ಬೆಂಗಳೂರು:ಸಾಮಾನ್ಯ ವರ್ಗಾವಣೆ ಅವಧಿಯ ನಂತರ ಯಾವುದೇ ಹುದ್ದೆಗಳು ಖಾಲಿ ಇಲ್ಲದ ಸಂದರ್ಭದಲ್ಲಿ ವರ್ಗಾವಣೆ ಆದೇಶ ಹೊರಡಿಸಬಾರದು; ಆದೇಶ ಹೊರಡಿಸುವ ಮುನ್ನ ನೌಕರರಿಗೆ ಕಡ್ಡಾಯವಾಗಿ ಹೊಸ ಹುದ್ದೆ ನಿಗದಿಮಾಡಬೇಕು ಎಂದು ಹೈಕೋರ್ಟ್​ ಮಹತ್ವದ ತೀರ್ಪಿತ್ತಿದೆ. ಈ ಮೂಲಕ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಬೇಕಾಬಿಟ್ಟಿ ವರ್ಗಾವಣೆಗೆ ತಡೆ ಬೀಳುವ ಸಾಧ್ಯತೆ ಇದೆ.
ಹೊಸ ಹುದ್ದೆ ತೋರಿಸದೆ ಅಧಿಕಾರಿಗಳನ್ನು ಹಾಲಿ ಹುದ್ದೆಯಿಂದ ವರ್ಗಾವಣೆ ಮಾಡುವ ಸರ್ಕಾರದ ಧೋರಣೆಗೆ ಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವರ್ಗಾವಣೆ ಸಂಬಂಧ ಸೂಕ್ತ ಕಾರ್ಯವಿಧಾನ ರೂಪಿಸುವಂತೆ 2017ರಲ್ಲೇ ಹೈಕೋರ್ಟ್​ ಆದೇಶಿಸಿದ್ದರೂ, ಇದನ್ನು ಪಾಲಿಸದ ಸರ್ಕಾರದ ಕ್ರಮಕ್ಕೂ ನ್ಯಾಯಪೀಠ ಕಿಡಿಕಾರಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪುರಸಭೆ ಮುಖ್ಯ ಅಧಿಕಾರಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಮೂರ್ತಿ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್​. ಸುನೀಲ್​ ದತ್​ ಯಾದವ್​ ಅವರಿದ್ದ ಪೀಠ ಈ ಆದೇಶ ಮಾಡಿದೆ. ಮೂರ್ತಿ ಅವರನ್ನು ವರ್ಗಾವಣೆ ಮಾಡಿ ಆ ಹುದ್ದೆಗೆ ಪರಶಿವಯ್ಯ ಎಂಬುವವರನ್ನು ನಿಯೋಜಿಸಿ 2021ರ ಡಿ.23ರಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್​, ಅರ್ಜಿದಾರರನ್ನು ಡಿ. 23ರ ಆದೇಶಕ್ಕೂ ಮೊದಲಿದ್ದ ಹುದ್ದೆಗೆ ಮರು ನಿಯೋಜಿಸಿದೆ.
ಶಾಸಕರ ಪತ್ರ ಆಧರಿಸಿ ವರ್ಗಾವಣೆಈ ಪ್ರಕರಣದಲ್ಲಿ ಅರ್ಜಿದಾರರು ಕರ್ತವ್ಯ ನಿರ್ವಹಿಸುತ್ತಿದ್ದ ಹುದ್ದೆಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಪರಶಿವಯ್ಯ ಅವರೇ ಮನವಿ ಮಾಡಿದ್ದರು. ಆಗ ಯಾವುದೇ ಹುದ್ದೆ ಖಾಲಿಯಿರಲಿಲ್ಲ. ಶಾಸಕರೊಬ್ಬರ ಪತ್ರ ಆಧರಿಸಿ ಪರಶಿವಯ್ಯ ಅವರ ವರ್ಗಾವಣೆ ಮಾಡಲಾಗಿದೆ. ನಿಯಮಗಳ ಪ್ರಕಾರವೇ ವರ್ಗಾವಣೆ ನಡೆಯಬೇಕು. ಅರ್ಜಿದಾರರನ್ನು ವರ್ಗಾವಣೆ ಮಾಡಿ 6 ತಿಂಗಳಿಗೂ ಅಧಿಕ ಸಮಯ ಕಳೆದರೂ ಅವರಿಗೆ ಹುದ್ದೆ ತೋರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಹನೂರು ಪುರಸಭೆ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿದ ಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದೆ.
ವಿಭಾಗೀಯ ಪೀಠ ಏನು ಹೇಳಿತ್ತು?ಹೊಸ ಹುದ್ದೆ ತೋರಿಸದೆ, ಹಾಲಿಯಿರುವ ಹುದ್ದೆಯಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವ ಹಲವು ಪ್ರಕರಣಗಳನ್ನು ಕೋರ್ಟ್​ ಗಮನಿಸಿದೆ. ಈ ರೀತಿ ವರ್ಗಾವಣೆಗೊಂಡ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಮುಂದೆ ಹೋಗಿ ಹುದ್ದೆ ತೋರಿಸುವಂತೆ ಕೋರಿಕೊಳ್ಳಬೇಕಾಗುತ್ತದೆ. ಸರ್ಕಾರದ ಈ ಅಭ್ಯಾಸದಿಂದ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಮುಂದಿನ ಹುದ್ದೆಯ ಬಗ್ಗೆ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುವಂತಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ಕಾರ್ಯವಿಧಾನವೊಂದನ್ನು ರೂಪಿಸಬೇಕು. ಇಂತಹ ಪ್ರಕರಣಗಳ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂ. ಅರುಣ್​ ಪ್ರಸಾದ್​ ಪ್ರಕರಣದಲ್ಲಿ ಹೈಕೋರ್ಟ್​ ವಿಭಾಗೀಯ ಪೀಠ 2017ರ ಮಾ.2ರಂದು ಆದೇಶಿಸಿತ್ತು.
ಸರ್ಕಾರದ ಸುತ್ತೋಲೆಯಲ್ಲೇನಿದೆ?2017ರ ಮಾ.27ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರ, ಯಾವ ಕಾರಣಕ್ಕೆ ಅಧಿಕಾರಿಗೆ ಹುದ್ದೆ ತೋರಿಸಿಲ್ಲ ಎಂಬ ಕಾರಣವನ್ನು ಲಿಖಿತ ರೂಪದಲ್ಲಿ ನಮೂದಿಸಬೇಕು. ಹುದ್ದೆ ರದ್ದತಿ/ಮೇಲ್ದರ್ಜೆಗೇರಿಸುವ/ಕೆಳದರ್ಜೆಗೆ ಇಳಿಸುವ, ಹಾಲಿ ಹುದ್ದೆ ನಿಭಾಯಿಸಲು ಅಸಮರ್ಥತೆ ಮುಂತಾದವುಗಳಿಂದ ಹುದ್ದೆಯ ಅಲಭ್ಯತೆಯಂತಹ ಆಡಳಿತಾತ್ಮಕ ಕಾರಣಗಳಾಗಿರಬೇಕು. ಹುದ್ದೆ ತೋರಿಸದೆ ವರ್ಗಾವಣೆ ಮಾಡಿದ ಪ್ರಕರಣಗಳಲ್ಲಿ ಲಿಖಿತ ಕಾರಣಗಳನ್ನು ನಮೂದಿಸಿದ ಬಳಿಕ ವರ್ಗಾವಣೆ ಆದೇಶಗಳನ್ನು ಇಲಾಖಾ ಮುಖ್ಯಸ್ಥರು ಮರುಪರಿಶೀಲಿಸುವಂತಿರಬೇಕು ಎಂದು ತಿಳಿಸಿತ್ತು.
ಪ್ರಕರಣವೇನು?ಚಾಮರಾಜನಗರ ಜಿಲ್ಲೆಯ ಹನೂರು ಪುರಸಭೆ ಮುಖ್ಯ ಅಧಿಕಾರಿ ಹುದ್ದೆಯಿಂದ ಮೂರ್ತಿ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಪರಶಿವಯ್ಯ ಎಂಬುವವರನ್ನು ವರ್ಗಾಯಿಸಿ 2021ರ ಡಿ.23ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಮೂರ್ತಿ ಅವರಿಗೆ ಹೊಸ ಹುದ್ದೆಯನ್ನು ತೋರಿಸದೆ, ಹುದ್ದೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ವರ್ಗಾವಣೆ ಆದೇಶದಲ್ಲಿ ಸೂಚಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಮೂರ್ತಿ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಹಂತದಲ್ಲಿರುವಾಗ 2022ರ ಜು.20ರಂದು ಮೂರ್ತಿ ಅವರನ್ನು ಉಳ್ಳಾಲ ನಗರಸಭೆಯಲ್ಲಿ ಖಾಲಿಯಿದ್ದ ಹುದ್ದೆಗೆ ನಿಯೋಜಿಸಲಾಗಿತ್ತು.
ಹೈಕೋರ್ಟ್​ ಹೇಳಿದ್ದೇನು?– ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆಗಳು ನಿಯಮಾವಳಿ ಪ್ರಕಾರವೇ ನಡೆಯಬೇಕು.– ಸಾಮಾನ್ಯ ವರ್ಗಾವಣೆ ಅವಧಿ ಮುಗಿದ ನಂತರ ಖಾಲಿಯಿರುವ ಹುದ್ದೆಗಳಿಗೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆ ಮಾಡಬಾರದು.– ರ್ನಿದಿಷ್ಟ ಹುದ್ದೆಗಳಿಗೆ ವರ್ಗಾವಣೆ ಮಾಡುವಂತೆ ಅಧಿಕಾರಿಗಳು ಮತ್ತು ನೌಕರರು ಮಾಡುವ ಮನವಿಗಳನ್ನು ಪರಿಗಣಿಸಬಾರದು.– ವರ್ಗಾವಣೆಯಲ್ಲಿ ವಿಭಾಗೀಯ ಪೀಠ ನೀಡಿರುವ ನಿರ್ದೇಶನಗಳಾಗಲಿ, ಸರ್ಕಾರ ಹೊರಡಿಸಿರುವ ಸುತ್ತೋಲೆಯಾಗಲಿ ಪಾಲನೆಯಾಗುತ್ತಿಲ್ಲ.– ಹೊಸ ಹುದ್ದೆಗಳನ್ನು ನೀಡದೆ ಪದೇಪದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಭ್ಯಾಸವನ್ನು ಸರ್ಕಾರ ಮುಂದುವರಿಸಿಕೊಂಡು ಬರುತ್ತಿದೆ.– 2017ರ ಮಾ.27ರಂದು ಹೊರಡಿಸಿರುವ ತನ್ನದೇ ಸುತ್ತೋಲೆಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.– 2017ರಲ್ಲಿ ಎಂ.ಅರುಣ್​ ಪ್ರಸಾದ್​ ಪ್ರಕರಣದಲ್ಲಿ ವಿಭಾಗೀಯ ಪೀಠ ನೀಡಿರುವ ನಿರ್ದೇಶನಗಳನ್ನೂ ಪಾಲಿಸಬೇಕು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − three =
Remember me
