ಸಂತೃಪ್ತ ಜೀವನವನ್ನು ನಡೆಸಿ ಬದುಕಿನಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕು ಎಂಬುದು ಎಲ್ಲರ ಬಯಕೆ. ಇದು ಸಾಧ್ಯವಾಗಬೇಕಾದರೆ ಆಧುನಿಕ ಜಗತ್ತಿನ ಧಾವಂತದ ಬದುಕು ನಮ್ಮಲ್ಲುಂಟು ಮಾಡುವ ತಲ್ಲಣಗಳ ಹಾಗೂ ಮಾನಸಿಕ ಒತ್ತಡಗಳ ನಿರ್ವಹಣೆ ಬಹಳ ಮುಖ್ಯ. ಮಾನಸಿಕ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಾಗಿರುವುದು ಸಾರಭೂತಜ್ಞಾನ. ಈ ಪ್ರಾಯೋಗಿಕ ಜ್ಞಾನವನ್ನು ಸಂಕ್ಷಿಪ್ತವಾಗಿ, ಸುಲಭವಾಗಿ ಗ್ರಹಿಸಲು ಸಾಧ್ಯವಾಗಬೇಕು. ಮಧುಮೇಹ, ಅಸಿಡಿಟಿ ಮುಂತಾದ ಅನೇಕ ಕಾಯಿಲೆಗಳು ಹಾಗೂ ವಿಕೃತ ಮನಸ್ಥಿತಿಗಳು ಇವೆಲ್ಲವೂ ಮಾನಸಿಕ ಒತ್ತಡಕ್ಕೆ ಸಂಬಂಧಿಸಿದವುಗಳೆಂದೂ (stress-related) ಅನೇಕ ಸಂಶೋಧನೆಗಳಿಂದ ಸಿದ್ಧಪಡಿಸಲಾಗಿದೆ.
ಮಾನಸಿಕ ಒತ್ತಡ ಯೋಗ್ಯ ಪ್ರಮಾಣದಲ್ಲಿದ್ದರೆ ಅದು ಜೀವನ ನಿರ್ವಹಣೆಯ ಬೇರೆ ಬೇರೆ ಕೆಲಸಗಳಿಗೆ ಸಹಜವಾದ ಪ್ರೇರಕಶಕ್ತಿಯಾಗುತ್ತದೆ. ಹಾಗೂ ಅನೇಕ ಸಂದರ್ಭಗಳಲ್ಲಿ ಅದು ಅನಿವಾರ್ಯವಾಗಿರುವುದನ್ನೂ ನೋಡಬಹುದು. ಈ ಯುಕ್ತ ಪ್ರಮಾಣದ ಒತ್ತಡವನ್ನು ಸಹಜವಾಗಿ ಭರಿಸುವ ಶಕ್ತಿ ಮನಸ್ಸಿಗೆ ಮತ್ತು ದೇಹಕ್ಕೆ ಇದ್ದೇ ಇದೆ. ಆದರೆ ಒಂದು ಮಿತಿಯನ್ನು ಮೀರಿದಾಗ, ಸತತವಾಗಿ ಮಾನಸಿಕ ಒತ್ತಡವನ್ನು ಎದುರಿಸಬೇಕಾದಾಗ, ಅದು ಮನಸ್ಸಿನ ಮೇಲೆ, ತನ್ಮೂಲಕ ನಮ್ಮ ಜೈವಿಕ ಚಟುವಟಿಕೆಗಳಾದ ರಾಸಾಯನಿಕ ಕ್ರಿಯೆಗಳು, ಕರುಳು, ಪಿತ್ತಜನಕಾಂಗ, ಜೀರ್ಣಾಂಗ ವ್ಯೂಹ, ಹೃದಯ ಮತ್ತಿತರ ಅಂಗಗಳ ಮೇಲೆ ಪರಿಣಾಮ ಬೀರುವುದರಿಂದ ಅನೇಕ ರೀತಿಯ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ರೋಗಾಣುಗಳಿಂದ ಆಕ್ರಮಿತವಾದಾಗ ಶರೀರ ಹೇಗೆ ವ್ಯಾಧಿಗ್ರಸ್ತವಾಗುತ್ತದೋ ಅದೇ ರೀತಿ ಮಿತಿಮೀರಿದ ಮಾನಸಿಕ ಒತ್ತಡದಿಂದ ಕೂಡ ಶರೀರದ ಸೂಕ್ಷ್ಮ ಜೈವಿಕ ರಾಸಾಯನಿಕ ಕ್ರಿಯೆಗಳಿಗೆ ಅಡಚಣೆ ಅಥವಾ ಅವುಗಳಲ್ಲಿ ವ್ಯತ್ಯಾಸ ಉಂಟಾಗಿ ಬೇರೆ ಬೇರೆ ರೀತಿಯ ರೋಗಗಳು ಉಂಟಾಗುತ್ತವೆ. ಇವುಗಳನ್ನು ಮನೋದೈಹಿಕ ಅಸಮತೋಲನದಿಂದ ಉಂಟಾಗುವ ರೋಗಗಳು ಎನ್ನಲಾಗುತ್ತದೆ. ಇವುಗಳನ್ನು ಜೀವನಶೈಲಿಯ ಅಕ್ರಮಗಳಿಂದ ಉಂಟಾಗುವ ರೋಗಗಳು ಎಂದೂ ಕರೆಯಲಾಗುತ್ತದೆ.
ಆದುದರಿಂದ ಜೀವನದಲ್ಲಿ ಬಾಲ್ಯದಿಂದ ನಾವು ರೂಢಿಸಿಕೊಂಡ ಕೆಟ್ಟ ಅಭ್ಯಾಸಗಳಿಂದ ಮುಕ್ತರಾಗಬೇಕು. ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿ ಕೊಳ್ಳಬೇಕು. ತನ್ಮೂಲಕ ಅಶಿಸ್ತಿನ ಜೀವನಶೈಲಿಯಿಂದ ಉಂಟಾಗುವ ಅನಗತ್ಯ ಮಾನಸಿಕ ಒತ್ತಡಗಳನ್ನು ತಡೆಗಟ್ಟಿ, ಅಡ್ಡಪರಿಣಾಮಗಳನ್ನು ಬೀರುವ ಔಷಧಗಳನ್ನು ತೆಗೆದುಕೊಳ್ಳದೆ ಅನೇಕ ರೋಗಗಳಿಂದ ಪಾರಾಗಿ ಆರೋಗ್ಯಕರ ಮತ್ತು ಸಹಜವಾದ ಶಾಂತಿ-ಸೌಖ್ಯಗಳಿಂದ ತುಂಬಿದ ಜೀವನವನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ.
ಮಾನಸಿಕ ಒತ್ತಡ ಎಂದರೇನು?:ಸ್ಟ್ರೆಸ್ ಅಥವಾ ಮಾನಸಿಕ ಒತ್ತಡ ಎಂಬುದಕ್ಕೆ ಆಕ್ಸ್ ಫರ್ಡ್ ನಿಘಂಟಿನಲ್ಲಿ ಈ ರೀತಿಯ ನಿರ್ವಚನವಿದೆ: ‘ದೈಹಿಕ ಅಥವಾ ಮಾನಸಿಕ ಶಕ್ತಿಯನ್ನು ಮಿತಿಮೀರಿ ಒತ್ತಾಯಿಸುವ ಒಂದು ಸನ್ನಿವೇಶ’. ಕೆಲವು ಸನ್ನಿವೇಶಗಳು, ಕ್ರಿಯೆ ಮತ್ತು ಭಾವೋದ್ರೇಕಗಳಿಂದ ವ್ಯಕ್ತಿಯ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಹದಗೆಡುವ ಪ್ರಕ್ರಿಯೆಗೆ ‘ಮಾನಸಿಕ ಒತ್ತಡ’ ಎಂದು ಕರೆಯಬಹುದು. ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿರುವ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಜೈವಿಕ-ರಾಸಾಯನಿಕ ಸಂತುಲನವು ಹದಗೆಟ್ಟು, ಮಿದುಳಿನ ನರವಾಹಕಗಳ ಮೇಲೆ ದುಷ್ಪರಿಣಾಮ ಬೀರುತ್ತವೆ (ಮಾನಸಿಕ ಒತ್ತಡದ ಪರಿಣಾಮ ಯಾವಾಗಲೂ ಪ್ರತಿಕೂಲವೇ ಆಗಿರದಿದ್ದರೂ).
ವೈದ್ಯಕೀಯ ವಿವರಣೆ:ನಮ್ಮ ಆಂತರಿಕ ಪರಿಸರವನ್ನು ನಿಯಂತ್ರಿಸಲು, ಅದರ ಗುಣಲಕ್ಷಣಗಳ ತುಲನಾತ್ಮಕವಾದ ಸ್ಥಿರಸ್ಥಿತಿ ಅವಶ್ಯವಾಗಿರುತ್ತದೆ. ಇಂತಹ ಸ್ಥಿರಸ್ಥಿತಿಯನ್ನು ಕಾಪಾಡಿಕೊಳ್ಳುವ ವ್ಯವಸ್ಥೆಯನ್ನು ಸಂತುಲನವೆಂದು ಕರೆಯಲಾಗುತ್ತದೆ. ಈ ಸಂತುಲನವನ್ನು ವಿಕ್ಷಿಪ್ತಗೊಳಿಸುವ ಒಂದು ಸ್ಥಿತಿಯನ್ನೇ ಮಾನಸಿಕ ಒತ್ತಡ ಎಂದೆನ್ನಬಹುದು. ಜೀವನದಲ್ಲಿ ಹಾಗೂ ದೇಹದ ಚಯಾಪ ಚಯ ಪ್ರಕ್ರಿಯೆಯಲ್ಲಿ ಉಂಟಾಗುವ ತೀವ್ರ ಬದಲಾವಣೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಒತ್ತಡವು ಮನೋ-ದೈಹಿಕ ಸಂಕೀರ್ಣದ ಮೇಲೆ ಹೇರಲ್ಪಡುತ್ತದೆ.
ಮನಶಾಸ್ತ್ರಜ್ಞರ ಪ್ರಕಾರ ವಿಪರೀತವಾದ ಮಾನಸಿಕ ಒತ್ತಡ ಮನುಷ್ಯನ ಆರೋಗ್ಯಕ್ಕೆ ಬಾಧಕ. ಸಾಧಾರಣವಾದ ಮಾನಸಿಕ ಒತ್ತಡ ಸಹಜವಷ್ಟೇ ಅಲ್ಲ, ಕೆಲವೊಮ್ಮೆ ಉಪಯುಕ್ತ ಕೂಡ. ಸ್ವಲ್ಪಮಟ್ಟಿಗಿನ ಮಾನಸಿಕ ಒತ್ತಡ ಕ್ರಿಯಾಶೀಲತೆಗೆ ಪ್ರೇರಣೆ ನೀಡಬಲ್ಲದು. ಶ್ರಮವಹಿಸಿ ಕಾರ್ಯವೆಸಗುವಾಗ ಅಥವಾ ಕ್ಷಿಪ್ರಗತಿಯಲ್ಲಿ ಪ್ರತಿಕ್ರಿಯಿಸ ಬೇಕಾದಾಗ ಮಾನಸಿಕ ಒತ್ತಡ ಸಹಾಯಕವಾಗಬಲ್ಲುದು.

ಜೀವನದ ಐದು ಪ್ರಧಾನ ಅಂಶಗಳ ನಿರ್ವಹಣೆ (ಈ ಅಂಶಗಳು ಪರಸ್ಪರ ಅವಿಭಾಜ್ಯ ಸಂಬಂಧ ಹೊಂದಿವೆ ಮತ್ತು ಅವಲಂಬಿಸಿವೆ)
1. ಸ್ವಯಂ-ನಿರ್ವಹಣೆ
2. ಕೌಟುಂಬಿಕ ನಿರ್ವಹಣೆ
3. ವೃತ್ತಿ ನಿರ್ವಹಣೆ
4. ಸಾಮಾಜಿಕ ಸಂಬಂಧಗಳ ನಿರ್ವಹಣೆ
5. ಆಧ್ಯಾತ್ಮಿಕ ನಿರ್ವಹಣೆ
ಪರಿಪೂರ್ಣ ಜೀವನದ ಐದು ಆಯಾಮಗಳು:ವೈಯಕ್ತಿಕ, ಕೌಟುಂಬಿಕ, ವೃತ್ತಿಪರ, ಸಾಮಾಜಿಕ, ಆಧ್ಯಾತ್ಮಿಕ.
– ಇವುಗಳನ್ನು ದಕ್ಷತೆಯಿಂದ ಜೀವನದಲ್ಲಿ ಅಳವಡಿಸಿಕೊಂಡು ಸಾಮರಸ್ಯ ಸಾಧಿಸಿ ಬಾಳನ್ನು ಶಾಂತಿಮಯ ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ಮಾಡಿಕೊಳ್ಳಬೇಕು.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)
(ಈ ಅಂಕಣ ಪ್ರತಿ ಬದಲಿ ಮಂಗಳವಾರ ಪ್ರಕಟವಾಗುತ್ತದೆ)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 4 =
Remember me
