ಬೆಂಗಳೂರು:ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಾರ್ಖಾನೆಯ ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ಸು ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಇದನ್ನೂ ಓದಿ:ವಕ್ಫ್ ಮಸೂದೆ ಪರಿಶೀಲನೆ ಸಮಿತಿಯ ಮುಖ್ಯಸ್ಥರಾಗಿ ಬಿಜೆಪಿ ನಾಯಕ ಜಗದಾಂಬಿಕ ಪಾಲ್ ನೇಮಕ!
ಒಂದು ವೇಳೆ ರಾಜ್ಯ ಸರ್ಕಾರ ದುರುದ್ದೇಶಪೂರಿತವಾಗಿ ಭೂಮಿ ವಿಷಯದಲ್ಲಿ ಕಿರುಕುಳ ನೀಡಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಸಚಿವರು ಎಚ್ಚರಿಕೆ ನೀಡಿದರು. ಬೆಂಗಳೂರಿನ ಎಚ್‌ಎಂಟಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಎಚ್‌ಎಂಟಿಗೆ ಜಮೀನನ್ನು ಉಚಿತವಾಗಿ ಕೊಟ್ಟಿಲ್ಲ:ಅರಣ್ಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ವಿವಿಧ ಸರ್ಕಾರಿ ಸಂಸ್ಥೆ, ಇಲಾಖೆಗಳಿಗೆ ಮತ್ತು ಖಾಸಗಿಯವರಿಗೆ ಸಂಸ್ಥೆ ಮಾರಾಟ ಮಾಡಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿರುವ ಹೇಳಿಕೆಯನ್ನು ಸಚಿವರು ಸಾರಾಸಗಟಾಗಿ ತಳ್ಳಿಹಾಕಿದರು. ಮೈಸೂರು ಮಹಾರಾಜರ ಕಾಲದಲ್ಲಿ ಜಗತ್ಪ್ರಸಿದ್ಧ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಎಚ್‌ಎಂಟಿ ಕಾರ್ಖಾನೆಗೆ ಯಾವುದೇ ಜಮೀನನ್ನು ಉಚಿತವಾಗಿ, ಪುಕ್ಕಟೆಯಾಗಿ ನೀಡಿಲ್ಲ. ಬೇಕಿದ್ದರೆ ರಾಜ್ಯ ಅರಣ್ಯ ಸಚಿವರು ದಾಖಲೆಗಳನ್ನು ತೆಗೆದು ನೋಡಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಯಾವ ಬಿಲ್ಡರ್​​ಗೆ ಧಾರೆ ಎರೆಯುತ್ತೀರಿ?:ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್ ಗೆ ದಾನ ಮಾಡುತ್ತೀರಿ? ಹಿಂದೆ ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಿಮ್ಮ ಪಕ್ಷದ ನಾಯಕರು ಮಾಡಿದ್ದೇನು ಎಂಬುದನ್ನು ಸ್ವಲ್ಪ ತಿಳಿದುಕೊಂಡು ಮಾತನಾಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟಾಂಗ್ ನೀಡಿದರು.
ಒಂದು ಕಡೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತೀರಿ. ಇನ್ನೊಂದು ಕಡೆ ರಾಜ್ಯಕ್ಕೆ ಒಳ್ಳೆಯದು ಮಾಡಲು ಬರುವ ಕೇಂದ್ರ ಸಚಿವರಿಗೆ ಅಡ್ಡಿ ಮಾಡುತ್ತೀರಿ. ಜನತೆಯ ಆಶೀರ್ವಾದ ಹಾಗೂ ಭಗವಂತನ ಕೃಪೆಯಿಂದ ನಾನು ಕೇಂದ್ರದ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವನಾಗಿದ್ದೇನೆ. ಸಿಕ್ಕಿರುವ ಕಾಲಾವಕಾಶದಲ್ಲಿ ರಾಜ್ಯಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ನನ್ನ ಕಳಕಳಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕೇಂದ್ರ ಸರ್ಖಾರಕ್ಕೆ ಸಹಕಾರ ಕೊಡಿ:ನನಗೆ ಅಸಹಕಾರ ಕೊಟ್ಟರೆ ನಿಮಗೆ ಸಿಗುವ ಲಾಭ ಏನು? ಇಲ್ಲಿ ಕುಮಾರಸ್ವಾಮಿ ಮುಖ್ಯವಲ್ಲ. ರಾಜ್ಯಕ್ಕೆ ಒಳ್ಳೆಯದು ಆಗಬೇಕು. ಅದಕ್ಕಾಗಿ ನನಗೆ, ಕೇಂದ್ರ ಸರ್ಕಾರಕ್ಕೆ ಸಹಕಾರ ಕೊಡಿ. ಇನ್ನಾದರೂ ಲೂಟಿ ಹೊಡೆಯುವುದು ನಿಲ್ಲಿಸಿ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಿ. ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಯನ್ನು ಪತ್ರಿಕೆಯಲ್ಲಿ ಓದಿ ನನ್ನ ಕಣ್ಣಲ್ಲಿ ನೀರು ಬಂತು. ಎಚ್‌ಎಂಟಿ ಯಂತಹ ಕಾರ್ಖಾನೆಗಳನ್ನು ಕಳೆದುಕೊಂಡು ಏನು ಸಾಧನೆ ಮಾಡುತ್ತೀರಿ? ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಎಚ್‍ಎಂಟಿಗೆ ಕಿರುಕುಳ ನೀಡಿದರೆ ಕಾನೂನು ಹೋರಾಟ ಗ್ಯಾರಂಟಿ:ಯಾವ ಕಾರಣಕ್ಕೂ ಎಚ್‍ಎಂಟಿಗೆ ಸೇರಿದ ಜಮೀನನ್ನು ವಾಪಸ್ಸು ಕೊಡುವ ಪ್ರಶ್ನೆಯೇ ಇಲ್ಲ. ಅದು ಖರೀದಿ ಮಾಡಿರುವ ಜಮೀನಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಅಂತಹ ನಡೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು. ಎಚ್‍ಎಂಟಿಗೆ 599 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿಲ್ಲ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಕಡತವನ್ನು ಅರಣ್ಯ ಸಚಿವರು ಪರಿಶೀಲಿಸುವುದು ಒಳ್ಳೆಯದು ಎಂದ ಕೇಂದ್ರ ಸಚಿವರು, ರಾಜ್ಯ ಸರ್ಕಾರ ಇದೇ ರೀತಿ ಕಂಪನಿಗೆ ಕಿರುಕುಳ ನೀಡಿದರೆ, ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ಕೊಟ್ಟರು.
ರಾಜ್ಯ ಸರ್ಕಾರಕ್ಕೆ ಪ್ರೆಸ್ಟೀಜ್ ಮುಖ್ಯವಾ?:ಪ್ರೆಸ್ಟೀಜ್ ಕಂಪನಿಯವರು 27 ಎಕರೆ ಭೂಮಿ ಖರೀದಿ ಮಾಡಿದ್ದು ಯಾವಾಗ? ಈಗಾಗಲೇ ಅಪಾರ್ಟ್ಮೆಂಟ್ ಗಳನ್ನು ಕಟ್ತಾ ಇದಾರಲ್ಲಾ? ಅದೇನೋ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರಲ್ಲಾ? ಪ್ರೆಸ್ಟೀಜ್ ಗೆ ಭೂಮಿ ಖರೀದಿ ಎನ್ ಓಸಿ ಕೊಡುತ್ತಾರೆ. ಆದರೆ, ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಖರೀದಿ ಮಾಡಲು ಬಂದರೆ ಎನ್ ಓಸಿ ಕೊಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಪ್ರೆಸ್ಟೀಜ್ ಮುಖ್ಯವಾ? ಅಥವಾ ಇಸ್ರೋ ಮುಖ್ಯವಾ? ಹೇಳಬೇಕಲ್ಲವೇ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟಾಂಗ್ ನೀಡಿದರು.
ಕಾಡುಗೋಡಿ ಪ್ಲಾಂಟೇಷನ್ 711 ಎಕರೆ ಇದೆ. ಅದನ್ನು ಕಾನ್ ಕಾರ್ಡ್ ಪ್ರೈ ಲಿ. ಖರೀದಿ ಮಾಡಿದೆ. ಈಗ ಆ ಭೂಮಿಯಲ್ಲಿ ರಾಜ್ಯ ಸರಕಾರ ನಿವೇಶನಗಳನ್ನು ಮಾಡಿ ಹಂಚಲು ಹೊರಟಿದೆ. ಆಗ ಅದು ಅರಣ್ಯ ಭೂಮಿ, ಅದನ್ನು ವಶಪಡಿಸಿಕೊಳ್ಳಬೇಕು ಅನಿಸಲಿಲ್ಲವಾ‌? ಖಂಡ್ರೆ ಅವರೇ… ಕುಮಾರಸ್ವಾಮಿ ಮೇಲಿನ ದ್ವೇಷಕ್ಕೆ ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ. ನೀವು ಲೂಟಿ ಮಾಡಿದ್ದು ಸಾಕು. ಕುಮಾರಸ್ವಾಮಿ ಮಾಡ್ತಿರುವ ಕೆಲಸಕ್ಕೆ ಸಹಕಾರ ಕೊಡಿ ಎಂದು ಅವರು ಒತ್ತಾಯ ಮಾಡಿದರು.
ಎಚ್‍ಎಂಟಿ ಕಾರ್ಖಾನೆಯಲ್ಲಿ 15ರಿಂದ 20 ಸಾವಿರ ಜನ ಕೆಲಸ ಮಾಡುತ್ತಿದ್ದರು. ಗಡಿಯಾರ ಹಾಗೂ ಟ್ರ್ಯಾಕ್ಟರ್ ಘಟಕವೊಂದಿತ್ತು. 1970ರಲ್ಲಿ 270 ಕೋಟಿ ರೂ. ಲಾಭ ಗಳಿಸಿತ್ತು. ಆ ಹಣದಿಂದ ಹೈದರಾಬಾದ್, ಉತ್ತರಕಾಂಡ, ಕೇರಳ, ಅಜ್ಮೀರ್ ಮೊದಲಾದೆಡೆ ಶಾಖೆಗಳು ಪ್ರಾರಂಭವಾದವು. ಇವೆಲ್ಲಾ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿವೆ ಎಂದರು ಹೇಳಿದರು.
ಕೆಲ ದಿನಗಳಲ್ಲಿ ಶುಭ ಹೇಳಲಿದ್ದೇನೆ: ಪ್ರಧಾನಿಗಳ ಮಾರ್ಗದರ್ಶನದಲ್ಲಿ ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಒಂದು ವಿಚಾರದಲ್ಲಿ ಶೀಘ್ರವೇ ಒಳ್ಳೆಯ ಸುದ್ದಿ ಕೊಡಲಿದ್ದೇನೆ. ಅದು ಯಾವುದು? ಯಾವಾಗ? ಎಂದು ಈಗಲೇ ಹೇಳಲಾರೆ. ಅದು ಯಶಸ್ವಿ ಆದರೆ ಪ್ರಧಾನಿಗಳಿಗೂ ನಂಬಿಕೆ ಬರುತ್ತದೆ. ಆಮೇಲೆ ಉಳಿದ ಕಾರ್ಖಾನೆಗಳು ಹಂತ ಹಂತವಾಗಿ ಸರಿ ಹೋಗುತ್ತವೆ. ಆ ಪ್ರಯತ್ನ ದಲ್ಲಿ ನಾನು ಇದ್ದೇನೆ. ಇನ್ನು ಕೆಲ ದಿನಗಳಲ್ಲಿ ಶುಭ ಹೇಳಲಿದ್ದೇನೆ ಎಂದು ಸಚಿವರು ಹೇಳಿದರು. ಆದರೆ, ಆ ಶುಭ ಸುದ್ದಿ ಯಾವುದಕ್ಕೆ ಸಂಬಂಧಿಸಿದ್ದು ಎಂಬುದನ್ನು ಅವರು ಬಹಿರಂಗ ಮಾಡಲಿಲ್ಲ.
ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 − thirteen =
Remember me
