ಬೆಂಗಳೂರು:ನನಗೆ ಒಮ್ಮೆ ಐದು ವರ್ಷ ಅಧಿಕಾರ ಕೊಡಿ. ಆಗ ಉತ್ತಮ ಆಡಳಿತ ನೀಡದಿದ್ದರೆ, ಹೇಳಿದಂತೆ ನಡೆದುಕೊಳ್ಳದಿದ್ದರೆ ನಮ್ಮ ಪಕ್ಷವನ್ನೇ ವಿಸರ್ಜನೆಗೊಳಿಸುವೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜೆಡಿಎಸ್‍ ವತಿಯಿಂದ ಇಂದು ಹಮ್ಮಿಕೊಂಡಿದ್ದ ʼಜನತಾ ಮಿತ್ರʼ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐದು ವರ್ಷ ನನಗೆ ಅಧಿಕಾರ ಕೊಡಿ. ಬಡವರ, ಹಿಂದುಳಿದವರ ಶಿಕ್ಷಣ-ಆರೋಗ್ಯ ಸೌಲಭ್ಯ ಕಲ್ಪಿಸಿ ಕೊಡದಿದ್ದರೆ, ಉತ್ತಮ ಆಡಳಿತ ನೀಡದಿದ್ದರೆ, ನಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ನನ್ನ ಪಕ್ಷವನ್ನೇ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ.
ವಿಶ್ವಮಟ್ಟದಲ್ಲಿ ಖ್ಯಾತಿಯಾಗಿದ್ದ ಬೆಂಗಳೂರನ್ನು ರಾಷ್ಟ್ರೀಯ ಪಕ್ಷಗಳು ಸಂಪೂರ್ಣವಾಗಿ ಹಾಳು‌ ಮಾಡಿವೆ. ಅದನ್ನು ಸರಿ ಮಾಡಲು ನಮಗೆ ಅಧಿಕಾರ ನೀಡಿ ಎಂದು ಕುಮಾರಸ್ವಾಮಿ ಜನತೆಯನ್ನು ಕೈ ಮುಗಿದು ಕೋರಿದರು.
ಜೆಡಿಎಸ್‍ ಪಕ್ಷ ಅಧಿಕಾರಕ್ಕೆ ಬರಬೇಕು. ಬಡವರಿಗೆ ನೆರವಾಗಬೇಕೆಂಬ ಹಂಬಲದಿಂದ ದೇವೇಗೌಡರು ಆರೋಗ್ಯ ಸಮಸ್ಯೆ ಇದ್ದರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರ ಆಶಯ ದೊಡ್ಡದು, ಅವರ ಉದ್ದೇಶ ದೊಡ್ಡದು. ಜನರಿಗೆ ಏನಾದರೂ ಸೇವೆ ಮಾಡಲೇಬೇಕೆಂಬ ಹಂಬಲ ಅವರದ್ದು. ಹೀಗಾಗಿ ನೀವು ಬೆಂಬಲ ನೀಡಿ, ನಿಮ್ಮನ್ನು ನಂಬಿದ್ದೇವೆ ನಾವು ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಕನ್ನಡ-ಕನ್ನಡಿಗರಿಗೆ ಸ್ವಾಭಿಮಾನ‌ ತಂದುಕೊಟ್ಟವರು ದೇವೇಗೌಡರು. ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಈ ಸಮಾವೇಶಕ್ಕೆ ಬರುವ ಮೂಲಕ ಹೋರಾಟಕ್ಕೆ ಸ್ಫೂರ್ತಿ ತಂದುಕೊಟ್ಟಿದ್ದಾರೆ. ಬೆಂಗಳೂರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ತರಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ಅದಕ್ಕಾಗಿ ಜನತಾ ಜಲಧಾರೆ, ಜನತಾಮಿತ್ರ ಕಾರ್ಯಕ್ರಮ ರೂಪಿಸಿದ್ದೆವು. ಜನತಾಮಿತ್ರ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಒಂದು‌ ಲಕ್ಷ ಜನ ನಗರವಾಸಿಗಳು ಪತ್ರ ಹಾಗೂ ಆನ್​ಲೈನ್​ ಮೂಲಕ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಅಭಿಪ್ರಾಯ ಕಳುಹಿಸಿದ್ದಾರೆ. ತಮಗೆ ಬೇಕಿರುವ ಸರ್ಕಾರ ಮತ್ತು ಕಾರ್ಯಕ್ರಮಗಳ ಬಗ್ಗೆ ನಮಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ದೇವೆಗೌಡರು ಅಧಿಕಾರದಲ್ಲಿದ್ದಾಗ ಕೆರೆ ಕಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದರು. ಆದರೆ, ಇಂದು ಅಭಿವೃದ್ಧಿ ನೆಪದಲ್ಲಿ ಕೆರೆಕಟ್ಟೆಗಳನ್ನು ಮುಚ್ಚಿ ಬಡಾವಣೆಗಳನ್ನು ಮಾಡಿದ್ದಾರೆ. ಹೀಗಾಗಿ ಅನೇಕ ಬಡಾವಣೆಗಳು ಜಲಾವೃತವಾಗಿ ಜನ ಪರಿತಪಿಸುವಂತಾಗಿದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳ ಕೈಯಲ್ಲಿ ಬಿಬಿಎಂಪಿ ಇತ್ತು. ಅಭಿವೃದ್ಧಿಗಿಂತ ತೆರಿಗೆ ಹಣ ಲೂಟಿ ಮಾಡಿದ್ದರ ಬಗ್ಗೆ ಜನ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ನಾನು ಹದಿನಾಲ್ಕು ತಿಂಗಳು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಲು ಅವಕಾಶ ಸಿಗಲಿಲ್ಲ. ಭ್ರಷ್ಟಾಚಾರರಹಿತ ಸರ್ಕಾರ ಕೊಡುವ ಹೋರಾಟ ನಡೆಸಿದ್ದೇವೆ. ನಾವು ಅಧಿಕಾರದಲ್ಲಿ ಇದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದೇವೆ. ದೇವೇಗೌಡರು ಸಿಎಂ ಆಗಿದ್ದಾಗ ಸಿರ್ಸಿ ಫ್ಲೈ ಓವರ್ ಕೊಟ್ಟಿದ್ದಾರೆ. ಕಾವೇರಿ ನದಿ ನೀರು ಪಡೆಯಲು ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಲಾಗಿತ್ತು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಮಣಿದು ಒಪ್ಪಲಿಲ್ಲ. ಆದರೆ ದೇವೇಗೌಡರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ ಬೆಂಗಳೂರಿಗೆ ಕುಡಿಯುವ ನೀರು ಕೊಟ್ಟರು. 9 ಟಿಂಎಸಿ ನೀರು ನಗರಕ್ಕೆ ದೊರಕಿಸಿಕೊಟ್ಟರು. 90 ಎಕರೆ ರಕ್ಷಣಾ ಇಲಾಖೆಯ ಜಾಗವನ್ನು ಬೆಂಗಳೂರು ಅಭಿವೃದ್ಧಿಗೆ ಕೊಟ್ಟರು. ಅವರು ಪ್ರಧಾನಿಯಾಗಿದ್ದಾಗ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ರೆವಿನ್ಯೂ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟಿದ್ದು ಕೂಡ ದೇವೇಗೌಡರೇ ಎಂದು ಕುಮಾರಸ್ವಾಮಿ ಹೇಳಿದರು.
ಕೆಂಪೇಗೌಡರು‌ ಕಟ್ಟಿದ ನಗರಕ್ಕೆ ಹೆಸರು ತಂದಿದ್ದು ಯಾರು ಅಂತ ಜನರು ಯೋಚಿಸಬೇಕಿದೆ. ನಾಗರಿಕರ ಸೌಕರ್ಯಕ್ಕಾಗಿ ನಮ್ಮ ಮೆಟ್ರೋ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದು ನಾನು ಸಿಎಂ ಆಗಿದ್ದ ಕಾಲದಲ್ಲಿ. ಕೇಂದ್ರದ ಯೋಜನೆಯಡಿ 25 ಸಾವಿರ ಕೋಟಿ ರೂ. ಬೆಂಗಳೂರು ಹಾಗೂ ಮೈಸೂರು ನಗರದ ಅಭಿವೃದ್ಧಿಗೆ ಕೊಡಲಾಗಿತ್ತು. ಹೊರವರ್ತುಲ ರಿಂಗ್ ರಸ್ತೆಗೆ ಒಪ್ಪಿಗೆ ನೀಡಲಾಗಿತ್ತು ಎಂದು ತಮ್ಮ ಮತ್ತು ದೇವೇಗೌಡರ ಕಾಲದ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ವಿವರಿಸಿದರು.
ಬೆಂಗಳೂರಿನ ರಾಜಕಾಲುವೆ ಒತ್ತುವರಿಗೆ ಮೂಲಕಾರಣ ಈ ಎರಡೂ ರಾಷ್ಟ್ರೀಯ ಪಕ್ಷಗಳು. ಕೆಲ ದಿನಗಳ ಹಿಂದೆ ಬುಲ್ಡೋಜರ್ ಬಿಟ್ಟು ಬಡವರ ಮನೆ ಹಾಗೂ ಅಲ್ಲೊಂದು ಇಲ್ಲೊಂದು ಮನೆ-ಕಟ್ಟಡ ಒಡೆದರು. ಶ್ರೀಮಂತರಿಗೆ ಮಾತ್ರ ನೋಟಿಸ್ ಕೊಟ್ಟು ಸುಮ್ಮನಾದರು. ಇದು ಬಿಜೆಪಿ ಸರಕಾರದ ವರಸೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಯೋಜನೆ ಮಾಡದೆ, ರಸ್ತೆ ಮಾಡದೆ ಹಣ ದೋಚುತ್ತಿದ್ದಾರೆ. ಒಂದು ಕಡೆ ನಿರುದ್ಯೋಗ, ಜಾತಿ ವೈಮನಸ್ಸು ತರುತ್ತಿದ್ದಾರೆ. ದಾಸರಹಳ್ಳಿ ಶಾಸಕ ಮಂಜುನಾಥ್ ಮಳೆ ಸಂದರ್ಭ ವಾರ್​​ರೂಮ್​ನಲ್ಲಿ ಇದ್ದು ಜನರ ಸಮಸ್ಯೆ ಆಲಿಸಿದರು. ಬೇರೆ ಯಾವ ಪಕ್ಷದ ಶಾಸಕರು ಈ ಕೆಲಸ ಮಾಡಿದ್ದರು ಎಂದು ಎಚ್​ಡಿಕೆ ಪ್ರಶ್ನಿಸಿದರು.
ಬಡವರ ವರ್ಗ ಮತ್ತು ಶ್ರೀಮಂತರ ವರ್ಗ ಇದೆ ಎಂದು ಭಾರತ್ ಜೋಡೋ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. 45 ವರ್ಷ ಆಳ್ವಿಕೆ ಮಾಡಿದವರು ಎಲ್ಲರನ್ನೂ ಒಂದೇ ರೀತಿ ನೋಡಿದ್ದಾರಾ? ಈಗ ಎರಡು ವರ್ಗಗಳು ಅವರಿಗೆ ನೆನಪಿಗೆ ಬಂದಿವೆ ಎಂದು ಮಾಜಿ ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.
ಎರಡು ರಾಷ್ಟ್ರೀಯ ಪಕ್ಷಗಳವರು ಭ್ರಷ್ಟಾಚಾರದ ಬಗ್ಗೆ ಈಗ ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿಯ 40% ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇಂಧನ ಇಲಾಖೆ ಭ್ರಷ್ಟಾಚಾರ ಬಗ್ಗೆ ಈಗ ತನಿಖೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಈ ಹಿಂದೆಯೇ ನಾನು ಸದನದಲ್ಲಿ ಮಾತನಾಡಿದ್ದೆ. ಬೆಂಗಳೂರನ್ನು ಲೂಟಿ ಮಾಡುವ ಪಕ್ಷಕ್ಕೆ ಇನ್ನೂ ಎಷ್ಟು ದಿನ ಆಶೀರ್ವಾದ ಕೊಡುತ್ತೀರಿ? ಎಂದು ಪ್ರಶ್ನೆ ಮಾಡಿದ ಎಚ್​ಡಿಕೆ; ತೆಲಂಗಾಣದಲ್ಲಿ ಕೃಷಿ ಪಂಪುಸೆಟ್ಟುಗಳಿಗೆ ದಿನದ 24 ಗಂಟೆ ಗುಣಮಟ್ಟದ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಇಲ್ಲಿ 7 ಗಂಟೆ ಕೊಡುತ್ತೇವೆ ಎಂದು ಹೇಳುತ್ತ 3 ಗಂಟೆ ಮಾತ್ರ ಕೊಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಕೋಮು ಗಲಭೆ ಬೇಡ.‌ ಅಪಪ್ರಚಾರ ಮುಖಾಂತರ ನಮ್ಮ ನಡುವೆ ಮನಸ್ತಾಪ ತರಲಾಗುತ್ತಿದೆ. ಇಂಥವನ್ನು ಧಿಕ್ಕರಿಸದಿದ್ದರೆ ಕೆಟ್ಟ ದಿನ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸ್ವತಂತ್ರವಾಗಿ ಅಧಿಕಾರ ಮಾಡಲು ಅವಕಾಶ ಮಾಡಿಕೊಟ್ಟರೆ, ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ ನೀಡಲು ಐದು ವರ್ಷಗಳಲ್ಲಿ ಸಂಕಲ್ಪ ಮಾಡುತ್ತೇನೆ. ಒಂದು ವೇಳೆ ಐದು ವರ್ಷದಲ್ಲಿ ಕಾರ್ಯಕ್ರಮ ಮಾಡದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಮತ್ತೆ ಘೋಷಣೆ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ದಾಸರಹಳ್ಳಿ ಶಾಸಕ ಮಂಜುನಾಥ್‌ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಭೋಜೇಗೌಡ,‌ ಕೆ.ಎನ್.ತಿಪ್ಪೇಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಆರ್.‌ಪ್ರಕಾಶ್‌ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen + fourteen =
Remember me
