ಮಡಿಕೇರಿ/ಬೆಂಗಳೂರು:ಸತತ 3ನೇ ವರ್ಷವೂ ಆಶ್ಲೇಷಾ ಮಳೆ ಆರ್ಭಟಕ್ಕೆ ಕೊಡಗಿನ ಜನ ಜೀವ ಕಳೆದುಕೊಳ್ಳುತ್ತಿದ್ದು, ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣಾಚಾರ್ ಸೇರಿ ಅವರ ಕುಟುಂಬದ ಐವರು ಬುಧವಾರ ರಾತ್ರಿ ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಕಳೆದ ವರ್ಷ ಬಿರುಕು ಬಿಟ್ಟಿದ್ದ ಬ್ರಹ್ಮಗಿರಿ ಬೆಟ್ಟದ ಭಾಗ ಈ ವರ್ಷ ಕುಸಿದುಬಿದ್ದಿದ್ದು, ಮುಂಡ್ರೋಟ್ ರಸ್ತೆಗೆ ಹಾಕಲಾಗಿದ್ದ ಗೇಟ್ ಸಹಿತ ಇಬ್ಬರು ಅರ್ಚಕರ ಮನೆಗಳು ಕೊಚ್ಚಿಕೊಂಡು ಹೋಗಿದೆ. ಮನೆಯಲ್ಲಿದ್ದ ನಾರಾಯಣಾಚಾರ್(80), ಅವರ ಪತ್ನಿ ಶಾಂತಾ, ಹಿರಿಯ ಸಹೋದರ ಆನಂದತೀರ್ಥ (86), ಪೂಜೆ ಮಾಡಲು ತಿಂಗಳ ಹಿಂದೆ ಕರೆಸಲಾಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ರವಿಕಿರಣ್(23) ಹಾಗೂ ಕಾಸರಗೋಡು ಜಿಲ್ಲೆಯ ಅಡೂರು ಕಾಯರ್ತಿಮೂಲೆ ನಿವಾಸಿ ಶ್ರೀನಿವಾಸ್ ಪಡ್ಡಿಲ್ಲಾಯ(33) ನಾಪತ್ತೆಯಾಗಿದ್ದಾರೆ. ಆನಂದತೀರ್ಥ ಅವರ ಜತೆ ರವಿಕಿರಣ್ ಹಾಗೂ ಶ್ರೀನಿವಾಸ ಸಹಾಯಕ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಬೆಟ್ಟದಲ್ಲಿ ಮೇಯಲು ಊರಿನವರು ಬಿಡುತ್ತಿದ್ದ ಜಾನುವಾರುಗಳು ನಾರಾಯಣಾಚಾರ್ ಮನೆ ಸಮೀಪದಲ್ಲಿದ್ದ ಕೊಟ್ಟಿಗೆಯಲ್ಲಿ ನೆಲೆಸುತ್ತಿದ್ದವು. 20ಕ್ಕೂ ಹೆಚ್ಚು ಜಾನುವಾರುಗಳೂ ಕೊಚ್ಚಿಕೊಂಡು ಹೋಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕ್ಷೇತ್ರದ ಮತ್ತೊಬ್ಬ ಅರ್ಚಕ ಪ್ರಶಾಂತ್ ಆಚಾರ್ ಮನೆ ಕೂಡ ಕೊಚ್ಚಿಕೊಂಡು ಹೋಗಿದೆ. 1 ತಿಂಗಳ ಹಿಂದೆ ಅವರು ಕುಟುಂಬ ಸದಸ್ಯರೊಂದಿಗೆ ಭಾಗಮಂಡಲದಲ್ಲಿ ಕಟ್ಟಿರುವ ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು. ಮತ್ತೊಬ್ಬ ಅರ್ಚಕ ಗೋಪಾಲ್ ಆಚಾರ್ ಬುಧವಾರ ಹಾಸನಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಪತ್ತೆ ಕಾರ್ಯ:ನಾಪತ್ತೆಯಾಗಿರುವ ಐವರ ಪತ್ತೆಗೆ ಭಾಗಮಂಡಲದಿಂದ 6 ಕಿಮೀ ನಡೆದುಕೊಂಡು ಎನ್​ಡಿಆರ್​ಎಫ್ ತಂಡ ಸ್ಥಳಕ್ಕೆ ತಲá-ಪಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ದಟ್ಟವಾಗಿ ಆವರಿಸಿರುವ ಮಂಜು, ಬೆಟ್ಟದಲ್ಲಿ ಮತ್ತೆ ಭೂಕುಸಿತ ಉಂಟಾಗುತ್ತಿರುವುದರಿಂದ ಶೋಧ ಕಾರ್ಯ ನಡೆಸಲು ಸಾಧ್ಯವಾಗಲಿಲ್ಲ.
ಸಾಮಗ್ರಿ ಪತ್ತೆ
ತಲಕಾವೇರಿ ಕ್ಷೇತ್ರದಿಂದ ಎರಡೂವರೆ ಕಿ.ಮೀ. ದೂರದಲ್ಲಿರುವ ಚೇರಂಗಾಲ ಗ್ರಾಮದಲ್ಲಿ ಅರ್ಚಕರ ಕುಟುಂಬದ ವಿವಿಧ ಸಾಮಗ್ರಿ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ನದಿ ನೀರಿನಲ್ಲಿ ಕೊಚ್ಚಿಕೊಂಡು ಬಂದ ಪಾತ್ರೆ, ಬಟ್ಟೆ, ಪೂಜಾ ಸಾಮಗ್ರಿಗಳನ್ನು ಸ್ಥಳೀಯರು ನದಿಯಿಂದ ಹೊರ ತೆಗೆದಿದ್ದಾರೆ.
ಕಾವೇರಮ್ಮನ ಇಚ್ಛೆ ಎಂದಿದ್ದರು
ಬಿಜೆಪಿ ಹಿರಿಯ ಮುಖಂಡ ನಾರಾಯಣಾಚಾರ್, ಮೂರು ಅವಧಿಗೆ ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದರು. ಭಾಗಮಂಡಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಭಾಗಮಂಡಲ ಜೇನು ಕೃಷಿಕರ ಸಹಕಾರ ಸಂಘ, ಕೊಡಗು ಜಿಲ್ಲಾ ಏಲಕ್ಕಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಕ್ಷೇತ್ರಕ್ಕೆ ಭೇಟಿ ನೀಡುವ ಗಣ್ಯರು, ಭಕ್ತರಿಗೆ ಕಾವೇರಮ್ಮನ ಮಹಿಮೆ ಮತ್ತು ತಲಕಾವೇರಿ ಕ್ಷೇತ್ರದ ಮಹತ್ವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದರು. ಕಳೆದ ವರ್ಷ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಮೂಡಿದ್ದರಿಂದ ಮಳೆಗಾಲದಲ್ಲಿ ಮನೆ ಸ್ಥಳಾಂತರ ಮಾಡುವಂತೆ ಹಲವರು ನಾರಾಯಣಾಚಾರ್ ಅವರಲ್ಲಿ ಮನವಿ ಮಾಡಿದ್ದರು. 10 ದಿನಗಳ ಹಿಂದೆ ಭಾಗಮಂಡಲ ಗ್ರಾಪಂ, ಪೊಲೀಸ್ ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಮನವಿ ಮಾಡಿದ್ದರು. ‘ನಾನು ಇಲ್ಲಿಯೇ ಹುಟ್ಟಿ ಬೆಳೆದು ಕಾವೇರಮ್ಮನ ಸೇವೆ ಮಾಡಿಕೊಂಡು ಬಂದಿದ್ದೇನೆ. ನಾನು ಮನೆ ಬಿಟ್ಟು ಹೋಗುವುದಿಲ್ಲ. ಕಾವೇರಮ್ಮನ ಇಚ್ಛೆಯಂತೆ ನಡೆಯಲಿ’ ಎಂದು ಹೇಳುತ್ತಿದ್ದರೆಂದು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಅಧ್ಯಕ್ಷ ಎಂ.ಬಿ.ದೇವಯ್ಯ ಸ್ಮರಿಸಿದರು.
ತಲಕಾವೇರಿ ಕ್ಷೇತ್ರ ಸಂಪರ್ಕ ಬಂದ್
ಶ್ರೀಕ್ಷೇತ್ರ ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಸಂಪರ್ಕ ರಸ್ತೆ ಕಡಿತಗೊಂಡಿರುವುದರಿಂದ ದೇಗುಲಕ್ಕೆ ಹೋಗಲು ಕಷ್ಟಕರವಾಗಿದೆ. ದೇಗುಲದಲ್ಲಿದ್ದ ಇಬ್ಬರು ಕಾವಲುಗಾರರು ಬ್ರಹ್ಮಗಿರಿ ಬೆಟ್ಟದ ಹಿಂಭಾಗದಿಂದ ನಡೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ನದಿಯಲ್ಲಿ ಕೊಚ್ಚಿಹೋದ ರೈತ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಗಾಳಿ ಸಹಿತವಾದ ಭಾರಿ ಮಳೆ ವ್ಯಕ್ತಿಯೊಬ್ಬರನ್ನು ಬಲಿ ಪಡೆದು, ಹಲವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಭಾರಿ ಮಳೆಯಿಂದ ಉಕ್ಕಿ ಹರಿಯುತ್ತಿರುವ ಎತ್ತಿನಹೊಳೆ ನದಿಯನ್ನು ದಾಟುತ್ತಿದ್ದ ಸಂಕ್ಲಾಪುರಮಠ ಗ್ರಾಮದ ರೈತ ಸಿದ್ದಯ್ಯ(65) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬುಧವಾರ ಸಂಜೆ ಜಾನುವಾರುಗಳ ಜತೆ ಜಮೀನಿನಿಂದ ಮನೆಗೆ ವಾಪಸ್ ಬರುವಾಗ ಅವಘಡ ನಡೆದಿದ್ದು, ಗುರುವಾರ ಮೃತದೇಹ ಪತ್ತೆಯಾಗಿದೆ.
ಕಾಫಿ ನಾಡಿನಲ್ಲಿ ಮಳೆಗೆ 2 ಬಲಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಬಾಳೆಹೊನ್ನೂರು ಸಮೀಪದ ಹುಯಿಗೆರೆ ಗ್ರಾಪಂ ಅಂಡವಾನೆಯ ಗದ್ದೆಮನೆಯ ಶಂಕರ (40) ಗುರುವಾರ ಕೃಷಿ ಕಾರ್ಯಕ್ಕಾಗಿ ಗದ್ದೆ ಬದುವಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಳ್ಳದ ನೀರು ಉಕ್ಕಿ ಗದ್ದೆಯಲ್ಲಿ ಹರಿಯುತ್ತಿತ್ತು. ಶಂಕರ ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಕಡೂರು ತಾಲೂಕು ಜಕ್ಕನಹಳ್ಳಿಯಲ್ಲಿ ಬೋರ್​ವೆಲ್​ಗೆ ಸಂಪರ್ಕ ಕಲ್ಪಿಸಲು ಹಾಕಿದ್ದ ವಿದ್ಯುತ್ ತಂತಿ ಮಳೆಗಾಳಿಗೆ ತುಂಡಾಗಿ ಬಿದ್ದಿದ್ದು, ಈ ತಂತಿ ತುಳಿದ ಜಕ್ಕನಹಳ್ಳಿಯ ರೈತ ಪರಮೇಶ್ವರಪ್ಪ ಮೃತಪಟ್ಟಿದ್ದಾರೆ.
ಕೊಡಗಿನಲ್ಲಿ ಮಳೆಗೆ ಉಕ್ಕಿ ಹರಿದ ನದಿಗಳು
ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 486.6 ಮಿ.ಮೀ. ಮಳೆಯಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಮೂರ್ನಾಡುವಿನ ಬೇತ್ರಿ ಸೇತುವೆ ಮುಳುಗಡೆಯಾಗಿದೆ. ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ನಾಪೋಕ್ಲು ಮತ್ತು ಮಡಿಕೇರಿ ಸಂಪರ್ಕ ರಸ್ತೆ ಮುಳುಗಡೆಯಾಗಿದ್ದು, ರ್ಯಾಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕೆಆರ್​ಎಸ್​ಗೆ ಎ7 ಅಡಿ ನೀರು
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್​ಎಸ್ ಅಣೆಕಟ್ಟೆಯಲ್ಲಿ ಎರಡೇ ದಿನದಲ್ಲಿ 7 ಅಡಿ ನೀರು ಸಂಗ್ರಹವಾಗಿದೆ. ಗುರುವಾರ 111.12 ಅಡಿ (32 ಟಿಎಂಸಿ) ನೀರಿನ ಸಂಗ್ರಹವಿತ್ತು.
ಅಪಾಯದಲ್ಲಿ ಹಳೇ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ವರುಣನ ಆರ್ಭಟ ಗುರುವಾರವೂ ಮುಂದುವರಿದಿದ್ದು, ಹಳೇ ಶಿವಮೊಗ್ಗ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ವರದಾ ನದಿ ಉಕ್ಕಿ ಹರಿದು ಸಾಗರ ತಾಲೂಕಿನಲ್ಲಿ ಗದ್ದೆ-ತೋಟಗಳು ಜಲಾವೃತಗೊಂಡಿವೆ. ಅಂಬಾರಕೊಪ್ಪ-ಶಿಕಾರಿಪುರ ಸಂಪರ್ಕ ಕಲ್ಪಿಸುವ ಕುಮದ್ವತಿ ಸೇತುವೆ ಮುಳುಗಿದೆ. ತೀರ್ಥಹಳ್ಳಿಯ ರಾಮಮಂಟಪ ಮುಳುಗಡೆಯಾಗಿದ್ದು, ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹಳೇ ಶಿವಮೊಗ್ಗ ಭಾಗದಲ್ಲಿ ಮತ್ತೆ ನೆರೆ ಭೀತಿ ಎದುರಾಗಿದೆ. ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು 250ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.ಲಿಂಗನಮಕ್ಕಿಗೆ 80 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದೆ.
ರಾಯಚೂರಿಗೆ 2 ನದಿಗಳ ಆತಂಕ
ತುಂಗಭದ್ರಾ ಮತ್ತು ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಆಲಮಟ್ಟಿ, ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ನಾರಾಯಣಪುರ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 36,750 ಕ್ಯೂಸೆಕ್ ಬಿಡಲಾಗುತ್ತಿದೆ. ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿವೆ.
ಕೃಷ್ಣಾ ನದಿಯಲ್ಲಿ ಪ್ರವಾಹವುಂಟಾದಲ್ಲಿ ಲಿಂಗಸುಗೂರು ತಾಲೂಕಿನ ಓಂಕಾರಗಡ್ಡಿ, ಮ್ಯಾದರಗಡ್ಡಿ, ಕರಕಲಗಡ್ಡಿಯಲ್ಲಿನ 14 ಕುಟುಂಬಗಳು ಹಾಗೂ ರಾಯಚೂರು ತಾಲೂಕಿನ ಕುರ್ವಕಲಾ, ಕುರ್ವಕರ್ದಾ, ಅಗ್ರಹಾರ ನಡುಗಡ್ಡೆಯಲ್ಲಿನ 298 ಕುಟುಂಬಗಳಿಗೆ ಸಮಸ್ಯೆ ಎದುರಾಗಲಿದೆ. ಜತೆಗೆ ನದಿ ಪಾತ್ರದಲ್ಲಿರುವ ಒಟ್ಟು 72 ಗ್ರಾಮಗಳ ಜನರಿಗೂ ಸಂಕಷ್ಟ ಎದುರಾಗಲಿದೆ.
ಗೋಡೆ ಕುಸಿದು ವೃದ್ಧ ಸಾವು
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಮಾದಪುರದಲ್ಲಿ ಮಳೆಗೆ ಗುರುವಾರ ಮುಂಜಾನೆ ಮನೆ ಗೋಡೆ ಕುಸಿದು ಪಡಸಾಲೆಯಲ್ಲಿ ಮಲಗಿದ್ದ ವೃದ್ಧ ಮೃತಪಟ್ಟಿದ್ದಾರೆ. ಶಿವನಂಜಯ್ಯ (75) ಮೃತರು. ಬುಧವಾರ ರಾತ್ರಿ ಊಟ ಮುಗಿಸಿ ಪಡಸಾಲೆಯಲ್ಲಿ ಮಲಗಿದ್ದರು. ಗುರುವಾರ ಮುಂಜಾನೆ ಜೋರು ಮಳೆಯಿಂದ ಶಿಥಿಲವಾಗಿದ್ದ ಮನೆ ಗೋಡೆ ಕುಸಿದು ಶಿವನಂಜಯ್ಯ ಅವರ ಮೇಲೆ ಬಿದ್ದಿದೆ. ಗೋಡೆ ಕೆಳಗೆ ಸಿಲುಕಿಕೊಂಡು ಚೀರಾಡುತ್ತಿದ್ದಾಗ ಪಕ್ಕದ ಮನೆಯಲ್ಲಿ ಮಲಗಿದ್ದ ಇವರ ಪುತ್ರ ಹಾಗೂ ಗ್ರಾಮಸ್ಥರು ಬಂದು ರಕ್ಷಿಸಿ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಚಾರ್ವಡಿ ಘಾಟ್​ನ ಹಲವೆಡೆ ಭೂ ಕುಸಿತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಬ್ಬರ ಮುಂದುವರಿದಿದ್ದು, ಚಾರ್ವಡಿ ಘಾಟ್​ನ ಹೆದ್ದಾರಿಯಲ್ಲಿ ಹಲವೆಡೆ ಭೂ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿಡಬ್ಲ್ಯುಡಿಯಿಂದ ಮಣ್ಣು ತೆರವುಗೊಳಿಸಿ ಮಿನಿ ಬಸ್, ಲಘುವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೊಪ್ಪ ತಾಲೂಕಿನ ಜಯಪುರದ ಜಲದುರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 27ರ ಬದಿ ಭೂಮಿ ಕುಸಿದಿದ್ದು, ಇನ್ನಷ್ಟು ಕುಸಿದರೆ ಸಂಚಾರ ಸ್ಥಗಿತಗೊಳ್ಳಲಿದೆ.
ಸಾರಥಿ-ಚಿಕ್ಕಬಿದರಿ ಸಂಪರ್ಕ ಕಡಿತ
ದಾವಣಗೆರೆ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಹರಿಹರ ತಾಲೂಕು ಸಾರಥಿ-ಚಿಕ್ಕಬಿದರಿ ನಡುವಿನ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ನದಿಯ ನೀರಿನ ಮಟ್ಟ 9.7 ಮೀಟರ್​ಗೆ ಏರಿಕೆಯಾಗಿದ್ದು, ಹೊನ್ನಾಳಿಯ ಬಾಲರಾಜಘಾಟ್​ನ 9 ಕುಟುಂಬಗಳ ಸ್ಥಳಾಂತರಕ್ಕೆ ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ನೂರಾರು ಎಕರೆ ಬೆಳೆ ನಾಶವಾಗಿದ್ದು, 5ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ.
ಕೃಷ್ಣೆಯ ಆರ್ಭಟ ಜೋರು
ಆಲಮಟ್ಟಿ: ಕೃಷ್ಣಾ ನದಿ ಉಗಮಸ್ಥಾನವಾದ ಮಹಾರಾಷ್ಟ್ರದ ಮಹಾಬಳೇಶ್ವರ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಗುರುವಾರ ಸಂಜೆ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್​ಗೂ ಅಧಿಕ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಪ್ರಸಕ್ತ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ಜಲಾಶಯದ ಗೇಟ್​ಗಳ ಮೂಲಕ ನದಿಗೆ ನೀರು ಹರಿಬಿಡಲಾಯಿತು. ಗುರುವಾರ ಬೆಳಗ್ಗೆ ಜಲಾಶಯಕ್ಕೆ 57,025 ಕ್ಯೂಸೆಕ್ ಇದ್ದ ಒಳಹರಿವು ಸಂಜೆ 110000 ಕ್ಯೂಸೆಕ್​ಗೆ ಏರಿತ್ತು.
ಮುಳುಗಡೆ ಭೀತಿ
ನಂಜನಗೂಡು: ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 50 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಬಿಟ್ಟಿರುವುದರಿಂದ ನದಿ ಪಾತ್ರದ ಬಡಾವಣೆಗಳಲ್ಲಿ ಮನೆಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಗುಂಡ್ಲು ನದಿಯೂ ತುಂಬಿ ಹರಿಯುತ್ತಿದ್ದು, ಹಳ್ಳದಕೇರಿ ಬಡಾವಣೆಯ ಮನೆಗಳತ್ತ ನೀರು ನುಗ್ಗಿದೆ. ಪಟ್ಟಣದ ರಾಜಾಜಿ ಕಾಲನಿ, ಸರಸ್ವತಿ ಕಾಲನಿಯಲ್ಲೂ ಮನೆಗಳು ಮುಳುಗಡೆಯಾಗುವ ಆತಂಕವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪರಿಹಾರ ಕೇಂದ್ರ ತೆರೆದು ಸಂತ್ರಸ್ತರಿಗೆ ಆಶ್ರಯ ನೀಡಲು ತಾಲೂಕು ಆಡಳಿತ ತಯಾರಿ ನಡೆಸಿದೆ.
ಪರಶುರಾಮ ದೇವಾಲಯ ಮುಳುಗಡೆ:ಚಾಮರಾಜನಗರ ರಸ್ತೆಯಲ್ಲಿರುವ ಪರಶುರಾಮ ದೇವಾಲಯ ಭಾಗಶಃ ಮುಳುಗಡೆಯಾಗಿದೆ. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿ ನದಿ ನೀರು ಸುರಂಗ ಮಾರ್ಗದ ಕಡೆ ಹರಿಯತೊಡಗಿದೆ. ತಾಲೂಕಿನ ಸುತ್ತೂರು ಗ್ರಾಮದ ಮುಖ್ಯಸೇತುವೆ ಮುಳುಗಡೆ ಹಂತದಲಿದೆ.
ಸೇತುವೆ ಜಲಾವೃತ
ಬೆಳಗಾವಿ ಜಿಲ್ಲಾದ್ಯಂತ ಮಳೆ ಮುಂದುವರಿ ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಎರಡು ಮನೆ ಕುಸಿದಿದ್ದು, ತಾಲೂಕಿನ ಮಾಳೇನಹಟ್ಟಿಯಲ್ಲಿ ರಸ್ತೆ ಕುಸಿದಿದೆ. ಮಹಾರಾಷ್ಟ್ರದ ಪಶ್ವಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೂಧಗಂಗಾ, ವೇದಗಂಗಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು, ಕೆಳ ಹಂತದ 7 ಸೇತುವೆಗಳು ಗುರುವಾರವೂ ಜಲಾವೃತ ಸ್ಥಿತಿಯಲ್ಲಿಯೇ ಇವೆ. ಯಡೂರ-ಕಲ್ಲೋಳ, ಮಲಿಕವಾಡ-ದತ್ತವಾಡ, ಸಿದ್ನಾಳ-ಹುನ್ನರಗಿ, ಕಾರದಗಾ-ಭೋಜ, ಬೋಜವಾಡಿ- ಕುನ್ನೂರ, ಜತ್ರಾಟ-ಭೀವಶಿ, ಸಿದ್ನಾಳ-ಅಕ್ಕೋಳ ಸೇತುವೆಗಳು ಜಲಾವೃತಗೊಂಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬಳ್ಳಾರಿ ನಾಲಾ, ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿರುವುದರಿಂದ 3,500 ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಸಂರ್ಪಸುವ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
