ಇಂದು ಜೀವನದ ಜಂಜಾಟದಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಎಂಬ ಪರಿಸ್ಥಿತಿಗೆ ತಲುಪುತ್ತಿದ್ದೇವೆ. ಒತ್ತಡವೇ ಜೀವನ ಎನ್ನುವಷ್ಟರ ಮಟ್ಟಿಗೆ ಜನಜೀವನ ಬದಲಾಗಿದೆ. ಆಫೀಸ್, ಮೊಬೈಲ್, ಹೆಚ್ಚು ಅಂಕ ಗಳಿಸುವುದು ಎನ್ನುವ ಸಂಕುಚಿತ ಗುರಿಗಳಿಗೆ ಮಾತ್ರ ಬದುಕನ್ನು ಹೆಚ್ಚಿನವರು ಮೀಸಲಿರಿಸಿದ್ದಾರೆ.
‘ಇದು ನನಗೆ ಅಜ್ಜಿ ಕೊಟ್ಟ ಸೀರೆ’, ‘ಇದು ನನ್ನ ತಂದೆಯ ಪೆಟ್ಟಿಗೆ’, ‘ಇದು ನಮ್ಮ ಮದುವೆಯಾದಾಗ ನನ್ನ ತಂದೆ ಕೊಡಿಸಿದ ಫ್ಯಾನು. ಈಗಲೂ ಹಾಗೇ ಇಟ್ಟಿದ್ದೇನೆ’. ‘ಇದು ನನಗೆ ದೊರೆತ ಮೊದಲ ಬಹುಮಾನ, ಬಟ್ಟಲು ಇದರಲ್ಲೇ ಈಗಲೂ ಉಣ್ಣುತ್ತಿದ್ದೇನೆ’, ‘ಇದು ನನ್ನ ತಂದೆ ಓಡಿಸುತ್ತಿದ್ದ ಸೈಕಲ್ಲು, ಯಾರು ಕೇಳಿದರೂ ಕೊಡುವುದಿಲ್ಲ. ಇವೆಲ್ಲ ನನಗೆ ಅಮೂಲ್ಯ ವಸ್ತುಗಳು. ಈ ವಸ್ತುಗಳಲ್ಲಿ ನನ್ನೆಲ್ಲ ನೆನಪುಗಳು ಅಡಗಿವೆ. ಎಂದೂ ಮರೆಯಲಾಗದ ಸ್ಮರಣೀಯ ವಸ್ತುಗಳು ಇವು. ಹಾಗಾಗಿ ಜೋಪಾನವಾಗಿ ಕಾಪಿಟ್ಟಿದ್ದೇವೆ’ ಎಂದು ಹೇಳುವ ಅನೇಕರನ್ನು ನೋಡಿರುತ್ತೇವೆ.
ಅಪ್ಪನ ಕಾಲದ ಮದುವೆಯ ಆಲ್ಬಂ ಈಗಲೂ ಮನೆಯಲ್ಲಿ ಜೋಪಾನವಾಗಿ ಇಟ್ಟು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಅದನ್ನು ತಿರುವಿ ತಮ್ಮ ವಿವಾಹದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಳ್ಳುವ ಅನೇಕ ಹಿರಿಯರನ್ನು ನೋಡಿದ್ದೇವೆ. ಆ ಆಲ್ಬಂಗೆ ಬೆಲೆ ತೆರಲಾಗದು. ಅದು ಅವರ ಭಾವನೆಗಳ ತಿಜೋರಿ.
ಹಳೇ ವಸ್ತುಗಳಾದರೂ, ಉಪಯೋಗಿಸದಿದ್ದರೂ ಧೂಳನ್ನು ಹೊಡೆದು ಅಚ್ಚುಕಟ್ಟಾಗಿ ಅವುಗಳನ್ನು ಕಾಪಿಟ್ಟು ರಕ್ಷಿಸುವುದನ್ನು ಅನೇಕ ಬಾರಿ, ಅನೇಕ ಕಡೆ ಗಮನಿಸಿದಾಗ ಆ ವಸ್ತುಗಳಲ್ಲಿ ಇರುವ ಮಧುರ ಬಾಂಧವ್ಯದ ಮೌಲ್ಯ ಅರಿವಿಗೆ ಬರುತ್ತದೆ. ವಸ್ತುಗಳಲ್ಲಿ ಜೀವವಿಲ್ಲದಿದ್ದರೂ ಆ ವಸ್ತುಗಳನ್ನು ನೀಡಿದ, ಆ ವಸ್ತುಗಳೊಂದಿಗೆ ಜೀವಿಸಿದ ಜೀವದ ಭಾವಗಳಿಗೆ ಆ ವಸ್ತು ಮೌಲ್ಯ ತಂದುಕೊಡುತ್ತದೆ.
ಧರ್ಮಸ್ಥಳಕ್ಕೆ ಬಂದ ಭಕ್ತರು ಅದೆಷ್ಟೋ ಬಾರಿ ಹೇಳುವುದನ್ನು ಕೇಳಿದ್ದೇನೆ. ‘ಸ್ವಾಮಿ ನಾನು ಉಜಿರೆಗೆ ಬಂದಾಗಲೆಲ್ಲ ನಾನು ಕಲಿತ ಎಸ್.ಡಿ.ಎಂ. ಕ್ಯಾಂಪಸನ್ನು ನನ್ನ ಮಗನಿಗೆ ತೋರಿಸುವುದುಂಟು, ನಾನು ಇಲ್ಲೇ ಕಲಿತದ್ದು, ಇಲ್ಲೇ ಸುತ್ತಾಡಿದ್ದು ಎಂದು ನೆನಪಿನ ಕ್ಷಣಗಳನ್ನು ಅವನಲ್ಲಿ ಹಂಚಿ ಕೊಳ್ಳುವುದುಂಟು. ಆ ಮಧುರತೆ ದೊರೆಯುವುದು ನಾನು ಸದಾ ಉಜಿರೆಗೆ ಬಂದಾಗಲೇ’. ಹೀಗೆ ಒಂದು ಶಾಲೆ, ಕಾಲೇಜು, ಪ್ರತಿಯೊಂದು ವಸ್ತುವೂ ಆಪ್ಯಾಯಮಾನವಾದುದು. ಅನೇಕರಿಗೆ ಅದು ಜೀವ. ಅದನ್ನು ಜೋಪಾನ ಮಾಡುತ್ತಾರೆ. ಆ ವಸ್ತುಗಳ ಮೂಲಕ ತಮ್ಮ ನೆನಪನ್ನು ಮರುಸೃಷ್ಟಿಸಿಕೊಳ್ಳುತ್ತಾರೆ. ಆ ದಿನಗಳನ್ನು ಮನನ ಮಾಡುತ್ತಾರೆ. ಸವಿಯನ್ನು ಪುನರಾವರ್ತಿಸಿಕೊಳ್ಳುತ್ತಾರೆ. ಅವುಗಳು ಬದುಕಿಗೊಂದು ಸಿಹಿ, ಸ್ಪೂರ್ತಿ, ಶಕ್ತಿ ನೀಡುತ್ತವೆ. ಸಂಬಂಧಗಳ ಉಳಿಯುವಿಕೆಗೆ ಅವುಗಳು ಶಾಶ್ವತ ಕೊಂಡಿಯಾಗಿ ಬೆಸೆದುಕೊಂಡಿರುತ್ತವೆ. ದುಡ್ಡು ಕೊಟ್ಟರೂ ಸಿಗಲಾರದಷ್ಟು ಮೌಲ್ಯ ಆ ವಸ್ತುಗಳಲ್ಲಿ ಇರುತ್ತವೆ. ಆ ಮಧುರ ನೆನಪಿನ ಮೌಲ್ಯದ ಪ್ರೀತಿಗೆ ಬೆಲೆ ಕಟ್ಟಲಾಗದು. ಬದುಕಿನಲ್ಲಿ ನೆನಪುಗಳಿಗೆ ವಿಶೇಷ ಸ್ಥಾನವಿದೆ. ಆ ನೆನಪುಗಳನ್ನು ಉಳಿಸುವಲ್ಲಿ ಮುಖ್ಯ ಭೂಮಿಕೆ ವಹಿಸುವ ವಸ್ತುಗಳಿಗೆ ಅದಕ್ಕಿಂತಲೂ ಅಧಿಕ ಮೌಲ್ಯವಿದೆ.
ಮದುವೆಯ ಮೊದಲ ವಾರ್ಷಿಕೋತ್ಸವದ ನೆನಪು, ಮಗುವಿನ ಮೊದಲ ಹುಟ್ಟುಹಬ್ಬದ ನೆನಪು, ದಾಂಪತ್ಯ ಜೀವನದ 25ರ ಬೆಳ್ಳಿಹಬ್ಬ ಸಂಭ್ರಮ, ಹೀಗೆ ಅನೇಕ ಸವಿನೆನಪುಗಳು ಸದಾ ಸ್ಮರಣೀಯವಾಗಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಆ ಸಂದರ್ಭಗಳನ್ನು ಸ್ಮ ೃಪಟಲದಲ್ಲಿ ಸದಾ ಹಸಿರಾಗಿ ಇರಿಸಲು ವಸ್ತುಗಳನ್ನೋ, ಆಭರಣಗಳನ್ನೋ ಖರೀದಿಸುತ್ತೇವೆ. ಕಾಲಕ್ರಮೇಣ ಖರೀದಿಸಿದ ವಸ್ತುಗಳ ಬೆಲೆ ಕಳೆದುಕೊಂಡು ಅಪಮೌಲ್ಯವಾದರೂ ಅವುಗಳು ಖರೀದಿಸಿದ ಸಂದರ್ಭ, ಆ ಸಂದರ್ಭದ ಪ್ರೀತಿ, ನೆನಪು ಆ ವಸ್ತುಗಳ ಮೌಲ್ಯವನ್ನು ಇಮ್ಮಡಿಗೊಳಿಸುತ್ತದೆ.
ಅನೇಕ ಬಾರಿ ಮನೆಯಲ್ಲಿ ಮಕ್ಕಳು, ‘ಅಮ್ಮ ಆ ಹಳೆಯ ಗಡಿಯಾರ ಯಾಕೆ ಇಟ್ಟಿದ್ದೀರ, ಗುಜಿರಿಗೆ ಹಾಕಬಹುದಲ್ಲವೇ?’ ಎಂದು ಹೇಳುವುದುಂಟು. ಆದರೆ ಅಮ್ಮ ಮಕ್ಕಳ ಆ ಮಾತಿಗೆ ಸುತಾರಾಂ ಒಪ್ಪುವುದಿಲ್ಲ. ‘ಅದು ನನ್ನ ತಾಯಿ ನಾನು ಮದುವೆಯಾಗಿ ಗಂಡನ ಮನೆ ಸೇರಿದಾಗ ಕೊಟ್ಟದ್ದು, 40 ವರ್ಷ ಆಗಿದೆ, ನಾನು ಆ ಗಡಿಯಾರದಲ್ಲಿ ನನ್ನ ಪ್ರತಿಕಾಲದ ನೆನಪು ಕಟ್ಟಿಕೊಂಡಿದ್ದೇನೆ, ನನ್ನ ಕಾಲದ ನಂತರ ಬೇಕಾದರೆ ಗುಜಿರಿಗೆ ಹಾಕಿ, ನಾನಿರುವವರೆಗೂ ಅದು ನನ್ನ ಜೊತೆ ಇರಬೇಕು’ ಎಂದು ಹೇಳುತ್ತಾರೆ. ಗಡಿಯಾರದ ಮೂಲಕ ತಾಯಿಯ ಪ್ರೀತಿ, ಸವಿನೆನಪು ಅನುಭವಿಸುವುದನ್ನು ನಾವು ಇಲ್ಲಿ ಕಾಣಬಹುದು.
ಪ್ರತಿಯೊಂದು ವಸ್ತು, ಜಾಗಕ್ಕೆ ಅದರದೇ ಮೌಲ್ಯ, ಇತಿಹಾಸವಿದೆ. ಯಾವುದನ್ನೂ ಕಡೆಗಣಿಸಬಾರದು. ಅದರಲ್ಲಿ ಯಾರದೋ ಭಾವನೆ, ನೆನಪುಗಳಿರಬಹುದು. ಅನೇಕರು ಹಳೇ ನೆನಪು, ವಸ್ತುಗಳನ್ನು ಸದಾ ತಮ್ಮಲ್ಲಿಟ್ಟುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಂರಕ್ಷಿಸುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ‘ನನ್ನ ತಂದೆ ಇದೇ ಸ್ಕೂಟರ್​ನಲ್ಲಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ನನ್ನನ್ನು ಓದಿಸಿದರು’ ಎಂಬ ಭಾವನೆಯೊಂದಿಗೆ ಅವರು ಬಳಸಿದ ಸ್ಕೂಟರ್​ನ್ನು ಸಂರಕ್ಷಿಸಿದ್ದ ಕಥೆಗಳನ್ನು ಕೇಳಿದ್ದೇವೆ. ‘ನನ್ನ ತಂದೆ ಇದೇ ಆಟೋರಿಕ್ಷಾ ಚಲಾಯಿಸಿ ನನಗಾಗಿ, ಕುಟುಂಬಕ್ಕಾಗಿ ಶ್ರಮಿಸಿದರು’ ಎಂದು ಅವರ ಕಾಲಾನಂತರವೂ ಆಟೋವನ್ನು ಯಾರಿಗೂ ಮಾರದೆ ಇಟ್ಟುಕೊಂಡಿರುವ ಬಗ್ಗೆ ಕೇಳಿದ್ದೇವೆ. ಹಾಗಾಗಿ ಮನಸ್ಸಿನ ಆ ಭಾವನೆಗೆ ಎಂದಿಗೂ ಬೆಲೆಕಟ್ಟಲು ಅಸಾಧ್ಯ.
ಅನೇಕರು ಶ್ರೀಕ್ಷೇತ್ರಕ್ಕೆ ಬಂದಾಗ, ‘ಸ್ವಾಮಿ, ನಾನು ರುಡ್​ಸೆಟ್​ನಲ್ಲಿ ತರಬೇತಿ ಪಡೆದು ಉದ್ಯಮ ನಡೆಸುತ್ತಿದ್ದೇನೆ. ರುಡ್​ಸೆಟ್​ನಲ್ಲಿ ಕಳೆದ ಆ ದಿನಗಳು ನನ್ನ ಪಾಲಿಗೆ ಎಂದೂ ಮರೆಯಲಾಗದ ದಿನಗಳು. ಪ್ರತಿ ಬಾರಿ ಇಲ್ಲಿ ಬಂದು ಆ ದಿನಗಳನ್ನು ಮೆಲುಕು ಹಾಕುತ್ತೇನೆ’ ಎಂದರೆ, ಇನ್ನೂ ಕೆಲವರು ಬಂದು, ‘ಸ್ವಾಮಿ, ಮದ್ಯವರ್ಜನ ಶಿಬಿರದಲ್ಲಿ ಕಳೆದ ಆ ದಿನಗಳು ನನ್ನ ಜೀವನವನ್ನೇ ಬದಲಿಸಿತು. ಶಿಬಿರದ ಆ ಕ್ಷಣಗಳು ನನ್ನ ಜೀವನದಲ್ಲಿ ಸದಾ ಅಮೂಲ್ಯವಾದುದು’ ಎನ್ನುತ್ತಾರೆ. ಅವರ ಈ ತರಹದ ಭಾವನೆಗಳೇ ಪ್ರತಿಯೊಂದು ವಸ್ತು, ವಿಷಯ, ವಿಚಾರಕ್ಕೂ ಜೀವ ತುಂಬುತ್ತವೆ.
90ರ ದಶಕದ ಸಂದರ್ಭವನ್ನು ಒಮ್ಮೆ ಯೋಚಿಸೋಣ. ಆಗ ಮಕ್ಕಳ ಆಟ ಹೇಗಿತ್ತು. ಮೊಬೈಲ್​ಗಳು ಇರಲಿಲ್ಲ. ಸಾಮಾಜಿಕ ಜಾಲತಾಣಗಳು, ಇಂಟರ್​ನೆಟ್ ಎಂದರೆ ಗೊತ್ತಿರಲಿಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ಮಕ್ಕಳು ಚೆನ್ನೆಮಣೆ, ಲಗೋರಿ, ಮರಕೋತಿ, ಕುಂಟೆಬಿಲ್ಲೆ, ಚೌಕಾಬಾರ, ಸೇರಿದಂತೆ ಅನೇಕ ದೇಸೀ ಆಟಗಳನ್ನು ಆಡುತ್ತಿದ್ದರು. ಗದ್ದೆಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಕೂಡು ಕುಟಂಬಗಳು ಹೆಚ್ಚಾಗಿದ್ದ ಕಾಲವದು. ರಜೆ ಬಂತೆಂದರೆ ಅಜ್ಜಿ ಮನೆಗೆ ಮಕ್ಕಳು ಓಡಿ ಬರುತ್ತಿದ್ದರು. ಒಟ್ಟು ಸೇರಿ ಆಡುತ್ತಿದ್ದರು. ಮಾವಿನಹಣ್ಣು, ಗೇರುಬೀಜ, ಹಲಸಿನ ಹಣ್ಣು ಇಂತಹ ಹಣ್ಣುಗಳನ್ನು ತಿನ್ನಲೂ ಸ್ಪರ್ಧೆ ಇರುತ್ತಿತ್ತು. ಅಜ್ಜಿ ಕಥೆ ಕೇಳಲು ಉತ್ಸುಕರಾಗಿರುತ್ತಿದ್ದರು. ಅಜ್ಜಿ ಮಾಡುವ ತಿಂಡಿ, ತಿನಿಸಿನ ಪರಿಮಳದ ನೆನಪೇ ಅವರನ್ನು ಅಜ್ಜಿ ಮನೆಯತ್ತ ಸೆಳೆಯುತ್ತಿದ್ದವು. ಸಣ್ಣಪುಟ್ಟ ವಿಚಾರದಲ್ಲೇ ಎಲ್ಲರೂ ಖುಷಿ ಕಾಣುತ್ತಿದ್ದರು. ಆ ಖುಷಿ ಜೀವನಪರ್ಯಂತ ನೆನಪಿಸಿಕೊಳ್ಳುತ್ತಾರೆ. ಈಗಲೂ ಎಲ್ಲರೂ ಒಟ್ಟು ಸೇರಿದಾಗ ಚಿಕ್ಕವರಾಗಿದ್ದಾಗ ಆಡಿದ ಆ ದಿನಗಳ ಖುಷಿ, ಮೇಷ್ಟ್ರು ಕೊಟ್ಟ ಏಟಿನ ರುಚಿಯ ಬಗ್ಗೆ ನೆನಪಿಸಿಕೊಳ್ಳುವವರೇ ಹೆಚ್ಚು. ಅವೆಲ್ಲ ಸದಾ ಮರೆಯಲಾಗದ ನೆನಪುಗಳಾಗಿ ಶಾಶ್ವತವಾಗಿ ಉಳಿಯುವಂತಹದ್ದು.
ಇಂದು ಜೀವನದ ಜಂಜಾಟದಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಎಂಬ ಪರಿಸ್ಥಿತಿಗೆ ತಲುಪುತ್ತಿದ್ದೇವೆ. ಒತ್ತಡವೇ ಜೀವನ ಎನ್ನುವಷ್ಟರ ಮಟ್ಟಿಗೆ ಜನಜೀವನ ಬದಲಾಗಿದೆ. ಆಫೀಸ್, ಮೊಬೈಲ್, ಹೆಚ್ಚು ಅಂಕ ಗಳಿಸುವುದು ಎನ್ನುವ ಸಂಕುಚಿತ ಗುರಿಗಳಿಗೆ ಮಾತ್ರ ಬದುಕನ್ನು ಹೆಚ್ಚಿನವರು ಮೀಸಲಿರಿಸಿದ್ದಾರೆ. ಹೆಚ್ಚು ಅಂಕ ಗಳಿಸಿ ಅತ್ಯುತ್ತಮ ಉದ್ಯೋಗ ಗಳಿಸುವುದು ಮಾತ್ರ ಕೆಲವರ ಜೀವನದ ಗುರಿ. ಅದರ ಹೊರತಾಗಿ ಬೇರೇನನ್ನೂ ಅವರು ಯೋಚಿಸುವುದಿಲ್ಲ. ಉದ್ಯೋಗ ದೊರೆತ ಮೇಲೆ ಅದರ ಕುರಿತಾಗಿ ಮಾತ್ರ ಚಿಂತನೆ, ಉಳಿದೆಲ್ಲ ವಿಚಾರದ ಕುರಿತು ಗಮನವೇ ಹರಿಸುವುದಿಲ್ಲ, ಮಡದಿ, ಮಕ್ಕಳ ಜೊತೆ ಸಮಯ ಕಳೆಯುವ ಕುರಿತಾಗಿ ಚಿಂತನೆಗಳೇ ಇರುವುದಿಲ್ಲ. ಯಾವಾಗ ನೋಡಿದರೂ ಬಿಜಿ. ಆಫೀಸು, ಕೆಲಸ ಎಂಬ ಜಗತ್ತಿನಲ್ಲಿ ಕಳೆದು ಹೋಗಿರುವವರು ತಮ್ಮ ಬಾಲ್ಯದ ಸವಿದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ ಸಿಗುವ ಆನಂದದ ಅನುಭೂತಿ ಒತ್ತಡವನ್ನು ಮುಕ್ತಗೊಳಿಸುತ್ತದೆ.
ಆ ಕಾಲ, ಅದು ಮಣ್ಣಿನ ಕಾಲ. ಎಲ್ಲರೂ ಮಣ್ಣಿನೊಂಡಿಗೆ ಆಡಿ, ಎದ್ದು ಬಿದ್ದು ಬೆಳದವರು. ಆದರೆ ಇಂದು ಡಿಜಿಟಲ್ ಯುಗ. ಮಣ್ಣಿನ ಸಂಬಂಧಕ್ಕಿಂತ ಮಕ್ಕಳಿಗೆ ಮೊಬೈಲ್ ಸಂಬಂಧ ಜಾಸ್ತಿಯಾಗಿದೆ. ಮಕ್ಕಳು ಸ್ಮಾರ್ಟ್​ಫೋನ್ ವ್ಯಸನಿಗಳಾಗಿದ್ದಾರೆ. ಫೋನ್ ನೀಡದಿದ್ದರೆ ಮಕ್ಕಳು ಊಟ, ತಿಂಡಿ ಏನನ್ನೂ ಮಾಡುವುದಿಲ್ಲ ಎಂದು ಹಠ ಹಿಡಿಯುತ್ತಾರೆ. ಆ ಕಾಲದಲ್ಲಿ ಮಕ್ಕಳು ‘ಮಣ್ಣಿನಲ್ಲಿ ಮನೆ ಕಟ್ಟಿಕೊಡಬೇಕು. ಆಗ ಊಟ ಮಾಡುತ್ತೇನೆ’ ಎಂದು ಹಠ ಹಿಡಯುತ್ತಿದ್ದರು. ಕಾಲ ಬದಲಾಗಿದೆ. ಪಾಲಕರೂ ಮಕ್ಕಳು ಹಠ ಹಿಡಿದರೆ ಮೊಬೈಲ್ ಕೊಟ್ಟು ಬಿಡುತ್ತಾರೆ. ಸಮಾಧಾನ ಪಡಿಸಲು ಬೇರಾವುದೇ ಉಪಾಯವನ್ನೂ ಬಳಸುವುದಿಲ್ಲ. ಇದರಿಂದ ಮಕ್ಕಳು ಪಾಲಕರಿಗೆ ಹಾಗೂ ಪಾಲಕರಿಗೆ ಮಕ್ಕಳು ದೂರವಾಗುತ್ತಿದ್ದಾರೆ. ಸಂಬಂಧಗಳ ಕೊಂಡಿ ಕಳಚುತ್ತಿದೆ. ಬಾಲ್ಯದ ಮಕ್ಕಳಾಟಿಕೆ ಕಡಿಮೆಯಾಗಿ ಮೊಬೈಲ್ ಆಟಿಕೆಗೆ ಮೀಸಲಾಗುತ್ತಿದೆ. ಇದರಿಂದ ಈಗಿನ ಮಕ್ಕಳ ಬಾಲ್ಯ ಬಹಳಷ್ಟು ಬದಲಾವಣೆಗೊಳ್ಳುತ್ತ ಮಧುರ ಕ್ಷಣಗಳು ಮರೆಯಾಗುತ್ತಿವೆ. ಮುಂದೊಂದು ದಿನ ಮಗು ದೊಡ್ಡದಾದ ಮೇಲೆ, ‘ನಿನ್ನ ಬಾಲ್ಯ ಹೇಗಿತ್ತು?’ ಎಂದು ಕೇಳಿದರೆ ‘ಕೇವಲ ಮೊಬೈಲ್ ಆಟ’ ಎಂಬಷ್ಟರ ಮಟ್ಟಿಗೆ ನೆನಪುಗಳು ಸೀಮಿತವಾಗಬಹುದೇನೋ. ಈ ಬಗ್ಗೆ ಪಾಲಕರೂ ಎಚ್ಚರವಹಿಸಬೇಕಾಗಿದೆ.
ಒಂದು ಕಟ್ಟಡ ಸುಂದರ ಮನೆಯಾಗಬೇಕಾದರೆ ಅದರಲ್ಲಿ ಜೀವತುಂಬಬೇಕು. ಕುಟುಂಬದವರ ನಡುವೆ ಮಧುರಬಾಂಧವ್ಯ ಇರಬೇಕು. ಆಗ ಮಾತ್ರ ಸುಂದರ ಮನೆಯಾಗಲು ಸಾಧ್ಯ. ನೂರಾರು ನೆನಪುಗಳೇ ಜೀವನಕ್ಕೆ ಬಂಡವಾಳ ಎನ್ನುವುದು ಸತ್ಯ. ವಿದೇಶದಲ್ಲಿ ಒತ್ತಡದ ಜೀವನಕ್ಕೆ ಬಿಡುವು ನೀಡಿ ಬದುಕನ್ನು ಸವಿಯುವುದಕ್ಕಾಗಿ ಹಾಸ್ಯಕ್ಕಾಗಿ ಒಂದು ದಿನ, ಕುಟುಂಬಕ್ಕಾಗಿ ಒಂದು ದಿನ ಎಂಬಂತೆ ಆಚರಿಸುತ್ತಾರೆ. ಅಂದರೆ ಯಾಂತ್ರೀಕೃತ ಬದುಕಿನ ಹೊರತಾಗಿಯೂ ಬೇರೊಂದು ಬದುಕಿದೆ. ಬದುಕಿನಲ್ಲಿ ನೂರಾರು ಬಣ್ಣಗಳಿವೆ. ಆ ಬಣ್ಣಗಳನ್ನು ಗುರುತಿಸಬೇಕಿದೆ.
ಹಳೆಯ ಬೇರು, ಹೊಸ ಚಿಗುರು ಎಂಬಂತೆ ಹಳತ್ತು ಎಂದೂ ಹಳಸುವುದಿಲ್ಲ. ಹಳೆಯ ನೆನಪುಗಳು ಸದಾ ನವನವೀನವಾಗಿರುತ್ತವೆ. ಅದಕ್ಕೆ ಹೊಸ ಚಿಗುರು ಹುಟ್ಟಿ ಮತ್ತೆ ಮತ್ತೆ ಜೀವಂತಿಕೆ ಪಡೆಯುತ್ತವೆ. ಇಲ್ಲೊಂದು ಪ್ರಶ್ನೆ ಉದ್ಭವಿಸಬಹುದು. ಕಹಿ ನೆನಪುಗಳನ್ನೂ ಹಾಗೇ ಜೋಪಾನವಾಗಿರಸಬೇಕೆ ಎಂಬುದು. ಜೀವನದಲ್ಲಿ ಸಿಹಿ-ಕಹಿ ಎರಡೂ ಇರುತ್ತದೆ. ಕಹಿ ಘಟನೆಗಳನ್ನು ಗುಜಿರಿಗೆ ಹಾಕಬೇಕು. ಅಂದರೆ ಮನಸ್ಸಿನಿಂದ ತೆಗೆದು ಹಾಕಬೇಕು. ಮರೆಯಲು ಪ್ರಯತ್ನಿಸಬೇಕು. ಆ ಕಹಿ ಘಟನೆ, ಕ್ಷಣವನ್ನು ಅನುಭವಿಸಿದ ಬಳಿಕ ಅದರಿಂದ ಪಡೆದ ಜ್ಞಾನ, ಅರಿವನ್ನು ಮುಂದಿನ ಒಳಿತಿಗೆ ಮೆಟ್ಟಿಲಾಗಿ ಬಳಸಿಕೊಳ್ಳಬೇಕು. ಸಿಹಿ ಘಟನೆಗಳನ್ನು ಶಾಶ್ವತವಾಗಿ ಮನಸ್ಸಿನಲ್ಲಿ ಇಟ್ಟುಕೊಂಡು ಮೆಲುಕು ಹಾಕುತ್ತಿರಬೇಕು. ಆಗ ಜೀವನದಲ್ಲಿ ಲವಲವಿಕೆ ಸಾಧ್ಯವಾಗುತ್ತದೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)
ಮೇಕೆದಾಟು ಯೋಜನೆಗೆ ಶೀಘ್ರ ಅನುಮೋದನೆ ನೀಡಿ; ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
