ಮೊಳೆರೋಗ ಬಂದಾಕ್ಷಣ ಅದಕ್ಕೆ ಪರಿಹಾರವೆಲ್ಲಿ ಎಂದು ಹುಡುಕಾಟ ಆರಂಭಿಸಿದಾಗ ಮೊದಲು ನೆನಪಿಗೆ ಬರುವುದು ಮೂಲವ್ಯಾಧಿ ಚಿಕಿತ್ಸಾಲಯ. ಹಾದಿಬದಿಯಲ್ಲಿ ಇಂತಹ ನಾಮಫಲಕವುಳ್ಳ ಮಾನ್ಯತೆ ಇಲ್ಲದ ಪೈಲ್ಸ್ ಚಿಕಿತ್ಸಾ ಕೇಂದ್ರಗಳಲ್ಲಿ ಅನಕ್ಷರಸ್ಥ, ಪದವಿ ಹೊಂದಿರದ ವೈದ್ಯರೆಂಬವರು ಚಿಕಿತ್ಸೆ ನೀಡುವುದು, ಪ್ರತಿಭಾವಂತ, ಹಲವಾರು ಪದವಿಗಳನ್ನು ಹೊಂದಿರುವ ರೋಗಿ ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಕಾಲಕಳೆದಂತೆ ಆಯುರ್ವೆದವನ್ನು ತೆಗಳುವುದು ಇಂದಿಗೂ ನಡೆಯುತ್ತಲೇ ಇದೆ! ಅಷ್ಟಕ್ಕೂ ಈ ಮೊಳೆರೋಗಕ್ಕೆ ಆಯುರ್ವೆದ ಚಿಕಿತ್ಸೆ ಇಷ್ಟೊಂದು ಪ್ರಸಿದ್ಧವಾಗಲು ಕಾರಣವೇನು?
ಮೂಲವ್ಯಾಧಿಯ ಐದು ವಿಧಗಳನ್ನು ಪರಿಪೂರ್ಣವಾಗಿ ವಿವರಿಸಿದ್ದಲ್ಲದೆ ಆಯುರ್ವೆದದ ಚಿಕಿತ್ಸಾಕ್ರಮ ಪರಿಣಾಮಕಾರಿಯಾಗಿ ಇರುವುದರಿಂದಲೇ ಪೈಲ್ಸ್​ಗೆ ಆಯುರ್ವೆದ ಚಿಕಿತ್ಸೆ ಸುವಿಖ್ಯಾತವಾಯಿತು. ಮುಖ್ಯವಾಗಿ ನಾಲ್ಕು ವಿಧವಾದ ಚಿಕಿತ್ಸೆಗಳನ್ನು ಆಯುರ್ವೆದದ ಚರಕ, ಸುಶ್ರುತ ಸಂಹಿತೆಯಿಂದ ಮೊದಲ್ಗೊಂಡು ಎಲ್ಲಡೆ ವಿವರಿಸಲಾಗಿದೆ. ಭೇಷಜ (ಔಷಧ) ಚಿಕಿತ್ಸೆ, ಕ್ಷಾರಚಿಕಿತ್ಸೆ, ಅಗ್ನಿಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಹೀಗೆ ನಾಲ್ಕು ಬಗೆಯ ಚಿಕಿತ್ಸೆಗಳನ್ನೂ ಹೇಳಲಾಗಿರುವುದು ವಿಶೇಷ. ಅದರಲ್ಲೂ ರಕ್ತಜ ಅರ್ಶಸ್​ನಲ್ಲಿ ಹೆಚ್ಚು ಪರಿಣಾಮಕಾರಿಯಾದ ಕ್ಷಾರ ಹಾಗೂ ಕ್ಷಾರಸೂತ್ರ ಚಿಕಿತ್ಸೆಗೆ ಪ್ರಪಂಚದ ಬೇರೆಲ್ಲೂ ಹೋಲಿಕೆಯೇ ಸಿಗುವುದಿಲ್ಲ! ಔಷಧ ಚಿಕಿತ್ಸೆಗೇ ಒತ್ತು ನೀಡಿ ಔಷಧ, ಕ್ಷಾರ, ಅಗ್ನಿ ಚಿಕಿತ್ಸೆಗಳು ಫಲಕಾರಿಯಾಗದಿದ್ದರೆ ಮಾತ್ರ ಶಸ್ತ್ರ ಚಿಕಿತ್ಸೆಯ ಮೊರೆಹೋಗಬೇಕೆಂದು ಚರಕಸಂಹಿತೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಭ್ಯಂಗ, ಸ್ವೇದನ, ಧೂಪನ, ರಕ್ತಮೋಕ್ಷಣ, ದೀಪನ, ಪಾಚನ, ವಾತಾನುಲೋಮನ, ಮಲಾನುಲೋಮನ, ಸಂಶಮನ, ತಕ್ರಪ್ರಯೋಗ, ನವನೀತ ಪ್ರಯೋಗ, ಔಷಧ ಚಿಕಿತ್ಸೆ, ಕ್ಷಾರ ಚಿಕಿತ್ಸೆ, ಅಗ್ನಿಕರ್ಮ, ಶಸ್ತ್ರಚಿಕಿತ್ಸೆ – ಹೀಗೆ ಚಿಕಿತ್ಸಾ ಸೂತ್ರವಾಗಿ ಹದಿನೈದು ಮೆಟ್ಟಿಲುಗಳನ್ನು ಎಳೆಎಳೆಯಾಗಿ ವಿವರಿಸಿ ಹೇಳಿರುವುದು ಆಯುರ್ವೆದದ ಮೇಲ್ಮೆ. ಇಲ್ಲಿ ಶಸ್ತ್ರಚಿಕಿತ್ಸೆ ಕೊನೆಯ ಅಸ್ತ್ರ ಎಂಬುದನ್ನು ಗಮನಿಸಬೇಕು. ಮೂಲವ್ಯಾಧಿ ಇದ್ದಾಗ ಜಠರಾಗ್ನಿಯನ್ನು ಸಮಗೊಳಿಸುವುದು ವೈದ್ಯನ ಆದ್ಯ ಕರ್ತವ್ಯ. ಈ ಪಾಚಕಾಗ್ನಿ ಸರಿಗೊಂಡರೆ ಮೂಲವ್ಯಾಧಿ ಬೇಗನೆ ಗುಣಕಾಣುವುದು ನಿಶ್ಚಿತ. ಹಾಗಾಗಿ ರೋಗಿಯು ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳುವುದರತ್ತ ಗಮನಹರಿಸಲೇಬೇಕು. ಆಹಾರದ ಸಮಯ, ಅಂತರ, ಪ್ರಮಾಣ, ಗುಣ, ಸಂಯೋಜನೆ, ವಿಧಿಗಳೆಲ್ಲವನ್ನೂ ಆಯುರ್ವೆದ ವಿವರಿಸಿದೆ.
ಮೂಲವ್ಯಾಧಿಯ ಶಮನಕ್ಕೆ ಅನೇಕ ಆಹಾರೋಪಾಯಗಳಿವೆ. ವಾತ ಹಾಗೂ ಕಫದಿಂದ ಉಂಟಾಗುವ ಶುಷ್ಕ ಮೂಲವ್ಯಾಧಿಯಿದ್ದಾಗ ಹಳೆಯದಾದ ಕೆಂಪಕ್ಕಿ, 60 ದಿನಗಳಲ್ಲಿ ಬೆಳೆಯುವ ಕೆಂಪಕ್ಕಿ, ಮೊಳಕೆ ಬರಿಸಿದ ಹೆಸರು ಹಾಗೂ ಹುರುಳಿ, ಜೋಳ, ಸುವರ್ಣಗಡ್ಡೆ, ಪಡುವಲಕಾಯಿ, ಕೊಮ್ಮೆಗಿಡದ ಎಲೆ, ಬೆಳ್ಳುಳ್ಳಿ, ಓಮ, ಕಾಳುಮೆಣಸು, ಸೈಂಧವ ಲವಣ, ನೆಲ್ಲಿಕಾಯಿ, ದ್ರಾಕ್ಷಿ ಹಣ್ಣು, ಅಂಜೂರಗಳು ದೇಹಕ್ಕೆ ಹಿತಕಾರಿ. ಮಲೆನಾಡಿನ ಮಾಂಸಾಹಾರ, ಮೀನು, ಗಡ್ಡೆ ತರಕಾರಿಗಳು, ಖಾರ ಆಹಾರ ವ್ಯಂಜನಗಳು, ಒಣ ಆಹಾರ, ಸುಲಭವಾಗಿ ಜೀರ್ಣವಾಗದ ಆಹಾರ ವಸ್ತುಗಳು, ದೇಹಕ್ಕೆ ಒಗ್ಗಿಕೊಳ್ಳದ ಅಸಾತ್ಮ್ಯ ಆಹಾರ ಸೇವನೆ, ಸಮಯ ಪಾಲಿಸದೆ ಆಹಾರ ಸೇವಿಸುವುದು, ವಿರುದ್ಧಗುಣಗಳ ಆಹಾರವನ್ನು ಜೊತೆಯಾಗಿ ಸೇವನೆ ಮಾಡುವುದು, ಅಕಾಲದಲ್ಲಿ ಬೆಳೆದ ಆಹಾರ ಸ್ವೀಕರಿಸುವುದು, ಹಗಲು ನಿದ್ರೆ, ರಾತ್ರಿ ಜಾಗರಣೆ ಮಾಡುವುದು, ಕುಳಿತುಕೊಳ್ಳುವ ಆಸನ ಸುಖಕರ ಇಲ್ಲದೆಯೆ ಕುದುರೆ ಸವಾರಿ, ಮಲಮೂತ್ರಾದಿ ಸಹಜ ವೇಗಗಳನ್ನು ತಡೆಯುವುದು ಇವೆಲ್ಲವೂ ಕಾಯಿಲೆಯನ್ನು ಹೆಚ್ಚಿಸುವುದರಿಂದ ವರ್ಜಿಸಬೇಕು. ಆರ್ದ್ರ ಮೂಲವ್ಯಾಧಿಯು ಮುಖ್ಯವಾಗಿ ಪಿತ್ತ ಹಾಗೂ ರಕ್ತಜ ಮೂಲವ್ಯಾಧಿಗಳನ್ನು ಒಳಗೊಂಡಿದೆ. ಈ ಸಮಯದಲ್ಲಿ ಹಳೆಯದಾದ ಕೆಂಪಕ್ಕಿ ಅನ್ನ, 60 ದಿನಗಳಲ್ಲಿ ಬೆಳೆಯುವ ಪೌಷ್ಟಿಕ ಶಾಲಿ, ಗೋಧಿಹುಲ್ಲು,
ಜೋಳ, ಹೆಸರುಕಾಳು, ಗೋವು ಹಾಗೂ ಆಡಿನ ಹಾಲು, ಹಸಿರು ಸೊಪ್ಪಿನ ತರಕಾರಿಗಳು, ಮೂಲಂಗಿ, ಈರುಳ್ಳಿ, ಮೊಸರು, ಬೆಣ್ಣೆ, ತುಪ್ಪ, ಬಾಳೆಹಣ್ಣು, ದಾಳಿಂಬೆ, ನೆಲ್ಲಿಕಾಯಿ, ಮೂಸಂಬಿ, ಕಿತ್ತಳೆ, ಅನಾನಸು, ದ್ರಾಕ್ಷಿಹಣ್ಣು ಮೊದಲಾದ ಆಹಾರಗಳು ರೋಗವನ್ನು ಗುಣಪಡಿಸಲು ಸಹಕಾರಿಯಾಗಿವೆ. ಅತಿಯಾಗಿ ಉಪ್ಪು ತಿನ್ನುವುದು, ಖಾರ ಮಸಾಲೆ ಪದಾರ್ಥಗಳ ಸೇವನೆ, ಸಾಸಿವೆ ಎಣ್ಣೆ, ಪಚನಕ್ಕೆ ಕಷ್ಟಕರವಾದ ಆಹಾರ, ಲೈಂಗಿಕಕ್ರಿಯೆ, ವಾಹನ ಪ್ರಯಾಣ, ಕ್ರೀಡಾ ಸಾಹಸಗಳು ಮೊಳೆರೋಗವನ್ನು ಹೆಚ್ಚಿಸುವುದರಿಂದ ಬಿಡುವುದು ಕ್ಷೇಮ.
ಆಯುರ್ವೆದ ಔಷಧಗಳು ತುಂಬಾ ಉಷ್ಣ ಎನ್ನುವವರಿಗೆ ಮೂಲವ್ಯಾಧಿ ಚಿಕಿತ್ಸೆಯಲ್ಲಿ ಉತ್ತರ ಸಿಗುತ್ತದೆ. ದೇಹದ ಉಷ್ಣತೆಯನ್ನು ಹೆಚ್ಚಿಸಿ ಮೂಲವ್ಯಾಧಿ ಗುಣಪಡಿಸುವುದು ಸಾಧ್ಯವಿಲ್ಲ ತಾನೇ? ಅಂದಮೇಲೆ ಪೈಲ್ಸ್ ಚಿಕಿತ್ಸೆಯಲ್ಲಿ ಪ್ರಖ್ಯಾತವಾದ ಆಯುರ್ವೆದದ ಔಷಧಗಳೆಲ್ಲವೂ ಉಷ್ಣ ಅಲ್ಲವೆಂದಾಯಿತು. ದೇಹಕ್ಕೆ ತಂಪಿನ ಕಂಪು ನೀಡುವ ಆಯುರ್ವೆದ ಸದಾ ಇಂಪು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − one =
Remember me
