ರಾಜ್ಯದಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಚೇತರಿಕೆ ಕಾಣಲು ಕೈಗಾರಿಕೆ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಆದ್ಯತೆ ನೀಡಲಾಗಿದೆ. ಉದ್ಯಮ ಸ್ಥಾಪನೆ, ವಿವಿಧ ಪರವಾನಗಿ ಪಡೆಯುವ ಪ್ರಕ್ರಿಯೆಗೆ ಚುರುಕು ನೀಡಲು ನಿರ್ಧರಿಸಿರುವ ಸರ್ಕಾರ, ಇಂಥ ಹಲವು ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರುವುದಾಗಿ ಘೋಷಣೆ ಮಾಡಿದೆ. 9 ಜಿಲ್ಲೆಗಳಲ್ಲಿ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್, ಸಣ್ಣ ಉದ್ಯಮಕ್ಕೆ ಪ್ರೋತ್ಸಾಹ ಸೇರಿ ಹಲವು ಕ್ರಮಗಳನ್ನು ಘೋಷಿಸಲಾಗಿದೆ.
ಉತ್ತರ ಹಾಗೂ ದಕ್ಷಿಣ ಕರ್ನಾಟಕದ ನಡುವಿನ ಪ್ರಾದೇಶಿಕ ಅಸಮಾನತೆ ದೂರವಾಗಿಸುವತ್ತ ಸಿಎಂ ಗಮನ ಹರಿಸಿದ್ದಾರೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ನಮ್ಮ ಸರ್ಕಾರದ ಗುರಿ. ಇದಕ್ಕಾಗಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೈಗಾರಿಕೆ, ಮೂಲಸೌಕರ್ಯ, ಇಂಧನ ಮೊದಲಾದ ವಲಯಗಳಿಗೆ ಹೂಡಿಕೆ ಆಕರ್ಷಿಸಲು ಆದ್ಯತೆ ನೀಡಲಾಗುವುದು. ಈ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಲು ಹಾಗೂ ಆರ್ಥಿಕ ಬೆಳವಣಿಗೆಯಲ್ಲಿನ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಸ್ವಿಜರ್ಲೆಂಡಿನ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸಿದಾಗ, ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆಗೆ ಭೂಮಿ ಪಡೆಯಲು ಸಮಸ್ಯೆ ಇರುವುದಾಗಿ ಅಲ್ಲಿನ ಉದ್ಯಮಿಗಳು ತಿಳಿಸಿದ್ದನ್ನು ಯಡಿಯೂರಪ್ಪ ಉಲ್ಲೇಖಿಸಿದ್ದಾರೆ. 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳು ಹಾಗೂ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ್ದೇವೆ. ಭೂ ಖರೀದಿ ಹಾಗೂ ವಿವಿಧ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆ ಪಡೆಯುವುದು ಕ್ಲಿಷ್ಟಕರವಾಗಿದೆ ಎಂಬ ವಿಷಯವನ್ನು ಆದ್ಯತೆ ಮೇರೆಗೆ ಸುಧಾರಿಸಲಾಗುತ್ತದೆ ಎಂದಿದ್ದಾರೆ.
ಉದ್ಯಮಕ್ಕೆ ಸಕಾಲ ಸೇವೆ
ಉದ್ದಿಮೆದಾರರು ಸುಲಲಿತವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುವಾಗುವಂತೆ ಭೂಮಿ ಹಂಚಿಕೆ, ನಕ್ಷೆ ಅನುಮೋದನೆ, ಲೀಸ್ ಕಂ ಸೇಲ್ ಡೀಡ್, ಕ್ರಯಪತ್ರ ಇತ್ಯಾದಿ ಸೇವೆಗಳನ್ನು ಕ್ಷಿಪ್ರಗತಿಯಲ್ಲಿ ಪೂರೈಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ(ಕೆಎಸ್​ಎಸ್​ಐಡಿಸಿ)ದ ಮುಖ್ಯ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗುತ್ತದೆ.
ಇದರಿಂದಾಗಿ ಅನೇಕ ಅನುಮೋದನೆಗಳು ಕಾಲಮಿತಿಯಲ್ಲಿ ಇತ್ಯರ್ಥವಾಗುತ್ತವೆ, ಕೇಂದ್ರ ಸರ್ಕಾರದ ಈಸ್ ಆಫ್ ಡೂಯಿಂಗ್ ಬಿಸಿನೆಸ್ (ಉದ್ಯಮಸ್ನೇಹಿ ವಾತಾವರಣ) ಆಲೋಚನೆಗೆ ಇಂಬು ನೀಡಲಿದೆ. ಇದರ ಜತೆಗೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಗುರುತಿಸುವ ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ, ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತಂದು ನಿಯಮಗಳನ್ನು ರೂಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
11 ಜಿಲ್ಲೆಗಳಿಗೆ ಡಿಜಿಟಲ್ ತಾರಾಲಯ
ಸಂಶೋಧನೆ, ನಾವಿನ್ಯತೆ, ವಾಣಿಜ್ಯೀಕರಣದಲ್ಲಿ ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅನುಷ್ಠಾನಕ್ಕೆ ಹಾಗೂ 5-ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು Artificial Intelligence Research Translation Park ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ಸಹಯೋಗದೊಂದಿಗೆ ಸ್ಥಾಪಿಸಲಿದ್ದು, ಇದಕ್ಕಾಗಿ ಮುಂದಿನ 3 ವರ್ಷಕ್ಕೆ 60 ಕೋಟಿ ರೂ. ಅನುದಾನ ಒದಗಿಸಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಕಾರ್ಯಾಚರಣೆಯಲ್ಲಿರುವ ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ವಿಸ್ಮಯಗಳ ಬಗ್ಗೆ ತಿಳಿಸುವ ಸಂಚಾರಿ ಡಿಜಿಟಲ್ ತಾರಾಲಯಗಳನ್ನು ಇತರ 5 ಜಿಲ್ಲೆಗೆ ವಿಸ್ತಿರಿಸಲು 5 ಕೋಟಿ ರೂ. ಮೀಸಲಿಡಲಾಗಿದೆ.
ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ ನೀಡಲು ‘ವಿಜ್ಞಾನ ಪ್ರತಿಭಾ ಶೋಧನೆ’ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಪ್ರಮುಖ ವಿಜ್ಞಾನ ಸಂಸ್ಥೆಗಳ ಮೂಲಕ ಸುಮಾರು 500 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ 2 ವರ್ಷಗಳ ವರೆಗೆ ಶಿಕ್ಷಣ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 1000 ರೂ. ಶಿಷ್ಯವೇತನ ನೀಡಲಾಗುವುದು. ಸಾಗರದ ಇರುವಕ್ಕಿ ಗ್ರಾಮದಲ್ಲಿ ಶಿವಮೊಗ್ಗದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾಮಗಾರಿ ಪೂರ್ಣಗೊಳಿಸಿ, ತರಗತಿ ಪ್ರಾರಂಭಿಸಲು ಕ್ರಮವಹಿಸಲಾಗಿದೆ.
ಕೈಗಾರಿಕೆಗೆ ಉತ್ತೇಜನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
