| ರಮೇಶ ದೊಡ್ಡಪುರ ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಬೈಲಾ ತಿದ್ದುಪಡಿ ಮಾಡಿ 2 ವರ್ಷ ಅವಧಿ ವಿಸ್ತರಿಸಿಕೊಂಡ ಈಗಿನ ಕಾರ್ಯಕಾರಿ ಸಮಿತಿಯ ನಿರ್ಧಾರದ ವಿರುದ್ಧ ಹೈಕೋರ್ಟ್​ನಲ್ಲಿ ಸಲ್ಲಿಕೆ ಆಗಿರುವ ಮೊಕದ್ದಮೆ ಹಿಂಪಡೆಯಲು ಅರ್ಜಿದಾರರು ನಿರ್ಧರಿಸಿದ್ದಾರೆ.
ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷರೂ ಆದ ಅರ್ಜಿದಾರ ಡಾ.ಕೋ.ವೆಂ. ರಾಮಕೃಷ್ಣೇಗೌಡ ಈ ವಿಚಾರ ‘ವಿಜಯವಾಣಿ’ಗೆ ಖಚಿತ ಪಡಿಸಿದ್ದಾರೆ. ಬೈಲಾ ತಿದ್ದುಪಡಿಯಂತೆಯೇ ಕಸಾಪದ ಈಗಿನ ಅಧ್ಯಕ್ಷರ ವಿಸ್ತರಿತ ಅವಧಿ 2021ರ ಮಾರ್ಚ್​ಗೆ ಮುಗಿಯಬೇಕಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ನೆಪದಲ್ಲಿ ಚುನಾವಣೆ ಮುಂದೂಡುವ ಮುನ್ಸೂಚನೆ ಸಿಕ್ಕಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಮೂಲಕ ಸಕಾಲದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆಯಾದರೂ, 2021ರ ಮಾರ್ಚ್​ನಲ್ಲಿ ಅವಧಿ ಮುಗಿದ ಬಳಿಕವೂ 6 ತಿಂಗಳು ಅವಧಿ ವಿಸ್ತರಿಸಿಕೊಳ್ಳಲು ಕಸಾಪ ಚಿಂತನೆ ನಡೆಸುತ್ತಿದೆ ಎಂಬುದು ಮತ್ತಷ್ಟು ಪ್ರಶ್ನೆಗಳನ್ನೆತ್ತಿದೆ.
6 ತಿಂಗಳು 2 ವರ್ಷ:1989ರಿಂದ ಜಾರಿಗೆ ಬಂದ ಕಸಾಪ ಬೈಲಾದಂತೆ ಅಧ್ಯಕ್ಷರ ಅವಧಿ 3 ವರ್ಷಗಳಿಗೆ ಸೀಮಿತ ಆಯಿತು. ಬಳಿಕ ಅಧ್ಯಕ್ಷರಾದ ಗೊರುಚ, ಸಾಶಿಮ, ಎನ್. ಬಸವಾರಾಧ್ಯ 3 ವರ್ಷ ಅವಧಿ ಪೂರೈಸಿ ಚುನಾವಣೆಗೆ ಅನುವು ಮಾಡಿಕೊಟ್ಟರು. ಕಸಾಪ ಬೈಲಾ ಪ್ರಕಾರ, ಅನಿವಾರ್ಯ ಪರಿಸ್ಥಿತಿಯಲ್ಲಿ ಕಾರ್ಯಕಾರಿ ಸಮಿತಿ ಅವಧಿಯನ್ನು ಸಮಿತಿಯೇ 6 ತಿಂಗಳು ವಿಸ್ತರಿಸಿಕೊಳ್ಳಬಹುದು. 2001ರಲ್ಲಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರರ ಅವಧಿಯಲ್ಲಿ ‘ಅವಧಿ ವಿಸ್ತರಣೆ’ ಸಂಪ್ರದಾಯ ಆರಂಭವಾಯಿತು. ನಂತರ ಪ್ರೊ. ಚಂಪಾ, ಡಾ. ನಲ್ಲೂರು ಪ್ರಸಾದ್, ಪುಂಡಲೀಕ ಹಾಲಂಬಿ ಕ್ರಮವಾಗಿ 6 ತಿಂಗಳ ಅವಧಿ ವಿಸ್ತರಿಸಿಕೊಂಡರು. ಆದರೆ ಪ್ರಸಕ್ತ ಅಧ್ಯಕ್ಷ ಡಾ. ಮನು ಬಳಿಗಾರ್, ಗ್ರಾಪಂನಿಂದ ಸಂಸತ್ ವರೆಗೆ 5 ವರ್ಷ ಇರುವಾಗ ಕಸಾಪಗೆ ಮಾತ್ರ 3 ವರ್ಷ ಏಕೆ ಎಂದು ಬೈಲಾದಲ್ಲಿ ತಿದ್ದುಪಡಿ ತಂದರು.
ವಿಳಂಬಿಸುವ ಮುನ್ಸೂಚನೆ:ಐದು ವರ್ಷಕ್ಕೆ ಅವಧಿ ವಿಸ್ತರಣೆಗೆ ವಿರೋಧ ಇಲ್ಲವಾದರೂ, ಹಾಲಿ ಅವಧಿಗೇ ವಿಸ್ತರಿಸಿಕೊಳ್ಳುವುದು ತಪ್ಪೆಂಬ ದೂರನ್ನು ಎತ್ತಿಹಿಡಿದ ಸಹಕಾರ ಇಲಾಖೆ, ಹಾಲಿ ಅವಧಿಗೆ ಅನ್ವಯವಿಲ್ಲ ಎಂದಿತು. ಇದನ್ನು ಕೆಎಟಿಯಲ್ಲಿ ಪ್ರಶ್ನಿಸಿದಾಗ ಕಸಾಪ ಪರ ತೀರ್ಪು ಬಂತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. 2015ರ ಮಾರ್ಚ್ 2ಕ್ಕೆ ಈಗಿನ ಅಧ್ಯಕ್ಷರ ಅವಧಿ ಆರಂಭವಾಗಿದ್ದು, 2019ರ ಮಾ.2ಕ್ಕೆ ಮುಗಿಯಬೇಕಿತ್ತು. ಬೈಲಾ ತಿದ್ದುಪಡಿ ಬಳಿಕ ಅವಧಿ 2021ರ ಮಾ.2ಕ್ಕೆ ಮುಗಿಯುತ್ತದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಚುನಾವಣೆ ಅಸಾಧ್ಯ ಎಂದು ಮತ್ತಷ್ಟು ಅವಧಿಗೆ ಚುನಾವಣೆ ಮುಂದೂಡಲು ಯತ್ನಿಸಲಾಗುತ್ತಿದೆ ಎಂಬುದು ಗೊತ್ತಾದ್ದರಿಂದ ಮೊಕದ್ದಮೆ ಹಿಂಪಡೆಯಲು ನಿರ್ಧರಿಸಲಾಗಿದೆ. ಕಸಾಪ ಪ್ರಜಾಪ್ರಭುತ್ವ ಮೌಲ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ, ನಾನು ಕಸಾಪ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಅಲ್ಲ. ಈ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಬೌದ್ಧಿಕ ವಲಯ ಪ್ರಶ್ನಿಸದಿರುವುದು ಸೋಜಿಗ ಎಂದು ಅರ್ಜಿದಾರರು ಹೇಳಿದ್ದಾರೆ.
6 ತಿಂಗಳ ವಿಸ್ತರಣೆಗೆ ಚಿಂತನೆ?
2021ರ ಮಾ.2ಕ್ಕೆ ಐದು ವರ್ಷ ಮುಕ್ತಾಯದ ನಂತರವೂ, ಬೈಲಾದಲ್ಲಿನ ಅವಕಾಶ ಬಳಸಿಕೊಂಡು ಮತ್ತೆ 6 ತಿಂಗಳು ಅವಧಿ ವಿಸ್ತರಣೆಗೆ ಅಧ್ಯಕ್ಷ ಡಾ. ಮನು ಬಳಿಗಾರ್ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಕಾನೂನಿನಲ್ಲಿರುವಾಗ ಅದರಲ್ಲಿ ತಪ್ಪಲ್ಲ. ಆರು ತಿಂಗಳ ವಿಸ್ತರಣೆ ಬಳಿಕ ಸೆ.2ಕ್ಕೆ ಅವಧಿ ಮುಗಿಯುತ್ತದೆ. ನಂತರ ಸರ್ಕಾರ ಆಡಳಿತಾಧಿಕಾರಿ ನೇಮಿಸಿ ಚುನಾವಣೆ ನಡೆಸಬೇಕು. ಬಹುಶಃ 2021ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಚುನಾವಣೆ ನಡೆಯಬಹುದು ಎಂದು ಕಸಾಪ ಮೂಲಗಳು ಹೇಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
