|ಹರೀಶ ಬೇಲೂರುಬೆಂಗಳೂರು
ರಾಜ್ಯದಲ್ಲಿ ಕರೊನಾ ತಂದೊಡ್ಡಿರುವ ಹೆಲ್ತ್ ಎಮರ್ಜೆನ್ಸಿಯಿಂದ ಸೋಂಕಿತರು ಬೆಡ್, ಆಕ್ಸಿಜನ್, ರೆಮ್​ಡೆಸಿವಿರ್ ಇನ್ನಿತರ ಅಗತ್ಯ ವೈದ್ಯಕೀಯ ಸೌಲಭ್ಯಕ್ಕೆ ಪರದಾಟ ನಡೆಸುತ್ತಿರುವುದು ಒಂದೆಡೆಯಾದರೆ, ಕೋವಿಡ್ ಹೊರತಾದ ಅನ್ಯ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ. ಕಾರಣ ಜೀವರಕ್ಷಕ ಔಷಧಗಳ ಅಭಾವ.
ಔಷಧ ಖರೀದಿಗೆ ಈ ಹಿಂದೆ ಕರೆಯಲಾಗಿದ್ದ 100 ಟೆಂಡರ್​ಗಳ ಪೈಕಿ ಅಂದಾಜು 40 ಟೆಂಡರ್​ಗಳನ್ನು ವಿವಿಧ ಕಾರಣವೊಡ್ಡಿ ರದ್ದು ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ವಿಳಂಬ ಮತ್ತು ಗೋದಾಮಿನಲ್ಲಿ ಸಮರ್ಪಕವಾಗಿ ಔಷಧ ಸಂಗ್ರಹಣೆ ಆಗದಿರುವುದೂ ಸೇರಿ ಹಲವು ಕಾರಣಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳುವವರಿಗೆ ವಿವಿಧ ಮಾತ್ರೆ ಹಾಗೂ ಚುಚ್ಚುಮದ್ದು ಸಹಿತ 150ಕ್ಕೂ ಹೆಚ್ಚು ಔಷಧಗಳ ಅಭಾವ ಉಂಟಾಗಿದೆ. ರದ್ದು ಮಾಡಿದ್ದ 40 ಟೆಂಡರ್​ಗಳಲ್ಲಿ 8 ಟೆಂಡರ್​ಗಳನ್ನು ಮತ್ತೆ ಕರೆದಿದ್ದರೂ ಅಂತಿಮ ಪ್ರಕ್ರಿಯೆ ಮುಗಿಸದೆ ಮತ್ತೆ ರದ್ದುಗೊಳಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಟೆಂಡರ್​ಗಳನ್ನು ಆಹ್ವಾನಿಸಲಾಗುತ್ತದೆ. ಮಾರ್ಚ್​ನಲ್ಲಿ ಅಂತಿಮ ಪ್ರಕ್ರಿಯೆ ಮುಗಿಸಿ ಏಪ್ರಿಲ್​ನಲ್ಲಿ ಔಷಧ ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಕೋವಿಡ್-19 ಪರಿಣಾಮದಿಂದ 2021-22ರ ಸಾಲಿನಲ್ಲಿ ಈವರೆಗೆ ಹೊಸ ಟೆಂಡರ್​ಗಳನ್ನು ಕರೆದಿಲ್ಲ. ಮತ್ತೊಮ್ಮೆ ಟೆಂಡರ್ ಆಹ್ವಾನಿಸಿ ಪ್ರಕ್ರಿಯೆ ಮುಗಿಸಲು ಮತ್ತಷ್ಟು ದಿನ ಬೇಕಾಗುತ್ತದೆ. ಇದರಿಂದ ರೋಗಿಗಳಿಗೆ ಜೀವರಕ್ಷಕ ಔಷಧಗಳು ಸಿಗದೆ ಪರದಾಡಬೇಕಾಗುತ್ತದೆ.
80 ಕೋಟಿ ರೂ. ಬಿಲ್ ಬಾಕಿ:ವೈದ್ಯಕೀಯ ಸರಬರಾಜು ನಿಗಮದಲ್ಲಿ 70 ಕೋಟಿ ರೂ. ಔಷಧ ಬಿಲ್ ಹಾಗೂ 10 ಕೋಟಿ ರೂ. ಭದ್ರತಾ ಠೇವಣಿ ಸೇರಿ ಒಟ್ಟು 80 ಕೋಟಿ ರೂ. ಬಿಲ್​ಗಳು ಬಾಕಿಯಿವೆ. ನಾಲ್ಕು ವರ್ಷಗಳಿಂದ ಈ ಬಿಲ್​ಗಳಿಗೆ ನಿಗಮ ಹಣ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಔಷಧ ಪೂರೈಸಿದ್ದ ಸರಬರಾಜುದಾರರು ಕಂಗಾಲಾಗಿದ್ದಾರೆ. ಔಷಧ ಪೂರೈಕೆಯಲ್ಲಿ ವ್ಯತ್ಯಯವೂ ಉಂಟಾಗಿದೆ. ಟೆಂಡರ್ ನಿಯಮಾನುಸಾರ 30 ದಿನದೊಳಗೆ ಔಷಧ ಬಿಲ್​ಗಳಿಗೆ ಹಣ ಪಾವತಿಸ ಬೇಕೆಂಬ ನಿಯಮವಿದೆ. ನೆರೆಯ ತಮಿಳುನಾಡು ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಹಣ ಪಾವತಿ ಆಗುತ್ತಿದೆ.
ಯಾವ್ಯಾವ ಕಾಯಿಲೆಗಳಿಗೆ ಔಷಧ ಕೊರತೆ?:ಶ್ವಾಸಕೋಶ, ಕರುಳು, ರಕ್ತಹೀನತೆ, ಸರ್ಪಸುತ್ತು, ನ್ಯುಮೋ ನಿಯಾ, ಕ್ಯಾನ್ಸರ್, ಅಸ್ತಮಾ, ಸಕ್ಕರೆ ಕಾಯಿಲೆ, ನಿದ್ರಾಹೀನತೆ, ರಕ್ತ ದೊತ್ತಡ, ಗರ್ಭಾಶಯ ರಕ್ತಸ್ರಾವ, ಹೃದಯಾಘಾತ, ಮೂಳೆ, ತುರಿಕೆ, ಫಂಗಸ್, ಮೈಗ್ರೇನ್, ಯೋನಿ ಸೋಂಕು, ಶೀತ, ಅನಸ್ತೇಸಿಯಾ, ಹೃದಯ ಶಸ್ತ್ರಚಿಕಿತ್ಸೆ, ರಕ್ತಹೆಪ್ಪುಗಟ್ಟುವಿಕೆ, ಹುಣ್ಣು, ನೋವು, ವಾಕರಿಕೆ, ವಾಂತಿ, ಮಿದುಳು ಮತ್ತು ನರ, ಕಣ್ಣಿನ ಸೊಂಕು ಸೇರಿ ವಿವಿಧ ಗಂಭೀರ ಕಾಯಿಲೆಗಳಿಗೆ ಬಳಸುವ ಔಷಧ, ಮಾತ್ರೆ ಹಾಗೂ ಚುಚ್ಚುಮದ್ದುಸಹಿತ 150ಕ್ಕೂ ಹೆಚ್ಚು ಔಷಧಗಳ ಸಂಗ್ರಹ ಖಾಲಿ ಆಗಿವೆ.
ಕಚ್ಚಾವಸ್ತುಗಳ ಬೆಲೆ ಏರಿಕೆ:ಔಷಧ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. 2021ರ ಜ.13ರ ಬಳಿಕ ವಿವಿಧ ಔಷಧಗಳ ಕಚ್ಚಾವಸ್ತುಗಳ ದರ ಪ್ರತಿ ಕೆಜಿಗೆ ಸರಾಸರಿ ಶೇ.150-200ರಷ್ಟು ಏರಿಕೆಯಾಗಿದೆ. ಆಂಟಿಬಯಾಟಿಕ್ಸ್ ಚುಚ್ಚುಮದ್ದು ದರ ಶೇ.236 ಹೆಚ್ಚಾಗಿದೆ. ಹೃದಯ ಕಾಯಿಲೆ, ಸೋಂಕು ನಿವಾರಕ, ಡಯಾಬಿಟಿಸ್, ಆಂಟಿಬಯಾಟಿಕ್ಸ್ ಉತ್ಪಾದನೆಗೆ ಅಗತ್ಯವಿರುವ ಕಚ್ಚಾವಸ್ತುಗಳು ಚೀನಾದಿಂದ ಆಮದಾಗುತ್ತಿದೆ. ಆದರೆ, ಕರೊನಾ ಲಾಕ್​ಡೌನ್, ಸಾಗಣೆ ವೆಚ್ಚ ಇನ್ನಿತರ ಕಾರಣಗಳಿಂದ ಔಷಧ ಬೆಲೆಯಲ್ಲಿ ಹೆಚ್ಚಳವಾಗಿದೆ.
ಎರಡು ವಾರಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಕಳೆದ ವರ್ಷ ಕರೆಯಲಾಗಿದ್ದ ಟೆಂಡರ್​ಗಳು ರದ್ದಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕರೊನಾ ಸಂಕಷ್ಟ ಮುಗಿದ ಬಳಿಕ ಬಾಕಿ ಬಿಲ್​ಗಳನ್ನು ಪಾವತಿಸಲಾಗುವುದು. ಸದ್ಯ ಕರೊನಾ ನಿವಾರಿಸುವ ಔಷಧಗಳ ಬಗ್ಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಔಷಧ ದಾಸ್ತಾನು ಮಾಡಲಾಗು ತ್ತಿದೆ. ಜತೆಗೆ, ಅವಶ್ಯಕ ಔಷಧಗಳ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ.
|ಲತಾಕುಮಾರಿರಾಜ್ಯ ವೈದ್ಯಕೀಯ ಸರಬರಾಜು ನಿಗಮ ಎಂಡಿ
ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
