ವಿಭಜನೆಯ ಮರುದಿನದಿಂದಲೇ ಭಾರತದ ಬಗ್ಗೆ ಕ್ಯಾತೆ ತೆಗೆಯುವುದನ್ನು ರೂಢಿಸಿಕೊಂಡ ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ನಾಯಕರು ಇನ್ನೂ ಬುದ್ಧಿ ಕಲಿತಿಲ್ಲ. ನಾಲ್ಕು ಯುದ್ಧಗಳಲ್ಲಿ ಸೋತು ಸುಣ್ಣವಾದರೂ ಕಾಲು ಕೆದರಿ ಜಗಳಕ್ಕೆ ಬರುವುದನ್ನು ನಿಲ್ಲಿಸಿಲ್ಲ. ಪಾಕಿಸ್ತಾನದ ಬಹುತೇಕ ಎಲ್ಲ ದುಸ್ಸಾಹಸಗಳಲ್ಲಿ ಅಲ್ಲಿನ ಸೇನೆ ಹಾಗೂ ಗೂಢಚಾರ ದಳವಾದ ಐಎಸ್​ಐ ಪಾತ್ರ ಇದ್ದೇ ಇರುತ್ತದೆ.
ಭಾರತವು 1974ರ ಮೇ ತಿಂಗಳಲ್ಲಿ ರಾಜಸ್ಥಾನದ ಪೋಖ್ರಾನ್​ನಲ್ಲಿ ಅಣುಬಾಂಬ್ ಪರೀಕ್ಷೆ ನಡೆಸಿತು. ಈ ವಿಷಯ ತಿಳಿದು ಪಾಕಿಸ್ತಾನದ ಅಂದಿನ ಅಧ್ಯಕ್ಷ ಜುಲ್ಪಿಕರ್ ಅಲಿ ಭುಟ್ಟೋ ತೀವ್ರವಾಗಿ ಆತಂಕಿತರಾದರು. ಅದೇ ಹೊತ್ತಿಗೆ, ಭಾರತವು ಶೀಘ್ರವೇ ಅಣುಬಾಂಬ್ ತಯಾರಿಸುವ ಶಕ್ತಿಯನ್ನು ಹೊಂದಲಿದೆ ಎಂದು ಪಾಕ್ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್​ಐ) ಭುಟ್ಟೋ ಅವರಿಗೆ ಖಚಿತ ಮಾತುಗಳಲ್ಲಿ ತಿಳಿಸಿತ್ತು ಸಹ. ಇದರಿಂದ ಉದ್ವಿಗ್ನರಾದ ಭುಟ್ಟೋ ತನ್ನ ದೇಶವೂ ಶತಾಯಗತಾಯ ಪರಮಾಣು ಬಾಂಬ್ ಹೊಂದಲೇಬೇಕು ಎಂಬ ತೀರ್ವನಕ್ಕೆ ಬಂದರು. ಆದರೆ ಜಗತ್ತಿನ ಕೆಲವೇ ದೇಶಗಳು ಮಾತ್ರ ಬಲ್ಲ ಈ ತಂತ್ರಜ್ಞಾನವನ್ನು ಪಾಕಿಸ್ತಾನದಂತಹ ದೇಶ ಪಡೆಯುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಈ ನಿಟ್ಟಿನಲ್ಲಿ ಅವರು ವಿಜ್ಞಾನಿಗಳ ಸಲಹೆ ಪಡೆಯತೊಡಗಿದರು.
ಭುಟ್ಟೋ ಅದೃಷ್ಟವೋ ಎಂಬಂತೆ ಅದೇ ಹೊತ್ತಿಗೆ ಎ.ಕ್ಯೂ.ಖಾನ್ (ಅಬ್ದುಲ್ ಖದಿರ್ ಖಾನ್) ಎಂಬ ವಿಜ್ಞಾನಿ ಪಾಕ್ ಸರ್ಕಾರಕ್ಕೆ ಪತ್ರ ಬರೆದು, ತನ್ನ ಬಳಿ ಪರಮಾಣು ಬಾಂಬ್ ತಯಾರಿಸುವ ತಂತ್ರಜ್ಞಾನವಿದ್ದು, ತನ್ನ ಸೇವೆ ಬಳಸಿಕೊಳ್ಳಬಹುದು ಎಂದು ಹೇಳಿದ್ದು ಭುಟ್ಟೋಗೆ ಸಂತಸ ತಂದಿತು. ಆಗ ಖಾನ್ ಅವರು ನೆದರ್ಲೆಂಡ್​ನ ಫಿಸಿಕ್ಸ್ ಡೈನಮಿಕ್ ಲ್ಯಾಬೊರೆಟರಿ (ಈ ಪ್ರಯೋಗಾಲಯವು ಯುರೇನಿಯಂ ಶುದ್ಧೀಕರಣಕ್ಕೆ ಸಂಬಂಧಿಸಿದ ಸೆಂಟ್ರಿಫ್ಯೂಜ್​ಗಳ ವಿಷಯದಲ್ಲಿ ಕೆಲಸ ಮಾಡುತ್ತಿತ್ತು)ಯಲ್ಲಿ ಕೆಲಸಕ್ಕೆ ಸೇರಿದ್ದರು. ಖಾನ್ ಅವರನ್ನು ಪಾಕಿಸ್ತಾನಕ್ಕೆ ಕರೆಸಿದ ಭುಟ್ಟೋ, ಪರಮಾಣು ಬಾಂಬ್ ಯೋಜನೆ ರೂಪಿಸಲು ಸೂಚನೆ ನೀಡಿದರು. ಅದರಂತೆ ಪ್ರಯೋಗಾಲಯಕ್ಕೆ ವಾಪಸ್ ತೆರಳಿದ ಖಾನ್ ಅಣುಬಾಂಬ್ ತಯಾರಿಸಲು ಬೇಕಾಗುವ ತಂತ್ರಜ್ಞಾನವನ್ನು ಕಳ್ಳತನ ಮಾಡಿದ್ದಲ್ಲದೆ, ಬಾಂಬ್ ತಯಾರಿಗೆ ಬೇಕಾಗುವ ಬಿಡಿಭಾಗಗಳ ಪಟ್ಟಿಯನ್ನು ಕೂಡ ಮಾಡಿದರಂತೆ. 1975ರ ಡಿಸೆಂಬರ್ 15ರಂದು ಖಾನ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರ ಜೊತೆ ಪಾಕಿಸ್ತಾನಕ್ಕೆ ವಾಪಸಾದರು.
ಪಾಕ್ ರಾಜಧಾನಿ ಇಸ್ಲಾಮಾಬಾದ್​ನಿಂದ 50 ಕಿಮೀ ದೂರದಲ್ಲಿರುವ ಕಹುತಾ ಎಂಬಲ್ಲಿ ಪ್ರಯೋಗಾಲಯ ಸ್ಥಾಪಿಸಿದರು. ಇದಕ್ಕೆ ಪಾಕ್ ಸರ್ಕಾರದ ಒತ್ತಾಸೆ ಮತ್ತು ಬೆಂಬಲ ಇದ್ದುದರಿಂದ ರಹಸ್ಯವಾಗಿ ಕೆಲಸ ಶುರುವಾಯಿತು. ಖುದ್ದು ಐಎಎಸ್​ಐ ಈ ಲ್ಯಾಬ್​ಗೆ ಭದ್ರತಾ ವ್ಯವಸ್ಥೆ ಮಾಡಿತ್ತು. ಅಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಇತರರಿಗೆ ಸಿಗುವ ಸಾಧ್ಯತೆಯೇ ಇರಲಿಲ್ಲ. ಆದರೂ ಭಾರತದ ಗುಪ್ತಚರ ಸಂಸ್ಥೆ ‘ರಾ’ ಮತ್ತು ಅಮೆರಿಕದ ಸಿಐಎ ಅಧಿಕಾರಿಗಳಿಗೆ ಸಂದೇಹದ ವಾಸನೆ ಬಂದಿತ್ತು. ‘ರಾ’ ಸಂಸ್ಥೆಯ ಒಬ್ಬ ಅಧಿಕಾರಿ ಕಹುತಾಗೆ ರಹಸ್ಯವಾಗಿ ತೆರಳಿ ಅಲ್ಲಿನ ಕ್ಷೌರಿಕರ ಅಂಗಡಿಗಳಿಗೆ ಹೋಗಿ ಅಲ್ಲಿ ಗ್ರಾಹಕರಿಂದ ಕತ್ತರಿಸಿದ್ದ ಕೂದಲುಗಳನ್ನು ಸಂಗ್ರಹಿಸಿದರು. ಆ ಕೂದಲು ಮಾದರಿಗಳನ್ನು ಭಾರತದ ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷಿಸಿದಾಗ, ಆ ಕೂದಲು ಮಾದರಿಗಳು ಅಣು ವಿಕಿರಣಕ್ಕೆ ತುತ್ತಾಗಿರುವುದು ಗೊತ್ತಾಯಿತು. ಈ ಆಧಾರದ ಮೇಲೆ, ಕಹುತಾದಲ್ಲಿ ಅಣುಬಾಂಬ್ ತಯಾರಿ ಪ್ರಯೋಗ ನಡೆಯುತ್ತಿದೆ ಎಂಬ ನಿರ್ಣಯಕ್ಕೆ ಭಾರತ ಬಂತು. ಅಣುಶಕ್ತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಚರ್ಮ, ಕೂದಲು ಹಾಗೂ ಬಟ್ಟೆ ಅಣು ವಿಕಿರಣಕ್ಕೆ ತುತ್ತಾಗುತ್ತವೆ. ಭಾರತದ ಗುಪ್ತಚರ ಸಂಸ್ಥೆ ಚಾಕಚಕ್ಯತೆಯಿಂದ ಪಾಕಿಸ್ತಾನದ ಈ ರಹಸ್ಯ ಕಂಡುಹಿಡಿದಿದ್ದು ನೋಡಿ ಸಿಐಎ ಕೂಡ ಭಲೇ ಭಲೇ ಎನ್ನದೆ ವಿಧಿ ಇರಲಿಲ್ಲ.
1998ರಲ್ಲಿ ಭಾರತದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ, ಅಂದರೆ ಮೇ 11 ಮತ್ತು 13ರಂದು ಪೋಖ್ರಾನ್​ನಲ್ಲಿ ಎರಡನೇ ಪರಮಾಣು ಪರೀಕ್ಷೆ ನಡೆಸಿತು. ಈ ಟೆಸ್ಟ್ ಎಷ್ಟು ಗುಟ್ಟಾಗಿ ನಡೆದಿತ್ತು ಎಂದರೆ, ಆಗಸದಲ್ಲಿ ಪಹರೆ ಕಾಯುತ್ತಿದ್ದ ಅಮೆರಿಕ ಉಪಗ್ರಹಗಳಿಗೂ ಇದನ್ನು ಪತ್ತೆ ಹಚ್ಚಲು ಆಗಿರಲಿಲ್ಲ. ಆಗ ನವಾಜ್ ಶರೀಫ್ ಅವರು ಪಾಕ್ ಪ್ರಧಾನಿ. ಅಂದು ಅವರು ಕಝಾಕಿಸ್ತಾನ್ ಪ್ರವಾಸದಲ್ಲಿ ಇದ್ದರೂ ಭಾರತದ ಪರಮಾಣು ಪರೀಕ್ಷೆ ಸುದ್ದಿ ತಿಳಿದಾಕ್ಷಣ ದೇಶಕ್ಕೆ ದೌಡಾಯಿಸಿ ಗುಪ್ತಚರ ದಳ, ಸೇನೆಯ ಉನ್ನತ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಿದರು. ‘ಭಾರತ ಇಷ್ಟೆಲ್ಲ ಮಾಡುವಾಗ ನಾವು ಸುಮ್ಮನಿದ್ದರೆ ಜಾಗತಿಕವಾಗಿ ನಮ್ಮ ಮರ್ಯಾದೆ ಹೋಗುತ್ತದೆ. ಹೀಗಾಗಿ ನಾವು ಸಹ ಪ್ರತಾಪ ತೋರಲೇಬೇಕು’ ಎಂಬ ನಿರ್ಣಯ ಸಭೆಯಲ್ಲಿ ವ್ಯಕ್ತವಾಯಿತು. ಅದರಂತೆ, ಪಾಕಿಸ್ತಾನವು ಬಲೂಚಿಸ್ತಾನದ ಚಾಗಾಯ ಎಂಬಲ್ಲಿ ಮೇ 28 ಮತ್ತು 30ರಂದು ಎರಡು ಪರಮಾಣು ಪರೀಕ್ಷೆಗಳನ್ನು ನಡೆಸುವ ಮೂಲಕ ತಾನೇನು ಕಮ್ಮಿ ಅಂತ ಮೀಸೆ ತಿರುವಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಬಾಂಬ್ ಮೇಲಾಟವನ್ನು ವಿವರಿಸುವುದು ಇಲ್ಲಿನ ಉದ್ದೇಶ ಅಲ್ಲ. ಆದರೆ ದೇಶ-ದೇಶಗಳ ನಡುವೆ ನಡೆಯುವ ತಂತ್ರ-ಪ್ರತಿತಂತ್ರ ಬಗ್ಗೆ ಒಂದು ಪುಟ್ಟ ಪರಿಚಯ ಮಾಡುವುದಕ್ಕಾಗಿ ಉಲ್ಲೇಖಿಸಬೇಕಾಯಿತು.
ಅಷ್ಟಕ್ಕೂ ಈ ಎರಡೂ ದೇಶಗಳಲ್ಲಿ ನಡೆಯುವ ರಾಜಕೀಯ-ಸೇನಾ ಬೆಳವಣಿಗೆಗಳು ಮತ್ತು ವಿದ್ಯಮಾನಗಳ ಮೇಲೆ ಇಬ್ಬರೂ ಕಣ್ಣು ನೆಟ್ಟಿರುತ್ತಾರೆ. ಒಂದು ದೇಶದಲ್ಲಿ ನಡೆಯುವ ಸಣ್ಣ ಚಲನೆ ಕೂಡ ತಿಳಿಯುವ ಹಾಗೆ ವ್ಯವಸ್ಥೆ ಮಾಡಿಕೊಂಡಿರುತ್ತವೆ. ವಿಭಜನೆಯ ಮರುದಿನದಿಂದಲೇ ಭಾರತದ ಬಗ್ಗೆ ಕ್ಯಾತೆ ತೆಗೆಯುವುದನ್ನು ರೂಢಿಸಿಕೊಂಡ ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ನಾಯಕರು ಇನ್ನೂ ಬುದ್ಧಿ ಕಲಿತಿಲ್ಲ. ನಾಲ್ಕು ಯುದ್ಧಗಳಲ್ಲಿ ಸೋತು ಸುಣ್ಣವಾದರೂ ಕಾಲು ಕೆದರಿ ಜಗಳಕ್ಕೆ ಬರುವುದನ್ನು ನಿಲ್ಲಿಸಿಲ್ಲ. ಪಾಕಿಸ್ತಾನದ ಬಹುತೇಕ ಎಲ್ಲ ದುಸ್ಸಾಹಸಗಳಲ್ಲಿ ಅಲ್ಲಿನ ಸೇನೆ ಹಾಗೂ ಗೂಢಚಾರ ದಳವಾದ ಐಎಸ್​ಐ ಪಾತ್ರ ಇದ್ದೇ ಇರುತ್ತದೆ.
ಪಾಕ್ ಇತಿಹಾಸದ ಪುಟಗಳನ್ನು ತೆರೆದರೆ ಇಂತಹ ಮಾಹಿತಿಯ ಮಹಾಪೂರವೇ ಸಿಗುತ್ತದೆ. ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ನಾಯಕರ ಸಂಬಂಧ, ಪರಸ್ಪರರ ವಿರುದ್ಧವೇ ಸಂಚು, ಕುಟಿಲೋಪಾಯ- ಇವೆಲ್ಲ ಥ್ರಿಲ್ಲರ್ ಸಿನಿಮಾಕ್ಕೆ ಕಡಿಮೆಯಿಲ್ಲ. ಝುಲ್ಪಿಕರ್ ಭುಟ್ಟೋ ಆಗಮನ- ನಿರ್ಗಮನ, ಅವರ ಪುತ್ರಿ ಬೆನಜೀರ್ ಭುಟ್ಟೋ ದುರಂತ ಅಂತ್ಯ, ಜನರಲ್ ಜಿಯಾ ಉಲ್ ಹಕ್ ವಿಮಾನ ಅಪಘಾತದ ನಿಗೂಢತೆ… ಇವು ಕೆಲ ನಿದರ್ಶನಗಳಷ್ಟೇ. ದೇಶದ ಅಧ್ಯಕ್ಷ, ಪ್ರಧಾನಿ ನೇಮಕ ಅಥವಾ ಆಯ್ಕೆ ಹಾಗೂ ಏರಿಸುವ ಇಳಿಸುವ ಪ್ರಕ್ರಿಯೆಯಲ್ಲಿ ಸೇನೆ ಹಾಗೂ ಐಎಸ್​ಐ ಕೈಯಾಡಿಸುವುದು ಅಲ್ಲಿ ಮಾಮೂಲು. ಆದರೆ ಈ ಕ್ಲಿಷ್ಟ ವಿಷಯ ಅಷ್ಟು ಸುಲಭಕ್ಕೆ ಅರಿವಿಗೆ ದಕ್ಕದು.
ಡಾ. ಡಿ.ವಿ.ಗುರುಪ್ರಸಾದ್ ಅವರು ರಚಿಸಿರುವ ‘ಪಾಕಿಸ್ತಾನದ ಐಎಸ್​ಐ’ ಎಂಬ ಕೃತಿ, ಒಂದರಲ್ಲಿ ಒಂದು ಸಿಕ್ಕಿಕೊಂಡಂತಿರುವ, ಬೇರೆ ಬೇರೆಯಾಗಿ ಕಂಡರೂ ಅಂತರ್ ಸಂಬಂಧ ಹೊಂದಿರುವ ನೆರೆ ದೇಶದ ಸಂಕೀರ್ಣ ವಿದ್ಯಮಾನಗಳನ್ನು ಸರಳವಾಗಿ ಕಟ್ಟಿಕೊಡುತ್ತದೆ. ಲೇಖಕರು ಸ್ವತಃ ಪೊಲೀಸ್ ಅಧಿಕಾರಿಯಾಗಿದ್ದು ಡಿಜಿಪಿಯಾಗಿ ನಿವೃತ್ತಿಯಾದವರು. ಕೆಲ ಕಾಲ ರಾಜ್ಯ ಇಂಟೆಲಿಜೆನ್ಸ್ ವಿಭಾಗದಲ್ಲಿಯೂ ಕೆಲಸ ಮಾಡಿದವರು. ಅಲ್ಲದೆ, ಗೂಢಚರ್ಯು ಸಂಸ್ಥೆಗಳ ರಚನೆ ಮತ್ತು ಕಾರ್ಯಚಟುವಟಿಕೆಗಳ ಆಳ ಅಗಲ ಬಲ್ಲವರು. ಇಂಥ ಕೃತಿಗಳಿಗೆ ಅಂಕಿಅಂಶಗಳು ಮತ್ತು ಸಾಕ್ಷಿ ಪುರಾವೆಗಳನ್ನು ನೀಡುವುದು ಮುಖ್ಯ. ಇಲ್ಲವಾದಲ್ಲಿ ಅದಕ್ಕೆ ಅಧಿಕೃತತೆ ಪ್ರಾಪ್ತ ಆಗುವುದಿಲ್ಲ. ಈ ಕೋನದಲ್ಲಿ ನೋಡಿದರೆ ಲೇಖಕರ ಅಧ್ಯಯನ ಹಾಗೂ ವಿಷಯಗಳನ್ನು ಹೊರತೆಗೆಯುವಲ್ಲಿ ಅವರಿಗಿರುವ ಸಂಪರ್ಕದ ವ್ಯಾಪ್ತಿ ಅಚ್ಚರಿ ಮೂಡಿಸುವಷ್ಟಿದೆ. ಯಾವುದೇ ಘಟನೆಯ ಇಂಚಿಂಚು ಮಾಹಿತಿಯನ್ನು ಅವರು ಕೊಡುತ್ತ ಹೋಗುವುದರಿಂದ ಓದುಗರಿಗೆ ಸ್ಪಷ್ಟತೆ ಮೂಡುತ್ತದೆ. ಈ ಕೃತಿಯು ಭಾರತ ಮತ್ತು ಪಾಕಿಸ್ತಾನ ಸಂಬಂಧ ಹಾಗೂ ಕಾಶ್ಮೀರ ವಿವಾದ, ಯುದ್ಧಗಳು, ಮುಂಬೈ ಮೇಲೆ ಉಗ್ರರ ದಾಳಿ, ಪಾಕಿಸ್ತಾನದಲ್ಲಿನ ಆಡಳಿತದ ಏಳುಬೀಳು, ನಾಯಕರ ಸಾಧನೆ-ವೇದನೆ, ಸೇನೆ ಹಾಗೂ ಐಎಸ್​ಐ, ಬಾಂಗ್ಲಾದೇಶದ ರಚನೆ, ಅಫ್ಘಾನಿಸ್ತಾನ ವಿದ್ಯಮಾನ, ಒಸಾಮಾ ಬಿನ್ ಲಾಡೆನ್​ನ ಅಲ್ ಖಾಯಿದಾ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಕಾರ್ಯಚಟುವಟಿಕೆ… ಹೀಗೆ ವಿಸ್ತಾರ ವಿಷಯವಸ್ತುಗಳನ್ನು ಅಡಗಿಸಿಕೊಂಡಿದೆ. ವಿಶೇಷ ಎಂದರೆ, ಇವುಗಳಲ್ಲಿ ಬಹಳಷ್ಟು ವಿದ್ಯಮಾನಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಉದಾಹರಣೆಗೆ ಹೇಳುವುದಾದರೆ ಅಫ್ಘಾನಿಸ್ತಾನದ ಮೇಲೆ ರಷ್ಯಾ ದಾಳಿಯನ್ನು ಖಂಡಿಸಿ ರಷಿಯನ್ನರನ್ನು ಅಲ್ಲಿಂದ ಓಡಿಸಬೇಕು ಎಂಬ ಉದ್ದೇಶದಿಂದ ಬಂದವ ಸೌದಿ ಅರೇಬಿಯಾದ ಒಸಾಮಾ ಬಿನ್ ಲಾಡೆನ್. ನಂತರದಲ್ಲಿ ಆತ ಅಮೆರಿಕದ ಅವಳಿ ಗೋಪುರಗಳ ಮೇಲೆ ದಾಳಿ ಸಂಘಟಿಸಿ ತಲ್ಲಣ ಮೂಡಿಸಿದ. ಲಾಡೆನ್ ಮತ್ತು ಸಹಚರರ ಬೆನ್ನತ್ತಿದ ಅಮೆರಿಕ ಕೊನೆಗೂ ಪಾಕಿಸ್ತಾನದ ಅಬೋಟಾಬಾದ್​ನಲ್ಲಿ ಆತನನ್ನು ಪತ್ತೆಹಚ್ಚಿ ಹೊಡೆದುರುಳಿಸಿತು. ಹೀಗೆ ಒಂದು ಘಟನೆ ಅನೇಕ ದೇಶಗಳನ್ನು ಒಳಗೊಂಡು ಹಲವು ಒಳಸುಳಿಗಳನ್ನು ಹೊಂದಿದೆ. ಹೀಗಾಗಿ ಈ ಕೃತಿ ಐಎಸ್​ಐ ಬಗ್ಗೆ ಮಾತ್ರ ಹೇಳದೆ, ಉಪಖಂಡದ ರಾಜಕೀಯ, ಸಾಮಾಜಿಕ ಮತ್ತು ಮಿಲಿಟರಿ ಇತಿಹಾಸವನ್ನು ಸಹ ಹೇಳುತ್ತದೆ.
1947ರ ಯುದ್ಧ ನಡೆಯುತ್ತಿರುವಾಗಲೇ, ಮಿಲಿಟರಿ ರಹಸ್ಯ ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಸೇನೆ ದುರ್ಬಲವಾಗಿದೆ ಎಂದು ಪಾಕ್ ಆಡಳಿತ ಪ್ರಮುಖರಿಗೆ ಅನಿಸಿತು. ಹೀಗಾಗಿ ಆಗ ಪಾಕ್ ಸೇನೆಯಲ್ಲಿಯೇ ಇದ್ದ ಸರ್ ರಾಬರ್ಟ್ ಕಾತಾರ್ನ್ ಎಂಬ ವಿದೇಶಿ ಅಧಿಕಾರಿಗೆ ಗುಪ್ತಚರ ದಳ ಬಲವರ್ಧನೆ ಕುರಿತು ವರದಿ ನೀಡುವಂತೆ ಸರ್ಕಾರ ಕೇಳಿತು. ಅವರ ವರದಿಯನ್ನು ಅಂಗೀಕರಿಸಿದ ಸರ್ಕಾರ 1948ರ ಜನವರಿಯಲ್ಲಿ ಐಎಸ್​ಐಯನ್ನು ಸ್ಥಾಪಿಸಿತು. ಕರ್ನಲ್ ಶಾಹಿದ್ ಹಮೀದ್ ಮೊದಲ ನಿರ್ದೇಶಕರಾಗಿ ನೇಮಕಗೊಂಡರು. ಕಾಶ್ಮೀರ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದೂ, ಭಾರತವನ್ನು ಅಭದ್ರಗೊಳಿಸುವುದೆ ಮೂಲಧ್ಯೇಯ ಆಗಿರಬೇಕೆಂದೂ ಆಗಲೇ ಐಎಸ್​ಐಗೆ ಅಜೆಂಡಾ ಕೊಡಲಾಗಿತ್ತು. ಆ ಪ್ರಕಾರವೇ ಐಎಸ್​ಐ ‘ಕೆಲಸಕಾರ್ಯ’ಗಳು ನಡೆಯುತ್ತ ಬಂದವು. ಪಾಕ್ ಆಂತರಿಕ ವಿಷಯಗಳಲ್ಲಿ ತಲೆಹಾಕಬಾರದೆಂದು ಸ್ಥಾಪನೆ ಸಮಯದಲ್ಲೇ ಐಎಸ್​ಐಗೆ ಸೂಚನೆ ಇತ್ತು. ಆದರೆ 1971ರಿಂದ ಇಂದಿನವರೆಗೂ ಅದು ರಾಜಕೀಯ ಹಸ್ತಕ್ಷೇಪ ಮಾಡುತ್ತಲೇ ಬಂದಿದೆ ಎಂದು ಲೇಖಕರು ಆಧಾರಸಹಿತ ಮಂಡಿಸುತ್ತಾರೆ. ಉಗ್ರಗಾಮಿ ಸಂಘಟನೆಗಳ ಜೊತೆ ಕೈಜೋಡಿಸಿ ಐಎಸ್​ಐ ಮಾಡಿದ ಸಂಚು, ಕೃತ್ಯಗಳನ್ನು ಇಲ್ಲಿ ವಿವರವಾಗಿ ದಾಖಲಿಸಲಾಗಿದೆ. ಕಾಶ್ಮೀರದಲ್ಲಿ ಐಎಸ್​ಐ ಪ್ರಾಯೋಜಿತ ದಾಳಿ, ಖಲಿಸ್ತಾನ ಚಳವಳಿಗೆ ಬೆಂಬಲ, 2008ರ ಮುಂಬೈ ದಾಳಿ, ವಿವಿಧ ವಿಮಾನ ಅಪಹರಣಗಳಲ್ಲಿ ಅದರ ಪಾತ್ರ- ಇತ್ಯಾದಿ ವಿಷಯಗಳನ್ನು ಕೃತಿ ಬಯಲುಗೊಳಿಸಿದೆ.
‘ಬದಲಾದ ಕಾಲಘಟ್ಟದಲ್ಲಿ ಐಎಸ್​ಐ ಹೊಸ ವಿಧಗಳಲ್ಲಿ ಭಾರತದ ವಿರುದ್ಧ ಅಸಾಂಪ್ರದಾಯಿಕ ಯುದ್ಧವನ್ನು ಮುಂದುವರಿಸುವುದು ಖಚಿತ’ ಎಂದು ಲೇಖಕರು ಹೇಳುತ್ತಾರೆ. ಸೈಬರ್ ವಾರ್ ಮೂಲಕ ಭಾರತಕ್ಕೆ ಪೆಟ್ಟು ಕೊಡಲು ಐಎಸ್​ಐ ಯತ್ನಿಸುತ್ತಿದೆ. ಈಚಿನ ದಿನಗಳಲ್ಲಿ ಕಾಶ್ಮೀರದಲ್ಲಿನ ಘಟನೆಗಳನ್ನು ನೋಡಿದಾಗ ಮತ್ತೆ ಪ್ರಾಕ್ಸಿ ವಾರ್ ನಡೆಸುವಂತೆ ಗೋಚರಿಸುತ್ತದೆ ಎಂದು ಎಚ್ಚರಿಸಲು ಲೇಖಕರು ಮರೆಯುವುದಿಲ್ಲ. ಅದೇ ರೀತಿ, ಐಎಸ್​ಐನ್ನು ಸಂಪೂರ್ಣವಾಗಿ ಪುನಾರಚಿಸದಿದ್ದರೆ ಪಾಕಿಸ್ತಾನಕ್ಕೂ ಅಪಾಯ ತಪ್ಪಿದ್ದಲ್ಲ ಎಂದು ನೇರಮಾತಿನಲ್ಲಿ ಹೇಳುತ್ತಾರೆ.
(ಕೃತಿ: ಪಾಕಿಸ್ತಾನದ ಐಎಸ್​ಐ. ಪ್ರಕಟಣೆ: ಸಪ್ನ ಬುಕ್​ಹೌಸ್. ಪುಟ: 260. ಬೆಲೆ: 295 ರೂ.)
ಕೊನೇ ಮಾತು:ಬಾಂಗ್ಲಾದೇಶದಲ್ಲಿ ಕೆಲವು ದಿನಗಳ ಹಿಂದೆ ನಡೆದ ಗಲಭೆಗಳ ಹಿನ್ನೆಲೆಯಲ್ಲಿ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. 1971ರ ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಮೀಸಲಾತಿ ವಿಸ್ತರಣೆ ವಿಷಯ ನಂತರದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರ್ತಾಕ ಅಂತ್ಯ ಕಂಡಿದ್ದರೂ ವಿದ್ಯಾರ್ಥಿಗಳ ಹೋರಾಟ ನಂತರ ಶೇಖ್ ಹಸೀನಾ ಅವರ ವಿರುದ್ಧ ತಿರುಗಿತು. ಬಂಗಾಳ ಕೊಲ್ಲಿಯ ಸೇಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕಕ್ಕೆ ಬಿಟ್ಟುಕೊಡಲು ಒಪ್ಪದ್ದರಿಂದ ತನ್ನ ವಿರುದ್ಧ ಪಿತೂರಿ ನಡೆಯಿತು ಎಂದು ಖುದ್ದು ಶೇಖ್ ಹಸೀನಾ ಅವರೇ ಆರೋಪ ಮಾಡಿದ್ದಾರೆ. ಇದಲ್ಲದೆ, ವಿದ್ಯಾರ್ಥಿ ದಂಗೆಯಲ್ಲಿ ಪಾಕ್ ಐಎಸ್​ಐ ಪಾತ್ರದ ಬಗ್ಗೆ ಅನುಮಾನ ಮೂಡಿದೆ. ಶೇಖ್ ಹಸೀನಾ ಭಾರತಪರ ಎಂಬುದು ಗೊತ್ತಿರುವ ಸಂಗತಿ. ಈ ಹಿನ್ನೆಲೆಯಲ್ಲಿ, ಭಾರತ, ಅಮೆರಿಕ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸರ್ಕಾರಗಳ ಮುಂದಿನ ನಡೆಗಳು ಮತ್ತು ಅದರ ಪರಿಣಾಮ ಕುತೂಹಲಕರ.
ಡಿಸೆಂಬರ್‌ನಲ್ಲಿ ಗಗನಯಾನ ಮೊದಲ ಪರೀಕ್ಷಾರ್ಥ ಉಡಾವಣೆ: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven + nineteen =
Remember me
