ಬೆಂಗಳೂರು:ರಾಜಕೀಯವಾಗಿ ಸಾಕಷ್ಟು ಕಂಪನ ಮೂಡಿಸಿದ್ದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಆರ್ಥಿಕ ಸಮೀಕ್ಷೆ ವರದಿ, ಅರ್ಥಾತ್ ಜಾತಿ ಗಣತಿ ವರದಿ ಗುರುವಾರ ಸರ್ಕಾರದ ಮಡಿಲು ಸೇರಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ.51ಕ್ಕೆ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿಯನ್ನು ಹಸ್ತಾಂತರಿಸಿದರು. ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024’ ಶೀರ್ಷಿಕೆಯಲ್ಲಿ ವರದಿ ಸಲ್ಲಿಕೆಯಾಗಿದ್ದು, ಎಂಟು ವರ್ಷಗಳ ಹಿಂದೆ ಸಂಗ್ರಹಿಸಿದ ದತ್ತಾಂಶದ ಆಧಾರದಲ್ಲಿ ಆಯೋಗವು ವರದಿ ಸಿದ್ಧಪಡಿಸಿರುವುದು ಸ್ಪಷ್ಟವಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಪ್ರಸ್ತುತ ಶೇ.32 ರಷ್ಟು ಇದ್ದು, ಜನಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅದರ ಅನುಪಾತಕ್ಕೆ ತಕ್ಕಂತೆ ಶೇ.51ಕ್ಕೆ ಹೆಚ್ಚಿಸುವಂತೆ ವರದಿ ಹೇಳಿದೆ ಎಂದು ಮೂಲಗಳು ಖಚಿತಪಡಿಸಿವೆ. ಕಾಂತರಾಜ್ ಆಯೋಗ ಸಿದ್ಧಪಡಿಸಿದ್ದ ದತ್ತಾಂಶಗಳನ್ನು ಇಟ್ಟುಕೊಂಡು ಆರ್ಥಿಕ ತಜ್ಞರ ಜತೆ ಚರ್ಚೆ ನಡೆಸಿ ವೈಜ್ಞಾನಿಕವಾಗಿ ಮೀಸಲಾತಿ ಪ್ರಮಾಣವನ್ನು ಕೆ. ಜಯಪ್ರಕಾಶ್ ಹೆಗ್ಡೆ ಆಯೋಗ ಸಿದ್ಧಪಡಿಸಿದೆ.
ವರದಿ ಹೇಳಿರುವುದೇನು?:ಕೆಟಗರಿ ಒಂದನ್ನು ವಿಭಜಿಸಿ ಕೆಟಗರಿ 1 ಮತ್ತು ಕೆಟಗರಿ 1ಎ ಎಂದು ಬದಲಾವಣೆ ಮಾಡಲಾಗಿದೆ. ಪ್ರವರ್ಗ 2ಎ ನಲ್ಲಿದ್ದ ಕೆಲ ಅತಿ ಹಿಂದುಳಿದ ಜಾತಿಗಳನ್ನು ಕೆಟಗರಿ 1ಎ ಗೆ ವರ್ಗಾವಣೆ ಮಾಡಲಾಗಿದೆ. ಕೆಟಗರಿ 1 ರಲ್ಲಿ ಅಲೆಮಾರಿ ವರ್ಗಗಳನ್ನು ಗುರುತಿಸಲಾಗಿದೆ. ಕೆಟಗರಿ 1ಎ ಗೆ ಕುಂಬಾರ, ಮಡಿವಾಳರಂತಹ ಅತಿ ಹಿಂದುಳಿದ ಜಾತಿಗಳನ್ನು ಸೇರಿಸಲಾಗಿದೆ.
ಪ್ರತಿರೋಧದ ಕುತೂಹಲ:ಜಾತಿ ಗಣತಿ ವರದಿ ಸ್ವೀಕಾರದ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೇರಿ ಲಿಂಗಾಯತ ಸಮುದಾಯದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಒಕ್ಕಲಿಗ ಸಮುದಾಯದ ಕಡೆಯಿಂದಲೂ ತೀವ್ರ ಆಕ್ಷೇಪ ಕೇಳಿಬಂದಿತ್ತು. ಇನ್ನೊಂದೆಡೆ ಅಹಿಂದ ವರ್ಗಗಳಿಂದ ಜಾತಿ ಗಣತಿ ವರದಿ ಸ್ವೀಕಾರ ಮಾಡಲು ಒತ್ತಡ ಹೆಚ್ಚಾಗಿತ್ತು. ಇದೀಗ ಸಿಎಂ ವರದಿ ಸ್ವೀಕರಿಸಿದ್ದು, ಶುಕ್ರವಾರದಿಂದ ಪರಸ್ಪರ ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್​ನಲ್ಲಿ ದ್ವಂದ್ವ:ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ದ್ವಂದ್ವ ಇದೆ. ಜಾತಿ ಗಣತಿ ಹಳೆಯದಾಗಿದೆ ಮತ್ತು ಸರಿಯಾದ ರೀತಿಯಲ್ಲಿ ನಡೆದಿಲ್ಲ. ಹೀಗಾಗಿ ಹೊಸದಾಗಿ ಗಣತಿ ನಡೆಸಲಿ ಎಂಬ ವಾದ ಬಲವಾಗಿದ್ದು, ಸಿದ್ದರಾಮಯ್ಯ ಬಣ ವರದಿ ಬಗ್ಗೆ ಬೆನ್ನಿಗೆ ನಿಂತಿದೆ. ಒಕ್ಕಲಿಗ ಸಮುದಾಯ ಪಕ್ಷಾತೀತವಾಗಿ ಸಹಿ ಸಂಗ್ರಹಿಸಿತ್ತು. ಕೇಂದ್ರ ಸಚಿವರು, ಸಂಸದರು ಸೇರಿ 38 ಒಕ್ಕಲಿಗ ಶಾಸಕರಿಂದ ಸಹಿ ಸಂಗ್ರಹಿಸಿ, ಸರ್ಕಾರಕ್ಕೆ ಅಭಿಪ್ರಾಯ ತಿಳಿಸಲಾಗಿತ್ತು. ಇನ್ನೊಂದೆಡೆ, ವೀರಶೈವ ಲಿಂಗಾಯತ ಸಮುದಾಯದ 33 ಶಾಸಕರು ಸಹಿ ಸಂಗ್ರಹಿಸಿ ವೈಜ್ಞಾನಿಕ ಸಮೀಕ್ಷೆಗೆ ಒತ್ತಾಯಿಸುವ ಮೂಲಕ ಈಗಿನ ವರದಿಯನ್ನು ಒಪ್ಪಬಾರದೆಂದು ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಆದರೆ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಶಿಫಾರಸು ಇರುವುದರಿಂದ ಒಪು್ಪವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ವರದಿ ಬಹಿರಂಗ ಸಾಧ್ಯವಿಲ್ಲ:ಸಾಮಾಜಿಕ ಮತ್ತು ಶೈಕ್ಷಣಿಕೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ವರದಿಯಲ್ಲೇನಿದೆ ಎಂದು ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ. ವರದಿಯನ್ನು ಸರ್ಕಾರ ಸಂಪುಟ ಸಭೆಯಲ್ಲಿಟ್ಟು ಮುಂದೆ ಏನು ಮಾಡಬೇಕೆಂದು ತೀರ್ಮಾನ ಮಾಡಲಿದೆ. ನಾವು ಶಿಫಾರಸುಗಳನ್ನು ಮಾಡಿದ್ದೇವೆ. ಕಾಂತರಾಜು ಸಿದ್ಧಪಡಿಸಿದ್ದ ವರದಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ವರದಿ ಕೊಟ್ಟಿದ್ದೇವೆ. ಬಿಟ್ಟುಹೋಗಿದ್ದ ಅನೇಕ ಸಮುದಾಯಗಳುಗಳನ್ನು ಸೇರಿಸಿದ್ದೇವೆ. ಮುಂದಿನದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಚುನಾವಣಾ ಅಸ್ತ್ರ:ಜಾತಿಗಣತಿಯ ವರದಿಯನ್ನೇ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಮೀಸಲಾತಿ ಪ್ರಮಾಣ ಹೆಚ್ಚಳದ ಮೂಲಕ ಆಯಾ ವರ್ಗಗಳನ್ನು ಆಕರ್ಷಣೆ ಮಾಡಿಕೊಳ್ಳುವ ಉದ್ದೇಶ ಇದೆ ಎಂದು ಹೇಳಲಾಗಿದೆ.
ಬಿಜೆಪಿ ಅವಧಿಯ ವರ್ಗೀಕರಣ ರದ್ದು:ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಆಯೋಗ ಪ್ರವರ್ಗ 2 ಸಿ ಮತ್ತು ಡಿ ಹಾಗೂ ಪ್ರವರ್ಗ 3 ಸಿ ಮತ್ತು ಡಿ ಎಂಬ ವಿಭಜನೆ ಮಾಡಲಾಗಿತ್ತು. ಆದರೆ, ಈಗ ಸಿ ಮತ್ತು ಡಿಗಳನ್ನು ಎರಡರಲ್ಲೂ ಕೈ ಬಿಡಲಾಗಿದೆ. ಹಿಂದೆ ಇದ್ದ ಮೀಸಲಾತಿ ಮುಂದುವರಿಸಿ ಪ್ರಮಾಣ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ.
ಅಧ್ಯಯನಕ್ಕೆ ಸಮಿತಿ:ಆಯೋಗದ ವರದಿಯನ್ನು ಸಮಿತಿಯೊಂದರಿಂದ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ವೀರಶೈವ ಲಿಂಗಾಯತ ಸಮುದಾಯ ಒಂದೇ:ಪಂಚಮಸಾಲಿಗಳು ಪ್ರತ್ಯೇಕ ಮೀಸಲಾತಿಗೆ ಬೇಡಿಕೆಯನ್ನಿಟ್ಟಿದ್ದಾರೆ. ಆದರೆ, ಈಗ ಸಲ್ಲಿಸಿರುವ ವರದಿ ಪ್ರಕಾರ ಹಿಂದೆ ಇದ್ದಂತೆ ಪ್ರವರ್ಗ 3ಬಿ ಯಲ್ಲಿಯೇ ವೀರಶೈವ ಹಾಗೂ ಲಿಂಗಾಯತ ಜಾತಿಗಳು ಮುಂದುವರಿಯುತ್ತವೆ. ಆದರೆ, ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಲಹೆ ನೀಡಲಾಗಿದೆ. ಈಗ ಶೇ.5 ಮೀಸಲಾತಿ ಇದ್ದು ಅದನ್ನು ಶೇ.7 ಕ್ಕೆ ಹೆಚ್ಚಿಸಲು ವರದಿ ಹೇಳಿದೆ. ಒಕ್ಕಲಿಗರು ಪ್ರವರ್ಗ 3ಎ ನಲ್ಲಿದ್ದು ಈಗ ಮೀಸಲಾತಿ ಶೇ.4 ಇದೆ. ಅದನ್ನು ಶೇ 6ಕ್ಕೆ ಹೆಚ್ಚಿಸಲು ವರದಿ ಹೇಳಿದೆ ಎಂದು ಗೊತ್ತಾಗಿದೆ.
ಅವೈಜ್ಞಾನಿಕ ವರದಿ ಒಪ್ಪಲ್ಲ್:ವಾಸ್ತವ ಅಂಶಗಳಿಂದ ದೂರವಿರುವ ಹಿಂದುಳಿದ ಆಯೋಗದ ವರದಿ ಒಪ್ಪಲು ಸಾಧ್ಯವೇ ಇಲ್ಲ ಎಂದು ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. ಸಮೀಕ್ಷೆ ವೇಳೆ ಸಾಕಷ್ಟು ಲೋಪ- ದೋಷಗಳಾಗಿವೆ. ಹೀಗಾಗಿ ವೈಜ್ಞಾನಿಕ ಮರು ಗಣತಿ ನಡೆಸಬೇಕು ಎಂಬ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದಿದ್ದಾರೆ. ಜಾತಿ ಗಣತಿ ವರದಿ ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಘೋಷಿಸಿದೆ.
ನನ್ನ ಜಾತಿಯನ್ನೇ ಕೇಳಿಲ್ಲ:ಜಾತಿ ಸಮೀಕ್ಷೆಗಾಗಿ ಎಲ್ಲರ ಬಳಿಯೂ ಹೋಗಿದ್ವಿ ಎಂದು ಹೇಳುವುದಾದರೆ ನನ್ನ ಬಳಿಯೇ ಬಂದಿಲ್ಲ. ನನ್ನ ಜಾತಿಯನ್ನೇ ಕೇಳಿಲ್ಲ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ನಿರ್ಧಾರ ತಿಳಿಯದೇ ಪರ- ವಿರೋಧವಾಗಿ ಮಾತನಾಡಲಾಗದು. ಎಲ್ಲರನ್ನೂ ವಿಚಾರಿಸಿ ವರದಿ ಮಾಡಿದರೆ ಸೂಕ್ತ. ಎಲ್ಲರೂ ಒಪ್ಪುವಂತಹ ವರದಿ ಸರ್ಕಾರ ಸ್ವೀಕರಿಸಲಿ ಎಂದು ಹೇಳಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರಿಗೆ ನೀಡಿದ ಆದೇಶದಲ್ಲಿ ಜಾತಿ ಗಣತಿ ಮಾಡಲು ಆದೇಶ ಇರಲಿಲ್ಲ. ಜಾತಿ ಗಣತಿ ಯಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ವರದಿ ಸಾರ್ವಜನಿಕವಾಗಿ ಚರ್ಚೆಯಾಗಲಿ. ನಾವು ಹಿಂದುಳಿದ ವರ್ಗದವರ ವಿರೋಧಿಗಳಲ್ಲ.
| ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ
ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಅದನ್ನು ಗಮನಿಸಿದ ಮೇಲೆ, ಒಪ್ಪಿಕೊಳ್ಳಬೇಕೋ, ಬಿಡಬೇಕೋ ಎನ್ನುವುದನ್ನು ಸರ್ಕಾರ ತೀರ್ವನಿಸಲಿದೆ. ವರದಿ ಬಗ್ಗೆ ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಆತಂಕ ಇರುವುದು ನಿಜ. ಏಕೆಂದರೆ ಇಲ್ಲಿ ಹೆಚ್ಚಿನವರು ಉಪಪಂಗಡಗಳ ಹೆಸರು ಬರೆಸಿದ್ದಾರೆ. ಇದರ ಬದಲು ಎಲ್ಲ ಉಪಪಂಗಡಗಳೂ ’ವೀರಶೈವ ಲಿಂಗಾಯತ’ ಎಂದಾಗಬೇಕು ಎಂದು ನಾವು ದನಿ ಎತ್ತಿದ್ದು ನಿಜ.
| ಎಂ.ಬಿ. ಪಾಟೀಲ್ ಕೈಗಾರಿಕಾ ಸಚಿವ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + eight =
Remember me
