು. ಹಾಗಿದ್ದರೆ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂದು ಹೇಳ್ಬಿಡಿ ಎಂದು ಬಿ.ಕೆ. ಹರಿಪ್ರಸಾದ್ ಕಾಲೆಳೆದರೆ, ಯಾವುದೇ ಸರ್ಕಾರಗಳಿರಲಿ, ಬಜೆಟ್​ನಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
ಬಿಜೆಪಿಯ ಕೆ.ಜಿ.ಬೋಪಯ್ಯ ಬಜೆಟ್ ಮೇಲಿನ ಭಾಷಣದ ಕೊನೆಯಲ್ಲಿ ಉಲ್ಲೇಖಿಸಿದ ಸಂಗತಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಇನ್ನಿಲ್ಲದಂತೆ ಕಾಡಿತಲ್ಲದೇ, ಅವರು ಅಸಹನೆಯನ್ನೂ ವ್ಯಕ್ತಮಾಡಿದರು. ಬಜೆಟ್ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ‘ಸಬ್​ಕಾ ವಿನಾಶ್’ ಎಂದು ಛೇಡಿಸಿದ್ದರು. ಈ ಮಾತಿಗೆ ಮಂಗಳವಾರ ತಿರುಗೇಟು ನೀಡಿದ ಬೋಪಯ್ಯ, ‘ಸಬ್ ಕಾ ಸಾಥ್, ಸಬ್ ವಿಕಾಸ್, ಸಬ್​ಕಾ ವಿಶ್ವಾಸ್ ಸೇ, ಕಾಂಗ್ರೆಸ್ ಕೋ ಸರ್ವನಾಶ್ ಕರ್ನ’ ಎಂಬುದು ಮುಂದಿನ ಘೋಷಣೆ ಎಂದು ಚಾಟಿ ಬೀಸಿದರು. ಆವರ ಟೀಕೆ ಹೊರಬೀಳುತ್ತಿದ್ದಂತೆ ಸಿದ್ದರಾಮಯ್ಯ, ‘ಸಬ್ ಕಾ ಸಾಥ್, ಸಬ್ ವಿಕಾಸ್, ಸಬ್​ಕಾ ವಿಶ್ವಾಸ್, ಬಿಜೆಪಿಗೂ ಸರ್ವನಾಶ್ ಕರ್ನಾ’ ಎಂದರು. ಬಿಸಿಬಿಸಿ ವಾಗ್ವಾದ ಇಷ್ಟಕ್ಕೆ ನಿಲ್ಲದೇ, ನೀವು ದೇಶವನ್ನೇ ಸರ್ವನಾಶ್ ಅಂದಿರಿ. ಸರ್ವನಾಶ್ ಯಾರದ್ದು ಎಂಬುದು ಐದು ರಾಜ್ಯಗಳ ಚುನಾವಣೆಯಲ್ಲಿ ಗೊತ್ತಾಗಿದೆ ಎಂದು ಪುನಃ ಕೆರಳಿಸಿದಾಗ ಸಿದ್ದರಾಮಯ್ಯ ನಿರುತ್ತರರಾದರು. ಈ ವೇಳೆ ನೆರವಿಗೆ ಬಂದ ಯು.ಟಿ.ಖಾದರ್, ನೀವು ಜನರನ್ನು ನೋಡಿ ಮಾತನಾಡಿ, ಓಟನ್ನು ನೋಡಿ ಮಾತನಾಡುತ್ತೀರಿ. ಈ ಸರ್ಕಾರಕ್ಕೆ ಮನೆ ಕೊಡಲಾಗಲಿಲ್ಲ, ಬಿಪಿಎಲ್ ಕಾರ್ಡ್ ಕೊಡಲು ಆಗಿಲ್ಲ. ಸ್ಕಾಲರ್​ಶಿಪ್ ಕೊಡಲಿಲ್ಲ, ಕೊಡಗಿನ ಹುತಾತ್ಮನಿಗೆ ಪರಿಹಾರ ಕೊಡಲು ಆಗಲಿಲ್ಲ ಎಂದು ಟೀಕಿಸಿದರು. ಬೋಪಯ್ಯ ಮಾತ್ರ ಸುಮ್ಮನಾಗಲೇ ಇಲ್ಲ, ಸರ್ವನಾಶ್ ಅಂತ ಹೇಳಿದ್ದಿರಿ, ಸರ್ವನಾಶ್ ದೇಶದ್ದೂ ಅಲ್ಲ. ಕಾಂಗ್ರೆಸ್ ಸರ್ವನಾಶ್ ಪ್ರಾರಂಭವಾಗಿದೆ. 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದರು. ಈ ವೇಳೆ ಸಿದ್ದರಾಮಯ್ಯ ಅಸಹನೆ ಕಟ್ಟೆಯೊಡೆದು, ನೀವು ಭ್ರಮೆಯಲ್ಲಿದ್ದೀರಿ. ನಿಮಗೆ ಜನರ ನಾಡಿ ಮಿಡಿತ ಗೊತ್ತಿಲ್ಲ ಎಂದರಲ್ಲದೇ, ನೀವು ಕೊಡಗಿನವರು ಕೊಡಗಿನ ಸ್ಥಿತಿ ನೋಡಿ ಹೇಳಬೇಡಿ. ರಾಜ್ಯದ ಜನ ನೀವು ಎಷ್ಟು ಬೇಗ ತೊಲಗಿದರೆ ಸಾಕು ಎಂದು ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.
ಯಡಿಯೂರಪ್ಪ ಅಧಿಕಾರದಲ್ಲಿ ಇಲ್ಲ, ಇವಾಗ ಬೊಮ್ಮಾಯಿ ಚೀಫ್ ಮಿನಿಸ್ಟರ್ ಆಗಿದ್ದಾರೆ. ಹಾಗಿದ್ರೆ ಬ್ರೇಕ್, ಆಕ್ಸಿಲೇಟರ್ ಎಲ್ಲ ಯಡಿಯೂರಪ್ಪ ಕೈಯಲ್ಲಿ ಇದೆಯಾ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು. ಬಿಜೆಪಿಯ ಪಿ.ರಾಜೀವ್, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಬಜೆಟ್ ಮಂಡಿಸಿದ್ದಾಗಿ ಹೇಳಿದ್ದ ಕುಮಾರಸ್ವಾಮಿ ಬಳಿ ಸ್ಟೇರಿಂಗ್ ಮಾತ್ರ ಇತ್ತು. ಆದರೆ, ಸಿದ್ದರಾಮಯ್ಯ ಕೈಯಲ್ಲಿ ಬ್ರೇಕ್, ಆಕ್ಸಿಲೇಟರ್ ಇತ್ತು ಎಂದು ಛೇಡಿಸಿದರು. ಇದರಿಂದ ಕೆರಳಿದ ಸಿದ್ದರಾಮಯ್ಯ.. ಹೇ ಕುತ್ಕೋಳ್ರಿ ಏನೇನೊ ಹೇಳ್ಬೇಡಿ. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಸಿಎಂ ಆಗಿದ್ದವರು ಕುಮಾರಸ್ವಾಮಿ. ನನ್ನ ಕೈಯಲ್ಲಿ ಹೇಗೆ ಬ್ರೇಕ್ ಬರುತ್ತೆ? ಗೊತ್ತಿಲ್ಲದೆ ಏನೇನೊ ಮಾತನಾಡಬಾರದು ಎಂದು ಗದರಿದರು.
ರಾಜ್ಯದಲ್ಲಿ ಅಪೂರ್ಣಗೊಂಡಿರುವ 153 ಶಾದಿಮಹಲ್​ಗಳ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ರ್ಚಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಡಾ. ಅಜಯ್ಸಿಂಗ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 153 ಶಾದಿಮಹಲ್ ಕಟ್ಟಡಗಳು ವಿವಿಧ ಕಾರಣಗಳಿಂದ ಅರ್ಧಕ್ಕೆ ನಿಂತಿವೆ. ಇವುಗಳನ್ನು ಪೂರ್ಣಗೊಳಿಸಲು ಕನಿಷ್ಠ 58ರಿಂದ 60 ಕೋಟಿ ರೂ.ಬೇಕು. ಸಿಎಂ ಜತೆ ರ್ಚಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಕಾಂಗ್ರೆಸ್​ನ ಅಮರೇಗೌಡ ಬಯ್ಯಪುರ ಮಾತನಾಡಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 10 ಕಡೆ ಶಾಲೆಗಳು, 5 ಕಡೆ ಹಾಸ್ಟೆಲ್​ಗಳನ್ನು ನಿರ್ವಿುಸಿದ್ದಾರೆ. ಸರ್ಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಅದಕ್ಕೆ ಮಾಧುಸ್ವಾಮಿ, ಶಾದಿಮಹಲ್​ಗೂ ನಿಮಗೂ ಏನು ಸಂಬಂಧ. ಬಸವೇಶ್ವರನಗರದಲ್ಲಿ ಬಸವನಗುಡಿ ಬಗ್ಗೆ ಕೇಳಿದ್ದರೆ ನಾನು ಉತ್ತರ ಕೊಡುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 6 =
Remember me
