ಬೆಂಗಳೂರುನಮ್ಮ ಗ್ಯಾರಂಟಿ ಕೇಂದ್ರ ಸರ್ಕಾರ ನಿಲ್ಲಿಸಲು ಹೇಗೆ ಸಾಧ್ಯ? ಕೇಂದ್ರದಿಂದ ನಿರ್ದೇಶನ ಬರಲಿ ನೋಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸವಾಲು ಹಾಕಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಕೇಂದ್ರಸರ್ಕಾರಕ್ಕೆ ಪತ್ರ ಬರೆದು, ಪಂಚಖಾತ್ರಿ ಯೋಜನೆಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿರುವ ಕುರಿತ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.ಸರ್ಕಾರದ ಪಂಚಖಾತ್ರಿ ಯೋಜನೆಗಳನ್ನು ಸ್ಥಗಿಗೊಳಿಸುವಂತೆ ಕೇಂದ್ರ ಸರ್ಕಾರ ಮೊದಲು ಸೂಚನೆ ನೀಡಲಿ, ಅನಂತರ ರಾಜ್ಯಸರ್ಕಾರ ಅದಕ್ಕೆ ಉತ್ತರ ಕೊಡುತ್ತದೆ ಎಂದರು.
ರಾಜ್ಯದ ಆಡಳಿತ ನಡೆಸಲು ಜನ ನಮನ್ನು ಆಯ್ಕೆ ಮಾಡಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸಲು ಬಿಜೆಪಿಯವರನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಪಂಚಖಾತ್ರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಹೇಗೆ ನಿರ್ದೇಶನ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಆರ್ಥಿಕ ಸಂಕಷ್ಟ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ನಾವು ಬಗೆಹರಿಸಿಕೊಳ್ಳುತ್ತೆವೆ. ಆಡಳಿತ ನಡೆಸುವವರು ನಾವು. ಯೋಜನೆಗಾಗಿ 52 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಿದ್ದೇವೆ. ಇದರ ಸಾಧಕ-ಬಾಧಕಗಳನ್ನು ನಾವೇ ನಿಭಾಯಿಸಿಕೊಳ್ಳುವೆವು. ಅದನ್ನು ಮೀರಿ ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ನಿರ್ದೇಶನ ನೀಡಲು ಸಾಧ್ಯವಿದೆ. ಮೊದಲು ಆ ರೀತಿಯ ನಿರ್ದೇಶನ ಕೊಡಲಿ ಎಂದು ಸವಾಲು ಹಾಕಿದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರಕ್ಕೆ ಕೇಳಿದೆ. ಆದರೆ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪ್ರಲ್ಹಾದ್ ಜೋಶಿ ಅವರು ಅಕ್ಕಿ ನೀಡಲು ಸಿದ್ಧ ಎಂದು ನಾಳೆಯೇ ಪತ್ರ ಬರೆಯಲಿ, ನಾವು ಹೇಗೆ ಸ್ಪಂದಿಸುತ್ತೆವೆ ಎಂದು ನೋಡಲಿ ಎಂದು ಟಾಂಗ್ ಕೊಟ್ಟರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಯಾವುದನ್ನೂ ಮುಚ್ಚಿ ಹಾಕಲು ರಾಜ್ಯಸರ್ಕಾರ ಯತ್ನಿಸುತ್ತಿಲ್ಲ. ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಮ್ಮದು ತೆರೆದ ಪುಸ್ತಕವಾಗಿದೆ. ಈ ಬಗ್ಗೆ ಪದೇಪದೇ ಹೇಳುವ ಅಗತ್ಯವಿಲ್ಲ. ಯಾವುದೇ ಹಗರಣ ನಡೆಯದೇ ಇದ್ದ ಮೇಲೆ ಎಸ್‌ಐಟಿ, ಸಿಬಿಐ ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಧ್ಯಮದವರು ಹೇಳಿದರು ಎಂದು ಫಾಸ್ಟ್ ಫಾರ್ವ್‌ರ್ಡ್ ಮಾಡಿಕೊಂಡು ತನಿಖೆ ಮಾಡಲಾಗುವುದಿಲ್ಲ. ಅದಕ್ಕೆ ತನ್ನದೇ ಆದ ಕಾನೂನು ಪ್ರಕ್ರಿಯೆಗಳಿವೆ. ಅದನ್ನು ಆಧರಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತಾರೆ. ಸಮರ್ಪಕ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದರು.
ರಾಜ್ಯಸರ್ಕಾರದ ಆಡಳಿತಕ್ಕೆ ದೆಹಲಿ ವರಿಷ್ಠರು ಶಹಬ್ಬಾಸ್‌ಗಿರಿ ನೀಡಿದ್ದಾರೆ. ಇದರ ಹೊರತಾಗಿ ಹುದ್ದೆಗಳ ವಿಚಾರವಾಗಿ ಚರ್ಚೆ ಮಾಡಬೇಕು ಎಂದು ಯಾವ ನಿರ್ದೇಶನಗಳನ್ನೂ ನೀಡಿಲ್ಲ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಕಳುಹಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಿಎಎಸ್‌ಐ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಿಂದೆ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಮರುಪರೀಕ್ಷೆಯಾಗಿದೆ. ನ್ಯಾಯಾಲಯ ನಿರ್ದೇಶನ ನೀಡಿದೆ. ಅಂತಿಮವಾಗಿ ಪಟ್ಟಿ ತಯಾರಾಗಿದೆ. ಶೀಘ್ರದಲ್ಲೇ ನೇಮಕ ಆದೇಶ ನೀಡಲಾಗುವುದು ಎಂದು ಡಾ.ಪರಮೇಶ್ವರ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 6 =
Remember me
