ಬೆಂಗಳೂರು:ಸರ್ಕಾರ ಹಿಜಾಬ್ ನಿಷೇಧಿಸಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಕ್ಯಾಂಪಸ್​ಗಳಲ್ಲಿ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ, ತರಗತಿಗಳಲ್ಲಿ ಮಾತ್ರ ಹಿಜಾಬ್ ಧರಿಸುವಂತಿಲ್ಲ. ಇದು ಕೇವಲ ಶಿಕ್ಷಣ ಸಂಸ್ಥೆಗಳ ಅದರಲ್ಲೂ ತರಗತಿಗಳ ಒಳಗಿನ ಪ್ರವೇಶಕ್ಕೆ ಮಾತ್ರವೇ ಇರುವ ನಿರ್ಬಂಧವಾಗಿದ್ದು, ಬೇರೆಡೆ ಅವರ ಇಚ್ಛೆಯಂತೆಯೇ ನಡೆದುಕೊಳ್ಳುವ ಸ್ವಾತಂತ್ರ್ಯವಿದೆ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್​ಗೆ ತಿಳಿಸಿದರು.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಫೆ.5ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು. ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಒಂದೊಮ್ಮೆ ನ್ಯಾಯಾಲಯದ ಆದೇಶದ ಮೂಲಕ ಹಿಜಾಬ್ ಧರಿಸುವುದಕ್ಕೆ ಧಾರ್ವಿುಕ ಮಂಜೂರಾತಿಯಾದರೆ ಮುಸ್ಲಿಂ ಮಹಿಳೆಯರು ನಿರ್ದಿಷ್ಟ ಉಡುಪನ್ನು ಧರಿಸುವುದು ಕಡ್ಡಾಯವಾಗುತ್ತದೆ. ಇದರಿಂದ, ಹಿಜಾಬ್ ಧರಿಸದ ಮಹಿಳೆಯರಿಗೂ ಸಮಸ್ಯೆಯಾಗಬಹುದು ಎಂದರು. ಸಾಂಸ್ಥಿಕ ಶಿಸ್ತುಗಳನ್ನು ಪಾಲಿಸುವ ಸಂದರ್ಭದಲ್ಲಿ ವೈಯಕ್ತಿಕ ಆಚರಣೆಗಳಿಗೆ ಅವಕಾಶವಿರುವುದಿಲ್ಲ. ಆದಾಗ್ಯೂ, ಹಿಜಾಬ್ ಧರಿಸುವುದನ್ನು ಮಹಿಳೆಯ ಆಯ್ಕೆಗೆ ಬಿಡಬೇಕು. ಕಡ್ಡಾಯಗೊಳಿಸಬಾರದು ಎಂದು ನ್ಯಾಯಪೀಠಕ್ಕೆ ವಿವರಿಸಿದ ಎಜಿ, ತಮ್ಮ ವಾದ ಮಂಡನೆ ಪೂರ್ಣಗೊಳಿಸಿದರು. ವಿಚಾರಣೆ ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದುವರಿಯಲಿದೆ.
ಶಿಸ್ತಿನ ದೃಷ್ಟಿಯಿಂದ ಸಮವಸ್ತ್ರ ಬೇಕು:ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಪರ ಹಿರಿಯ ವಕೀಲ ಆರ್. ವೆಂಕಟರಮಣಿ ವಾದ ಮಂಡಿಸಿ, ಶಿಕ್ಷಕರಾದವರಿಗೆ ಯಾವುದೇ ಧರ್ಮ ದೊಡ್ಡದು ಅಥವಾ ಚಿಕ್ಕದು ಎಂದಿರುವುದಿಲ್ಲ. ಸಾರ್ವಜನಿಕ ಪ್ರದೇಶಕ್ಕೂ, ಶಾಲೆಯ ವಾತಾವರಣಕ್ಕೂ ವ್ಯತ್ಯಾಸವಿರುತ್ತದೆ. ಆದ್ದರಿಂದ, ವಿದ್ಯಾರ್ಥಿಗಳಿಗೆ ಸ್ವತಂತ್ರ ಪ್ರಜ್ಞೆ ಇರಬೇಕು ಎಂದು ಬಯಸುತ್ತೇವೆ. ಶಿಕ್ಷಣದ ಉದ್ದೇಶದಿಂದ ವಿದ್ಯಾರ್ಥಿಗಳು ಶಿಸ್ತು, ಸುವ್ಯವಸ್ಥೆ ಪಾಲಿಸಬೇಕು. ಧರ್ಮದಲ್ಲಿ ಏನೇನು ಸೇರಿದೆ, ಯಾವುದು ಅಗತ್ಯ ಮತ್ತು ಯಾವುದು ಅಗತ್ಯವಲ್ಲ ಎಂಬ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಆದರೆ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ವಿಚಾರ ಬಂದಾಗ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದರು.
ಆಚರಣೆ-ಸಂಪ್ರದಾಯ ಬೇರೆ ಬೇರೆ:ಶಿಕ್ಷಣ ಸಂಸ್ಥೆಗಳ ಪರ ಹಿರಿಯ ವಕೀಲ ಎಸ್.ಎಸ್.ನಾಗಾನಂದ್ ವಾದ ಮಂಡಿಸಿ, ಅಗತ್ಯ ಧಾರ್ವಿುಕ ಆಚರಣೆ ಮತ್ತು ಸಂಪ್ರದಾಯದ ನಡುವೆ ವ್ಯತ್ಯಾಸವಿದೆ. ಹಿಂದು ಧರ್ಮದಲ್ಲಿ ಕೆಲವರು ಮಂಗಳಸೂತ್ರ, ಕಾಲುಂಗುರ ಧರಿಸುವುದಿಲ್ಲ. ಧಾರ್ವಿುಕ ಆಚರಣೆ ಹಾಗೂ ಸಂಪ್ರದಾಯವನ್ನು ಗೌರವಿಸಲಾಗುತ್ತದೆ. ಆದರೆ, ಅವನ್ನು ಎಲ್ಲೆಡೆ ಆಚರಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಬ್ರಾಹ್ಮಣ ಸಮುದಾಯದ ಆಚರಣೆಗಳ ಪ್ರಕಾರ ದಿನದಲ್ಲಿ ಮೂರೂ ಹೊತ್ತು ಸಂಧ್ಯಾವಂದನೆ ಮಾಡಬೇಕು. ಇದನ್ನೇ ನೆಪವನ್ನಾಗಿಸಿಕೊಂಡು, ವಾದ ಮಾಡುವ ಸಮಯದಲ್ಲಿ ಸಂಧ್ಯಾವಂದನೆ ಸಮಯವಾಯಿತು, ಮುಗಿಸಿಕೊಂಡು ಬಂದು ವಾದ ಮಾಡುತ್ತೇನೆ ತಡೆಯಿರಿ ಎಂದು ಹೇಳಬಹುದೇ, ಒಂದು ವೇಳೆ ನನ್ನ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದರೆ ಅದು ನನ್ನ ಧಾರ್ವಿುಕ ಅಗತ್ಯ ಆಚರಣೆಯ ಹಕ್ಕನ್ನು ಉಲ್ಲಂಘನೆ ಎನ್ನಬಹುದೇ ಎಂದು ಪ್ರಶ್ನಿಸಿದರು.
ವಿಳಂಬ ಬೇಡ:ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, ಪ್ರಕರಣವನ್ನು ಮುಂದಿನ ವಾರವೂ ಮುಂದುವರಿಸುವುದು ಬೇಡ. ಅರ್ಜಿ ದಾರರು, ಪ್ರತಿವಾದಿಗಳು ಕ್ಷಿಪ್ರವಾಗಿ ವಾದ ಮಂಡಿಸಿ. ಲಿಖಿತ ಆಕ್ಷೇಪಣೆಗಳಿದ್ದರೆ ತ್ವರಿತವಾಗಿ ಸಲ್ಲಿಸಿ. ಸಾಧ್ಯವಾದರೆ ಈ ವಾರವೇ ಪ್ರಕರಣ ಇತ್ಯರ್ಥಪಡಿಸೋಣ ಎಂದು ಮೌಖಿಕವಾಗಿ ಹೇಳಿದರು.
ಹಣಕ್ಕಾಗಿ ಬೇಕರಿ ಮಾಲೀಕನ ಅಪಹರಣ; ಕೈ-ಕಾಲಿಗೆ ಚಾಕು ಚುಚ್ಚಿ ಹಲ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
