ಓರ್ವ ದಂಪತಿಗಳ ಹೆಸರು ರಾಜಾರಾಮ ಮತ್ತು ರಾಧಾಮಣಿ. ಇಬ್ಬರೂ ಉನ್ನತ ಹುದ್ದೆಯಲ್ಲಿದ್ದ ಕಾರಣಕ್ಕೆ ಕೈ ತುಂಬಾ ಸಂಬಳ, ಸ್ವಂತ ಮನೆ, ಕಾರು ಎಲ್ಲಾ ಇತ್ತು. ಇರುವ ಒಬ್ಬನೇ ಮಗ ಶ್ಯಾಮನನ್ನು ಪ್ರೀತಿಯಿಂದ ಸಾಕಿ, ಬೆಳೆಸಿದರು. ಬಾಲ್ಯದಿಂದಲೇ ಅವನನ್ನು ಹೈ ಫೈ ರೆಸಿಡೆನ್ಷಿಯಲ್ ಸ್ಕೂಲಿಗೆ ಹಾಕಿದರು. ಮುಂದೆ ಉನ್ನತ ವಿದ್ಯಾಭ್ಯಾಸ ಪಡೆಯಲು ಪರ ಊರಿನಲ್ಲಿ ಆತ ಹಾಸ್ಟೆಲ್​ಗೆ ಸೇರಬೇಕಾಯಿತು. ಪ್ರತಿಭಾವಂತನಾಗಿದ್ದ ಶ್ಯಾಮ ಮುಂದೆ ಮುಂಬೈನ ದೊಡ್ಡ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಆಗಲೂ ಹೆತ್ತವರಿಂದ ದೂರವಾಗಿ ರೂಮ್ ಮಾಡಿಕೊಂಡು ವಾಸವಾಗಿದ್ದ. ಹೀಗೆ ಸುಮಾರು 25 ವರ್ಷಗಳ ಕಾಲ ಮನೆ ಬಿಟ್ಟು ಇರಬೇಕಾಗಿದ್ದ ಇವನಿಗೆ, ಹಬ್ಬ -ಹುಣ್ಣಿಮೆ, ನಮ್ಮ ಸಂಸ್ಕೃತಿ- ಸಂಸ್ಕಾರ- ಸಂಪ್ರದಾಯ, ಆಚಾರ -ವಿಚಾರಗಳ ಬಗ್ಗೆ ಏನೂ ಪರಿಜ್ಞಾನವಿಲ್ಲದಾಗಿತ್ತು. ಆಗೊಮ್ಮೆ ಈಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಶ್ಯಾಮನಿಗೆ ಹೆತ್ತವರು ನಮ್ಮ ರೀತಿ ರಿವಾಜುಗಳ ಬಗ್ಗೆಯೂ ತಿಳಿಸಿಕೊಡಲಿಲ್ಲ.
ಒಮ್ಮೆ ತನ್ನ ಅಪ್ಪನ ಹುಟ್ಟಿದ ದಿನದಂದು ಶ್ಯಾಮ ಮನೆಗೆ ಬಂದಿದ್ದ. ನೂರಾರು ಬಂಧು ಬಳಗದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಕಾರಣ ಅಪ್ಪನಿಗೆ ಕೈತುಂಬಾ ಕೆಲಸವಿತ್ತು. ಆದುದರಿಂದ ರಾಜಾರಾಮರಾಯರು ಮಗನನ್ನು ಕರೆದು ಹತ್ತಿರದಲ್ಲಿರುವ ರಾಯರ ಮಠಕ್ಕೆ ಹೋಗಿ ನನ್ನ ಹೆಸರಿನಲ್ಲಿ 501 ರೂ.ಗಳ ಒಂದು ಸೇವೆ ಮಾಡಿಸಿಕೊಂಡು ಬಾ ಎಂದು ಹೇಳಿ ಕಳುಹಿಸಿದರು. ರಾಯರ ಮಠಕ್ಕೆ ಮೊದಲ ಬಾರಿಗೆ ಹೋಗಿದ್ದ ಶ್ಯಾಮ ಮಠದಲ್ಲಿ ಹಾಕಿದ್ದ ವಿವಿಧ ಸೇವಾ ಶುಲ್ಕಗಳ ಪಟ್ಟಿಯನ್ನು ಪರಿಶೀಲಿಸಿದ. ಅದರಲ್ಲಿ 1001 ರೂ.ಗಳಿಗೆ ರಥೋತ್ಸವ, 5001 ರೂ.ಗಳಿಗೆ ಕನಕಾಭಿಷೇಕ, ಮುಂತಾಗಿ ನಮೂದಿಸಲಾಗಿದ್ದು, ಕೆಳಗೆ 501 ರೂ.ಗಳಿಗೆ ‘ಚಟಕಶ್ರಾದ್ಧ’ ಎಂದು ನಮೂದಿಸಿತ್ತು. ಚಟಕಶ್ರಾದ್ಧವೇನೆಂದು ತಿಳಿಯದ ಶ್ಯಾಮ ಅಪ್ಪ ಕೊಟ್ಟ 501 ರೂ.ಗಳು ಈ ಸೇವೆಗೆ ಸರಿಹೋಗಿದೆ ಎಂದು ನಿರ್ಧರಿಸಿ ಕೌಂಟರಿಗೆ ಹೋಗಿ ಚಟಕಶ್ರಾದ್ಧದ ರಶೀತಿಯನ್ನು ಪಡೆದ. ಅಂತೆಯೇ ಸ್ವಲ್ಪ ಹೊತ್ತಿನಲ್ಲಿ ಮಠದ ಆಚಾರ್ ಅವರು ಇವನನ್ನು ಕರೆದು ಅವನ ತಂದೆಯ ಹೆಸರು ಗೋತ್ರಗಳನ್ನು ಕೇಳಿಕೊಂಡು ಅವರ ಹೆಸರಿನಲ್ಲಿ ಚಟಕಶ್ರಾದ್ಧವನ್ನು ನೆರವೇರಿಸಿದರು.
ಮಂತ್ರಗಳ ಅರ್ಥ ಗೊತ್ತಾಗದಿದ್ದರೂ ಅದನ್ನು ಕೇಳಿ ಸಂತೋಷ ಪಟ್ಟ ಶ್ಯಾಮ ವಡೆ, ಪಾಯಸಗಳೊಂದಿಗೆ ಒಳ್ಳೆಯ ಊಟವನ್ನೂ ಮಾಡಿದ. ಹೊರಡುವ ಮುನ್ನ ಆಚಾರ್ಯರೇ, ಇಂದು ನನ್ನ ತಂದೆಯ ಜನ್ಮದಿನ. ಅದಕ್ಕೆ 501 ರೂಗಳನ್ನು ನನ್ನ ಕೈಯಲ್ಲಿ ಕೊಟ್ಟು ನನ್ನ ಹೆಸರಿನಲ್ಲಿ ಏನಾದರೂ ಒಂದು ಸೇವೆ ಮಾಡಿಕೊಂಡು ಬಾ ಎಂದು ಹೇಳಿ ಕಳುಹಿಸಿದ್ದರು. ಈಗ ಸೇವೆಯಂತೂ ಆಯಿತು. ಪ್ರಸಾದ ಕೊಡಿ, ಅಪ್ಪನಿಗೆ ಕೊಡುತ್ತೇನೆ ಎನ್ನಲು ಆಚಾರ್ಯರು ಕಕ್ಕಾಬಿಕ್ಕಿಯಾದರು. ಸಾಮಾನ್ಯಜ್ಞಾನವಿಲ್ಲದ ಹುಡುಗನ ಅಜ್ಞಾನಕ್ಕೆ ಮರುಗಿ ಹೇಳಿದರು: ‘ಮಗು ನೀನು ಮಾಡಿದ್ದು ನಿನ್ನ ತಂದೆ ತೀರಿದ ಮೇಲೆ ಮಾಡುವ ಅವರ ತಿಥಿ. ಇಷ್ಟನ್ನು ತಿಳಿಯದೆ ಪ್ರಮಾದ ವೆಸಗಿದ್ದೀಯೆ. ನಿನ್ನಲ್ಲಿ ಶಿಕ್ಷಣವಿದೆ, ಆದರೆ ಸಂಸ್ಕಾರವಿಲ್ಲ!
ನಮ್ಮ ಹಿಂದೂ ಸಂಸ್ಕೃತಿ ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ನಿನಗೆ ಕನಿಷ್ಠ ಜ್ಞಾನವೂ ಇಲ್ಲ. ಆಗಿ ಹೋದದ್ದು ಆಗಿ ಹೋಯಿತು. ಈಗ ನೀನು ರಾಯರಿಗೆ ಮತ್ತು ನಿನ್ನ ಅಪ್ಪನಿಗೆ ಮನಸ್ಸಿನಲ್ಲಿ ವಂದಿಸಿ ಕ್ಷಮೆ ಕೇಳಿಬಿಡು. ನಿನ್ನ ಅಪ್ಪನಿಗೆ ಈ ವಿಚಾರ ಹೇಳಬೇಡ. ಅವರಿಗೆ ಈ ಪ್ರಸಾದವನ್ನು ಕೊಡು’ ಎನ್ನುತ್ತಾ ತೆಂಗಿನಕಾಯಿ ಮತ್ತು ಮಂತ್ರಾಕ್ಷತೆಯನ್ನು ನೀಡಿದರು. ತನ್ನ ಕೈಯಿಂದ ಆದ ಪ್ರಮಾದದ ಬಗ್ಗೆ ಕಣ್ಣೀರು ಸುರಿಸಿದ ಶ್ಯಾಮ ಸಪ್ಪೆ ಮುಖದಿಂದ ಮನೆಗೆ ಹಿಂತಿರುಗಿದ. ತನ್ನಿಂದ ಆದ ಅಚಾತುರ್ಯಕ್ಕೆ ಮರುಗಿದ. ಹೆತ್ತವರು ಶ್ಯಾಮನಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನೂ ತುಂಬಿ ನಮ್ಮ ಆಚಾರ ವಿಚಾರಗಳ ಬಗ್ಗೆ ತಿಳಿ ಹೇಳುತ್ತಿದ್ದರೆ ಈ ಆಚಾತುರ್ಯ ನಡೆಯುತ್ತಿರಲಿಲ್ಲ.
ತಾತ್ಪರ್ಯ ಇಷ್ಟೆ:ಶಿಕ್ಷಣದಷ್ಟೇ ಸಂಸ್ಕಾರವೂ ಮುಖ್ಯ. ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ ಹಾಗೂ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಬರಿಯ ವಿಷಯಜ್ಞಾನ ಒಂದೇ ಸಾಲದು;. ಸಾಮಾನ್ಯಜ್ಞಾನವೂ ಬೇಕು. ಭಾರತೀಯ ಸಂಸ್ಕೃತಿ ಎಂದರೆ ಇಂದಿನ ಯುವಕರಿಗೆ ಬರೇ ಸಂದರ್ಶಿಸುವ ಮ್ಯೂಸಿಯಂ ಆಗಬಾರದು. ಓಡಾಡುವ ಉದ್ಯಾನವನವೂ ಆಗಬೇಕು. ಸನಾತನ ಧರ್ಮದ ಬಗ್ಗೆ ತಿಳಿದುಕೊಳ್ಳದ ಭಾರತೀಯ ಹಿಂದು, ಒಳ್ಳೆಯ ಹಿಂದೂವೇ ಅಲ್ಲ. ಇಂತಹವರು ಇದ್ದರೆಷ್ಟು ಇರದಿದ್ದರೆಷ್ಟು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 2 =
Remember me
