ಬೆಂಗಳೂರು:ಎರಡು ಶತಮಾನಗಳಿಗೂ ಹಳೆಯ ಮರಗಳಿರುವ, ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಬಾಲಬ್ರೂಯಿ ಅತಿಥಿಗೃಹವನ್ನು ‘ಕಾನ್‌ಸ್ಟಿಟ್ಯೂಷನಲ್ ಕ್ಲಬ್’ ಆಗಿ ಪರಿವರ್ತಿಸಲು ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಜತೆಗೆ, ಕಟ್ಟಡದ ಹೊರ ವಿನ್ಯಾಸದಲ್ಲಿ ಯಾವುದೇ ರೀತಿಯ ಮಾರ್ಪಾಡು ಮಾಡಬಾರದು ಹಾಗೂ ಅತಿಥಿ ಗೃಹದ ಆವರಣದಲ್ಲಿರುವ ಮರಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ನ್ಯಾಯಾಲಯ ತಾಕೀತು ಮಾಡಿದೆ.
ಬೆಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕತ್ತರಿಸುವುದನ್ನು ಪ್ರಶ್ನಿಸಿ ದತ್ತಾತ್ರೇಯ ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ 2018ರಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿತ್ತು. ಇದೇ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ‘ಕಾನ್‌ಸ್ಟಿಟ್ಯೂಷನಲ್ ಕ್ಲಬ್’ ನಿರ್ಮಾಣಕ್ಕಾಗಿ ಬಾಲಬ್ರೂಯಿ ಅಥಿತಿ ಗೃಹದ ಆವರಣದಲ್ಲಿರುವ ಮರಗಳನ್ನು ಕಡಿಯದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದರು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ಹಾಜರಾಗಿ, ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್‌ಟಿಟ್ಯೂಷನಲ್ ಕ್ಲಬ್ ಆಗಿ ಪರಿವರ್ತಿಸುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2021ರ ಅ.7 ರಂದು ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ. ಆ ಆದೇಶವನ್ನು ತೆರವು ಮಾಡಬೇಕು ಎಂದು ಕೋರಿದರಲ್ಲದೆ, ಅತಿಥಿ ಗೃಹದ ಕಟ್ಟಡದ ರಚನೆಯಲ್ಲಿ ಯಾವುದೇ ಮಾರ್ಪಾಡು ಮಾಡದೆ, ಕೇವಲ ಕೇವಲ ಒಳಾಂಗಣ ವಿನ್ಯಾಸದ ಸೌಂದರ್ಯ ಹೆಚ್ಚಿಸಿ, ಕಾನ್ಸ್‌ಟಿಟ್ಯೂಷನಲ್ ಕ್ಲಬ್ ಆಗಿ ಪರಿವರ್ತಿಸುವ ಪ್ರಸ್ತಾವನೆಯಷ್ಟೇ ಇದೆ. ಈ ಉದ್ದೇಶಕ್ಕಾಗಿ ಬಾಲಬ್ರೂಯಿ ಆವರಣದಲ್ಲಿರುವ ಯಾವುದೇ ಮರವನ್ನು ಕತ್ತಿರಿಸುವುದಿಲ್ಲ ಅಥವಾ ಹಾನಿ ಮಾಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಅನುಮತಿ ನೀಡಿದ ಹೈಕೋರ್ಟ್:ಸರ್ಕಾರದ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಕೇವಲ ಅತಿಥಿ ಗೃಹದ ಒಳಾಂಗಣ ವಿನ್ಯಾಸದ ಸೌಂದರ್ಯ ವೃದ್ಧಿಸಿ, ನಿರ್ವಹಿಸುವ ಕೆಲಸಗಳನ್ನಷ್ಟೇ ಮಾಡಬೇಕು. ಕಟ್ಟಡದ ರಚನೆಗೆ ಯಾವುದೇ ಮಾರ್ಪಾಡು ಮಾಡಬಾರದು. ಅದರ ಆವರಣದಲ್ಲಿರುವ ಮರಗಳಿಗೆ ಯಾವುದೇ ಹಾನಿ ಮಾಡಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸುವ ಮೂಲಕ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್‌ಟಿಟ್ಯೂಷನಲ್ ಕ್ಲಬ್ ಆಗಿ ಪರಿವರಿವರ್ತಿಸಲು ಅನುಮತಿ ನೀಡಿತು.
ದೆಹಲಿಯ ಕಾನ್ಸ್‌ಟಿಟ್ಯೂಷನಲ್ ಕ್ಲಬ್‌ನಲ್ಲಿ ಒಳ್ಳೆಯ ಗ್ರಂಥಾಲಯವಿದೆ. ಅಲ್ಲಿ ಉತ್ತಮ ಕಾಫಿ ಸಿಗುತ್ತದೆ. ಬೆಂಗಳೂರಿನಲ್ಲಿಯೂ ಅದೇ ರೀತಿಯ ವಾತಾವರಣ ನಿರ್ಮಿಸಿದರೆ ಉತ್ತಮ ಎಂದು ಮುಖ್ಯ ನ್ಯಾಯಮೂರ್ತಿಗಳು ಮೌಖಿಕ ಸಲಹೆಯನ್ನೂ ನೀಡಿದರು.
ಅರ್ಜಿದಾರರ ಆಕ್ಷೇಪವೇನಾಗಿತ್ತು?:ಐತಿಹಾಸಿಕ ಕಟ್ಟಡವಾಗಿರುವ ಬಾಲಬ್ರೂಯಿ ಅತಿಥಿಗೃಹವನ್ನು 1850ರಲ್ಲಿ ಮಾರ್ಕ್ ಕಬ್ಬನ್ ನಿರ್ಮಿಸಿದ್ದು, ಅತಿಥಿಗೃಹದ ಆವರಣದಲ್ಲಿ 200 ರಿಂದ 300 ವರ್ಷಗಳಷ್ಟು ಹಳೆಯದಾದ ಮರಗಳಿವೆ. 2021ರ ಅ.4ರಂದು ಪತ್ರಿಕಾಗೋಷ್ಠಿ ನಡೆಸಿದ್ದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನವದೆಹಲಿಯಲ್ಲಿರುವ ಕಾನ್‌ಸ್ಟಿಟ್ಯೂಷನಲ್ ಕ್ಲಬ್ ಮಾದರಿಯಲ್ಲಿ ಬೆಂಗಳೂರಿನ ಬಾಲಬ್ರೂಯಿ ಅತಿಥಿ ಗೃಹವನ್ನು ಕ್ಲಬ್ ಆಗಿ ಪರಿವರ್ತಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.ಆದರೆ, ಇಲ್ಲಿರುವ ಮರಗಳನ್ನು ತೆರವು ಮಾಡದೆ ಕಟ್ಟಡದ ವಿನ್ಯಾಸ ಬದಲಿಸಲು ಸಾಧ್ಯವಿಲ್ಲ. ಕ್ಲಬ್ ನಿರ್ಮಾಣಕ್ಕೆ ಅವಕಾಶ ನೀಡಿದರೆ ಇಲ್ಲಿರುವ ಮರಗಳನ್ನು ಕಡಿಯಲೇಬೇಕಾಗುತ್ತದೆ. ಶತಮಾನಗಳಷ್ಟು ಹಳೆಯ ಮರಗಳನ್ನು ತೆರವು ಮಾಡಿರುವುದರಿಂದ ಪರಿಸರದ ಮೇಲೆ ದುಷ್ಟರಿಣಾಮ ಉಂಟಾಗಲಿದ್ದು, ಅಲ್ಲಿರುವ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ. ಆದ್ದರಿಂದ, ನ್ಯಾಯಾಲಯದ ಅನುಮತಿ ಇಲ್ಲದೆ, ಬಾಲಬ್ರೂಯಿ ಕಟ್ಟದ ಆವರಣದಲ್ಲಿರುವ ಯಾವುದೇ ಮರ ಕಡಿಯುವುದಾಗಲೀ, ಸ್ಥಳಾಂತರಿಸುವುದಾಗಲೀ ಮಾಡದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಬೇಕು ಎಂದು ಕೋರಿದ್ದರು.
ಯಥಾಸ್ಥಿತಿಗೆ ಆದೇಶಿಸಿದ್ದ ಕೋರ್ಟ್:ಅರ್ಜಿಯನ್ನು 2021ರ ಅ.7 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್‌ಸ್ಟಿಟ್ಯೂಷನಲ್ ಕ್ಲಬ್ ಆಗಿ ಪರಿವರ್ತಿಸುವ ನಿರ್ಧಾರ ಮತ್ತು ಅತಿಥಿ ಗೃಹದ ಆವರಣದಲ್ಲಿನ ಮರಗಳನ್ನು ಕಡಿಯುವುದರ ಸಂಬಂಧ ಅರ್ಜಿಯ ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿತ್ತು. ಇದೀಗ, ಈ ಆದೇಶವನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್, ಗೆಸ್ಟ್ ಹೌಸ್ ಅನ್ನು ಕಾನ್ಸ್‌ಟಿಟ್ಯೂಷನಲ್ ಕ್ಲಬ್ ಆಗಿ ಪರಿವರ್ತಿಸಲು ಅನುಮತಿ ನೀಡಿದೆ.
ಬೆಂಗಳೂರಲ್ಲಿ ವೃದ್ಧನನ್ನು 1 ಕಿ.ಮೀ. ದೂರ ಎಳೆದೊಯ್ದ ಬೈಕ್​ ಸವಾರ: ಪೊಲೀಸರ ಮುಂದೆ ಆರೋಪಿ ಹೇಳಿದ ಮಾತು ಕೇಳಿದ್ರೆ ಮತ್ತಷ್ಟು ಸಿಟ್ಟಾಗ್ತೀರಿ

ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ ಚೂರಿಯಿಂದ ಇರಿದು ಹತ್ಯೆಗೈದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
