ಬೆಂಗಳೂರು:ಐಟಿ ಕಾರಿಡಾರ್ ಯೋಜನೆಗಾಗಿ ನಗರದ ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಕೆಐಎಡಿಬಿ ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಲೋಕಾಯುಕ್ತ ಪೊಲೀಸರು ದಾಖಲಿಸಿ ರುವ ಎಫ್​ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಲೋಕಾಯುಕ್ತ ಪೊಲೀಸರು 2015ರಲ್ಲಿ ದಾಖಲಿಸಿರುವ ಎಫ್​ಐಆರ್ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ತಿರಸ್ಕರಿಸಿದೆ. ಇದರಿಂದ, ಡಿ-ನೋಟಿಫಿಕೇಷನ್ ಪ್ರಕರಣದಲ್ಲಿ ಬಿಎಸ್​ವೈಗೆ ಹಿನ್ನಡೆಯಾಗಿದೆ.
ಲೋಕಾಯುಕ್ತ ಕೋರ್ಟ್ 2015ರ ಫೆ.18ರಂದು ತನಿಖೆಗೆ ಆದೇಶಿಸಿದ್ದರೂ 2019ರವರೆಗೂ ಯಡಿಯೂರಪ್ಪ ವಿರುದ್ಧದ ಆರೋಪಗಳ ಕುರಿತು ಸಮರ್ಪಕ ತನಿಖೆ ನಡೆಸದ ಲೋಕಾಯುಕ್ತ ಪೊಲೀಸರ ಕಾರ್ಯವೈಖರಿಯನ್ನು ಹೈಕೋರ್ಟ್ ಖಂಡಿಸಿದೆ. ಪ್ರಕರಣ ರದ್ದುಕೋರಿ 2019ರ ಜ.25ರಂದು ಯಡಿಯೂರಪ್ಪ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಏ.2ರಂದು ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 4 ವರ್ಷಗಳ ಅಂತರದಲ್ಲಿ ಪ್ರಕರಣದ ತನಿಖೆಗೆ ಯಾವುದೇ ಕೋರ್ಟ್​ಗಳ ತಡೆಯಾಜ್ಞೆ ಇರಲಿಲ್ಲ. ಆದರೂ ಲೋಕಾಯುಕ್ತ ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ. ಉನ್ನತ ಹುದ್ದೆಯಲ್ಲಿರುವವರ ವಿರುದ್ಧದ ಪ್ರಕರಣಗಳ ತನಿಖೆಯಲ್ಲಿ ಪ್ರಗತಿ ಕಾಣದಿದ್ದರೆ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಸಾರ್ವಜನಿಕರು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದಿರುವ ನ್ಯಾಯಪೀಠ, ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ.
ಅರ್ಜಿದಾರರ ವಾದವೇನು?:ವಿಚಾರಣೆ ವೇಳೆ ವಾದ ಮಂಡಿಸಿದ್ದ ಪ್ರಕರಣದ ದೂರುದಾರ ವಾಸುದೇವ ರೆಡ್ಡಿ ಪರ ವಕೀಲ ಕೆ.ವಿ.ಧನಂಜಯ, ಇದೇ ಪ್ರಕರಣದಲ್ಲಿ ಆರ್.ವಿ.ದೇಶಪಾಂಡೆ ವಿರುದ್ಧದ ಎಫ್​ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಅದನ್ನು ಪರಿಗಣಿಸಿ ಯಡಿಯೂರಪ್ಪ ವಿರುದ್ಧದ ಎಫ್​ಐಆರ್​ಗೆ 2019ರ ಏ.2ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವಾಸ್ತವವಾಗಿ ಬಿಎಸ್​ವೈ ಪ್ರಕರಣಕ್ಕೂ ದೇಶಪಾಂಡೆ ಪ್ರಕರಣಕ್ಕೂ ಸಂಬಂಧವಿಲ್ಲ. ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಆದ್ದರಿಂದ, ಯಡಿಯೂರಪ್ಪ ಅರ್ಜಿ ವಜಾಗೊಳಿಸಬೇಕೆಂದು ಕೋರಿದ್ದರು.
ಆರ್​ವಿಡಿ ವಿರುದ್ಧದ ಎಫ್​ಐಆರ್ ರದ್ದು:ಐಟಿ ಕಾರಿಡಾರ್​ಗಾಗಿ ದೇವರಬೀಸನಹಳ್ಳಿ ಹಾಗೂ ಅಮಾನಿ ಬೆಳ್ಳಂದೂರು ಕೆರೆ ಬಳಿಯ ಅಂದಾಜು 6.14 ಎಕರೆ ಜಮೀನನ್ನು ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಭಾವ ಬಳಸಿ ಡಿ-ನೋಟಿಫಿಕೇಷನ್ ಮಾಡಿಸಿದ ಆರೋಪದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಎಫ್​ಐಆರ್ ಮತ್ತು ತನಿಖೆಯನ್ನು 2017ರಲ್ಲಿ ಹೈಕೋರ್ಟ್ ರದ್ದುಪಡಿಸಿತ್ತು, ಬಳಿಕ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು.
ಯಡಿಯೂರಪ್ಪ ವಾದವೇನು?
ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ತಮ್ಮ ವಿರುದ್ಧ ದೂರು ದಾಖಲಿಸಿದ್ದು, ಅದನ್ನು ಅಂಗೀಕರಿಸಿರುವ ವಿಶೇಷ ನ್ಯಾಯಾಲಯದ ಕ್ರಮ ಕಾನೂನು ಬಾಹಿರವಾಗಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಮೊದಲು ಸಂಬಂಧಪಟ್ಟ ಪೊಲೀಸರಿಗೆ ಪ್ರಕರಣದ ಮಾಹಿತಿ ಒದಗಿಸಬೇಕು. ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದಲ್ಲಿ ಕೋರ್ಟ್​ಗೆ ದೂರು ದಾಖಲಿಸಬೇಕು. ಆದರೆ, ದೂರುದಾರರು ನೇರವಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಆದ್ದರಿಂದ ತಮ್ಮ ವಿರುದ್ಧದ ಎಫ್​ಐಆರ್ ಮತ್ತದರ ಸಂಬಂಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದರು.
ಪ್ರಕರಣವೇನು?
2000-2001ನೇ ಸಾಲಿನಲ್ಲಿ ನಗರದ ವೈಟ್​ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಂದಾಜು 500 ಎಕರೆ ಜಾಗವನ್ನು ಐಟಿ ಕಾರಿಡಾರ್ ಆಗಿ ರಾಜ್ಯ ಸರ್ಕಾರ ಘೊಷಿಸಿತ್ತು. ಮಾರತಹಳ್ಳಿ, ಬೆಳ್ಳಂದೂರು, ಸರ್ಜಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳ 434 ಎಕರೆ ಪ್ರದೇಶದ ಸ್ವಾಧೀನಕ್ಕೆ ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಕೆಐಎಡಿಬಿ ವಶಪಡಿಸಿಕೊಂಡಿದ್ದ ದೇವರ ಬೀಸನಹಳ್ಳಿಯ ಸರ್ವೆ ನಂ 49ರ 4.30 ಎಕರೆ, ಬೆಳ್ಳಂದೂರು ಗ್ರಾಮದ ಸರ್ವೆ ನಂ 46/1ರ 1.17 ಎಕರೆ, ಸರ್ವೆ ನಂ 18ರ 1.10 ಎಕರೆ, ಸರ್ವೆ ನಂ.10ರ 33 ಗುಂಟೆ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆಂದು ಆರೋಪಿಸಿ ವಾಸುದೇವ ರೆಡ್ಡಿ ಎಂಬುವರು 2013ರ ಜು.10ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಸಂಬಂಧ ತನಿಖೆ ನಡೆಸುವಂತೆ 2015ರ ಫೆ.18ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 16 =
Remember me
