ಬೆಂಗಳೂರು:ರಾಜ್ಯ ಒಕ್ಕಲಿಗರ ಸಂಘದ ಸುಪರ್ದಿಯಲ್ಲಿರುವ ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್​ನ (ಕೆಆರ್​ಇಟಿ) 45 ಎಕರೆ 33 ಗುಂಟೆ ವಿಸ್ತೀರ್ಣದ ಜಮೀನನ್ನು ಕಬಳಿಸುವ ಹುನ್ನಾರಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ ಎಂಬ ಆರೋಪ ಕೇಳಿಬಂದಿದೆ. ನಗರದ ಸಜ್ಜೇಪಾಳ್ಯದಲ್ಲಿರುವ ಕೋಟ್ಯಂತರ ರೂ. ಬೆಲೆಬಾಳುವ ಜಮೀನಿನ ಪರಭಾರೆ ವಿಚಾರ ಒಕ್ಕಲು ಸಮುದಾಯದವರಲ್ಲಿ ಅಚ್ಚರಿ ಜತೆಗೆ ಆತಂಕವನ್ನೂ ತಂದೊಡ್ಡಿದೆ.
ಹಲವು ದಶಕಗಳಿಂದ ಜಮೀನು ಕಬಳಿಸುವ ಯತ್ನ ನಡೆಯುತ್ತಿದ್ದು, ಸಂಘ ಹಾಗೂ ಸಮುದಾಯದ ಹಿರಿಯರ ಮಧ್ಯಸ್ಥಿಕೆ ಹಾಗೂ ಹೋರಾಟದ ಫಲವಾಗಿ ಸ್ವತ್ತು ಟ್ರಸ್ಟ್​ನಲ್ಲೇ ಉಳಿದಿದೆ. ಇದೀಗ ಮತ್ತೆ ಟ್ರಸ್ಟ್​ನ ಜಮೀನಿನ ಮೇಲೆ ಕಾಕದೃಷ್ಟಿ ಬಿದ್ದಿದ್ದು, ಕಾನೂನುಬಾಹಿರವಾಗಿ ದಾಖಲೆಗಳನ್ನು ಸೃಷ್ಟಿಸಿ ಸ್ವತ್ತನ್ನು ಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳುವ ಯತ್ನಕ್ಕೆ ಸರ್ಕಾರದ ಆಯಾಕಟ್ಟಿನ ಸ್ಥಾನದಲ್ಲಿರುವ ಕೆಲ ಪ್ರಭಾವಿಗಳು ಹಾಗೂ ಒಂದಿಷ್ಟು ಅಧಿಕಾರಿಗಳ ಚಿತಾವಣೆ ಕಾರಣವಾಗಿದೆ ಎಂಬ ಆಕ್ಷೇಪವನ್ನು ಸ್ವತ: ಸಂಘವು ವ್ಯಕ್ತಪಡಿಸಿದೆ. ವಿಶೇಷವೆಂದರೆ, ಟ್ರಸ್ಟ್​ಗೆ ಸೇರಿರುವ ಸ್ವತ್ತಿನ ಮಾಲೀಕತ್ವದ ವಿವಾದವನ್ನು ಇತ್ಯರ್ಥಪಡಿಸಬೇಕಿರುವ ಪ್ರಕರಣವು ಸಿಟಿ ಸಿವಿಲ್ ಕೋರ್ಟ್ ಮುಂದೆ ವಿಚಾರಣೆ ನಡೆದಿರುವಾಗಲೇ ಜಮೀನು ಕಬಳಿಸುವ ಯತ್ನ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮುಖ್ಯವಾಗಿ ಸಜ್ಜೇಪಾಳ್ಯದ ಜಾಗವು ಖಾಲಿಯಿರುವುದರಿಂದ ಟ್ರಸ್ಟ್ ಯಾವುದೇ ಚಟುವಟಿಕೆಯನ್ನು ಕೈಗೊಂಡಿಲ್ಲ ಹಾಗೂ ಅದನ್ನು ಸದ್ಬಳಕೆ ಮಾಡಿಕೊಂಡಿಲ್ಲ ಎಂಬ ನೆಪ ಮಾಡಿ ಸ್ವತ್ತನ್ನು ಲಪಟಾಯಿಸಲು ಹುನ್ನಾರ ನಡೆಸಿರುವ ಆರೋಪ ಕೇಳಿಬಂದಿದೆ.
ಹೋರಾಟದ ಎಚ್ಚರಿಕೆ:ಸಜ್ಜೇಪಾಳ್ಯದಲ್ಲಿರುವ 45 ಎಕರೆ 33 ಗುಂಟೆ ಜಮೀನು ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್ ನಿರ್ವಹಣೆ ವಹಿಸಿರುವ ಸಂಘದ್ದೇ ಎಂದು ಒಕ್ಕಲಿಗರ ಸಂಘ ಪ್ರತಿಪಾದಿಸಿದೆ. ವಿವಿಧ ನ್ಯಾಯಾಲಯಗಳು, ವಿಧಾನಸಭೆ ಅರ್ಜಿ ಸಮಿತಿ, ನಗರ ಜಿಲ್ಲಾಧಿಕಾರಿ ಕಚೇರಿಯೂ ಕೂಡ ಜಮೀನಿನ ಒಡೆತನ ಸಂಘಕ್ಕೆ ಸೇರಿದ್ದು ಎಂದು ದಾಖಲೆಗಳನ್ನು ಮಾನ್ಯ ಮಾಡಿದೆ. ಹೀಗಿರುವಾಗ ಯಾರದ್ದೋ ಚಿತಾವಣೆಗೆ ಒಳಗಾಗಿ ಸ್ವತ್ತನ್ನು ಕಬಳಿಸುವ ಯತ್ನ ಮಾಡಿದರೆ ಅದರ ವಿರುದ್ಧ ಸಮುದಾಯದವರೊಂದಿಗೆ ಬೃಹತ್ ಹೋರಾಟ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷರು ಎಚ್ಚರಿಕೆ ರವಾನಿಸಿದ್ದಾರೆ.
ಏನಿದು ವಿವಾದ?:ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್​ನ ಸ್ವತ್ತಿನ ಮೂಲ ವಾರಸುದಾರರಾಗಿದ್ದ ರಂಗಮ್ಮ, ಸಜ್ಜೇಪಾಳ್ಯ ಹಾಗೂ ಮಾಳಗಾಲ ಗ್ರಾಮದಲ್ಲಿ ಒಟ್ಟು 96 ಎಕರೆ 35 ಗುಂಟೆ ಜಮೀನು ಹೊಂದಿದ್ದರು. ಮಕ್ಕಳಿಲ್ಲದ ಕಾರಣ ಅವರು ಜಮೀನಿನನ್ನು ಶಿಕ್ಷಣದ ಉದ್ದೇಶಕ್ಕೆ ಬಳಸುವಂತೆ ಉಯಿಲು ಬರೆದು (1962ರಲ್ಲಿ) ಅದರ ನಿರ್ವಹಣೆಗಾಗಿ ತನ್ನ ಸೋದರಳಿಯ ಬಿ.ಎಂ.ಪುಟ್ಟಸ್ವಾಮಿ ಅವರನ್ನು ನೇಮಿಸಿದ್ದರು. 1966ರಲ್ಲಿ ರಂಗಮ್ಮ ಮರಣದ ನಂತರ ಪುಟ್ಟಸ್ವಾಮಿ ಅಷ್ಟೂ ಜಮೀನನ್ನು ಟ್ರಸ್ಟ್ ಮೂಲಕ ದತ್ತಿ ಕೆಲಸದ ನಿರ್ವಹಣೆಗಾಗಿ ಒಕ್ಕಲಿಗರ ಸಂಘಕ್ಕೆ ನೋಂದಣಿ ಮಾಡಿ ಹಸ್ತಾಂತರಿಸಿದ್ದರು. ಈ ಸ್ವತ್ತಿಗೆ ಸೇರಿದ್ದ 51 ಎಕರೆಯಲ್ಲಿ ಉಳುಮೆ ಮಾಡುತ್ತಿದ್ದಾಗಿ ಹಲವು ಮಂದಿ ಭೂಸುಧಾರಣಾ ಕಾಯ್ದೆ ಅಡಿಯಲ್ಲಿ ಭೂ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಉಳಿದ 45 ಎಕರೆ 33 ಗುಂಟೆ ಸಂಘದ ಬಳಿ ಉಳಿದಿದ್ದು, ಈಗ ಈ ಸ್ವತ್ತು ಕೂಡ ತನಗೆ ಸೇರಬೇಕಿದೆ ಎಂದು ಪುಟ್ಟಸ್ವಾಮಿಯವರ ಪುತ್ರ ಬಿ.ಪಿ.ಮಹೇಂದ್ರ ಜಮೀನಿನ ಮೇಲೆ ಹಕ್ಕು ಚಲಾಯಿಸುತ್ತಿದ್ದಾರೆ. ಈ ವಾದಕ್ಕೆ ನ್ಯಾಯಾಲಯಗಳು ಹಾಗೂ ವಿಧಾನಸಭೆ ಅರ್ಜಿ ಸಮಿತಿ ಒಪ್ಪಿಗೆ ಸೂಚಿಸಿಲ್ಲ. ಜತೆಗೆ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಜಮೀನು ಮಾಲೀಕತ್ವದ ಪ್ರಕರಣ ಬಾಕಿಯಿರುವಾಗಲೇ ಸದರಿ ಜಮೀನಿನಲ್ಲಿ ಬಡಾವಣೆ ನಿರ್ವಿುಸಲು ನಕ್ಷೆ ಮಂಜೂರಾತಿ ಕೋರಿ ಮಹೇಂದ್ರ ಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ.
ವಿಧಾನಸಭೆ ಅರ್ಜಿ ಸಮಿತಿಗೆ ಟ್ರಸ್ಟ್ ಮೊರೆ:ಸ್ವತ್ತಿನ ವಿಚಾರವಾಗಿ ರಾಜ್ಯ ಒಕ್ಕಲಿಗರ ಸಂಘವು ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯ ವಿಧಾನಸಭೆಯ ಅರ್ಜಿ ಸಮಿತಿಗೆ ಅಹವಾಲು ಸಲ್ಲಿಸಿ ನ್ಯಾಯ ಕೋರಿತ್ತು. ಇದಕ್ಕೆ ಪ್ರತಿಯಾಗಿ ಸಮಿತಿಯು ಹಲವು ಬಾರಿ ಸಭೆಗಳನ್ನು ನಡೆಸಿ ಸುದೀರ್ಘ ಸಮಾಲೋಚನೆ ಹಾಗೂ ದಾಖಲೆಗಳನ್ನು ಪರಾಮಶಿಸಿ ಜಮೀನಿನ ಒಡೆತನವು ಸಂಘಕ್ಕೆ ಸೇರಿದ್ದೆಂದು 2011ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಆಧರಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಜಮೀನಿನ ಖಾತೆಯನ್ನು ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್​ಗೆ ವರ್ಗಾಯಿಸಿತು. ಆದರೆ, ಈ ಆದೇಶವನ್ನು ಟ್ರಸ್ಟ್​ನ ಟ್ರಸ್ಟಿಯಾಗಿರುವ ಬಿ.ಪಿ.ಮಹೇಂದ್ರ ಹೈಕೋರ್ಟ್ ನಲ್ಲಿ ಪ್ರಶ್ನಿಸಿದಾಗ, ಜಮೀನಿನ ಮಾಲೀಕತ್ವದ ಇತ್ಯರ್ಥವನ್ನು ಸಿಟಿ ಸಿವಿಲ್ ಕೋರ್ಟ್ ವಿಚಾರಣೆ ನಡೆಸಿ ನಿರ್ಧರಿಸುವಂತೆ ಆದೇಶಿಸಿತು. ಇದನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದಾಗಲೂ, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಲಾಯಿತು. ಸದ್ಯ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆದಿದೆ. ವಿಚಾರಣೆ ಬಾಕಿಯಿರುವಾಗಲೇ ಬಿ.ಪಿ.ಮಹೇಂದ್ರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಟಿ.ಎನ್.ಜವರಾಯಿಗೌಡ ಅವರು ಉದ್ದೇಶಿತ ಜಮೀನನ್ನು ಬಡಾವಣೆಯಾಗಿ ಮಾರ್ಪಡಿಸಲು ಪೋಡಿ ನಕ್ಷೆ ಮಂಜೂರಾತಿಗಾಗಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ವಿಷಯವನ್ನು ಅರಿತ ಸಂಘವು ಜಮೀನು ಕೈತಪ್ಪದಿರಲು ಅರ್ಜಿಯನ್ನು ಮಾನ್ಯ ಮಾಡದಂತೆ ಬಿಡಿಎ ಆಯುಕ್ತರಿಗೆ ಲಿಖಿತ ದೂರು ದಾಖಲಿಸಿದ್ದಾರೆ. ಜತೆಗೆ ಈ ಮೊದಲು ಜಮೀನಿನ ಕುರಿತು ಆದೇಶ ಮಾಡಿದ್ದ ವಿಧಾನಸಭೆ ಅರ್ಜಿ ಸಮಿತಿಗೂ ಹೊಸದಾಗಿ ಅಹವಾಲು ಪತ್ರ ನೀಡಿ (2023ರ ಡಿ.12), ನಕ್ಷೆ ಮಂಜೂರಾತಿಗೆ ಅನುಮತಿ ನೀಡದಂತೆ ಪ್ರಾಧಿಕಾರಕ್ಕೆ ನಿರ್ದೇಶಿಸುವಂತೆ ಕೋರಿದೆ.
ಸಂಧಾನದ ಬಳಿಕ ಹಣ ಪಾವತಿಸಿಲ್ಲ:ಇತ್ತೀಚೆಗೆ ಕುವೆಂಪು ಸಭಾಂಗಣದಲ್ಲಿ ವಿವಾದಿತ ಜಮೀನು ಕುರಿತು ಆಯೋಜಿಸಿದ್ದ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ, ಹಿಂದೊಮ್ಮೆ ತಾನು ಕಾರ್ಯದರ್ಶಿ ಆಗಿದ್ದ ವೇಳೆ ಆಸ್ತಿಯ ಮೇಲೆ ಹಕ್ಕು ಸಾಧಿಸಿದ್ದವರೊಂದಿಗೆ ಸಂಧಾನ ಕೈಗೊಳ್ಳಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಕಡಿಮೆ ಪ್ರಮಾಣದ ಜಮೀನು ಸಂಘಕ್ಕೆ ಸಿಗುವುದಿದ್ದ ಕಾರಣ ಕೋರ್ಟ್​ನಲ್ಲಿ ಇತ್ಯರ್ಥವಾಗುವುದು ಸರಿಯೆಂದು ಸಲಹೆ ನೀಡಿದ್ದೆ. ಆದರೂ, ಸದಸ್ಯರ ಒತ್ತಾಯದ ಮೇರೆಗೆ ಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದರೂ ಸಂಧಾನದ ಒಪ್ಪಂದದಂತೆ ಹಣ ಪಾವತಿ ಮಾಡಲಿಲ್ಲ. ಇದರಿಂದಾಗಿ ಜಮೀನು ಸಂಘದಲ್ಲೇ ಉಳಿದಿದೆ. ಸದ್ಯ ಪ್ರಕರಣ ಕೋರ್ಟ್​ನಲ್ಲಿದ್ದು, ಎಲ್ಲರೂ ಒಗ್ಗಟ್ಟಾಗಿ ಉಳಿಸಿಕೊಳ್ಳಬೇಕು ಎಂದಿರುವುದು ಸ್ವತ್ತು ಸಂಘದ ಆಸ್ತಿಯೇ ಆಗಿದೆ ಎಂಬುದು ಹಾಲಿ ಸದಸ್ಯರು ವಾದ ಮಂಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − five =
Remember me
