ಬೆಂಗಳೂರು: ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗರ ನಾಯಕತ್ವ ಡಿ.ಕೆ. ಶಿವಕುಮಾರ್ ಅಥವಾ ಇನ್ನಾರಿಗೋ ಮೀಸಲಲ್ಲ, ನಾನು ಇದ್ದೇನೆ ಎಂಬುದನ್ನು ಆರ್.ಆರ್. ನಗರ ಗೆಲುವಿನ ಮೂಲಕ ಸಾಬೀತು ಮಾಡಿದ್ದೇನೆ ಎಂದು ಕ್ಷೇತ್ರದ ಚುನಾವಣಾ ಉಸ್ತುವಾರಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಆರ್.ಆರ್. ನಗರ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿದ್ದ ಅಶೋಕ್ ತಮ್ಮ ಜವಾಬ್ದಾರಿ ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರಚಾರ, ಗೆಲುವಿನ ಕಾರಣಗಳ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡರು.
# ಆರ್.ಆರ್. ನಗರ ಗೆಲುವಿಗೆ ಕಾರಣಗಳೇನು?
ನಾನು ಮೂರು ಬಾರಿ ಗೆದ್ದಿದ್ದ ಉತ್ತರಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರದೇಶಗಳೇ ಇಂದಿನ ಆರ್.ಆರ್. ನಗರ ಕ್ಷೇತ್ರ. ಇಲ್ಲಿ ನನಗೆ ಪ್ರತಿಯೊಬ್ಬ ಕಾರ್ಯಕರ್ತನೂ ಗೊತ್ತು. ಪ್ರತಿಯೊಂದು ರಸ್ತೆಯೂ ಗೊತ್ತು. ಆದ್ದರಿಂದ ಇಲ್ಲಿಗೆ ನನ್ನನ್ನೇ ಉಸ್ತುವಾರಿಯಾಗಿ ಮಾಡಲಾಗಿತ್ತು. ಮತದಾರರನ್ನು ಸೆಳೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ.
# ನಿಮ್ಮ ಕಾರ್ಯತಂತ್ರ ಏನಿತ್ತು?
ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಭಾವ ಇರುವುದರಿಂದ ಡಿ.ಕೆ. ಶಿವಕುಮಾರ್ ಬರುತ್ತಾರೆ ಎಂಬುದು ಗೊತ್ತಿತ್ತು. ಅವರು ಬರುವುದಕ್ಕೆ ಮೊದಲೇ ಕಾಂಗ್ರೆಸ್​ನ ಸ್ಥಳೀಯ ನಾಯಕರನ್ನು ಆ ಪಕ್ಷದಿಂದ ಖಾಲಿ ಮಾಡಿಸಿದ್ದೆವು. ಜೆಡಿಎಸ್​ನ ರಾಮಚಂದ್ರ ಅವರನ್ನು ಬಿಜೆಪಿಯತ್ತ ಸೆಳೆದೆವು. ಕಾಂಗ್ರೆಸ್​ನ ಮುಖಂಡರು ಬಂದಾಗ ಅವರಿಗೆ ಪ್ರಚಾರಕ್ಕೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಇಲ್ಲದಂತೆ ನೋಡಿಕೊಂಡೆವು. ಅದೇ ನಮ್ಮ ಕೆಲಸವನ್ನು ಮುಕ್ಕಾಲು ಪಾಲು ಮುಗಿಸಿತ್ತು. ಮನೆ ಮನೆ ಪ್ರಚಾರದಿಂದ ಹಿಡಿದು ಎಲ್ಲದರಲ್ಲೂ ನಾವು ಮುಂದೆ ಇದ್ದೆವು.
# ಆದರೂ ಕಾಂಗ್ರೆಸ್ ಪ್ರಚಾರ ಜೋರಾಗಿತ್ತು?
ಅವರು ಕುಣಿಗಲ್ ಮತ್ತು ಕನಕಪುರದಿಂದ ಕಾರ್ಯಕರ್ತ ರನ್ನು ಕರೆತಂದು ಪ್ರಚಾರ ಮಾಡಿದರು. ಆದರೆ, ನಾವು ಎಲ್ಲ ಕಡೆ ಅವರ ವೇಗಕ್ಕೆ ಕಡಿವಾಣ ಹಾಕಿದೆವು. ಕೊನೆಯ ನಾಲ್ಕು ದಿನ ಕಾಂಗ್ರೆಸ್ ಪ್ರಚಾರ ಜೋರಾಗಿತ್ತು. ಆದರೆ, ಮೊದಲೇ ವೇಗ ಇಲ್ಲದಿದ್ದರಿಂದ ಉಪಯೋಗವಾಗಲಿಲ್ಲ.
# ಏನೇನು ಭರವಸೆ ಕೊಟ್ಟಿದ್ದೀರಿ? ಅವುಗಳನ್ನು ಈಡೇರಿಸುವುದು ಯಾವಾಗ?
ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರು, ರಸ್ತೆಗಳು, ಮೇಲ್ಸೇತುವೆ, ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಹೀಗೆ ಅನೇಕ ಭರವಸೆಗಳನ್ನು ನೀಡಿದ್ದೇವೆ. ಅವುಗಳನ್ನು ಒಂದೊಂದಾಗಿ ಈಡೇರಿಸುತ್ತೇವೆ.
# ಮುನಿರತ್ನ ಸಚಿವರಾಗುವರೇ?
ಮುನಿರತ್ನ, ಬೈರತಿ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ ಅವರನ್ನು ಕರೆ ತಂದಿದ್ದು ನಾನು. ಅವರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಅದೇ ರೀತಿಯಲ್ಲಿ ಮುನಿರತ್ನ ಸಹ ಸಚಿವರಾಗುತ್ತಾರೆ. ಅದರಲ್ಲಿ ಅನುಮಾನವೇ ಬೇಡ.
# ಮುನಿರತ್ನ ಬಗ್ಗೆ ಮೂಲ ಬಿಜೆಪಿಗರ ವಿರೋಧ ಇತ್ತಲ್ಲವೇ?
ಹೌದು.. ಕೊನೆಯ ತನಕ ಅಸಮಾಧಾನ ಇದ್ದೇ ಇತ್ತು. ನಮ್ಮ ಮತಗಳೇ ನಮಗೆ ಕೈ ಕೊಡುತ್ತವೆ ಎಂಬ ಭಯವೂ ಇತ್ತು. ಅದಕ್ಕೆ ತಕ್ಕಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೆವು. ಆದ್ದರಿಂದಲೇ ಮುನಿರತ್ನ ಅಷ್ಟೊಂದು ಲೀಡ್ ಪಡೆಯಲು ಸಾಧ್ಯವಾಯಿತು. ಒಕ್ಕಲಿಗರು, ಅಲ್ಪಸಂಖ್ಯಾತರು, ಹಿಂದುಳಿದವರು ಕೈ ಹಿಡಿದರು.
# ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ನಾಯಕತ್ವ ಯಾರದ್ದು?
ಡಿಕೆಶಿ ಪಕ್ಷದ ಅಧ್ಯಕ್ಷರಾದ ನಂತರ ನಾನೇ ಒಕ್ಕಲಿಗರ ನಾಯಕ ಅಂದುಕೊಂಡಿದ್ದರು. ಆದರೆ ಈಗ ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿಯೇ ಗೆದ್ದು ಅವರಿಗೆ ನಾನು ಇದ್ದೇನೆ ಎಂಬುದನ್ನು ತೋರಿಸಿದ್ದೇನೆ. ಚುನಾವಣೆ ಗೆದ್ದಿದ್ದು ನನಗೆ ಪ್ಲಸ್ ಪಾಯಿಂಟ್ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + nine =
Remember me
