ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೊಸ ರೂಪ ನೀಡಲು ಮುಂದಾಗಿರುವ ಸಚಿವ ವಿ.ಸುನೀಲ್ ಕುಮಾರ್, ಬುಧವಾರ ವಿಜಯವಾಣಿ ಜತೆ ನಡೆದ ಸಂವಾದದಲ್ಲಿ ಹಲವು ಉಪ ಕ್ರಮಗಳನ್ನು ಪ್ರಕಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಘ-ಸಂಸ್ಥೆಗಳಿಗೆ ನೀಡಲಾಗುವ ಅನುದಾನ ಇನ್ನು ನಿರಂತರ ಪಡೆಯುವಂತಿಲ್ಲ. ಸತತ 5 ವರ್ಷ ಅನುದಾನ ಪಡೆದಿದ್ದವರು ಮತ್ತೆ ಅರ್ಜಿ ಸಲ್ಲಿಸದಂತೆ ಬ್ರೇಕ್ ಹಾಕಲು ಇಲಾಖೆ ಮುಂದಾಗಿದೆ. 20-30 ವರ್ಷ ಒಂದೊಂದೇ ಸಂಘ-ಸಂಸ್ಥೆಗಳೇ ಅನುದಾನ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಲೆಟರ್ ಹೆಡ್ ಸಂಘ-ಸಂಸ್ಥೆಗಳು, ಫೋಟೋ ಡಾಕ್ಯೂಮೆಂಟೇಷನ್ ಮಾಡಿ ಅನುದಾನ ಪಡೆಯುತ್ತಿರುವುದನ್ನು ಪತ್ತೆ ಮಾಡಲಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಈ ಕ್ರಮವಾಗಿದೆ. ಇನ್ನಷ್ಟು ಹೊಸ ಸಂಘ-ಸಂಸ್ಥೆಗಳಿಗೆ ಮತ್ತು ಎಲ್ಲರಿಗೂ ಅನುದಾನ ಸಿಗುವಂತಾಗಲಿ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
ಅನುದಾನ ಮಿತಿ 2.5 ಲಕ್ಷ ರೂ.:ಇಲಾಖೆಯಿಂದ ನೀಡುವ ಅನುದಾನ ಮಿತಿಯನ್ನು ಗರಿಷ್ಠ 2.5 ಲಕ್ಷ ರೂ.ಗೆ ಸೀಮಿತ ಮಾಡಲಾಗಿದೆ. ಈ ಮೊದಲು ಅನುದಾನಕ್ಕೆ ಯಾವುದೇ ಮಿತಿ ಇರಲಿಲ್ಲ. ಕೆಲವರು ಮಾತ್ರವೇ 50 ಲಕ್ಷ ರೂ. ಅನುದಾನ ಪಡೆದು ಕೊಂಡಿರುವುದು ಗಮನಕ್ಕೆ ಬಂದಿದೆ. ಹಾಗಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ. 2.5 ಲಕ್ಷ ರೂ.ಗೆ ಮಿತಿ ಹಾಕಿರುವುದರಿಂದ ಹೆಚ್ಚು ಸಂಘ-ಸಂಸ್ಥೆಗಳಿಗೆ ಅನುದಾನ ಸಿಗುವಂತಾಗಿರುವುದು ಮಹತ್ವದ ನಿರ್ಧಾರಗಳಲ್ಲೊಂದು ಎಂದರು.
ರಂಗಾಯಣದಲ್ಲಿ ಸಮಸ್ಯೆಗಳಿಲ್ಲ:ಮೈಸೂರು ರಂಗಾಯಣ ವಿಷಯದಲ್ಲಿ ಪ್ರತಿಭಟನೆ ಆಗಿದ್ದು ನನ್ನ ಗಮನದಲ್ಲಿದೆ. ಬದಲಾವಣೆ ಮಾಡಲು ಹೊರಟಾಗ ಪ್ರತಿಭಟನೆ ಎದುರಿಸಬೇಕಾಗುವುದು ಸಹಜ. ಎಷ್ಟೋ ವರ್ಷಗಳಿಂದ ಒಂದೇ ಕಡೆಯಲ್ಲಿ ಕೆಲ ಕಲಾವಿದರು ಬೀಡು ಬಿಟ್ಟಿದ್ದರು. ಅವರ ಅನುಭವ ಎಲ್ಲಡೆ ಸಿಗುವಂತಾಗಲಿ ಎನ್ನುವ ಕಾರಣಕ್ಕೆ ಬೇರೆ ಕಡೆಗೆ ವರ್ಗಾವಣೆಯನ್ನು ಮಾಡಲಾಗಿದೆ. ರಂಗಾಯಣದಲ್ಲಿ ಈಗ ಸಮಸ್ಯೆಗಳಿಲ್ಲ, ಎಲ್ಲವೂ ಸರಿಯಾಗಿದೆ ಎಂದರು.
ನಾಲ್ವರು ಜಂಟಿ ನಿರ್ದೇಶಕರು:ಇಲಾಖೆಯ ನಾಲ್ವರು ಜಂಟಿ ನಿರ್ದೇಶಕರು ಬೆಂಗಳೂರಿನಲ್ಲಿಯೇ ಇದ್ದರು. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಆ 4 ಜನರನ್ನು ಅವರ ಸ್ಥಳಗಳಿಗೆ ಕಳುಹಿಸಲಾಗಿದೆ. ಆಡಳಿತ ವಿಕೇಂದ್ರೀಕರಣ ಮಾಡುವ ಪ್ರಕ್ರಿಯೆಯಲ್ಲಿ ಇದು ಒಂದು ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೇಂದ್ರ:ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಕೇಂದ್ರ ಸ್ಥಾಪನೆ ಮಾಡಲು ವಿಳಂಬವಾಗಿರುವುದು ನಿಜ. ಎಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಗೊಂದಲವಿತ್ತು. ಈಗ ಮೈಸೂರಿನಲ್ಲಿಯೇ (ವಾಣಿ ವಿಲಾಸ) ಕೇಂದ್ರ ಸ್ಥಾಪನೆ ಮಾಡುವುದು ನಿಗದಿಯಾಗಿದ್ದು, ಅಲ್ಲಿ ಜಾಗವನ್ನು ಗುರುತಿಸಿ ನೀಡಿರುವುದರಿಂದ ಇನ್ನು ವಿಳಂಬವಾಗುವುದಿಲ್ಲ. ಇದಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿನಂತಿ ಮಾಡಿಕೊಳ್ಳಲಾಗಿದೆ. ಅನುದಾನ ಸಿಗುವ ಭರವಸೆಯೂ ಸಿಕ್ಕಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ಪ್ರಧಾನಿ ಮೋದಿ ಆಶಯ, ಸಿಎಂ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಇಂಧನ ಇಲಾಖೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಎದೆತಟ್ಟಿ ಹೇಳಬಹುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯ ಎದುರು ನೋಡಬಹುದು.
|ಸುನೀಲ್ ಕುಮಾರ್ಇಂಧನ ಸಚಿವ
ಪ್ರಸಕ್ತ ಸಾಲಿನಿಂದ ಪದ್ಮಶ್ರೀ ಪ್ರಶಸ್ತಿ ಮಾದರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಗೆ ಯಾವುದೇ ಅರ್ಜಿ ಆಹ್ವಾನ ಮಾಡುವುದಿಲ್ಲ. ಬದಲಿಗೆ ಜನರೇ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದೆ. ಈ ಕುರಿತು ಆನ್​ಲೈನ್​ನಲ್ಲಿ ಮಾಹಿತಿ ಲಭ್ಯವಿದೆ. ಪ್ರಶಸ್ತಿ ಆಯ್ಕೆ ವಿಚಾರಕ್ಕೆ ಈಗಾಗಲೆ ಸಮಿತಿ ರಚಿಸಲಾಗಿದ್ದು, ಎಲ್ಲ ಕ್ಷೇತ್ರಗಳ ಅರ್ಹರನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು. ಅಕಾಡೆಮಿ ಹಾಗೂ ರಂಗಾಯಣಗಳ ನಿರ್ವಹಣೆ ಮತ್ತು ಚಟುವಟಿಕೆಗಳಿಗೆ ಪ್ರತ್ಯೇಕ ಅನುದಾನ ನೀಡುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು. ಕೋಟಿ ಕಂಠ ಗಾಯನ: ಮಾತಾಡ್ ಮಾತಾಡ್ ಕನ್ನಡ ಅಭಿಯಾನವನ್ನು ಈ ಬಾರಿ ಕೋಟಿ ಜನರಿಗೆ ತಲುಪಿಸಲು ಉದ್ದೇಶಿಸಲಾಗಿದೆ. ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಕೋಟಿ ಜನರಿಂದ ಕನ್ನಡ ಗೀತೆಗಳನ್ನು ಹೇಳಿಸಲು ಪೂರ್ವತಯಾರಿ ನಡೆಯುತ್ತಿದೆ. ಶೀಘ್ರದಲ್ಲೇ ಗೀತೆಗಳ ಪಟ್ಟಿ ಹಾಗೂ ದಿನಾಂಕ ಪ್ರಕಟಿಸಲಾಗುವುದು ಎಂದರು.
ಕಲಾವಿದರಿಗೆ ಗುರುತಿನ ಚೀಟಿ:ರಾಜ್ಯದಲ್ಲಿ ಕಲಾವಿದರನ್ನು ಗುರುತಿಸಲು ಕಲಾವಿದರ ಡಾಟಾ ಬ್ಯಾಂಕ್ ಮಾಡಲಾಗಿದೆ. ಈವರೆಗೂ ಎಲ್ಲ ಕಲಾಪ್ರಕಾರಣಗಳಿಂದ 22 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಸೆಪ್ಟೆಂಬರ್​ನಲ್ಲಿ ಎಲ್ಲರಿಗೂ ಗುರುತಿನ ಚೀಟಿ ನೀಡಲಾಗುವುದು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸೇರಿ ರಾಜ್ಯದ ಎಲ್ಲ ರಂಗ ಮಂದಿರಗಳನ್ನು ಆನ್​ಲೈನ್ ಮೂಲಕ ಮುಂಗಡ ಕಾಯ್ದಿರಿಸುವಿಕೆಗೆ ಅನುವು ಮಾಡಿಕೊಡಲಾಗಿದೆ ಎಂದರು.
ಕಲಾಗ್ರಾಮದಲ್ಲಿ ನಾಡದೇವಿ ಪ್ರತಿಮೆ:ನಾಡದೇವಿಯ ಪ್ರತಿಮೆಗೆ ಅಂತಿಮ ರೂಪ ನೀಡಲಾಗಿದ್ದು, ಬೆಂಗಳೂರು ವಿವಿ ಸಮೀಪದ ಕಲಾಗ್ರಾಮದಲ್ಲಿ ನಾಡದೇವಿ ಪ್ರತಿಮೆ ಸ್ಥಾಪಿಸಲು ಈಗಾಗಲೆ ಆದೇಶ ನೀಡಲಾಗಿದೆ ಎಂದರು.
50 ಲಕ್ಷ ರಾಷ್ಟ್ರಧ್ವಜ ಮಾರಾಟ:ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಮನೆ ಮನೆ ತ್ರಿವರ್ಣ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 50 ಲಕ್ಷ ರಾಷ್ಟ್ರಧ್ವಜ ಮಾರಾಟ ಮಾಡಲಾಗುವುದು. ರಾಷ್ಟ್ರಧ್ವಜಕ್ಕಾಗಿ ಜನರು ಜಿಲ್ಲಾ ಕೇಂದ್ರಗಳಿಗೆ ಬರುವುದನ್ನು ತಪ್ಪಿಸಲು ಹಾಗೂ ಸ್ಥಳೀಯವಾಗಿಯೇ ಅಂದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನ್ಯಾಯಬೆಲೆ ಅಂಗಡಿ ಹಾಗೂ ಶಾಲೆಗಳಲ್ಲಿ ದೊರೆಕುವಂತೆ ವ್ಯವಸ್ಥೆ ಮಾಡಲಾಗಿದೆ. 22 ರೂ. ಗೆ ರಾಷ್ಟ್ರಧ್ವಜ ದೊರೆಯಲಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್-ಕಲ್ಲಿದ್ದಲು ಕೊರತೆ ಇಲ್ಲ:ರಾಜ್ಯದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 24 ಸಾವಿರ ಮೆಗಾವಾಟ್. 2021ರ ಮಾರ್ಚ್​ನಲ್ಲಿ ಗರಿಷ್ಠ ಬೇಡಿಕೆ 14,800 ಮೆವಾ ತಲುಪಿದ್ದು ರಾಜ್ಯದ ಈವರೆಗಿನ ದಾಖಲೆಯಾಗಿದೆ. ಆದಾಗ್ಯೂ ವಿದ್ಯುತ್ ಕೊರತೆ, ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಘಟಕ ಸ್ಥಗಿತ ಇತ್ಯಾದಿ ಅಡಚಣೆ ಆಗದಂತೆ ಬೇಡಿಕೆ- ಪೂರೈಕೆ ಮಧ್ಯೆ ಸಮತೋಲನ ಕಾಯ್ದುಕೊಳ್ಳಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಚಾರ್ಜಿಂಗ್ ಪಾಯಿಂಟ್:ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕಾರಣಕ್ಕೆ ಶೀಘ್ರವೇ ರಾಜ್ಯದ 1110 ಕಡೆ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲಾಗುತ್ತಿದೆ. ವೈಯಕ್ತಿಕವಾಗಿ ಚಾರ್ಜಿಂಗ್ ಪಾಯಿಂಗ್ ಹಾಕಿಕೊಳ್ಳಲು ಮುಂದೆ ಬಂದರೆ ಶೀಘ್ರವೇ ಅನುಮತಿ ಕೊಡುವ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರದಿಂದ ನೆರವು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
