ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ವರುಣ ಅಬ್ಬರಿಸುತ್ತಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.26 ಹೆಚ್ಚಿನ ಮಳೆಯಾಗಿದೆ. ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿದು ನೆರೆಗೆ ಕಾರಣವಾಗಿವೆ. ಹಲವು ಜೀವಗಳು, ಮನೆ, ಬೆಳೆಗಳನ್ನು ಆಪೋಷನ ಮಾಡಿ, ಜನ-ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕರಾವಳಿ, ಮಲೆನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ನೂರಾರು ಹಳ್ಳಿಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ಅ.16ರಿಂದ ಮಳೆ ಆರ್ಭಟ ಕಡಿಮೆಯಾಗುವ ಸಾಧ್ಯತೆ ಇದೆ.
ಕಲಬುರಗಿ:ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕಂಗೆಡಿಸಿರುವ ಮಳೆಯ ರೌದ್ರಾವತಾರ ಗುರುವಾರ ಕೊಂಚಮಟ್ಟಿಗೆ ತಗ್ಗಿದೆಯಾದರೂ ನೆರೆಯ ಮಹಾರಾಷ್ಟ್ರದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ಕಲಬುರಗಿ ಜತೆಗೆ ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಭೀಮಾ ನದಿಪಾತ್ರದ 148 ಹಳ್ಳಿಗಳಿಗೆ ಮುಳುಗಡೆ ಆತಂಕ ಶುರುವಾಗಿದೆ.
ಕಳೆದ ಎರಡು ಮೂರು ದಿನಗಳಿಗೆ ಹೋಲಿಸಿದರೆ ಮಳೆ ಕೊಂಚ ಬಿಡುವು ನೀಡಿತ್ತಾದರೂ ನೀರಿನ ಒಳಹರಿವು ಮಾತ್ರ ಇಳಿಕೆಯಾಗಿಲ್ಲ. ಮಹಾರಾಷ್ಟ್ರದಲ್ಲಿ ಮಳೆ ತೀವ್ರಗೊಂಡಿರುವ ಪರಿಣಾಮ ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಯಬಿಟ್ಟಿರುವುದರಿಂದ 3 ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕಲಬುರಗಿ ಜಿಲ್ಲೆಯ 48ಕ್ಕೂ ಹೆಚ್ಚು ಹಳ್ಳಿಗಳಿಗೆ ಭೀಮೆ ಹೊಕ್ಕು ಜಲಾವೃತಗೊಂಡರೆ, ಇನ್ನೂ ನೂರು ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈ ಗ್ರಾಮಗಳ ಜನರು ಊರು ತೊರೆಯುತ್ತಿದ್ದು, ಒಟ್ಟಾರೆ 8 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ಇನ್ನೂ ಕೆಲವರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮಹಾರಾಷ್ಟ್ರದ ಉಜನಿ, ವೀರಭಟ್ಕಳ ಜಲಾಶಯಗಳಿಂದ ಭೀಮೆ ಒಡಲಿಗೆ ಭಾರಿ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್​ನಿಂದ 5.11 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಗುರುವಾರ ತಡರಾತ್ರಿ ನೀರು ಬಿಡುಗಡೆ ಪ್ರಮಾಣ 7.50 ಲಕ್ಷ ಕ್ಯೂಸೆಕ್​ಗೆ ಹೆಚ್ಚುವ ಸಾಧ್ಯತೆ ಇದ್ದುದ್ದರಿಂದ ಭೀಮಾ ಪಾತ್ರದ 148 ಗ್ರಾಮಗಳ ಜನರಿಗೆ ದಡಕ್ಕೆ ಹೋಗದಂತೆ ಎಚ್ಚರಿಸಲಾಗಿದೆ.
ಕಾಗಿಣಾ ಮತ್ತು ಭೀಮಾ ಪ್ರವಾಹದಿಂದ ಜಲಾವೃತಗೊಂಡ ಗ್ರಾಮಗಳಲ್ಲಿ ಸಿಲುಕಿದ್ದ 36 ಜನರನ್ನು ಎನ್​ಡಿಆರ್​ಎಫ್ ಮತ್ತು ಎಸ್​ಆರ್​ಡಿಎಫ್ ತಂಡದವರು ಬುಧವಾರ ರಾತ್ರಿಯೇ ಚುರುಕಿನ ಕಾರ್ಯಾಚರಣೆ ಮೂಲಕ ರಕ್ಷಿಸಿದ್ದಾರೆ. ಈವರೆಗೆ ಚಿತ್ತಾಪುರ ತಾಲೂಕಿನ ಮಾಲಗತ್ತಿಯಲ್ಲಿ 3, ಶಹಾಬಾದ್ ಜೆಪಿ ಕಾಲನಿ 5 ಮತ್ತು ಹಳೇ ಶಹಾಬಾದ್ 6 , ಭಂಕೂರದಲ್ಲಿ ಒಬ್ಬ, ಸೇಡಂ ತಾಲೂಕಿನಲ್ಲಿ ಸಟಪನಹಳ್ಳಿಯಲ್ಲಿ 2, ಮಳಖೇಡದಲ್ಲಿ 26, ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ 13, ಚಿಂಚೋಳಿ ಪಟ್ಟಣ-4 ಐನೊಳ್ಳಿ 3 ಹಾಗೂ ಜಟ್ಟೂರು ಗ್ರಾಮದಲ್ಲಿ 14 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾ್ನ ತಿಳಿಸಿದ್ದಾರೆ.ಇದನ್ನೂ ಓದಿ:ಎಷ್ಟಿದೆ ಗೃಹಸಚಿವರ ಬಳಿ ಸಂಪತ್ತು? ಕಳೆದ ವರ್ಷಕ್ಕಿಂತಲೂ ಕಡಿಮೆಯಾಯ್ತು ಷಾ ಆಸ್ತಿ
ಬೆಂಗಳೂರು:ನೆರೆಪೀಡಿತ ಪ್ರದೇಶಗಳಲ್ಲಿ 43 ಕಾಳಜಿ ಕೇಂದ್ರ ತೆರೆದಿದ್ದು, 4,864 ಸಂತ್ರಸ್ಥರಿಗೆ ಆಶ್ರಯ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಕೊಪ್ಪಳ, ಬೀದರ್, ಕಲಬುರಗಿ, ಬೆಳಗಾವಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇಂತಹ ಸ್ಥಳಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. 19 ರೈತರನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದೇವೆ. ನೆರೆಯಿಂದ ಇದುವರೆಗೂ ಒಬ್ಬರು ಮೃತಪಟ್ಟಿದ್ದು, 517 ಪ್ರಾಣಿಗಳು ಮೃತಪಟ್ಟಿವೆ. 2,712 ಮನೆ ಭಾಗಶಃ ಹಾನಿಯಾಗಿದೆ. 318 ಪೂರ್ಣ ಹಾನಿಗೀಡಾಗಿವೆ. ಬೆಳೆ ಹಾನಿ ಕುರಿತು ವರದಿ ಕೊಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕಲಬುರಗಿ, ಯಾದಗಿರಿಗಳಲ್ಲಿ ಶುಕ್ರವಾರ ಪ್ರವಾಸ ಕೈಗೊಂಡು ಮಳೆ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆಂದರು.
ಹಣದ ಕೊರತೆ ಇಲ್ಲ:ನೆರೆ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಬಳಿ ಸುಮಾರು 800 ಕೋಟಿ ರೂ.ಗೂ ಹೆಚ್ಚು ಹಣವಿದೆ. ಎಲ್ಲೂ ಹಣದ ಕೊರತೆ ಇಲ್ಲ. ಅಗತ್ಯ ಕ್ರಮಗಳಿಗಾಗಿ ಹಣ ಒದಗಿಸಲು ಕ್ರಮ ವಹಿಸುತ್ತೇವೆ ಎಂದರು. ಸಂತ್ರಸ್ಥರಿಗೆ ನೆರವು ಒದಗಿಸುವ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.ಇದನ್ನೂ ಓದಿ:ರಾಜ್ಯದಲ್ಲಿ ಸದ್ದಿಲ್ಲದೆ ನಡೀತಿದೆ ಜಮೀನ್ ಜಿಹಾದ್! ಈ ವಿಡಿಯೋದಲ್ಲಿದೆ ನೋಡಿ ಬೆಚ್ಚಿಬೀಳಿಸುವ ಮಾಹಿತಿ…
ಭೀಮಾ ನದಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಕ್ಕಾಗಿ ಕಲ್ಯಾಣ ಕರ್ನಾಟಕದ 3 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ರವಾನಿಸಿದ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ 5 ತಂಡಗಳು ಕಾರ್ಯಾಚರಣೆ ಪ್ರಾರಂಭಿಸಿವೆ. ಸಿಎಂ ಯಡಿಯೂರಪ್ಪ ಗುರುವಾರ ಈ ವಿಷಯ ತಿಳಿಸಿದ್ದು, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ತಲಾ 2, ರಾಯಚೂರು ಜಿಲ್ಲೆಗೆ 1 ಎನ್​ಡಿಆರ್​ಎಫ್ ತಂಡಗಳು ಸಂತ್ರಸ್ತರನ್ನು ರಕ್ಷಿಸಿ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ತಲಾ 1 ತಂಡವನ್ನು ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಜತೆಗೆ ಜನರ ಸಂರಕ್ಷಣೆಗಾಗಿ ಬೀದರ್​ಗೆ 2 ಹೆಲಿಕಾಪ್ಟರ್​ಗಳನ್ನು ನಿಯೋಜಿಸುವ ವ್ಯವಸ್ಥೆಯಾಗಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯಾದ್ಯಂತ ಇದುವರೆಗೂ 1,07,900.55 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ.
ಬೀದರ್:ಗಾಳಿಗೆ ಮನೆ ಛಾವಣಿ ಹಾರಿಹೋಗಿದ್ದು, ಸ್ನಾನದ ಕೋಣೆಯಲ್ಲೇ ವೃದ್ಧೆಯೊಬ್ಬರು ಆಶ್ರಯ ಪಡೆದುಕೊಂಡಿ ದ್ದಾರೆ. ಮಂಗಳವಾರ ರಾತ್ರಿ ಮನೆ ಕುಸಿದ ಕಾರಣ ಲಕ್ಷ್ಮೀಬಾಯಿ ಮಾಣಿಕಪ್ಪ (62) ತಲೆ ಮೇಲೆ ಸೂರಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ನರಳಾಡುತ್ತಿದ್ದಾಳೆ. ಪಾರ್ಶ್ವವಾಯು (ಲಕ್ವಾ) ರೋಗದಿಂದ ಹಾಸಿಗೆ ಹಿಡಿದ ಈಕೆಯನ್ನು ಅತಿವೃಷ್ಟಿ ಇನ್ನಷ್ಟು ಕಷ್ಟಕ್ಕೆ ತಳ್ಳಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಜಲಾಶಯಗಳ ಒಳಹರಿವು ಮತ್ತೆ ಹೆಚ್ಚಳ ವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದೇದಿನ50 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದ್ದು, ಭರ್ತಿಯಾಗುವ ಹಂತ ತಲುಪಿದೆ. ತುಂಗಾ ಜಲಾಶಯಕ್ಕೆ 25 ಸಾವಿರ ಹಾಗೂ ಭದ್ರಾ ಜಲಾಶಯಕ್ಕೆ 14,300 ಕ್ಯೂಸೆಕ್ ನೀರು ಹರಿದುಬರುತ್ತಿದೆ.
ವಿಜಯಪುರಕ್ಕೆ ಭಾರಿ ಆಘಾತ ನೀಡಿರುವ ಮಳೆ ಜನ-ಜಾನುವಾರು ಬಲಿ ಪಡೆದಿದ್ದು, ಬೆಳೆ ಆಪೋಶನ ಮಾಡಿಕೊಂಡಿದ್ದಲ್ಲದೆ ಮನೆಗಳನ್ನು ಧರಾಶಾಹಿಗೊಳಿಸಿದೆ. ಸೇತುವೆಗಳು ಮುಳುಗಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನದಿ ತೀರದ ಗ್ರಾಮಸ್ಥರನ್ನು ಸ್ಥಳಾಂತರಗೊಳಿಸ ಲಾಗುತ್ತಿದೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶಿವಪುತ್ರ ಹಣಮಂತ ನಾಟೀಕಾರ ಎಂಬಾತ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ತಾಳಿಕೋಟೆ ಬಳಿ ಉರುವಲು ತರಲು ಹೋದ 7 ಜನ ಡೋಣಿ ನದಿಯಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ರಕ್ಷಣಾ ತಂಡ ಕಾರ್ಯತತ್ಪರವಾಗಿದೆ.
ದಸರಾ,ದೀಪಾವಳಿಗೆ ವಿಶೇಷ ಸೂಚಿ: ಸರಳ, ಷರತ್ತುಬದ್ಧ ಆಚರಣೆಗೆ ಸಮ್ಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
