ಬೆಂಗಳೂರು:ಲಾಕ್​ಡೌನ್ ಸಡಿಲಿಕೆ ಬಳಿಕ ಕರೊನಾ ಸೋಂಕು ವ್ಯಾಪಕವಾಗುತ್ತಿದ್ದು, ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕರೊನಾ ಚಿಕಿತ್ಸೆಗಾಗಿ ನಿಗದಿಗೊಳಿಸಲಾಗಿದ್ದ 22 ಸಾವಿರ ಹಾಸಿಗೆಗಳಲ್ಲಿ ಸರಾಸರಿ ಶೇ.14 ಹಾಸಿಗೆಗಳು ಭರ್ತಿಯಾಗಿವೆ. ಇದೇ ರೀತಿ ಮುಂದುವರಿದರೆ ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಕಾಡಲಿದೆ. ರಾಜ್ಯದಲ್ಲಿ ಮೇ 8 ರಂದು 14 ಸಾವಿರ ಹಾಸಿಗೆಗಳನ್ನು ಕರೊನಾ ಚಿಕಿತ್ಸೆಗೆ ಗುರುತಿಸಲಾಗಿತ್ತು. ಆದರೆ ಅದರಲ್ಲಿ ಶೇ.2 ಬೆಡ್​ಗಳು ಮಾತ್ರ ಭರ್ತಿಯಾಗಿದ್ದವು. ಕಳೆದ 4 ವಾರಗಳ ಹಿಂದೆ (ಮೇ 23) 1959 ಇದ್ದ ಸೋಂಕಿತರ ಸಂಖ್ಯೆ ಈಗ 6,824ಕ್ಕೆ ಏರಿಕೆಯಾಗಿದೆ. ಪ್ರಸ್ತುತ 3,092 ಸಕ್ರಿಯ ಪ್ರಕರಣಗಳಿವೆ. ಆದರೆ, ತಿಂಗಳಿಂದೀಚೆಗೆ ಪಾಸಿಟಿವ್ ಪ್ರಕರಣಗಳ ಏರಿಕೆ ದರ ದಿನಕ್ಕೆ ಸರಾಸರಿ 173 ರಷ್ಟಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಅಧಿಕವಾಗಿದ್ದು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೇ.40, ಕಲಬುರಗಿಯಲ್ಲಿ ಶೇ.27, ಬೀದರ್​ನಲ್ಲಿ ಶೇ.25.4 ಚಿಕ್ಕಬಳ್ಳಾಪುರ ಶೇ.24.3, ಹಾಸನ ಶೇ.18 ಹಾಸಿಗೆಗಳು ಭರ್ತಿಯಾಗಿವೆ. ಬೆಂಗ ಳೂರು ನಗರದಲ್ಲಿ ಶೇ.7 ಭರ್ತಿಯಾಗಿವೆ. ರಾಜ್ಯದ 30 ಜಿಲ್ಲೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ 84,776 ಹಾಸಿಗೆಗಳಿದ್ದು, 21,728 ಕರೊನಾ ಚಿಕಿತ್ಸೆಗೆ ನಿಗದಿಪಡಿಸಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ 19,639 ಹಾಸಿಗೆಗಳಿದ್ದು, 3,470 ಕರೊನಾ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಉಳಿದ ಶೇ.86 ಹಾಸಿಗೆಗಳನ್ನು ಅನ್ಯ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದರ ಜತೆಗೆ 6,695 ಆಮ್ಲಜನಕ ಸೌಲಭ್ಯಗಳು, 2,105 ಐಸಿಯು ಹಾಸಿಗೆಗಳು ಮತ್ತು 1,000 ವೆಂಟಿಲೇಟರ್​ಗಳು ಲಭ್ಯವಿವೆ. ಆದರೆ ವೈದ್ಯರು ಹಾಗೂ ಅಧಿಕಾರಿಗಳು ಸೋಂಕಿತರ ಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಿನ ಹಾಸಿಗೆ ಸೌಲಭ್ಯ ಒದಗಿಸುವುದು ಅಗತ್ಯವಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಅತಿ ಹೆಚ್ಚು ಜನಸಂದಣಿ ನಗರವಾದ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿದ್ದು, ಹೋಟೆಲ್, ಕಲ್ಯಾಣ ಮಂಟಪ, ಹಾಸ್ಟೆಲ್​ಗಳನ್ನು ಕೋವಿಡ್-19 ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.
ಮನೆಯಲ್ಲೇ ಚಿಕಿತ್ಸೆ:ರಾಜ್ಯದಲ್ಲಿ ಸೋಂಕಿತರ ಪೈಕಿ ಶೇ.95 ಪ್ರಕರಣಗಳು ಕೋವಿಡ್-19 ರೋಗ ಲಕ್ಷಣಗಳಿಲ್ಲದವರಾಗಿದ್ದಾರೆ. ಇಂತಹ ವ್ಯಕ್ತಿಗಳು ಒಂದು ವಾರದಲ್ಲಿ ಗುಣಮುಖರಾಗುವ ಸಾಧ್ಯತೆಗಳಿದ್ದು, ಅವರನ್ನು ಮನೆಯಲ್ಲಿರಿಸಿ ಚಿಕಿತ್ಸೆ ನೀಡುವುದು ಸೂಕ್ತವಾಗಿದೆ. ಈಗಾಗಲೇ ಸೋಂಕು ಹೆಚ್ಚಾಗಿರುವ ಅಮೆರಿಕಾ, ನಮ್ಮ ದೇಶದ ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಕೋವಿಡ್-19 ಲಕ್ಷಣವಿರದ ಹಾಗೂ ಹೆಚ್ಚು ತೊಂದರೆಯಿಲ್ಲದ ಸೋಂಕಿತರನ್ನು ಮನೆಯಲ್ಲಿರಿಸಿ ಚಿಕಿತ್ಸೆ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದ ಸೋಂಕು ಹೆಚ್ಚಿರುವ ನಗರ, ಪಟ್ಟಣಗಳಲ್ಲಿ ಚಿಕಿತ್ಸೆ ನೀಡಬಹುದು ಎಂದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಇದನ್ನೂ ಓದಿ:ಕರೊನಾ ಎಂಬುದು ವೈರಸ್ಸೇ ಅಲ್ಲ, ಅದೊಂದು ಬ್ಯಾಕ್ಟೀರಿಯಾ: ಏನು ಹೇಳುತ್ತೆ ಫ್ಯಾಕ್ಟ್‌ಚೆಕ್?
ತಕ್ಷಣ ಚಿಕಿತ್ಸೆ ಪಡೆದರೆ ಸಾವು ಕಡಿಮೆ:ನೆಗಡಿ, ಕೆಮ್ಮು, ಶೀತಜ್ವರ, ಉಸಿರಾಟದ ಸಮಸ್ಯೆ, ಎದೆನೋವು ಕಾಣಿಸಿಕೊಂಡಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗ ಲಕ್ಷಣಗಳನ್ನು ಹೊಂದಿರುವ ಅನೇಕ ಪ್ರಕರಣಗಳು ಕೊನೆಯ ಹಂತದಲ್ಲಿ ಬಂದು ಚಿಕಿತ್ಸೆಗೆ ದಾಖಲಾಗುತ್ತಿದ್ದು, ಇದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ ಒಂದು ತಿಂಗಳಿಂದ 37 ಸಾವಿನ ಪ್ರಕರಣಗಳು ದಾಖಲಾಗಿದ್ದು, ಯಾವುದೇ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.
ಕಳಪೆ ಪಿಪಿಇ ಕಿಟ್ ಬಂದಿಲ್ಲ:ಆರಂಭದಲ್ಲಿ ಪೂರೈಕೆಯಾದ ಪಿಪಿಐ ಕಿಟ್​ಗಳು ಅಷ್ಟು ಸರಿಯಾಗಿರಲಿಲ್ಲ. ಈಗ ಸರಬರಾಜಾಗುತ್ತಿರುವ ಕಿಟ್​ಗಳು ಗುಣಮಟ್ಟದ್ದಾಗಿವೆ. ಅಂತಾರಾಷ್ಟ್ರೀಯ ಕ್ವಾಲಿಟಿ ಕಿಟ್​ಗಳನ್ನು ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರುವ, ಎರಡು ಲಕ್ಷ ಕಿಟ್​ಗಳನ್ನು ತರಿಸಿಕೊಳ್ಳಲಾಗಿದೆ. ನಂತರ ರಾಜ್ಯದಲ್ಲಿನ 15 ಸಂಸ್ಥೆಗಳಿಂದಲೂ ಗುಣಮಟ್ಟದ ಕಿಟ್​ಗಳನ್ನು ಸರಬರಾಜು ಆಗುತ್ತಿದೆ. ಕಿಟ್​ಗಳು ಕಳಪೆಯಾಗಿದ್ದರೆ ಕೋವಿಡ್ ಆಸ್ಪತ್ರೆಗಳಲ್ಲಿ ಬಹಳ ಜನಕ್ಕೆ ಸೋಂಕು ತಗುಲುತ್ತಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಕಳಪೆ ಗುಣಮಟ್ಟದ ಕಿಟ್ ಸರಬರಾಜು ಆಗಿರುವ ದೂರುಗಳು ಬಂದಿಲ್ಲ ಎಂದರು. ಡಬ್ಲ್ಯುಎಚ್​ಒ ಮಾನದಂಡದಂತೆ ತಪಾಸಣೆ ನಡೆಯುತ್ತಿದೆ. ಹೊರ ರಾಜ್ಯ, ದೇಶದಿಂದ ಬಂದವರಿಗೆ ಆದ್ಯತೆ ನೀಡಲಾಗಿದೆ. ಯಾರಲ್ಲಿ ಲಕ್ಷಣಗಳು ಇವೆಯೋ ಅವರಿಗೆ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಹೀಗಾಗಿ ತಪಾಸಣೆ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಸಾವಿನ ಕುರಿತಂತೆ ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಲಾಗಿದೆ. ಆಡಿಟ್ ನಡೆಸಿ ಸಾವಿಗೆ ಕಾರಣ ಪತ್ತೆ ಹಚ್ಚಲಾಗುತ್ತಿದೆ. ವೈಜ್ಞಾನಿಕವಾಗಿ ಪರಿಶೀಲನೆ ನಂತರವೇ ಕರೊನಾದಿಂದಲೇ ಸಾವು ಸಂಭವಿಸಿದೆಯೇ ಅಥವಾ ಇಲ್ಲವೇ ಎನ್ನುವುದು ಪರಿಶೀಲಿಸಿ ಘೊಷಣೆ ಮಾಡಲಾಗುತ್ತಿದೆ ಎಂದರು. ಕರೊನಾ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಈ ಹಿಂದೆ ಲಾಕ್​ಡೌನ್ ಮಾಡಲಾಗಿತ್ತು. ಈಗ ಎಲ್ಲ ಸಿದ್ಧತೆ ಮಾಡಲಾಗಿದ್ದು, ಸೋಂಕು ತಡೆಗೆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
