ರುದ್ರಣ್ಣ ಹರ್ತಿಕೋಟೆ ಬೆಂಗಳೂರು
‘ಕರೊನಾ ವಿರುದ್ಧದ ಹೋರಾಟದಲ್ಲಿ ಹಗಲಿರುಳು ದುಡಿಯುತ್ತಿರುವ ಪೊಲೀಸರಿಗೆ ವಿಶೇಷ ಭತ್ಯೆ ನೀಡುವ ಸಂಬಂಧ ಸಿಎಂ ಜತೆ ರ್ಚಚಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಪೊಲೀಸರಿಗೆ ನೀಡುತ್ತಿರುವ ಕಷ್ಟ ಪರಿಹಾರ ಭತ್ಯೆ ರದ್ದು ಮಾಡುವುದಿಲ್ಲ. ಲಾಕ್​ಡೌನ್ ಮುಗಿದ ಕೂಡಲೇ 6 ಸಾವಿರ ಪೇದೆಗಳು, ಸಾವಿರ ಪಿಎಸ್​ಐಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ’
ಇದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ವಾಗ್ದಾನ. ಕರೊನಾ ನಿಯಂತ್ರಣ ಕಾರ್ಯದ ಒತ್ತಡ, ಬಿಡುವಿಲ್ಲದ ಕೆಲಸದ ನಡುವೆಯೂ ವಿಜಯವಾಣಿಗೆ ವಿಶೇಷ ಸಂದರ್ಶನ ನೀಡಿರುವ ಅವರು ಇಲಾಖೆ ಎದುರಿಸಿದ ಸಮಸ್ಯೆಗಳ ಜತೆಗೆ ಮುಂದಿನ ಸವಾಲುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಸಿರು ವಲಯಗಳಲ್ಲಿ ಲಾಕ್​ಡೌನ್ ಸಡಿಲ ಮಾಡುವುದರೊಂದಿಗೆ ಕರೊನಾ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಜತೆ ಪ್ರಮುಖ ಪಾತ್ರ ವಹಿಸಿದ್ದ ಪೊಲೀಸರ ಮುಂದೆ ಹೊಸ ಸವಾಲೊಂದು ಎದುರಾಗುತ್ತಿದ್ದು, ಅದಕ್ಕೆ ಈಗ ಇಡೀ ಇಲಾಖೆ ಸಜ್ಜಾಗುತ್ತಿದೆ ಎಂದರು. ಗಲಭೆಪೀಡಿತ ಪಾದರಾಯನಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸುವ ಜತೆಗೆ ವಿದೇಶದಿಂದ ಬಂದವರು ಹಾಗೂ ತಬ್ಲಿಘಿ ಜಮಾತೆ ಸಮಾವೇಶಕ್ಕೆ ಹೋಗಿದ್ದವರನ್ನು ಕ್ವಾರಂಟೈನ್ ಮಾಡಿಸುವಲ್ಲಿ ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಿ ಮುನ್ನಡೆಸಿದ ಗೃಹ ಸಚಿವರು ಸಂದರ್ಶನದಲ್ಲಿ ಹೇಳಿದ್ದಿಷ್ಟು:
ನಿಮ್ಮ ಪೊಲೀಸರಿಗೆ ಆರೋಗ್ಯದ ಭಯ ಇದೆ?
ಸರ್ಕಾರ ಪೊಲೀಸರ ಆರೋಗ್ಯದ ಬಗ್ಗೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಆರೋಗ್ಯ ಕವಚ ವಿಮೆ ಇದೆ. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಒದಗಿಸಿದ್ದೇವೆ. ಒತ್ತಡ ತಗ್ಗಿಸುವ ಸಲುವಾಗಿ ಶಿಫ್ಟ್ ಪ್ರಕಾರ ಡ್ಯೂಟಿ ಹಾಕುತ್ತಿದ್ದೇವೆ.
ಎಷ್ಟು ಪೊಲೀಸರಿಗೆ ಕರೊನಾ ಕಾಣಿಸಿಕೊಂಡಿದೆ?
ಬಾಗಲಕೋಟೆ ಜಿಲ್ಲೆಯಲ್ಲಿ ಒಬ್ಬ ಪೇದೆ ಹಾಗೂ ಆತನ ಸಂರ್ಪತ ಐದು ಜನರನ್ನು ಹೊರತುಪಡಿಸಿ ರಾಜ್ಯದಲ್ಲಿ ಬೇರೆ ಯಾವ ಪೊಲೀಸರಿಗೂ ಕರೊನಾ ಕಾಣಿಸಿಕೊಂಡಿಲ್ಲ.
ಕರೊನಾ ವಾರಿಯರ್ಸ್ ರೀತಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ವಿಶೇಷ ಭತ್ಯೆ ಕೊಡಿಸುವಿರಾ?
ಈ ವಿಚಾರವಾಗಿ ಈಗಾಗಲೇ ಸಿಎಂ ಜತೆ ರ್ಚಚಿಸಿದ್ದೇನೆ. ಸಿಎಂ ಸಹ ಸಹಾನುಭೂತಿಯಿಂದ ಪರಿಶೀಲಿಸುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಿದ್ದಾರೆ.
ಪೊಲೀಸರ ಕಷ್ಟ ಪರಿಹಾರ ಭತ್ಯೆ ರದ್ದಾಗುತ್ತದೆ ಎಂಬ ವದಂತಿಗಳಿವೆ?
ಅದು ಸುಳ್ಳು, ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ. ಪೊಲೀಸರಿಗೆ ನೀಡುವ ಯಾವುದೇ ಭತ್ಯೆ ರದ್ದು ಮಾಡುವುದಿಲ್ಲ. ರದ್ದು ಮಾಡುವುದು ಮಾನವೀಯತೆಯೂ ಅಲ್ಲ.
ಕರೊನಾ ವಿರುದ್ಧದ ಹೋರಾಟದಲ್ಲಿ ಇಲಾಖೆ ತನ್ನ ಪಾತ್ರ ಹೇಗೆ ನಿರ್ವಹಿಸಿದೆ?
ಪೇದೆಯಿಂದ ಹಿಡಿದು ಅಧಿಕಾರಿಗಳವರೆಗೆ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಿದ್ದಾರೆ. ಆರೋಗ್ಯ ಇಲಾಖೆ ಜತೆ ಹೆಗಲಿಗೆ ಹೆಗಲು ತೊಟ್ಟು ದುಡಿದಿದ್ದಾರೆ. ಮೊದಲ ದಿನದಿಂದಲೇ ಏರ್​ಪೋರ್ಟ್​ನಲ್ಲಿ ತಪಾಸಣೆ ಮಾಡುವುದು, ಹೋಂ ಹಾಗೂ ಇನ್​ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಿಸುವ ಕೆಲಸ ಮಾಡಿದ್ದಾರೆ. ಕರೊನಾ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಲಾಕ್​ಡೌನ್, ಸೀಲ್​ಡೌನ್ ಪ್ರದೇಶದಲ್ಲಿ, ಗಡಿಗಳಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಲಾಗಿದೆ.
ಸಮಸ್ಯೆಯಾಗಿದ್ದ ತಬ್ಲಿಘಿಗಳನ್ನು ಹೇಗೆ ನಿಯಂತ್ರಿಸಿದಿರಿ?
ರಾಜ್ಯದಿಂದ ದೆಹಲಿಯ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿದ್ದವರ ಪೈಕಿ 801 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದ ಶೇ. 80 ಜನ ನಿಗಾದಲ್ಲಿದ್ದಾರೆ. 581 ಜನ ತಬ್ಲಿಘಿಗಳು ಹೊರ ರಾಜ್ಯಗಳಲ್ಲಿದ್ದು ಅವರ ಮಾಹಿತಿಯನ್ನು ಆಯಾ ರಾಜ್ಯಕ್ಕೆ ನೀಡಿದ್ದೇವೆ. ತಬ್ಲಿಘಿಗಳನ್ನು ಪರೀಕ್ಷೆಗೆ ಒಳಪಡಿಸುವ ವಿಚಾರದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಕಾರ್ಯ ನಮ್ಮಷ್ಟು ಬೇರೆ ರಾಜ್ಯದಲ್ಲಿ ಆಗಿಲ್ಲ. ಈ ವಿಚಾರದಲ್ಲಿ ನಮ್ಮ ಪೊಲೀಸರು ಬಹಳ ತಾಳ್ಮೆಯಿಂದ ಕೆಲಸ ಮಾಡಿದ್ದಾರೆ. ಎಲ್ಲಿಯೂ ಪೊಲೀಸರು ಎಚ್ಚರ ತಪ್ಪಲಿಲ್ಲ.
ರೈತರಿಗೆ ಸಮಸ್ಯೆ ಇಲ್ಲ
ಕೆಲ ರೈತರ ಮನೆ ಒಂದು ಜಿಲ್ಲೆಯಲ್ಲಿದ್ದರೆ, ಜಮೀನು ಇನ್ನೊಂದು ಜಿಲ್ಲೆಯಲ್ಲಿದೆ. ಆದರೆ ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕೊಟ್ಟಿರುವುದರಿಂದ ಸಮಸ್ಯೆಯಾಗುವುದಿಲ್ಲ. ಆದರೆ ರೈತರ ಹೆಸರಿನಲ್ಲಿ ಅಂತರ ಜಿಲ್ಲೆ ಸಾಗಾಟಕ್ಕೆ ಅವಕಾಶ ನೀಡುವುದಿಲ್ಲ.
ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಯಾವಾಗ?
ಇಲಾಖೆಯಲ್ಲಿ ಸಾಕಷ್ಟು ಖಾಲಿ ಹುದ್ದೆಗಳಿವೆ. ಹಂತ ಹಂತವಾಗಿ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಲಾಕ್​ಡೌನ್ ಮುಗಿದ ಕೂಡಲೇ 6000 ಪೇದೆಗಳು ಹಾಗೂ 1000 ಪಿಎಸ್​ಐಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
ಹೊಸ ಸವಾಲಿಗೆ ಸರ್ಕಾರ ಸಿದ್ಧ
ಲಾಕ್​ಡೌನ್ ಸಡಿಲ ನಂತರ ಹೊಸ ಸವಾಲು ಎದುರಿಸಲು ನಾವು ಸಜ್ಜಾಗಿದ್ದೇವೆ, ಈಗಾಗಲೇ ಹೊಸ ಮಾರ್ಗಸೂಚಿಗಳನ್ನು ಕೊಟ್ಟು ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗುವಂತೆ ತಿಳಿಸಲಾಗಿದೆ. ಕೆಲವೆಡೆ ಸಡಿಲ ಮಾಡಿದರೆ, ಇನ್ನೂ ಕೆಲವೆಡೆ ಬಿಗಿ ಮಾಡಬೇಕಾಗಿದೆ. ರೆಡ್​ರೆೋನ್​ನಿಂದ ಬೇರೆ ಝೋನ್​ಗೆ ಹೋಗದಂತೆ ತಡೆಯಬೇಕಾಗಿದೆ. ಕೃಷಿ ಹಾಗೂ ಕೈಗಾರಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ರೆಡ್​ರೆೋನ್​ನಲ್ಲಿ ಮನೆ ಮನೆಗೆ ಸಾಮಗ್ರಿ ಸರಬರಾಜು ಮಾಡಬೇಕಾಗುತ್ತದೆ. ಕರೊನಾಮುಕ್ತ ಜಿಲ್ಲೆಗಳಲ್ಲಿ ರೋಗ ಹರಡದಂತೆ ಎಚ್ಚರವಹಿಸುವ ಕೆಲಸಕ್ಕೆ ಅನುಗುಣವಾಗಿ ಮಾರ್ಗಸೂಚಿ ಸಿದ್ಧವಾಗಿದೆ.
ಲಾಕ್​ಡೌನ್ ಸಡಿಲದಿಂದ ಪರಿಸ್ಥಿತಿ ಕೈ ಮೀರಲ್ವೇ? ಪೊಲೀಸರು ಅಸಹಾಯಕರಾಗಲ್ವೆ?
ಕರೊನಾ ವಿರುದ್ಧ ಹೋರಾಟಕ್ಕೆ ಹೆಚ್ಚಿನ ಪ್ರಾಶಸ್ಱ ನೀಡಿದ್ದೇವೆ. ಆದರೆ ಆರ್ಥಿಕತೆ ಕುಸಿಯಬಾರದೆಂದು ಕೆಲವೊಂದು ಸಡಿಲ ಮಾಡಲೇಬೇಕಾಗಿದೆ. ಕೇಂದ್ರದ ಮಾರ್ಗಸೂಚಿಯನ್ವಯವೇ ಸರ್ಕಾರ ಕೆಲವೊಂದು ಸಡಿಲ ಮಾಡಿದೆ. ರೋಗ ನಿಯಂತ್ರಣದಲ್ಲಿದೆ ಎಂಬ ಕಾರಣಕ್ಕೆ ಕೆಲವೊಂದು ತೀರ್ವನವನ್ನು ಸರ್ಕಾರ ಮಾಡಿದೆ. ಕೇರಳದ ನಂತರ ರಾಜ್ಯದಲ್ಲಿಯೇ ಸೋಂಕು ನಿಯಂತ್ರದಲ್ಲಿದೆ ಎಂಬುದು ಸಮಾಧಾನದ ಸಂಗತಿ.
ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದರೆ ನಿಯಂತ್ರಣ ಇನ್ನಷ್ಟು ಸಾಧ್ಯವಿತ್ತು ಎಂಬ ಅಭಿಪ್ರಾಯವಿದೆ?
ಕರೊನಾ ವಿಶೇಷ ಪ್ರಕರಣ. ದಿನೇ ದಿನೇ ಪರಿಸ್ಥಿತಿ ಬದಲಾಗುತ್ತಿತ್ತು. ಆಯಾ ಪರಿಸ್ಥಿತಿಗೆ ತಕ್ಕಂತೆ ನಮ್ಮ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದರು. ಲಾಕ್​ಡೌನ್ ಮಾಡುವಾಗ ನಿಯಂತ್ರಣ ಕಟ್ಟುನಿಟ್ಟಾಗಿತ್ತು. ಶೇ. 85 ಜನತೆ ಲಾಕ್​ಡೌನ್ ನಿಯಮ ಪಾಲಿಸಿದರು. ಇದರ ನಡುವೆ ಜನರಿಗೆ ಮೋಸ ಮಾಡುವ ನಕಲಿ ಮಾಸ್ಕ್, ಸ್ಯಾನಿಟೈಜರ್ ತಯಾರು ಮಾಡುವವರ ವಿರುದ್ಧ ಸಿಸಿಬಿ ದಾಳಿ ಮಾಡಿ ಜನರಿಗೆ ಆಗುವ ಸಮಸ್ಯೆ ತಪ್ಪಿಸಿದೆ.
ಪಾಸ್​ಗಳು ದುರುಪಯೋಗ ಆಗಿವೆ ಎಂಬ ಮಾತಿದೆ?
ಅದು ಸುಳ್ಳು. ನಮ್ಮ ಅಧಿಕಾರಿಗಳು ಎಲ್ಲಿಯೂ ದುರುಪಯೋಗ ಮಾಡಲು ಅವಕಾಶ ನೀಡಿಲ್ಲ. ಇಷ್ಟು ದೊಡ್ಡ ನಗರದಲ್ಲಿ ಅಗತ್ಯವಿರುವಷ್ಟು ಪಾಸ್​ಗಳನ್ನು ನೀಡಿದ್ದಾರೆ.
ಕರೊನಾ ಸಂದರ್ಭದಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಬಿಡುಗಡೆಗೆ ಯಾವಾಗ ಕ್ರಮ ಕೈಗೊಳ್ಳುವಿರಿ?
ದಂಡ ಕಟ್ಟಿಸಿಕೊಂಡು ವಾಹನಗಳನ್ನು ಬಿಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆ ಪ್ರಕ್ರಿಯೆ ಆರಂಭ ಆಗಿದೆ. 50 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು.
ಕರೊನಾ ವೇಳೆ ಸೈಬರ್ ಕಳ್ಳರು ಕೈ ಚಳಕ ತೋರುತ್ತಿದ್ದಾರಲ್ಲ?
ಕೆಲವೊಂದಿಷ್ಟು ಪ್ರಕರಣ ವರದಿಯಾಗಿವೆ. ದೂರು ಬಂದ ಪ್ರಕರಣಗಳಲ್ಲಿ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಮಾರುಕಟ್ಟೆ ಮಂಡಳಿಯಲ್ಲಿ ಆಗಿದ್ದ ಅಕ್ರಮವನ್ನು ಪತ್ತೆ ಹಚ್ಚಿದ್ದು ಈಗ ಹಣ ವಾಪಸ್ ಬಂದಿದೆ. ಆದರೆ ಸಮಾಧಾನದ ಸಂಗತಿ ಎಂದರೆ ಸರ ಅಪಹರಣ, ಕಳ್ಳತನ, ಅತ್ಯಾಚಾರ, ಕೊಲೆ ಪ್ರಕರಣಗಳು ಕಡಿಮೆಯಾಗಿವೆ. ಮುಂದೆಯೂ ಇದೇ ಪರಿಸ್ಥಿತಿ ಕಾಪಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮದುವೆಯಾಗದೆ ವರ್ಷಗಟ್ಟಲೆ ಒಟ್ಟಿಗೇ ಇದ್ರು, ಪರಸ್ಪರ ದೂರ ದೂರವಿದ್ದು ಅಧಿಕೃತ ಮದುವೆಯಾದ್ರು… ಹೀಗೂ ಆಗತ್ತೆ ವಿವಾಹ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + fifteen =
Remember me
