ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದ ಹಲವು ಪೊಲೀಸ್ ಠಾಣೆಗಳಲ್ಲಿ ಪಿಎಸ್​ಐ (ಪೊಲೀಸ್ ಸಬ್ ಇನ್​ಸ್ಪೆಕ್ಟರ್) ಹುದ್ದೆಗಳು ಖಾಲಿ ಉಳಿದುಕೊಂಡಿವೆ. ಇದರಿಂದಾಗಿ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ಇತರೆ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ.
ಬೆಂಗಳೂರು ನಂತರ ಎರಡನೇ ಅತಿದೊಡ್ಡ ಅವಳಿ ನಗರವಾದ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮಂಜೂರಾದ 53 ಹುದ್ದೆಗಳ ಪೈಕಿ ಕೇವಲ 22 ಪಿಎಸ್​ಐಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 31 ಪಿಎಸ್​ಐ ಹುದ್ದೆಗಳು ಖಾಲಿ ಇವೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು
ಸುವ್ಯವಸ್ಥೆ ಕಾಪಾಡುವ 15 ಠಾಣೆಗಳಿವೆ. 4 ಸಂಚಾರ ಪೊಲೀಸ್ ಠಾಣೆಗಳಿವೆ. 2 ವಿಶೇಷ (ಸೈಬರ್ ಕ್ರೖೆಂ ಮತ್ತು ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯಗಳ ಠಾಣೆ) ಠಾಣೆಗಳಿವೆ.
ಕೆಲ ಠಾಣೆಗಳಲ್ಲಿ ಒಬ್ಬ ಪಿಎಸ್​ಐ ಇದ್ದರೆ, ಮತ್ತೆ ಕೆಲ ಠಾಣೆಗಳಲ್ಲಿ ಪಿಎಸ್​ಐಗಳೇ ಇಲ್ಲ. ಇದರಿಂದಾಗಿ ಇನ್​ಸ್ಪೆಕ್ಟರ್​ಗಳೇ ಎಲ್ಲ ಜವಾಬ್ದಾರಿ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗಾಗಲೇ ಸಿಬ್ಬಂದಿ ಕೊರತೆಯಿಂದ ಸುಧಾರಿತ ಬೀಟ್ ಸಿಸ್ಟಂ ನಿರ್ವಹಣೆ ಕಷ್ಟವಾಗಿದೆ. ಈ ನಡುವೆ ಪಿಎಸ್​ಐಗಳ ಕೊರತೆ ಬೇರೆ. ಇದರಿಂದಾಗಿ ನೈಟ್ ಬೀಟ್, ಪೆಟ್ರೋಲಿಂಗ್, ಬಂದೋಬಸ್ತ್, ಅಪರಾಧ ಪ್ರಕರಣಗಳ ವೇಳೆ ಪಿಐಗಳು ಸ್ವತಃ ತಾವೇ ತೆರಳಬೇಕಾಗಿದೆ.
ಏಳು ವರ್ಷ ಇಲ್ಲ ವರ್ಗಾವಣೆ
ಪೊಲೀಸ್ ಇಲಾಖೆಯಲ್ಲಿ ಒಂದು ಘಟಕಕ್ಕೆ ನಿಯೋಜನೆಯಾದರೆ 7 ವರ್ಷ ಬೇರೆಡೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಗಂಡ- ಹೆಂಡತಿ ಇಬ್ಬರೂ ಕರ್ತವ್ಯದಲ್ಲಿದ್ದರೆ ಹಾಗೂ ವಿಶೇಷ ಸಂದರ್ಭದಲ್ಲಿ ಮಾತ್ರ ವರ್ಗಾವಣೆಗೆ ಅವಕಾಶವಿದೆ. ಈ ಕಾರಣಕ್ಕೆ ಕಮಿನಷರೇಟ್ ಸಹವಾಸ ಬೇಡ ಎನ್ನುತ್ತಾರೆ ಹಲವು ಪಿಎಸ್​ಐಗಳು. ಪಿಎಸ್​ಐಗಳ ಕೊರತೆಗೆ ಇದೂ ಒಂದು ಕಾರಣ ಎನ್ನಬಹುದು.
ಠಾಣೆಗೆ ಒಬ್ಬರೇ ಸಬ್​ಇನ್​ಸ್ಪೆಕ್ಟರ್
ಪಿಎಸ್​ಐ ಹುದ್ದೆಗಳಿಗೆ ಶೇ. 70ರಷ್ಟು ನೇರವಾಗಿ ಹಾಗೂ ಶೇ. 30ರಷ್ಟು ಬಡ್ತಿ ಹೊಂದಿದವರನ್ನು ನೇಮಿಸಬೇಕು. ಠಾಣೆಗೆ ಇಬ್ಬರು ಪಿಎಸ್​ಐ (ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗ) ನೇಮಿಸಬೇಕು ಎಂಬ ನಿಯಮವಿದೆ. ಆದರೆ, ಸದ್ಯ ಅವಳಿ ನಗರದ ಬಹುತೇಕ ಠಾಣೆಗಳಲ್ಲಿ ಒಬ್ಬರೇ ಪಿಎಸ್​ಐ ಗಳಿದ್ದಾರೆ. ಕೆಲ ಠಾಣೆಗಳಲ್ಲಿ ಪಿಎಸ್​ಐಗಳೇ ಇಲ್ಲ.
ಬೇಕಿದೆ ಪರ್ಯಾಯ ವ್ಯವಸ್ಥೆ
ಹುಬ್ಬಳ್ಳಿ- ಧಾರವಾಡದಲ್ಲಿ ಹಲವು ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಪರಾಧ ಪ್ರಕರಣಗಳು ಇಲ್ಲಿ ಹೆಚ್ಚಾಗಿರುತ್ತವೆ. 18 ಪಿಎಸ್​ಐಗಳು ತರಬೇತಿ ಪಡೆಯುತ್ತಿದ್ದು, ತರಬೇತಿ ಬಳಿಕ ಪೋಸ್ಟಿಂಗ್ ನೀಡಲಾಗುತ್ತದೆ. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.
ಇತ್ತೀಚೆಗೆ ನೇಮಕವಾದ 18 ಪಿಎಸ್​ಐಗಳು ತರಬೇತಿ ಪಡೆಯುತ್ತಿದ್ದು, ಶೀಘ್ರವೇ ಕರ್ತವ್ಯಕ್ಕೆ ನಿಯುಕ್ತಿಗೊಳ್ಳಲಿದ್ದಾರೆ. ಉಳಿದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.
| ಲಾಭೂರಾಮ ಪೊಲೀಸ್ ಆಯುಕ್ತ
ಸ್ವತಂತ್ರ ಠಾಣೆಗೆ ಬೇಡಿಕೆ
ನೇರ ನೇಮಕಾತಿಯಾದ ಪಿಎಸ್​ಐಗಳು ಕಮಿಷನರೇಟ್ ಘಟಕದ ಬದಲು ಸ್ವತಂತ್ರ ಠಾಣೆಯನ್ನು ಬಯಸುತ್ತಾರೆ. ಕಮಿಷನರೇಟ್ ಘಟಕದಲ್ಲಿ ಇನ್​ಸ್ಪೆಕ್ಟರ್ ಅಣತಿಯಂತೆ ಕೆಲಸ ಮಾಡಬೇಕಾಗುತ್ತದೆ. ಮೇಲಧಿಕಾರಿಗಳ ಓಡಾಟ ಹೆಚ್ಚಾಗಿರುತ್ತದೆ. ಕೆಲ ಠಾಣೆಗಳಲ್ಲಿ ಪ್ರತ್ಯೇಕ ಕೊಠಡಿ, ಸರಿಯಾದ ಖುರ್ಚಿ ವ್ಯವಸ್ಥೆ ಇರುವುದಿಲ್ಲ ಎಂಬ ಆರೋಪವಿದೆ. ಹಾಗಾಗಿ, ಹೇಗಾದರೂ ಮಾಡಿ, ಪ್ರಭಾವ ಬೀರಿ ಸ್ವತಂತ್ರ ಠಾಣೆಗೆ ಹೋಗಲು ಪ್ರಯತ್ನಿಸುತ್ತಾರೆ. ಈ ಕಾರಣದಿಂದ ಪಿಎಸ್​ಐ ಕೊರತೆ ಹೆಚ್ಚಾಗುತ್ತಿದೆ ಎಂಬುವ ಮಾತು ಇಲಾಖೆಯಲ್ಲೇ ಚಾಲ್ತಿಯಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 2 =
Remember me
