ಹೋರಾಟ ಮನೋಧರ್ಮ ಎಚ್.ಎಸ್. ದೊರೆಸ್ವಾಮಿ ಅವರಲ್ಲಿ ಕೊನೆಯವರೆಗೂ ಉಳಿದಿತ್ತು. ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿದ್ದ ಅವರು, ನಂತರದಲ್ಲಿಯೂ ನಿರಂತರವಾಗಿ ಒಂದಿಲ್ಲೊಂದು ಹೋರಾಟದ ಜತೆ ಗುರುತಿಸಿಕೊಳ್ಳುತ್ತಿದ್ದರು. ಅವರ ಜೀವನ ಚಿತ್ರಣ ಇಲ್ಲಿದೆ.
ಖಾದಿ ಜುಬ್ಬಾ, ಬಿಳಿ ಪಂಚೆ ಮತ್ತು ಹೆಗಲ ಮೇಲೆ ಶಲ್ಯ ಹಾಕಿಕೊಂಡಿದ್ದ ಎತ್ತರದ ಸಾತ್ವಿಕ ಗುಣದ, ಆಂದೋಲನದ ಸತ್ವ ತುಂಬಿದ ಆಜಾನುಬಾಹು. ವ್ಯವಸ್ಥೆಯನ್ನು ಇರಿದು ನೋಡುವಂಥ ಚೂಪು ಮೂಗು. ನೇರ ನಡೆ- ನುಡಿ. ಸರ್ಕಾರಗಳನ್ನು ಹಲವು ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿಸಿದ್ದೂ ಉಂಟು. ಗಾಂಧಿಯುಗದ ಕೊಂಡಿ. ಸ್ವಾತಂತ್ರ್ಯೊತ್ತರದ ಬಹುತೇಕ ಎಲ್ಲ ಚಳವಳಿ, ಹೋರಾಟಗಳಲ್ಲಿ ಅವರು ಪಾಲ್ಗೊಂಡಿದ್ದರು.
ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ 1918 ಏಪ್ರಿಲ್ 10ರಂದು ಜನಿಸಿದರು. ತಂದೆ ಎಚ್. ಶ್ರೀನಿವಾಸಯ್ಯ. ದೊರೆಸ್ವಾಮಿ ಐದು ವರ್ಷದವರಿದ್ದಾಗಲೇ ತಂದೆ ಮೃತಪಟ್ಟರು. ತಾತನೇ ಪೋಷಕರಾಗಿ ಬೆಳೆಸಿದರು. ಪ್ರಾಥಮಿಕ ಶಾಲೆ ಮುಗಿಸಿದ ಬಳಿಕ ಬೆಂಗಳೂರಿಗೆ ಆಗಮಿಸಿದರು. ಮಹಾತ್ಮ ಗಾಂಧಿಯವರ ‘ಮೈ ಅರ್ಲಿ ಲೈಫ್’ ಕೃತಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಪ್ರೇರಣೆ ನೀಡಿತು. ಇಂಟರ್​ವಿುೕಡಿಯೇಟ್ ಓದುವ ಸಂದರ್ಭದಲ್ಲಿ ಬೆಂಗಳೂರಿನ ಬನಪ್ಪ ಪಾರ್ಕ್​ನಲ್ಲಿ ಸ್ವಾತಂತ್ರ್ಯ ಕುರಿತ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ಮುಖಂಡರನ್ನು ಬಂಧಿಸಲಾಯಿತು. ಮಾರನೇ ದಿನ ವಿದ್ಯಾರ್ಥಿಗಳು ಮುಷ್ಕರಕ್ಕೆ ಕರೆನೀಡಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶ ಪಡೆದಿದ್ದು ಹೀಗೆ. ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಸಮಾಜ ಸುಧಾರಣಾ ಕೆಲಸಗಳಲ್ಲಿ ಭಾಗವಹಿಸಲು ದೊರೆಸ್ವಾಮಿಯವರಿಗೆ ಕೆ.ಎಫ್. ನಾರಿಮನ್ ಹಾಗೂ ಗಾಂಧೀಜಿ ಪ್ರಭಾವ ಮುಖ್ಯ ಕಾರಣ. ದೊರೆಸ್ವಾಮಿಯವರು ಇಂಟರ್​ವಿುೕಡಿಯೇಟ್ ಕಾಲೇಜಿನಲ್ಲಿ ಓದುತ್ತಿದ್ದ ಕಾಲ. ಗಾಂಧೀಜಿ ಕಾಯಿಲೆಯಿಂದ ಚೇತರಿಸಿಕೊಂಡು ವಿಶ್ರಾಂತಿ ಪಡೆಯುವುದಕ್ಕಾಗಿ ನಂದಿಬೆಟ್ಟಕ್ಕೆ ಬಂದಿದ್ದರು.
ಆ ಸಂದರ್ಭದಲ್ಲಿ ಗಾಂಧಿಯವರನ್ನು ಹತ್ತಿರದಿಂದ ಕಾಣುವ ಅವಕಾಶ ದೊರೆಸ್ವಾಮಿ ಅವರಿಗೆ ಸಿಕ್ಕಿತ್ತು.
– ಪಗಡೆಯಾಟದ ಜೋಡಿ
ದೊರೆಸ್ವಾಮಿ ಪತ್ನಿ ಲಲಿತಮ್ಮ. ಇಬ್ಬರ ಭೇಟಿಯಾಗಿದ್ದು ಪಗಡೆಯಾಟದ ಮೂಲಕ. ಇಬ್ಬರಿಗೂ ಪರಿಚಯವಿದ್ದ ರಾಘವೇಂದ್ರ ಎಂಬುವರು ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಈ ಸಂದರ್ಭದಲ್ಲಿ ಪಗಡೆ ಆಟದಲ್ಲಿ ದೊರೆಸ್ವಾಮಿ 3ನೇ ಆಟದಲ್ಲಿ ಲಲಿತಮ್ಮ ವಿರುದ್ಧ ಸೋತು ಹೋದರಂತೆ. ಹಾಗೆ ಸೋತ ದೊರೆಸ್ವಾಮಿ ಲಲಿತಮ್ಮರಿಗೂ ಸೋತರು. 1950ರ ಸೆ.18ರಂದು ವಿವಾಹ ನಡೆದಾಗ ದೊರೆಸ್ವಾಮಿ ಅವರಿಗೆ ವಯಸ್ಸು 32. ಲಲಿತಮ್ಮರಿಗೆ 19. ಸ್ವಾತಂತ್ರ್ಯ ದೊರೆತ ಬಳಿಕವೂ ದೇಶೀಯ ವಸ್ತ್ರ ಉತ್ಪಾದನೆ, ಜಾಗೃತಿ, ಭೂದಾನ ಆಂದೋಲನ, ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ದೊರೆಸ್ವಾಮಿ ತೊಡಗಿದ್ದರು. ತಿಂಗಳುಗಟ್ಟಲೆ ಮನೆಯಿಂದ ದೂರವಿರುತ್ತಿದ್ದರು. ಲಲಿತಮ್ಮ ತಾಳ್ಮೆಯಿಂದ ಸಂಸಾರವನ್ನು ಸಾಗಿಸಿದರು. ಮಗ, ಮಗಳನ್ನು ಸಲಹಿದರು. ತಮ್ಮ ‘ಸಾಹಿತ್ಯ ಭಂಡಾರ’ ಪ್ರಕಾಶನದ ಮೂಲಕ ಹೊರತಂದ ಕೃತಿಗಳನ್ನು ಮಾರುತ್ತಿದ್ದ ದೊರೆಸ್ವಾಮಿ, ಬಂದ ಹಣವನ್ನು ಪತ್ನಿ ಕೈಗಿಡುತ್ತಿದ್ದರು. 1975ರ ತುರ್ತಪರಿಸ್ಥಿತಿಯ ದಿನಗಳು. ದೊರೆಸ್ವಾಮಿ ಅವರನ್ನು ಸರ್ಕಾರ ಜೈಲಿಗೆ ಕಳುಹಿಸಿತು. ಲಲಿತಮ್ಮರ ಮನೆಯ ಸುತ್ತ ‘ನಿಷೇಧ’ ಹೇರಲಾಗಿತ್ತು. ಮಗ ದಾವಣಗೆರೆಯಲ್ಲಿ ಇಂಜಿನಿಯರಿಗ್ ಓದುತ್ತಿದ್ದ. ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿದ್ದ ದೊರೆಸ್ವಾಮಿ ಅವರ ಪಿಂಚಣಿಯನ್ನು ಕಡಿತಗೊಳಿಸಲಾಗಿತ್ತು. ಹಣಕಾಸು ಕೊರತೆಯಿದ್ದರೂ, ಮನೆಗೆ ಬರುತ್ತಿದ್ದ ಹೋರಾಟ ಗಾರರು, ಬೆಂಬಲಿಗರ ಆತಿಥ್ಯಕ್ಕೆ ಲಲಿತಮ್ಮ ಕೊರತೆ ಮಾಡುತ್ತಿರಲಿಲ್ಲ. ತುರ್ತಪರಿಸ್ಥಿತಿ ಸಂದರ್ಭ 15 ದಿನಕ್ಕೊಮ್ಮೆ ಪತಿಯ ಭೇಟಿಗೆ ಅವಕಾಶವಿತ್ತು. ಆಗ ಪತಿಗಾಗಿ ನೆಚ್ಚಿನ ಪಾಯಸ ತೆಗೆದುಕೊಂಡು ಹೋಗುತ್ತಿದ್ದರು. ಅವರ ಜತೆ ಇತರರಿಗೂ ಪಾಯಸ ಸಲ್ಲುತ್ತಿತ್ತು.
– ಭೂದಾನ ಚಳವಳಿ
ವಿನೋಬಾ ಭಾವೆ ರಾಷ್ಟ್ರ ಮಟ್ಟದಲ್ಲಿ ಭೂದಾನ ಚಳವಳಿ ಆರಂಭಿಸಿದಾಗ ರಾಜ್ಯದಲ್ಲೂ ಸವೋದಯ ಸೇವಕರು ಭೂದಾನ ಚಳವಳಿ ಆರಂಭಿಸಿದರು. ದೊರೆಸ್ವಾಮಿ ಮತ್ತು ಸಂಗಡಿಗರು ತಿಂಗಳಿಗೆ 20- 25 ದಿನ ಪಾದಯಾತ್ರೆ ಮಾಡಿ, ಜನರಿಗೆ ವಿನೋಬಾ ಅವರ ಸಂದೇಶ ತಿಳಿಸಿ, ಭೂದಾನ ಮಾಡುವಂತೆ ಉಳ್ಳವರಿಗೆ ಮನವಿ ಮಾಡಿದ್ದರು.
– ಕಳಚಿದ ಗಾಂಧಿತತ್ತ್ವದ ಕೊಂಡಿ
ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಎಚ್.ಎಸ್.ದೊರೆಸ್ವಾಮಿ (104) ಹೃದಯ ವೈಫಲ್ಯದಿಂದ ಬುಧವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು. ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. 2019ರಲ್ಲಿ ಪತ್ನಿ ಲಲಿತಮ್ಮ ನಿಧನರಾಗಿದ್ದರು. ಬೆಂಗಳೂರಿನ ಟಿ.ಆರ್. ಮಿಲ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೇ 6ರಂದು ಹೃದಯ ಸಮಸ್ಯೆಯಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ಅವರಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆ ವೇಳೆ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ನೇತೃತ್ವದ ತಜ್ಞರ ತಂಡ ಚಿಕಿತ್ಸೆ ನೀಡಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಅವರು ಬೇಗನೆ ಚೇತರಿಸಿಕೊಂಡು ಮೇ 12ರಂದು ಮನೆಗೆ ತೆರಳಿದ್ದರು. ಮತ್ತೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ಒಂದು ದಿನದ ಬಳಿಕ (ಮೇ 14ರಂದು) ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದರು. ಆಗಲೂ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ ಅದಕ್ಕೆ ಸ್ಪಂದಿಸದೆ ಹೃದಯ ವೈಫಲ್ಯದಿಂದ ನಿಧನರಾದರು. ಕಳೆದ 10 ವರ್ಷಗಳಿಂದ ಹೃದಯ ಕವಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಶ್ವಾಸಕೋಶದ ಸಮಸ್ಯೆಯೂ ಇತ್ತು.
ದೇಹದಾನಕ್ಕೆ ಕೋವಿಡ್ ಅಡ್ಡಿ: ದೊರೆಸ್ವಾಮಿ ಅವರು ತಮ್ಮ ದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾನ ಮಾಡಿದ್ದರು. ಆದರೆ, ಕೋವಿಡ್​ನಿಂದಾಗಿ ಅವರ ದೇಹದಾನದ ಕನಸು ಫಲಿಸಲಿಲ್ಲ.
– ತುರ್ತುಪರಿಸ್ಥಿತಿ ವಿರೋಧಿಸಿ ಇಂದಿರಾಗೆ ಪತ್ರ
ದೇಶದಲ್ಲಿ ತುರ್ತಪರಿಸ್ಥಿತಿ ಹೇರಿದಾಗ, ದೊರೆಸ್ವಾಮಿ ಮತ್ತು ಗರುಡ ಶರ್ಮ ಜತೆ ಸೇರಿ ಇಂದಿರಾ ಗಾಂಧಿಗೆ ಪತ್ರ ಬರೆದಿದ್ದರು. ‘ಪ್ರಧಾನಿ ಇಂದಿರಾ ತಾಯಿ ಅವರೇ, ನೀವು ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಡಳಿತ ನಡೆಸುತ್ತೀರಿ. ಆದರೆ, ನಿಮ್ಮ ವರ್ತನೆ ಸರ್ವಾಧಿಕಾರಿ ಮನೋಭಾವದ್ದಾಗಿದೆ. ಈ ನೀತಿಯನ್ನು ಮುಂದುವರಿಸಿದರೆ, ಹಳ್ಳಿ ಹಳ್ಳಿಗೆ ತೆರಳಿ ಇಂದಿರಾ ಗಾಂಧಿ ತಪ್ಪುಹೆಜ್ಜೆ ಇಡುತ್ತಿದ್ದಾರೆ ಎಂದು ಸಾರಿ ಹೇಳುತ್ತೇವೆ’ ಎಂದು ಎಚ್ಚರಿಸಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ದೊರೆಸ್ವಾಮಿಯವರನ್ನು ಬಂಧಿಸಿ ಸುಮಾರು ನಾಲ್ಕು ತಿಂಗಳು ಜೈಲಿನಲ್ಲಿಡಲಾಯಿತು.
– ಕೈಗಾ ಹೋರಾಟ
ಕೈಗಾದಲ್ಲಿ ಅಣುಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿ 2 ವರ್ಷ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ದೊರೆಸ್ವಾಮಿ ಕಾರವಾರದಲ್ಲಿ ಹೋರಾಟ ಸಮಿತಿ ರಚಿಸಿದ್ದರು. ರೈತರು, ವಿದ್ಯಾರ್ಥಿಗಳು, ಶ್ರಮಿಕ ವರ್ಗದವರು, ಬೋಧಕರು, ಚಾಲಕರು… ಹೀಗೆ ಎಲ್ಲರ ಹಕ್ಕೊತ್ತಾಯಗಳ ನೂರಾರು ಚಳವಳಿಗಳಿಗೆ ಕಸುವು ತುಂಬಿದ್ದರು ದೊರೆಸ್ವಾಮಿ. ಅವರ ಬದುಕು ಸರಳ. ಅವರದ್ದೇ ಆದ ಸ್ವಂತ ಆಸ್ತಿ ಎಂಬುದಿರಲಿಲ್ಲ. ಅವರಿದ್ದ ಮನೆಯೂ ಭೋಗ್ಯದ್ದು. ವಾಹನವಾಗಲೀ, ಮೊಬೈಲ್ ಫೋನ್ ಆಗಲೀ ಇರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯಿಂದ ಜೀವನ ಸಾಗುತ್ತಿತ್ತು.

– ಪತ್ರಕರ್ತರಾಗಿ…
ದೊರೆಸ್ವಾಮಿ ಪತ್ರಕರ್ತರಾಗಿದ್ದು ಆಕಸ್ಮಿಕ. ದೊಡ್ಡಬಳ್ಳಾಪುರದಲ್ಲಿದ್ದ ಪ್ರಗತಿಪರ ಪಕ್ಷದ ಮುಖವಾಣಿಯಾಗಿದ್ದ ‘ಪೌರವಾಣಿ’ಯನ್ನು ಭದ್ರಣ್ಣ ನಡೆಸುತ್ತಿದ್ದರು. ಅವರ ಅಕಾಲಿಕ ನಿಧನದಿಂದಾಗಿ, ದೊರೆಸ್ವಾಮಿ ಅದರ ಚುಕ್ಕಾಣಿ ಹಿಡಿಯಬೇಕಾಯಿತು. ಮೈಸೂರು ಚಲೋ ಚಳವಳಿಯಲ್ಲಿ ಪತ್ರಿಕೆ ಮಹತ್ವದ ಪಾತ್ರ ವಹಿಸಿತ್ತು. 1944ರಲ್ಲಿ ಮೈಸೂರಿನಲ್ಲಿ ಪುಸ್ತಕ ಮಳಿಗೆ ತೆರೆದಿದ್ದರಲ್ಲದೆ, ಪ್ರಕಾಶನ ಕಾರ್ಯವನ್ನೂ ಆರಂಭಿಸಿದ್ದರು. ಜಗನ್ಮೋಹನ ಅರಮನೆ ರಸ್ತೆಯಲ್ಲಿ ಒಂದು ಮಳಿಗೆ ಹಿಡಿದು ಸಾಹಿತ್ಯ ಮಂದಿರ ಎಂಬ ಹೆಸರಿನಲ್ಲಿ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಇತ್ತು. 1947ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸ್ಥಾಪನೆಗೊಂಡಾಗ ದೊರೆಸ್ವಾಮಿ ಮತ್ತು ಎಸ್.ವಿ. ಜಯಶೀಲರಾವ್ ಅದರ ಸಂಚಾಲನ ಸಮಿತಿಯ ಅಧ್ಯಕ್ಷರಾದರು.
– ಜೈಲು ವಾಸ
ಪದವಿ ಶಿಕ್ಷಣ ಮುಗಿಸಿದ ನಂತರ ಗಾಂಧಿನಗರ ಪ್ರೌಢಶಾಲೆಗೆ ಉಪಾಧ್ಯಾಯರಾಗಿ ಸೇರಿಕೊಂಡರು. ಶಾಲೆಯಲ್ಲಿ ಕೆಲವೇ ತಿಂಗಳು ಕೆಲಸ ಮಾಡಿ ನಂತರ ಹೊರಬಂದು ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು. ಆ ಕಾಲದಲ್ಲಿ ಬುದ್ಧದಾಸ್ ಎನ್ನುವ ಹೋರಾಟಗಾರರು ಒಂದು ಬಗೆಯ ಬಾಂಬ್ ತಯಾರಿಸಿಕೊಂಡು ಸರ್ಕಾರಿ ಕಚೇರಿಗಳ ರೆಕಾರ್ಡ್ ರೂಂಗಳಲ್ಲಿ ಇಟ್ಟು ಬರುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಬಾಂಬ್ ಉರಿದು ಅಲ್ಲಿನ ಕಾಗದಪತ್ರಗಳು ಸುಟ್ಟು ನಾಶವಾಗುತ್ತಿದ್ದವು. ದೊರೆಸ್ವಾಮಿಯವರೂ ಅಂತಹ ಬಾಂಬನ್ನು ಬುದ್ಧದಾಸ್ ಅವರಿಂದ ಪಡೆದು ಸಾಂರ್ದಭಿಕವಾಗಿ ಬಳಸಲು ಇಟ್ಟುಕೊಂಡಿದ್ದರು. ಬಾಂಬ್​ಗಳನ್ನು ತುಮಕೂರಿನ ಖಾದಿ ಭಂಡಾರದ ರಾಮಚಂದ್ರ ಎಂಬುವರು ಒಯ್ಯುತ್ತಿದ್ದಾಗ ಪೊಲೀಸರು ಹಿಂಬಾಲಿಸಿ ಬಂಧಿಸಿದಾಗ ದೊರೆಸ್ವಾಮಿಯವರತ್ತ ಬೊಟ್ಟುಮಾಡಿದ್ದರು. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದರು. 1942ರಲ್ಲಿ ಜೈಲು ಸೇರಿದ ದೊರೆಸ್ವಾಮಿ 1944ರ ಮೇ 14ರಂದು ಬಿಡುಗಡೆಗೊಂಡರು.
– ಏಕೀಕರಣ ಸಮರದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಮೈಸೂರು ಮಹಾರಾಜರು ಅಧಿಕಾರದಲ್ಲೇ ಇದ್ದರು. ಇದು ಕರ್ನಾಟಕದ ಏಕೀಕರಣಕ್ಕೆ ತೊಡಕಾಗಿತ್ತು. ಏಕೀಕರಣದ ಪರವಾಗಿ ಇರುವವರು ದಿಲ್ಲಿಗೆ ಹೋಗಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದಾಗ ಯಾವ ಅಭಿಪ್ರಾಯವೂ ಬರಲಿಲ್ಲ. ನಿರಾಸೆಗೊಂಡ ನಿಯೋಗ ವಲ್ಲಭಭಾಯಿ ಪಟೇಲರ ಬಳಿಗೆ ಹೋದಾಗ ಏಕೀಕರಣ ಆಗಬೇಕಿದ್ದರೆ ಮಹಾರಾಜರನ್ನು ಇಳಿಸಿ ಎಂಬ ಷರತ್ತು ಬಂತು. ಅಲ್ಲಿಂದ ನಿಯೋಗ ಹಿಂದಿರುಗಿದ ಬಳಿಕ ನಿಯೋಗದ ಪರವಾಗಿ, ಅಧಿಕಾರ ಬಿಟ್ಟು ಇಳಿಯುವಂತೆ ದೊರೆಸ್ವಾಮಿಯವರು ಪತ್ರಿಕಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ಅನೇಕ ಹಿರಿಯರಿಗೆ ಅಸಮಾಧಾನ ಉಂಟುಮಾಡಿತ್ತು. ಅಂತಿಮವಾಗಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಚಾಣಾಕ್ಷತನದಿಂದ ಏಕೀಕರಣ ಸಾಕಾರಗೊಳಿಸಿದ್ದು ಇತಿಹಾಸ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + sixteen =
Remember me
