ಬೆಂಗಳೂರು:ಪದವಿ ಹಂತದ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಇದರಿಂದ, ಕನ್ನಡ ಕಡ್ಡಾಯವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ ಹಾಗೂ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಕೇಂದ್ರದ ನಿಲುವು ಪರಿಗಣನೆ:ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್​ಇಪಿ) ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯಗೊಳಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದರಿಂದ, ರಾಜ್ಯದಲ್ಲಿ ಎನ್​ಇಪಿ ಜಾರಿಗೊಳಿಸುವ ನಿಟ್ಟಿನಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸುವಂತಿಲ್ಲ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ಕೇಂದ್ರದ ನಿಲುವು ಆಧರಿಸಿ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡುವುದಾಗಿ ತಿಳಿಸಿದೆ. ಬಳಿಕ, ಪದವಿ ಹಂತದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿ 2021ರ ಆ.7 ಹಾಗೂ ಸೆ.15ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಗಳ ಜಾರಿಗೆ ನ್ಯಾಯಾಲಯದ ಮುಂದಿನ ಆದೇಶದ ವರೆಗೆ ತಡೆಯಾಜ್ಞೆ ನೀಡಿದ ಪೀಠ, ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿದೆ. ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ‘ಕನ್ನಡ ಭಾಷೆ ಕಲಿಕೆ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ಒತ್ತಾಯಿಸದಂತೆ ಹೈಕೋರ್ಟ್ ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಆ ಆದೇಶದ ಅನುಸಾರ ಸರ್ಕಾರವೂ ವಿವಿಗಳಿಗೆ ಸುತ್ತೋಲೆ ಹೊರಡಿಸಿದೆ. ಆದ್ದರಿಂದ, ಅದೇ ನಿರ್ದೇಶನವನ್ನು ಮುಂದುವರಿಸಬಹುದು. ಈಗ ನೀಡುವ ಆದೇಶ ನಿರ್ಣಾಯಕ ಎಂಬ ರೀತಿಯಲ್ಲಿ ಬಿಂಬಿತವಾಗಬಾರದು’ ಎಂದು ಕೋರಿದರು.
ಕಾನೂನು ಇಲಾಖೆ ಜತೆ ಚರ್ಚೆ ಮಾಡಲಾಗುತ್ತದೆ. ಕೋರ್ಟ್​ನಲ್ಲಿ ನಮ್ಮ ನಿಲುವಿನ ಬಗ್ಗೆ ಸಮರ್ಥವಾಗಿ ವಾದ ಮಂಡಿಸಲು ಪ್ರಯತ್ನ ಮಾಡಲಾಗುತ್ತದೆ.
|ಡಾ. ಸಿ.ಎನ್.ಅಶ್ವತ್ಥನಾರಾಯಣಉನ್ನತ ಶಿಕ್ಷಣ ಸಚಿವ
ಒತ್ತಾಯ ಬೇಡ:ಕಳೆದ ಡಿ.16ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೊರ್ಟ್, ಎನ್​ಇಪಿ ಆಧಾರದಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಬಹುದೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದ್ದು, ಮೊದಲು ಈ ವಿಚಾರವನ್ನು ಪರಿಗಣಿಸಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನಿಲುವು ತಿಳಿಸಬೇಕಿದೆ. ಆದ್ದರಿಂದ, ಈ ಹಂತದಲ್ಲಿ ರಾಜ್ಯ ಸರ್ಕಾರ ಕನ್ನಡ ಕಲಿಕೆ ಭಾಷೆಯನ್ನು ಕಡ್ಡಾಯಗೊಳಿಸಬಾರದು. ಸ್ವ ಇಚ್ಛೆಯಿಂದ ಕನ್ನಡ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಅಧ್ಯಯನ ಮುಂದುವರಿಸಬಹುದು. ಆದರೆ, ಕನ್ನಡ ಆಯ್ಕೆ ಮಾಡಿಕೊಳ್ಳಲು ಬಯಸದ ವಿದ್ಯಾರ್ಥಿಗಳಿಗೆ ಕನ್ನಡ ಅಧ್ಯಯನ ಮಾಡುವಂತೆ ನ್ಯಾಯಾಲಯದ ಮುಂದಿನ ಆದೇಶದವರೆಗೆ ಒತ್ತಾಯಿಸಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು.
ಎನ್​ಇಪಿಯಲ್ಲಿ ಭಾಷೆ ಕಡ್ಡಾಯವಲ್ಲ:ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಮಹತ್ವಾಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸುಲಭವಾಗಿ ಸಮಗ್ರ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎನ್​ಇಪಿ ಜಾರಿಗೊಳಿಸಲಾಗಿದೆ. ಎನ್​ಇಪಿಯ 22ನೇ ಅಧ್ಯಾಯದಲ್ಲಿ ಭಾರತದ ಭಾಷೆಗಳು, ಕಲೆ ಮತ್ತು ಸಂಸ್ಕೃತಿ ಪ್ರಚಾರದ ಬಗ್ಗೆ ಹೇಳಲಾಗಿದ್ದು, ಈ ಅಧ್ಯಾಯವನ್ನು ಭಾರತೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳ ಪ್ರಚಾರಕ್ಕೆ ಮೀಸಲಿಡಲಾಗಿದೆ. ಇದೇ ಅಧ್ಯಾಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯನ್ನು ಬೋಧನಾ ಭಾಷೆಯನ್ನಾಗಿ ಬಳಕೆ ಮಾಡಬಹುದಾಗಿದ್ದು, ದ್ವಿಭಾಷೆಗೆ ಅವಕಾಶವಿದೆ. ಎನ್​ಇಪಿ ನಿಯಮಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ. ಆದ್ದರಿಂದ, ಎನ್​ಇಪಿ ನಿಯಮಗಳನ್ನು ಮರು ವ್ಯಾಖ್ಯಾನಿಸುವ ಅಗತ್ಯ ಉದ್ಭವಿಸುವುದಿಲ್ಲ ಎಂದು ಜ.22ರಂದು ಹೈಕೋರ್ಟ್​ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು.
ನಿರ್ಧಾರ ಮರುಪರಿಶೀಲನೆಗೆ ಸೂಚಿಸಿದ್ದ ಕೋರ್ಟ್:ಎನ್​ಇಪಿಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಕಡ್ಡಾಯ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹೊರಗಿನಿಂದ ಬಂದ ವಿದ್ಯಾರ್ಥಿಗಳ ಮೇಲೆ ಕನ್ನಡ ಭಾಷೆ ಕಲಿಕೆಯನ್ನು ಹೇರುವುದು ಸರಿಯಲ್ಲ. ಉದ್ಯೋಗ ಪಡೆಯಲು ಕನ್ನಡ ಕಲಿಯುವಂತೆ ಷರತ್ತು ವಿಧಿಸಬಹುದು. ಆದರೆ, ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಹೇರಲಾಗದು. ಸರ್ಕಾರದ ನೀತಿಯಿಂದ ಪದವಿಗೂ ಮೊದಲು ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದ್ದರಿಂದ, ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲವಾದರೆ, ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗುವುದು ಎಂದು ಹೈಕೋರ್ಟ್ ಈ ಹಿಂದೆ ಹೇಳಿತ್ತು. ಆದರೆ, ಆದೇಶ ಮರುಪರಿಶೀಲಿಸುವ ಬಗ್ಗೆ ರಾಜ್ಯ ಸರ್ಕಾರ ನಿಲುವು ಸ್ಪಷ್ಟಪಡಿಸದ ಹಿನ್ನೆಲೆಯಲ್ಲಿ ಇದೀಗ ತಡೆಯಾಜ್ಞೆ ನೀಡಿದೆ.
ಆಕ್ಷೇಪಣೆ ಸಲ್ಲಿಸಲು ಸೂಚನೆ:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ ತಮ್ಮನ್ನೂ ಪ್ರತಿವಾದಿಯನ್ನಾಗಿಸಿ, ವಾದ ಆಲಿಸುವಂತೆ ಕೋರಿದರು. ಅದಕ್ಕೆ ನ್ಯಾಯಪೀಠ, ಎನ್​ಇಪಿ ಅಡಿ ಯಾವುದೇ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಬಹುದೇ ಅಥವಾ ಇಲ್ಲವೇ ಎಂಬ ಏಕೈಕ ಪ್ರಶ್ನೆ ನಮ್ಮ ಮುಂದಿದೆ. ಈ ಪ್ರಕರಣಕ್ಕೂ ಕನ್ನಡ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ ಎಂದು ಮೌಖಿಕವಾಗಿ ಹೇಳಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ಅವರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
20 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಸೂಟ್​ಕೇಸ್​ ರೈಲ್ವೆ ನಿಲ್ದಾಣದಲ್ಲಿ ಅನಾಥ; 2 ಗಂಟೆ ಬಳಿಕ ಗೊತ್ತಾದಾಗ ಶಾಕ್!

ಭೀಕರ ಅಪಘಾತ; ಮಗುಚಿ ಬಿದ್ದ ಲಾರಿ, ಒಬ್ಬ ಸ್ಥಳದಲ್ಲೇ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 7 =
Remember me
