| ಅವಿನಾಶ್ ಜೈನಹಳ್ಳಿ ಮೈಸೂರು
ಮಿನರಲ್ ವಾಟರ್ ಮಾರಾಟ ಮಾಡುವ ಮಂಡ್ಯ ಜಿಲ್ಲೆ ಮಿನರಲ್ ವಾಟರ್ ಮಾರಾಟ ಮಾಡುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ರಮೇಶ್ 13 ವರ್ಷಗಳಿಂದ ಸದ್ದಿಲ್ಲದೆ ಅರಣ್ಯ ಸೇವೆ ಮಾಡುತ್ತಿದ್ದು, ಬಿರುಬೇಸಿಗೆಯ ಹೊಡೆತಕ್ಕೆ ಸಸಿಗಳು ಒಣಗಿ ಹೋಗದಂತೆ ಅವುಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅವರ ಪ್ರಯತ್ನದ ಫಲವಾಗಿ ಶ್ರೀರಂಗಪಟ್ಟಣ ಸಮೀಪ ಕರಿಘಟ್ಟ ಅರಣ್ಯದಲ್ಲಿ ಸಾವಿರಾರು ಸಸಿಗಳು ಸುಡು ಬೇಸಿಗೆಯ ತಾಪದಲ್ಲೂ ಹಚ್ಚ ಹಸಿರಿನಲ್ಲಿ ಕಂಗೊಳಿಸುತ್ತಿವೆ.
ಕರಿಘಟ್ಟದ ಅರಣ್ಯದಲ್ಲಿ ಬಿಸಿಲಿನ ಝುಳಕ್ಕೆ ಎತ್ತರದ ಪ್ರದೇಶದ ಗಿಡಗಳು ಬಾಡಿಹೋಗುತ್ತಿದ್ದವು. ಇಂತಹ ಸ್ಥಿತಿಯನ್ನು ಕಂಡು ಮರುಗಿದ ರಮೇಶ್ ಅವುಗಳ ಕೊರಳಿಗೆ ನೀರಿನ ಬೋಗುನಿಗಳನ್ನು ಕಟ್ಟಿ, ನೀರು ತೊಟ್ಟಿಕ್ಕಿಸಿ ಹಸಿರು ಉಳಿಯುವಂತೆ ಮಾಡಿದ್ದಾರೆ. ಅವರ ಪ್ರಯತ್ನದ ಫಲವಾಗಿ ಕರಿಘಟ್ಟ ಅರಣ್ಯದಲ್ಲಿ ವಿವಿಧ ಜಾತಿಯ ನೂರಾರು ಗಿಡಗಳು ಜೀವಕಳೆಯಿಂದ ಶೋಭಿಸುತ್ತಿವೆ.
ರಮೇಶ್ ಆರಂಭದಲ್ಲಿ 20 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ನೀರಿನ ಬಾಟಲಿಗಳಲ್ಲಿ ನೀರು ತುಂಬಿ ಹೊತ್ತು ತಂದು ಗಿಡಗಳಿಗೆ ನೀರು ಹಾಕುತ್ತಿದ್ದರು. ಇದೀಗ ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ. ಜತೆಗೆ ಪ್ರತಿ ವರ್ಷ ನೂರಾರು ಗಿಡಗಳನ್ನು ನೆಡುತ್ತಿದ್ದಾರೆ. ಇಲ್ಲಿವರೆಗೆ ಇವರು ನೆಟ್ಟಿ ಪೋಷಿಸಿರುವ ಮೂರೂವರೆ ಸಾವಿರಕ್ಕೂ ಹೆಚ್ಚು ಗಿಡಗಳಿಂದು ಮರಗಳಾಗಿವೆ. ಸಾರ್ವಜನಿಕರಿಗೆ ನೆರಳು ನೀಡುವ ಜತೆಗೆ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡುತ್ತಿವೆ. ಆಹಾರದ ಮೂಲಗಳು ಆಗಿವೆ. ಕರಿಘಟ್ಟ ಅರಣ್ಯದಲ್ಲಿ ಗೊರವ ಹಕ್ಕಿ, ಬುಲ್​ಬುಲ್, ಕೆಂಬೂತ, ಸೋರೆ ಹಕ್ಕಿ, ಸನ್ ಬರ್ಡ್, ಕುಂಡಕ್ಕಿ ಸೇರಿದಂತೆ ಹತ್ತಾರು ಬಗೆಯ ಪಕ್ಷಿ ಸಂಕುಲ ಇದೆ. ಕರಿಘಟ್ಟಕ್ಕೆ ಬರುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ರಮೇಶ್ ದಾರಿಯುದ್ದಕ್ಕೂ ಫಲಕಗಳನ್ನು ಹಾಕಿದ್ದಾರೆ. 49 ವರ್ಷದ ರಮೇಶ್ ಗಿಡ, ಮರಗಳ ಸೇವೆ ಮಾಡುವ ಮೂಲಕ ತಮಗೆ ಮಕ್ಕಳಿಲ್ಲದ ಕೊರಗನ್ನು ಕಳೆಯುತ್ತಿದ್ದಾರೆ.
ಪ್ರಾಣಿ, ಪಕ್ಷಿಗಳ ಹಸಿವು ನೀಗಿಸುವ ಹಾಗೂ ದಾಹ ತಣಿಸುವ ಪ್ರಯತ್ನವೊಂದು ಮೈಸೂರು ನಗರದಲ್ಲಿ ಪ್ರಾರಂಭವಾಗಿದ್ದು, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಈ ಸೇವಾ ಕಾರ್ಯ ಕೈಗೊಂಡಿದೆ. ಟ್ರಸ್ಟ್​ನ ಈ ಸೇವಾ ಕಾರ್ಯಕ್ಕೆ ನಗರದ ಹಲವಾರು ನಾಗರಿಕರು ಕೈಜೋಡಿಸುತ್ತಿದ್ದಾರೆ. ಟ್ರಸ್ಟ್ ಕಳೆದ ವರ್ಷ ಪಕ್ಷಿಗಳಿಗೆ ನೀರು ಹಾಗೂ ಆಹಾರ ನೀಡಲು 250ಕ್ಕೂ ಹೆಚ್ಚು ಬಟ್ಟಲುಗಳನ್ನು ನೀಡಿತ್ತು. ಹಲವಾರು ನಾಗರಿಕರು ಬಟ್ಟಲುಗಳನ್ನು ಪಡೆದು ಮನೆ ಮುಂಭಾಗ, ಉದ್ಯಾನ, ರಸ್ತೆ ಬದಿಯಲ್ಲಿರುವ ಮರಗಳಲ್ಲಿ ಇರಿಸಿ ಪಕ್ಷಿಗಳಿಗೆ ನೀರು, ಆಹಾರ ನೀಡಿದ್ದರು. ಈ ಬಾರಿಯೂ 250 ಕಡೆಗಳಲ್ಲಿ ಬಟ್ಟಲುಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಅದೇ ರೀತಿ ಜಾನುವಾರುಗಳು, ಬೀದಿ ನಾಯಿಗಳ ದಾಹ ತಣಿಸಲು ಕಳೆದ ಬಾರಿ 30 ತೊಟ್ಟಿಗಳನ್ನು ನೀಡಲಾಗಿತ್ತು. ಈ ಬಾರಿ 10 ಕಡೆಗಳಲ್ಲಿ ತೊಟ್ಟಿಗಳನ್ನು ಅಳವಡಿಸಲಾಗಿದೆ. ಈ ಸೇವಾ ಕಾರ್ಯವನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಿಂದ ಮಾತ್ರ ಮಾಡಲು ಸಾಧ್ಯವಿಲ್ಲ. ಕನಿಷ್ಠ 2 ದಿನಗಳಿಗೊಮ್ಮೆಯಾದರೂ ನೀರಿನ ಬಟ್ಟಲು, ತೊಟ್ಟಿಗಳನ್ನು ಶುಚಿಗೊಳಿಸಿ ಶುದ್ಧ ನೀರನ್ನು ತುಂಬಿಸಬೇಕು. ಬೇಸಿಗೆ ಕಳೆದ ತಕ್ಷಣ ಈ ತೊಟ್ಟಿಗಳು ಹಾಗೂ ಬಟ್ಟಲುಗಳನ್ನು ತೆರವುಗೊಳಿಸಬೇಕು. ಹಾಗಾಗಿ ಪ್ರಾಣಿ, ಪಕ್ಷಿಗಳ ಕುರಿತು ವಿಶೇಷ ಕಾಳಜಿ ಇರುವವರನ್ನು ಗುರುತಿಸಿ ಅವರಿಗೆ ನೀರಿನ ತೊಟ್ಟಿ ಮತ್ತು ಬಟ್ಟಲುಗಳನ್ನು ನೀಡಲಾಗುತ್ತಿದೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ಮೈಸೂರಿನ ಹೆಚ್ಚಿನ ಜನರು ತೊಡಗಿಸಿಕೊಂಡರೆ ಈ ಬಾರಿಯ ಬೇಸಿಗೆಯ ಸಂದರ್ಭ ಪ್ರಾಣಿ, ಪಕ್ಷಿಗಳ ದಾಹವನ್ನು ತಣಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ.
| ಹರ್ಷ ನ.ಪುರೋಹಿತ್ ದಾವಣಗೆರೆ
ಬಿರು ಬೇಸಿಗೆ ಜನ-ಜಾನುವಾರುಗಳನ್ನು ಹುರಿದು ಮುಕ್ಕುತ್ತಿದೆ. ಹನಿ ನೀರಿಗೂ ತ್ರಾಹಿ ತ್ರಾಹಿ ಎನ್ನುವಂತಾಗಿದೆ. ಟ್ಯಾಂಕರ್​ಗಳ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆ ಬಾವಿ ವಶ ಹೀಗೆ.. ಅನೇಕ ಕ್ರಮಗಳನ್ನು ಆಡಳಿತ ವರ್ಗ ತೆಗೆದುಕೊಳ್ಳುತ್ತಿದೆ. ಇಷ್ಟಾದರೂ ನಮಗೆ ಗೊತ್ತಿದ್ದೋ ಗೊಲ್ಲದೆಯೋ ನೀರಿನ ಪೋಲು ನಡೆಯುತ್ತಿದೆ ಎಂದರೆ ನಂಬುತ್ತೀರಾ?
ನಿಜ. ನೀವು ಯಾವುದಾದರೂ ಸಮಾರಂಭ, ಸಭೆಗಳನ್ನು ಗಮನಿಸಿರಬಹುದು, ಊಟದ ವೇಳೆ ನೀರಿನ ಬಾಟಲಿಗಳನ್ನು ಕೊಡಲಾಗುತ್ತದೆ. ಎಷ್ಟೋ ಜನ ಅವುಗಳನ್ನು ಅರ್ಧಕ್ಕರ್ಧ ಕುಡಿದು ಪಕ್ಕಕ್ಕಿಡುತ್ತಾರೆ. ಊಟದ ನಂತರ ಅವುಗಳನ್ನೆಲ್ಲ ತೆಗೆದು ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ಕೆಲ ವರ್ಷಗಳ ಕೆಳಗೆ ಊಟದ ವೇಳೆ ಲೋಟಾ ಕೊಟ್ಟು ನೀರು ಬಡಿಸುತ್ತಿದ್ದರು. ಇದರಿಂದ ಬೇಕಾದಷ್ಟು ಮಾತ್ರ ನೀರು ಬಳಕೆಯಾಗುತ್ತಿತ್ತು. ನೀರು ಬಡಿಸುವ ಕೆಲಸದಿಂದ ತಪ್ಪಿಸಿಕೊಳ್ಳಲೋ ಅಥವಾ ಹೈಜೆನಿಕ್ ನೀರು ಕೊಡುತ್ತಿದ್ದೇವೆ ಎಂಬ ಕಾರಣಕ್ಕೋ ಈ ಪದ್ಧತಿ ತಪ್ಪಿಹೋಗಿದೆ.
ಇನ್ನು ಹೋಟೆಲ್​ಗಳಿಗೆ ಹೋದಾಗಲೂ ಅಷ್ಟೇ. ಮೊದಲು ಲೋಟಾ, ಜಗ್ ತಂದಿಟ್ಟು ಆರ್ಡರ್ ಕೇಳುವ ಅಭ್ಯಾಸವಿತ್ತು. ಈಗ ಈ ಅಭ್ಯಾಸವೂ ಜಾರಿಯಲ್ಲಿಲ್ಲ. ಟೇಬಲ್ ಮುಂದೆ ಕುಳಿತಾಕ್ಷಣ ಒಂದು ಲೀಟರ್ ನೀರಿನ ಬಾಟಲಿ ತಂದು ಮುಂದಿಡುತ್ತಾರೆ. ಬಹುತೇಕ ಸಮಯದಲ್ಲಿ ಅದು ಅರ್ಧಂಬರ್ಧ ಖಾಲಿಯಾಗುತ್ತದೆ. ಮತ್ತೆ ಅದು ಸೇರುವುದು ಕಸದ ಬುಟ್ಟಿಗೆ. ಈ ರೀತಿಯಾಗಿ ಅಪೂರ್ವವಾದ ಜೀವಜಲ ವ್ಯರ್ಥವಾಗುತ್ತಿದೆ ಎಂಬ ವಿಷಯ ಯಾರ ಅರಿವಿಗೂ ಬರದಿರುವುದು ವಿಪರ್ಯಾಸ.

ಕಾಡು ಪ್ರಾಣಿಗಳಿಗೆ ನೀರಿನ ಅಭಿಯಾನ:ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರಿನ ಅಭಿಜಿತ್ ಬಸವರಾಜು ಅವರು ಸದ್ದಿಲ್ಲದೇ ಟ್ಯಾಂಕರ್ ಮೂಲಕ ಕಾಡಿನ ಕೆರೆ-ಕಟ್ಟೆಗಳನ್ನು ತುಂಬಿಸುವ ಅಭಿಯಾನ ನಡೆಸುತ್ತಿದ್ದಾರೆ. ಎಲ್​ಎಲ್​ಬಿ ಪದವೀಧರರಾಗಿರುವ ಅಭಿಜಿತ್ ಬಸವರಾಜು ಕೃಷಿ ಮಾಡುತ್ತಿದ್ದಾರೆ. ಇವರು ಕಳೆದೊಂದು ತಿಂಗಳಿಂದ ಮುತ್ತತ್ತಿ ಮತ್ತು ಬಸವನಬೆಟ್ಟ ಅರಣ್ಯ ವ್ಯಾಪ್ತಿಯಲ್ಲಿನ ಕೆರೆ, ಕಟ್ಟೆಗಳನ್ನು ತುಂಬಿಸುವ ಕಾಯಕ ಮಾಡುತ್ತಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅನುಮತಿಯನ್ನು ಪಡೆದಿದ್ದಾರೆ. ಆರಂಭದಲ್ಲಿ ಸ್ವಂತ ಹಣದಿಂದ 6 ಟ್ಯಾಂಕರ್ ನೀರನ್ನು ತುಂಬಿಸಿದ್ದಾರೆ. ಬಳಿಕ ಸಾರ್ವಜನಿಕರು, ಸ್ನೇಹಿತರು ಇವರೊಂದಿಗೆ ಕೈ ಜೋಡಿಸಿದ್ದು, 30ಕ್ಕೂ ಹೆಚ್ಚು ಟ್ಯಾಂಕರ್ ನೀರು ಪೂರೈಕೆ ಮಾಡಿದ್ದಾರೆ. ‘ಇದುವರೆಗೆ ಅನೇಕ ಕಾಡುಪ್ರಾಣಿಗಳು ಮುಖ್ಯವಾಗಿ ಆನೆ, ಜಿಂಕೆ, ಕರಡಿ, ಸಾರಂಗ, ನರಿಗಳು ಬಂದು ನೀರು ಕುಡಿದು ಹೋಗಿವೆ. ಇದನ್ನು ಅರಣ್ಯ ಇಲಾಖೆಯ ಸಿಸಿ ಕ್ಯಾಮರಾ ಮೂಲಕ ಪರೀಕ್ಷೆ ಮಾಡಿದ್ದೇವೆ. ಬೇಸಿಗೆ ಮುಗಿಯುವವರೆಗೂ ಇನ್ನೂ ದೊಡ್ಡ ಮಟ್ಟದಲ್ಲಿ ಈ ಅಭಿಯಾನ ಮುಂದುವರಿಸುತ್ತೇವೆ. ತುಂಬಾ ಖುಷಿ ಆತ್ಮತೃಪ್ತಿ ಇದೆ’ ಎನ್ನುತ್ತಾರೆ ಅಭಿಜಿತ್. ಅಭಿಯಾನದಲ್ಲಿ ಕೈ ಜೋಡಿಸುವವರು ಮೊ.9900460446 ಸಂರ್ಪಸಬಹುದು.
ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ: ಕೇಂದ್ರ ಸಚಿವರಿಗೆ ಬೆದರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 6 =
Remember me
